ಬುಧವಾರ, ಜೂನ್ 16, 2021
27 °C
ಅರಿವು ಹರಿವು

ಬಟನ್ ಚರಿತ!

–ಸೂರ್ಯ Updated:

ಅಕ್ಷರ ಗಾತ್ರ : | |

ಬಟನ್‌ಗಳ (ಗುಂಡಿ) ಆವಿಷ್ಕಾರ ಆಗಿರದಿದ್ದರೆ ಈ ಜಗತ್ತು ಹೇಗಿರುತ್ತಿತ್ತು? ಊಹಿಸಿ ನೋಡಿ. ಶೂಗಳನ್ನು  ಲಾಡಿಯ ಸಹಾಯದಿಂದ ಬಿಗಿ-­ಯುವ ರೀತಿಯಲ್ಲಿ ನಮ್ಮ ಅಂಗಿಗಳನ್ನು, ಪ್ಯಾಂಟ್‌ಗಳನ್ನು ಬಿಗಿಯಬೇಕಾಗಿತ್ತೋ ಏನೋ!ಬಟನ್ನಿನ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿದ್ದು ಸಿಂಧೂ ಕಣಿವೆ ನಾಗರಿಕತೆಯ ಜನ. ಕ್ರಿ.ಪೂ 2,800–2,600ರ ಅವಧಿಯಲ್ಲಿ ಕಪ್ಪೆ ಚಿಪ್ಪಿನಿಂದ ಮಾಡಿದ್ದ ಬಟನ್‌ಗಳನ್ನು ಅವರು ಆಭರಣ­, ಅಲಂಕಾರಿಕ ಸಾಧನಗಳನ್ನಾಗಿ ಬಳಸುತ್ತಿದ್ದರು. ಕಂಚಿನ ಯುಗ­ದಲ್ಲಿ (ಕ್ರಿ.ಪೂ 2,000–1,500) ಚೀನಾದ ಮತ್ತು ಪುರಾತನ ರೋಮ್‌ನ ಜನರು ಕೂಡ ಇವುಗಳನ್ನೇ ಆಭರಣ­ಗಳನ್ನಾಗಿ ಧರಿಸಿ­ಕೊಳ್ಳುತ್ತಿದ್ದರು.ಬಟನ್‌ಗಳು ಜವಳಿ ಉದ್ಯಮಕ್ಕೆ ಕಾಲಿಟ್ಟಿದ್ದು ಇತ್ತೀಚೆಗೆ. 13ನೇ ಶತಮಾನ­ದಲ್ಲಿ ಜರ್ಮನಿ­ಯಲ್ಲಿ ಮೊದಲ ಬಾರಿಗೆ ಉಡುಪುಗಳಲ್ಲಿ ಇವುಗಳನ್ನು ಬಳಸ­ಲಾಯಿತು. ನಂತರದ ದಿನಗಳಲ್ಲಿ ಯೂರೋಪ್‌­ನಲ್ಲಿ ಉಡುಪುಗಳ ಉತ್ಪಾದನೆ ಹೆಚ್ಚಾ­ದಾಗ ಬಟನ್‌ಗಳ ಬಳಕೆ ಮತ್ತಷ್ಟು ವಿಸ್ತರಿಸಿತು.ಈಗಿನ ಫ್ಯಾಷನ್‌ ಜಗತ್ತಿನಲ್ಲಿ  ಊಹಿಸಲ­ಸಾಧ್ಯ ರೀತಿಯಲ್ಲಿ ಪ್ಲಾಸ್ಟಿಕ್‌, ಮರ, ಲೋಹಗಳಿಂದ ಮಾಡಿದ ವಿವಿಧ ಆಕಾರದ, ಗಾತ್ರದ, ಬಣ್ಣಗಳ ಆಕರ್ಷಕ ಬಟನ್‌ಗಳು ಬಳಕೆಯಾಗುತ್ತಿವೆ. 1852ರಲ್ಲೇ ಇಂಗ್ಲಿಷ್‌ ಲೇಖಕ ಚಾರ್ಲ್ಸ್‌ ಡಿಕನ್ಸ್‌ ಅವರು ಬಟನ್‌ ತಯಾರಿಕೆ ಮತ್ತು ಅದರ ವಿಶೇಷತೆಗಳ ಬಗ್ಗೆ ವಿಸ್ತೃತ ಲೇಖನವನ್ನು ಬರೆದು ಬಟನ್‌ ಮಹತ್ವವನ್ನು ಸಾರಿ ಹೇಳಿದ್ದರು.ಅಮೆರಿಕದ ರಾಜಕೀಯದಲ್ಲಿ ಇವುಗಳ ಪಾತ್ರ ದೊಡ್ಡದು. ಅಮೆರಿಕದ ಮೊದಲ ಅಧ್ಯಕ್ಷೀಯ ಚುನಾವಣೆ­ (1789) ಪ್ರಚಾರಗಳಲ್ಲೇ ಬಟನ್‌­ಗಳನ್ನು ಬಳಸ­ಲಾಗಿತ್ತು. ಅಭ್ಯರ್ಥಿಗಳ ಭಾವಚಿತ್ರ­ಗಳನ್ನೊಳ­ಗೊಂಡ ಬಟನ್‌­ಗಳನ್ನು ಸೂಟ್‌­ಗಳಲ್ಲಿ ಬಳಸಲಾಗು­ತ್ತಿತ್ತು. ಆ ಸಂಪ್ರದಾಯ ಈಗಲೂ ಮುಂದುವರಿದಿದೆ.

ಸಾಂಸ್ಕೃತಿಕವಾಗಿ ಸಿರಿವಂತಿಕೆ ಹೊಂದಿರುವ ಬಟನ್‌ ಹಾಗೂ ಕಲೆಯ ನಡುವೆ ಬಿಡಿಸಲಾಗದ ಬೆಸುಗೆ ಇದೆ. 1958­ರಲ್ಲಿ ಜನಿಸಿದ್ದ ಫ್ರಾನ್ಸ್‌ನ ರೆನಾಲ್ಡೊ ಗ್ಯಾಲ್ವಿಸ್‌ ಜಗತ್ತಿನ ಅಪ್ರತಿಮ ಬಟನ್‌ ಕಲಾವಿದ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.ಕೌತುಕದ ಸಂಗತಿಯೊಂದಿದೆ. ಬಟನ್‌ ಸಂಗ್ರಹಿಸುವುದನ್ನೇ ಹವ್ಯಾಸ­ವಾಗಿಟ್ಟು­ಕೊಂಡವರು ನಮ್ಮ ನಡುವೆ ಇದ್ದಾರೆ. 1938ರಲ್ಲಿ ಅಮೆರಿಕದಲ್ಲಿ ರಾಷ್ಟ್ರೀಯ ಬಟನ್‌ ಸೊಸೈಟಿ ಸ್ಥಾಪನೆ­ಯಾಗುವವರೆಗೂ ಇಂತಹ ಹವ್ಯಾಸ ಇದೆ ಎಂಬುದು ಲೋಕಕ್ಕೇ ತಿಳಿದಿರಲಿಲ್ಲ!ಈಗ ವಿವಿಧ ರಾಷ್ಟ್ರಗಳಲ್ಲಿ ಬಟನ್‌ ಸಂಗ್ರಹಕ್ಕೆಂದೇ ಹಲವು ಸಂಗ್ರಹಾಲಯ­ಗಳು, ಗ್ಯಾಲರಿಗಳು, ಪ್ರದರ್ಶನ ಕೇಂದ್ರಗಳಿವೆ. ಅಷ್ಟೇ ಏಕೆ, ಬಟನ್‌ಗಳ ಆನ್‌ಲೈನ್‌ ಗ್ಯಾಲರಿಗಳೂ ಇವೆ.ಹೆಬ್ಬೆಟ್ಟಿನ ಗಾತ್ರಕ್ಕಿಂತಲೂ ಚಿಕ್ಕದಾಗಿರುವ ಬಟನ್‌ಗೂ ನಮಗೂ ಭಾವನಾತ್ಮಕ ಸಂಬಂಧ ಇದೆ. ತಂದೆ ಪುಟ್ಟ ಮಗುವನ್ನು ಎತ್ತಿ ಹಿಡಿದಾಗ ಅವರ ಅಂಗಿಯಲ್ಲಿರುವ ಆಕರ್ಷಕ ಬಟನ್‌ ಅನ್ನು ದಿಟ್ಟಿಸಿ ನೋಡಿ, ಅದರ ಮೇಲೆ ಕೈಯಾಡಿಸುವ ಮಗು, ಅದನ್ನು ಬಾಯಿಯತ್ತ ಎಳೆಯುವ ದೃಶ್ಯವನ್ನು ಕಂಡಾಗ ಅಮ್ಮನ ಮುಖದಲ್ಲಿ ಮೂಡುವ ನಗು ವರ್ಣನಾತೀತ!ಇದೊಂದೇ ಅಲ್ಲ; ಬಣ್ಣ ಬಣ್ಣದ, ವಿವಿಧ ಗಾತ್ರಗಳ ಬಟನ್‌ಗಳನ್ನು ತುಂಬಿಟ್ಟಿರುವ ಅಮ್ಮ ಇಲ್ಲವೇ ಅಜ್ಜಿಗೆ ಸೇರಿದ ಪುಟ್ಟ ಡಬ್ಬಿ, ಚಿಕ್ಕ ವಯಸ್ಸಿನಲ್ಲಿ ನಮ್ಮ ಆಟದ ಸಾಮಗ್ರಿ ಆಗಿದ್ದುದನ್ನು ಯಾರು ತಾನೇ ಮರೆಯಲು ಸಾಧ್ಯ?ಬಟನ್‌ಗೊಬ್ಬ ಕಿಂಗ್‌

ಇವರ ಹೆಸರು ಡಾಲ್ಟನ್‌ ಸ್ಟೀವನ್ಸ್‌. ಅಮೆರಿಕ ಮೂಲದ 75 ವರ್ಷದ ಸ್ಟೀವನ್ಸ್‌  ‘ಬಟನ್‌ ಕಿಂಗ್‌’ ಎಂದೇ ಜಗತ್ಪ್ರಸಿದ್ಧ. 15 ವರ್ಷಗಳಿಂದ ಬಟನ್‌ ಕಲೆ­ಯನ್ನು ತಮ್ಮ ಉಸಿರಾಗಿಸಿಕೊಂಡಿರುವ ಅವರು ಈ ವಿಶಿಷ್ಟ ಕಲಾ ಲೋಕಕ್ಕೆ  ಇಳಿದ ಕತೆಯೇ ರೋಚಕ. ನಿದ್ದೆ ಬಾರದ ಕಾಯಿಲೆಯಿಂದ ಬಳಲು­ತ್ತಿದ್ದ ಸ್ಟೀವನ್ಸ್, ಸದಾ ಚಟು­ವಟಿಕೆ ಯಿಂದಿರಲು ಆಯ್ದು-­ಕೊಂಡಿದ್ದು ಬಟನ್‌ ಕಲೆಯನ್ನು.ಮೊದಲು ಮಾಡಿದ ಕೆಲಸವೆಂದರೆ ಸೂಟ್‌ನ ಮೇಲೆ ಬಟನ್‌ಗಳನ್ನು ಹೊಲಿದಿದ್ದು. ಸ್ಟೀವನ್ಸ್‌ ಅವರು ತಮ್ಮ  ಕಾರು, ಗಿಟಾರ್‌, ಒಂದು ಶವಸಾಗಣೆ ವಾಹನ ಮತ್ತು ಎರಡು ಶವ ಪೆಟ್ಟಿಗೆಗಳನ್ನು ಬಟನ್‌­ಗಳಿಂದಲೇ ಅಲಂಕರಿಸಿ­ದ್ದಾರೆ. ತಮ್ಮ ನಿಧನದ ನಂತರ, ಬಟನ್‌ ಅಲಂಕೃತ ಒಂದು ಶವಪೆಟ್ಟಿಗೆಯಲ್ಲಿ ಪಾರ್ಥಿವ ಶವ ಇಟ್ಟು ಹೂಳಬೇಕು ಎಂಬ ಷರತ್ತನ್ನೂ ಸ್ಟೀವನ್ಸ್ ಹಾಕಿದ್ದಾರೆ! ಅಷ್ಟೇ ಏಕೆ ಅವರ ಶೌಚಾಲಯವೂ ಬಟನ್‌ಮಯ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.