ಗುರುವಾರ , ಮೇ 19, 2022
22 °C

ಬಜೆಟ್ ಹಣದ ಸದುಪಯೋಗ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಈ ವರ್ಷದ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಹೆಚ್ಚಿನ ಹಣವನ್ನು ಮೀಸಲಿಡಲಾಗಿದೆ. ಆದರೆ, ಅದರ ಸದುಪಯೋಗ ಆಗಬೇಕಾಗಿದೆ~ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ರಾಮಯ್ಯ ಹೇಳಿದರು.ಅಖಿಲ ಕರ್ನಾಟಕ ಗೋಂಧಳಿ ಸಮಾಜ ಹಾಗೂ ಅದರ ಸಲಹಾ ಸಮಿತಿಯು ನಗರದ ಗಾಂಧಿಭವನದಲ್ಲಿ ಭಾನುವಾರ ಏರ್ಪಡಿಸಿದ್ದ  ಜಾಗೃತ ಸಮಾವೇಶದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.`ಯಾವುದೇ ಒಂದು ಸೌಲಭ್ಯ ನೀಡಲು ಅಲ್ಲಿ ಆ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು ಸೇರಿದಂತೆ ಒಂದು ಸಮಿತಿ ನೇಮಕವಾಗಿರುತ್ತದೆ. ಅದು ನೀಡುವ ವರದಿ ಆಧಾರದ ಮೇಲೆ ಎಲ್ಲ ಯೋಜನೆಗಳು ಫಲಾನುಭವಿಗಳಿಗೆ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ~ ಎಂದರು.`ಯೋಜನೆಗಳಿಗೆ ಆಯ್ಕೆ ಮಾಡುವಾಗ ಎಲ್ಲ ಫಲಾನುಭವಿಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಸಣ್ಣ ಜಾತಿಗಳಿಗೂ ಪ್ರಾಶಸ್ತ್ಯ ನೀಡಲಾಗುವುದು~ ಎಂದರು.`ಅಲೆಮಾರಿ ಅಥವಾ ಅರೆಅಲೆಮಾರಿ ಜನಾಂಗದವರಾದ ಗೋಂಧಳಿ, ಬುಡುಬುಡಿಕೆ, ಜೋಷಿ ಮೊದಲಾದ ಜಾತಿಗಳ ಸ್ನಾತಕೋತ್ತರ ಪದವಿ ಮಾಡುವ ವಿದ್ಯಾರ್ಥಿಗಳಿಗೆ 10 ಲಕ್ಷ ರೂಪಾಯಿ ನೀಡಲಾಗುತ್ತಿದೆ. ಅಲ್ಲದೇ, ವರ್ಗ 1 ರಲ್ಲಿ ಬರುವ ಅಲೆಮಾರಿ ಜನಾಂಗದವರಿಗೆ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿದರೆ, ಶುಲ್ಕದಲ್ಲಿ ರಿಯಾಯಿತಿ ನೀಡಲಾಗುತ್ತಿದೆ. ಆದರೆ, ಮಾಹಿತಿ ಕೊರತೆಯಿಂದ ಇದರ ಉಪಯೋಗ ಸಮರ್ಪಕವಾಗಿ ಆಗುತ್ತಿಲ್ಲ~ ಎಂದು ಹೇಳಿದರು.`ಎಲ್ಲ ಉನ್ನತ ವರ್ಗದವರಂತೆ ಹಿಂದುಳಿದ ವರ್ಗದವರು ಸಹ ವಿದೇಶಕ್ಕೆ ಹೋಗಿ ತಮ್ಮ ಅಧ್ಯಯನವನ್ನು ಮುಂದುವರಿಸಲು 20 ಲಕ್ಷ ರೂಪಾಯಿಯ ಹಣದ ನೆರವನ್ನು ಒದಗಿಸಲಾಗುತ್ತಿದೆ. ಆದರೆ ಇದರ ಸದುಪಯೋಗವನ್ನು ಯಾರೂ ಪಡೆಯುತ್ತಿಲ್ಲ~ ಎಂದರು.`ಮಧ್ಯವರ್ತಿಗಳಿಂದ ಆಗುವ ತೊಂದರೆಯನ್ನು ತಪ್ಪಿಸಲು ಮತ್ತು ಜನರಲ್ಲಿ ಉಳಿತಾಯ ಮಾಡಬೇಕೆಂಬ ಮನೋಭಾವ ಬೆಳಯಲಿ ಎಂಬ ಸದುದ್ದೇಶದಿಂದ ಸಾಲ ಸೌಲಭ್ಯ ಪಡೆಯಲು ಬ್ಯಾಂಕಿನಲ್ಲಿ ಖಾತೆ ತೆರೆಯಬೇಕೆಂಬ ನಿಯಮವನ್ನು  ಮಾಡಲಾಗಿದೆ. ಇದರ ಉಪಯೋಗವನ್ನು ಪಡೆಯಬೇಕು~ ಎಂದು ಹೇಳಿದರು.`ಚೈತನ್ಯ ಯೋಜನೆಯಲ್ಲಿ ಬ್ಯಾಂಕ್‌ನ  ಮುಖಾಂತರ ಸಾಲ ನೀಡಲಾಗುತ್ತದೆ. ಈ ಯೋಜನೆಯಲ್ಲಿ 10,000 ರೂಪಾಯಿ ಸಬ್ಸಿಡಿ ಮತ್ತು 25,000 ರೂಪಾಯಿ ಸಾಲವನ್ನು ನೀಡಲಾಗುತ್ತಿದೆ. ಜಿಲ್ಲೆಯ ವ್ಯವಸ್ಥಾಪಕರಿಗೆ ಅರ್ಜಿಯ ಜತೆಗೆ 22,000 ಆದಾಯವಿರುವವರು ತಮ್ಮ ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಇನ್ನು ಕೆಲವು ದೃಢೀಕರಣದೊಂದಿಗೆ 35,000 ರೂಪಾಯಿ ಸಾಲವನ್ನು ಪಡೆಯಬಹುದು~ ಎಂದು ಮಾಹಿತಿ ನೀಡಿದರು.`ಈ ಜನಾಂಗದ ವೃತ್ತಿ ನಿರತರಿಗೂ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಕಾನೂನು ಪದವಿ ಮುಗಿಸಿ ವಕೀಲಿ ವೃತ್ತಿ ಮಾಡಲು ಸಹಾಯವಾಗುವಂತೆ ಅಥವಾ ವೈದ್ಯಕೀಯ ಪದವಿ ಮುಗಿಸಿ ಕ್ಲಿನಿಕ್ ತೆರೆಯಲು ಅವರಿಗೆ 5 ಲಕ್ಷ ರೂಪಾಯಿಯನ್ನು ಶೇ 6 ರ ಬಡ್ಡಿ ದರದಲ್ಲಿ ನೀಡುವ ವ್ಯವಸ್ಥೆ ಮಾಡಲಾಗಿದೆ~ ಎಂದರು.`ಅತಿ ಸಣ್ಣ ವ್ಯಾಪಾರ ಮಾಡುವವರಿಗೆ ಅಂದರೆ, ಹಾಲು ಮಾರಾಟ ಮಾಡುವವರಿಗೆ, ತರಕಾರಿ ಮಾರುವವರಿಗೆ ಸಣ್ಣ ಪ್ರಮಾಣದಲ್ಲಿ 5,000 ರೂಪಾಯಿ ಸಬ್ಸಿಡಿ ನೀಡಿ 5,000 ರೂಪಾಯಿ ಸಾಲವನ್ನು ನೀಡಲಾಗುತ್ತಿದೆ~ ಎಂದು ಹೇಳಿದರು.`ಗಂಗಾ ಕಲ್ಯಾಣ ಯೋಜನೆಯಲ್ಲಿ ಒಂದರಿಂದ ನಾಲ್ಕು ಎಕರೆ ಭೂಮಿ ಇರುವವರಿಗೆ ಕೊಳವೆ ಬಾವಿಯನ್ನು ನೀಡಲಾಗುವುದು. ಕೊಳವೆ ಬಾವಿಗೆ ಒಂದೂವರೆ ಲಕ್ಷ ರೂಪಾಯಿ ಸರ್ಕಾರ ನೀಡುತ್ತಿದ್ದು, ಅದರಲ್ಲಿ ಒಂದು ಲಕ್ಷ ರೂಪಾಯಿ ಸಬ್ಸಿಡಿ ಇದೆ. ಉಳಿದ 50,000 ರೂಪಾಯಿಯನ್ನು ಕಂತುಗಳಲ್ಲಿ ಕಟ್ಟಬೇಕು~ ಎಂದು ಅವರು ಹೇಳಿದರು.`15 ಜನರು ಒಟ್ಟಿಗೆ ಸೇರಿ ಸ್ವಸಹಾಯ ಸಂಘಗಳನ್ನು ಕಟ್ಟಿಕೊಂಡು ಅರಿವನ್ನು ಮೂಡಿಸಬೇಕು. ಸ್ವಸಹಾಯ ಗುಂಪುಗಳು ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೆ, ತಕ್ಷಣ ಪರಿಹಾರ ದೊರೆಯುವ ಸಾಧ್ಯತೆಯಿದೆ~ ಎಂದರು.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಆರ್.ಶಾಂತರಾಜು, ಅಖಿಲ ಕರ್ನಾಟಕ ಗೋಂಧಳಿ ಸಮಾಜ ಸಲಹಾ ಸಮಿತಿಯ ಅಧ್ಯಕ್ಷ ಕೆ.ಎಂ.ಜಯರಾಮಯ್ಯ, ಸಮಾಜದ ಉಪಾಧ್ಯಕ್ಷ ಶಿವಕುಮಾರ್ ವಾಖೋಡೆ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.