ಬಜೆಟ್: ವಿಜಾಪುರ ಜಿಲ್ಲೆಗೆ ಬಂಪರ್!
ವಿಜಾಪುರ: ಬಹು ವರ್ಷಗಳ ನಂತರ ರಾಜ್ಯ ಬಜೆಟ್ನಲ್ಲಿ ವಿಜಾಪುರ ಜಿಲ್ಲೆಗೆ ಬಂಪರ್ ಕೊಡುಗೆ ಲಭಿಸಿದೆ. ಕೆರೆಗಳಿಗೆ ನೀರು ತುಂಬಿಸುವ ಮತ್ತು ನೀರಾವರಿ ಯೋಜನೆಗಳಲ್ಲಿ ಸಿಂಹ ಪಾಲು ದೊರೆತಿದ್ದು, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ವ್ಯಾಪ್ತಿಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಬೇಕು ಎಂಬ ದಶಕಗಳ ಬೇಡಿಕೆ ಈಡೇರುವ ಕಾಲ ಕೂಡಿ ಬಂದಿದೆ. ವಿಜಾಪುರ ನಗರಸಭೆಯು ಮಹಾನಗರ ಪಾಲಿಕೆಯಾಗಿ ಪರಿವರ್ತನೆಗೊಳ್ಳಲಿದೆ.
`ವಿಜಾಪುರ ತಾಲ್ಲೂಕಿನ 38 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ, ಮುದ್ದೇಬಿಹಾಳ ತಾಲ್ಲೂಕಿನ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಗಳನ್ನು ತುಂತುರು ಮತ್ತು ಹನಿ ನೀರಾವರಿ ಪದ್ಧತಿಯಲ್ಲಿ ಜಾರಿಗೊಳಿಸುತ್ತಿರುವುದು. ಇಂಡಿ ತಾಲ್ಲೂಕಿನ ಸಂಖ, ಭೂಯ್ಯಾರ, ವಿಜಾಪುರ ತಾಲ್ಲೂಕಿನ ಮಮದಾಪುರ, ಭೂತನಾಳ, ಬೇಗಂ ತಲಾಬ್ ಕೆರೆಗಳಿಗೆ ನೀರು ಪೂರೈಸುವ ಪ್ರತ್ಯೇಕ ಯೋಜನೆಗಳನ್ನು ಬಜೆಟ್ನಲ್ಲಿ ಪ್ರಕಟಿಸಿದ್ದು ವಿಜಾಪುರ ಜಿಲ್ಲೆಯ ಮಟ್ಟಿಗೆ ಬಹುದೊಡ್ಡ ಕೊಡುಗೆ' ಎನ್ನುತ್ತಾರೆ ನೀರಾವರಿ ತಜ್ಞ ಡಾ.ವಿ.ಪಿ. ಹುಗ್ಗಿ. `ರಾಜ್ಯದಲ್ಲಿ ಕೈಗೆತ್ತಿಕೊಂಡಿರುವ ಕೆರೆಗಳಿಗೆ ನೀರು ತುಂಬಿಸುವ ಆರು ಯೋಜನೆಗಳ ಪೈಕಿ ಐದು ಯೋಜನೆಗಳು ವಿಜಾಪುರ ಜಿಲ್ಲೆಗೆ ಸಂಬಂಧಿಸಿವೆ. ನೀರಾವರಿ ಕಾಲುವೆಗಳ ಪಕ್ಕ ಸೌರ ವಿದ್ಯುತ್ ಉತ್ಪಾದನೆ, ಅಚ್ಚುಕಟ್ಟು ಪ್ರದೇಶದ ರಸ್ತೆಗಳ ರಿಪೇರಿ ನಮ್ಮ ಜಿಲ್ಲೆಗೆ ಅನುಕೂಲ. ಜಿಲ್ಲೆಯ ಇತಿಹಾಸದಲ್ಲಿ ಇಷ್ಟೊಂದು ನೀರಾವರಿ ಯೋಜನೆಗಳನ್ನು ಏಕಕಾಲಕ್ಕೆ ಪ್ರಕಟಿಸಿದ್ದು ಇದೇ ಮೊದಲು' ಎನ್ನುವುದು ಅವರ ವಿವರಣೆ.
ಮಹಿಳಾ ವಿವಿ: `ಮಂಡ್ಯದಲ್ಲಿ ಮಹಿಳಾ ವಿವಿಯ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ 30 ಕೋಟಿ ರೂಪಾಯಿ ಪ್ರಕಟಿಸಲಾಗಿದೆ. ನಮ್ಮ ವಿವಿಯ ಅಭಿವೃದ್ಧಿಗೆ ರೂ.5 ಕೋಟಿ ವಿಶೇಷ ಅನುದಾನ ಘೋಷಿಸಲಾಗಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಮಾದರಿಯಲ್ಲಿ ನಮ್ಮ ಮಹಿಳಾ ವಿವಿಯ ವ್ಯಾಪ್ತಿ ಇಡೀ ರಾಜ್ಯಕ್ಕೆ ವಿಸ್ತರಣೆಯಾಗಲಿದೆ' ಎಂದು ಇಲ್ಲಿಯ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮೀನಾ ಚಂದಾವರಕರ ಹೇಳುತ್ತಾರೆ.
`ಉತ್ತರ ಕರ್ನಾಟಕದಲ್ಲಿರುವ ಮಹಿಳಾ ವಿವಿ ಮೂಲ ಕೇಂದ್ರಕ್ಕೆ ಕೇವಲ 5 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ದಕ್ಷಿಣ ಭಾಗದ ಮಂಡ್ಯದಲ್ಲಿ ಮಹಿಳಾ ವಿವಿ ಹೊರ ಆವರಣ ನಿರ್ಮಾಣಕ್ಕೆ 30 ಕೋಟಿ ರೂಪಾಯಿ ಕೊಡಲಾಗಿದೆ. ಇದರ ಹಿಂದೆ ಪ್ರಾದೇಶಿಕತೆಯ ತಾರತಮ್ಯವಿದ್ದು, ಮುಂದಿನ ದಿನಗಳಲ್ಲಿ ಮಂಡ್ಯದಲ್ಲಿ ಪ್ರತ್ಯೇಕ ಮಹಿಳಾ ವಿವಿ ಆರಂಭಿಸುವ ಹುನ್ನಾರವೂ ಇರಬಹುದು' ಎಂಬುದು ವಿಧಾನ ಪರಿಷತ್ ಸದಸ್ಯ, ಬಿಜೆಪಿಯ ಅರುಣ ಶಹಾಪೂರ ಅವರ ಶಂಕೆ.
ಮಹಾನಗರ ಪಾಲಿಕೆ
ವಿಜಾಪುರ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂಬ ಬೇಡಿಕೆಯೂ ಬಜೆಟ್ನಲ್ಲಿ ಘೋಷಣೆಯಾಗಿದೆ. ಮಹಾನಗರ ಪಾಲಿಕೆಯಾಗುವುದರಿಂದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಲಭ್ಯವಾಗಲಿದೆ. ಹೀಗಾಗಿ ಐತಿಹಾಸಿಕ ಪ್ರವಾಸಿ ತಾಣವಾಗಿರುವ ವಿಜಾಪುರ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಇದು ಪೂರಕವಾಗಲಿದೆ ಎನ್ನುತ್ತಾರೆ ಇಲ್ಲಿಯ ಜನ.
ಆದರೆ, ನೆನೆಗುದಿಗೆ ಬಿದ್ದಿರುವ ವಿಜಾಪುರ ವಿಮಾನ ನಿಲ್ದಾಣ, ದ್ರಾಕ್ಷಿ ಬೆಳೆಗಾರರ ಸಾಲ ಮನ್ನಾ ಬೇಡಿಕೆಯ ಬಗ್ಗೆ ಬಜೆಟ್ನಲ್ಲಿ ಉಲ್ಲೇಖವಿಲ್ಲ. ಕೃಷಿ ಆಧರಿತ ಕೈಗಾರಿಕೆಗಳನ್ನು ಸ್ಥಾಪಿಸಿಲ್ಲ ಎಂಬ ಬೇಸರವೂ ಇದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.