ಶುಕ್ರವಾರ, ನವೆಂಬರ್ 15, 2019
22 °C

ಬಜ್ಪೆ: ಮತದಾರರ ನಡೆ ನಿಗೂಢ

Published:
Updated:

ಬಜ್ಪೆ: ಎಂಎಸ್‌ಇಜೆಡ್ ಸೇರಿದಂತೆ ವಿವಿಧ ಯೋಜನೆಗಳಿಗೆ ಮನೆ-ಮಠ ಕಳೆದುಕೊಂಡು ಬೀದಿಪಾಲಾದ ಜನತೆ ಒಂದೆಡೆ. ಕಳೆದುಕೊಂಡ ಜಮೀನಿಗೆ  ಪರಿಹಾರ ಸಿಗದೆ, ಅತ್ತ ಉದ್ಯೋಗವೂ ಸಿಗದೆ ಹತಾಶರಾದ ಯುವಜನತೆ ಇನ್ನೊಂದು ಕಡೆ. ಕಂಪೆನಿ ನೀಡುವ ತರಬೇತಿಗೆ ಹೋಗಿ ಶಿಕ್ಷಣ ವನ್ನೂ ಅರ್ಧಕ್ಕೆ ಬಿಟ್ಟ ವಿದ್ಯಾರ್ಥಿಗಳು ಮತ್ತೊಂದು ಕಡೆ.- ಹೀಗೆ ಬವಣೆಪಡುವವರು ಬಜ್ಪೆ ಸುತ್ತಮುತ್ತಲಿನ ಜನರು. ಎಲ್ಲಾ ಪಕ್ಷಗಳ ನೇತಾರರನ್ನು ಸಂಶಯದಿಂದ ನೋಡುತ್ತಿರುವ ಇಲ್ಲಿನ ಸಂತ್ರಸ್ತ ಜನತೆ ಈ ಸಲದ ವಿಧಾನಸಭಾ ಚುನಾವಣೆ ಯಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತಾ ರೆಂಬುದು ಕುತೂಹಲಕರ. ಅಭ್ಯರ್ಥಿ ಗಳು ಇಲ್ಲಿ ಧೈರ್ಯದಿಂದ ಮತ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ.ಬಜ್ಪೆ, ಮೂಲ್ಕಿ- ಮೂಡುಬಿದಿರೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿದ್ದು, ವಿವಿಧ ಕಂಪೆನಿಗಳೊಂದಿಗೆ ಗುಟ್ಟಾಗಿ ಕೈಜೋಡಿಸಿಕೊಂಡ ರಾಜಕಾರಣಿಗಳ ನಡೆಯಿಂದ ಇಲ್ಲಿನ ಜನ ಬೇಸತ್ತಿದ್ದಾರೆ. ಪ್ರಚಾರದ ಭರಾಟೆಯೂ ಈ ಪ್ರದೇಶಗಳಲ್ಲಿ ಕಂಡುಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಜ್ಪೆ ಪರಿಸರದ ಮತದಾರರು ಯಾವ ಪಕ್ಷದ ಕೈ ಹಿಡಿಯಲಿದ್ದಾರೆ ಎಂಬ ವಿಷಯ ಚರ್ಚೆಯಾಗುತ್ತಿದೆ.ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತಿರುವ ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಸಿದ್ಧತೆ ನಡೆಯು ತ್ತಿದೆ ಎಂಬ ವದಂತಿ ಹಬ್ಬಿದ್ದು, ಜನರು ಭಯಭೀತರಾಗಿದ್ದಾರೆ. ಅಲ್ಲಲ್ಲಿ  ಪ್ರತಿಭಟನೆಗಳೂ ನಡೆದಿವೆ.ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎಸ್‌ಡಿಪಿಐ ಹಾಗೂ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ವಿರೋಧ ಪಕ್ಷದ ಸಚೇತಕರಾಗಿದ್ದ ಕಾಂಗ್ರೆಸ್‌ನ ಅಭಯಚಂದ್ರ ಜೈನ್ ಈ ಕ್ಷೇತ್ರದಿಂದ ಮೂರು ಅವಧಿಗೆ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದಾರೆ. ನಾಲ್ಕನೇ ಬಾರಿ ಕಣದಲ್ಲಿದ್ದಾರೆ. ಉಳಿದಂತೆ ಬಿಜೆಪಿ ಯಿಂದ ಉಮಾನಾಥ ಕೋಟ್ಯಾನ್, ಜೆಡಿಎಸ್‌ನಿಂದ ರಮಾನಾಥ ಶೆಟ್ಟಿ ಸ್ಪರ್ಧಿಸುತ್ತಿದ್ದಾರೆ.ಎಂಎಸ್‌ಇಜೆಡ್, ತನ್ನ ಚಟುವಟಿಕೆ ವಿಸ್ತರಿಸುತ್ತಿರುವ ಈ ಭಾಗದ ಶಾಸಕರಾ ಗಿದ್ದವರು ಅಭಯಚಂದ್ರ ಜೈನ್. ಕಳೆದ 10 ವರ್ಷಗಳಿಂದ ಬಜ್ಪೆಯ ಜನರು ಎಂಎಸ್‌ಇಝೆಡ್ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿ ಕೊಂಡು ಬಂದಿದ್ದಾರೆ. ಇಂದಿಗೂ ಅವರ ಸಮಸ್ಯೆ ಜೀವಂತವಾಗಿದೆ.ಇಲ್ಲಿನ ಕಳವಾರು, ಒಡ್ಡಿದಕಲ, ನೆಲ್ಲಿದಡಿ, ಪೆರ್ಮುದೆ, ಶಾಂತಿಗುಡ್ಡೆ, ಕುಡುಬಿಪದವು ಜನರು ಭೂಮಿಯನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಕಂಪೆನಿಯೇನೋ ಬೇರೂರಿದೆ. ಆದರೆ ತಾವು ಭೂಮಿ ಕಳೆದುಕೊಳ್ಳಲು ಕಾರಣ ಈ ರಾಜಕಾರಣಿಗಳೇ ಎಂದು ಮತದಾರರ ನಂಬಿಕೆ.ಕಂಪೆನಿ ಆರಂಭದಲ್ಲಿ ಎಕರೆ ಒಂದಕ್ಕೆ 8 ಲಕ್ಷ ನೀಡುವ ಭರವಸೆ ನೀಡಿತ್ತು. ಆದರೆ ವಾಗ್ದಾನದಂತೆ ನಡೆದು ಕೊಳ್ಳಲಿಲ್ಲ ಎನ್ನುತ್ತಾರೆ ಸ್ಥಳೀಯರು. ಹೋರಾಟ ಕಾವೇರಿದ್ದಾಗ, ಸಂಸದ ರಾಗಿದ್ದ ನಳಿನ್ ಕುಮಾರ್ ಕಟೀಲ್ ಇಲ್ಲಿಗೆ ಭೇಟಿ ನೀಡಿ, ಏನಾದರೂ ಆಗಲಿ, ಕಂಪೆನಿ ವಿಸ್ತರಣೆಗೆ ಬಿಡುವುದಿಲ್ಲ ಎಂದು ಹೇಳಿದ್ದರು. ಅಭಯಚಂದ್ರ ಜೈನ್ ಅವರೂ ಜನರ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದರು. ಇಬ್ಬರಿಂದಲೂ ಜನರಿಗೆ ನಿರಾಸೆ ಯಾಗಿದೆ ಎನ್ನುತ್ತಾರೆ ಮತದಾರ ಮೋಹನ್.ಪೆರ್ಮುದೆಯ ಕುಡುಬಿಪದವು ಜನರು ಭೂಮಿಯನ್ನು ಕಳೆದು ಕೊಂಡಿದ್ದು ಕಾನೂನಿನ ಮೂಲಕ ಹೋರಾಟ ನಡೆಸುತ್ತಿದ್ದಾರೆ.ನೆಲ್ಲಿದಡಿಯಲ್ಲಿ ವಾಸವಾಗಿದ್ದವರ ಮನೆಯನ್ನು ಕಂಪೆನಿ ಒಡೆದುಹಾಕಿದಾಗ ಶಾಸಕರು ಮೌನವಾಗಿದ್ದರು. ಇಲ್ಲಿನ ಜುಮಾದಿ ದೈವಸ್ಥಾನ ಅಪಾಯದ ಸ್ಥಿತಿಯಲ್ಲಿದ್ದು, ಅದನ್ನು ಉಳಿಸಲು ನೆಲ್ಲಿದಡಿ ಜನರು ಹೋರಾಟ ನಡೆಸುತ್ತಿದ್ದಾರೆ. ಸುಮಾರು 15 ಮನೆಗಳನ್ನು ಕಂಪೆನಿ ಹೇಳಹೆಸರಿಲ್ಲದಂತೆ ಒಡೆದು ಹಾಕಿದಾಗ ಯಾವ ರಾಜ ಕಾರಣಿಯೂ ಅವರನ್ನು ಭೇಟಿಯಾ ಗಲಿಲ್ಲ. ಸಾಂತ್ವನ ಹೇಳಲಿಲ್ಲ ಎನ್ನುವ ಅಳಲು ಇಲ್ಲಿನವರದ್ದು.ಶಾಂತಿಗುಡ್ಡೆ ಎನ್ನುವ ಪ್ರದೇಶವನ್ನು ಕಂಪೆನಿ ದ್ವೀಪವನ್ನಾಗಿಸಿದ್ದು ಮೂಲ ಸೌಕರ್ಯದಿಂದ ಜನರು ವಂಚಿತರಾಗಿದ್ದಾರೆ. ಕಂಪೆನಿ ಬೇರೆ ವ್ಯವಸ್ಥೆಯನ್ನೂ ಮಾಡಿಲ್ಲ, ಪರಿಹಾರ ವನ್ನೂ ನೀಡಿಲ್ಲ. ಈ ಸಮಸ್ಯೆ ಬಗೆಹರಿಸಲು ಯಾವ ರಾಜ ಕಾರಣಿಯೂ ಮುಂದಾಗಿಲ್ಲ ಎನ್ನುವ ನೋವೂ ಸ್ಥಳೀಯರದ್ದು. ಎಸ್‌ಇಜೆಡ್ 2006ರಲ್ಲಿ ಭೂ ಸಮೀಕ್ಷೆ ನಡೆಸಲು ಆರಂಭವಾದಾಗಲೇ ಜನರು ಪ್ರತಿಭಟಿಸಿದ್ದರು.ಕಂಪೆನಿ ಬೇರೂರುವ ಮೊದಲು ಶಾಸಕ ಅಭಯಚಂದ್ರ, ಸಂಸದ ನಳಿನ್ ಪ್ರತಿಭಟನೆ ನಡೆಸಿದ್ದು ಆಮೇಲೆ ಕಂಪೆನಿಯೊಂದಿಗೆ ಸೇರಿಕೊಂಡಿದ್ದಾರೆ ಎನ್ನುವ ಮಾತು ಸಂತ್ರಸ್ತರ ಪ್ರದೇಶದಲ್ಲಿ ಕೇಳೀಬರುತ್ತಿದೆ. ಪೇಜಾವರ ಸ್ವಾಮೀಜಿಗಳು ಮೂರು ಬಾರಿ ಉಪವಾಸ ನಡೆಸಿದ್ದರು. ಆದರೂ ಸಮಸ್ಯೆ ಬಗೆ ಹರಿಯಲಿಲ್ಲ. ಈಗ ಚುನಾವಣೆ  ಸಮೀಪಿಸುತ್ತಿದೆ. ಭೂಮಿ ಹೋಗಲು ಬಿಡುವುದಿಲ್ಲ ಎಂದ ರಾಜಕಾರಣಿಗಳು ಈಗ ಮಾತಾಡುತ್ತಿಲ್ಲ. ಹೀಗೆ ಆದರೆ ನಾವು ನಂಬುವುದಾದರೂ ಯಾರನ್ನು ಎಂದೇ ತಿಳಿಯುತ್ತಿಲ್ಲ ಎಂದೂ ಸ್ಥಳೀಯರು `ಪ್ರಜಾವಾಣಿ'ಗೆ ತಿಳಿಸುತ್ತಾರೆ.ರಾಜಕಾರಣಿಗಳನ್ನೇ ನಂಬದ ಸ್ಥಿತಿಗೆ ತಲುಪಿರುವ ಜನರು ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡು ತ್ತಾರೆಂಬುದೇ ಕುತೂಹಲಕಾರಿ ಪ್ರಶ್ನೆ.

ಗಿರೀಶ್ ಮಳಲಿ

ಪ್ರತಿಕ್ರಿಯಿಸಿ (+)