ಬುಧವಾರ, ಏಪ್ರಿಲ್ 14, 2021
31 °C

ಬಟರ್‌ಫ್ಲೈಸ್ ಇದು ಮಕ್ಕಳ ಲೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅದು ನವದೆಹಲಿಯ ಏರ್‌ಪೋರ್ಟ್ ಎದುರಿನ ಕೊಳಕಾದ ರಸ್ತೆ. ಅಲ್ಲಿ ಚಿಂದಿ ಆಯುವ ಮಕ್ಕಳ ಒಂದು ಗುಂಪು ಎಂದಿನಂತೆ ತಮ್ಮ ಕಾಯಕದಲ್ಲಿ ನಿರವಾಗಿರುತ್ತದೆ. ಆಗ ಹಳದಿ ಬಣ್ಣದ ವಾಹನವೊಂದು ಅಲ್ಲಿಗೆ ಬರುತ್ತದೆ. ಕೂಡಲೇ ಒಳಗಿನಿಂದ ಮೂರ‌್ನಾಲ್ಕು ಯುವಕರು ಕೆಳಗಿಳಿದು ಸುತ್ತಮುತ್ತ ವೀಕ್ಷಿಸುತ್ತಾರೆ. ಚಿಂದಿ ಆಯುವ ಮಕ್ಕಳ ದೃಷ್ಟಿ ಈ ಯುವಕರತ್ತ ಹೋಗುತ್ತದೆ. ಅಲ್ಲಿ ಸುಮಾರು 18 ಮಕ್ಕಳಿದ್ದುದನ್ನು ಗಮನಿಸಿದ ಗುಂಪು ಮತ್ತೆ ತಮ್ಮ ವಾಹನದೊಳಗೆ ನುಗ್ಗಿ ಒಂದಷ್ಟು ಸಾಮಗ್ರಿಗಳನ್ನು ಹೊರಗೆತ್ತಿಕೊಂಡು ಬರುತ್ತದೆ. ಅದನ್ನು ಬಳಸಿಕೊಂಡು ರಸ್ತೆಯ ಪಕ್ಕದಲ್ಲಿ ಬಿಡಾರ ಹೂಡುತ್ತದೆ.ಆ ಸುಂದರ ಬಿಡಾರ ನೋಡುತ್ತಲೇ ಅಲ್ಲಿದ್ದ ಮಕ್ಕಳು ಸಹಜವಾಗಿಯೇ ಕುತೂಹಲದಿಂದ ಅದರ ಬಳಿ ಸೇರುತ್ತಾರೆ. ಮಕ್ಕಳನ್ನು ಆ ಯುವಕರು ಪ್ರೀತಿಯಿಂದ ಒಳಗೆ ಕರೆಯುತ್ತಾರೆ. ಮಕ್ಕಳು ಆ ಆತ್ಮೀಯ ಕರೆಗೆ ಓಗೊಟ್ಟು ತಮ್ಮ ಕೆಲಸ ಕಾರ್ಯಗಳನ್ನೆಲ್ಲ ಕೆಲ ಕಾಲ ಬದಿಗೊತ್ತಿ, ಮೆಲ್ಲನೆ ಬಿಡಾರದೊಳಕ್ಕೆ ಅಡಿ ಇಡುತ್ತಾರೆ. ಆಗ ಅಲ್ಲಿ ನಡೆಯುವುದು ಮಾತ್ರ ವಿಸ್ಮಯ.ಇದು ಯಾವುದೋ ಕತೆಯಲ್ಲ. ನೈಜ ಘಟನೆ. ಅಸಲಿಗೆ ಅಲ್ಲಿ ಬಂದಿಳಿದದ್ದು ಶಾಲಾ ವಾಹನ. ಅದರಿಂದ ಇಳಿದವರು ಬರೀ ಯುವಕರಷ್ಟೇ ಅಲ್ಲ, ನುರಿತ        ಶಿಕ್ಷಕರು. ವಿದ್ಯಾರ್ಥಿಗಳ ಸುಂದರ ಭವಿಷ್ಯ ರೂಪಿಸುವ ಮಾರ್ಗದರ್ಶಕರು. ಅವರು ಹೂಡಿದ್ದು ಬರೀ ಬಿಡಾರವಲ್ಲ ಅದೊಂದು ಶಾಲಾ ತರಗತಿ. ಆ ಸಂಚಾರಿ ಶಾಲೆಯ ಹೆಸರು `ಬಟರ್‌ಫ್ಲೈಸ್~.1989ರಲ್ಲಿ ನವದೆಹಲಿಯಲ್ಲಿ ಆರಂಭವಾದ       `ಬಟರ್‌ಫ್ಲೈಸ್~ ಸ್ವಯಂ ಸೇವಾ ಸಂಸ್ಥೆ ಸ್ವ ಇಚ್ಛೆಯುಳ್ಳ ಉತ್ಸಾಹಿ ಯುವಕ/ ಯುವತಿಯರನ್ನು ಬಳಸಿಕೊಂಡು ಬೀದಿಯಲ್ಲಿ ಅಲೆಯುವ ಮಕ್ಕಳು, ಬಾಲ ಕಾರ್ಮಿಕರು ಹಾಗೂ ಅನಾಥ ಮಕ್ಕಳ ಭವಿಷ್ಯಕ್ಕಾಗಿ ಹೀಗೆ        ದುಡಿಯುತ್ತಿದೆ.ಈ ಸಂಸ್ಥೆಗೆ ನಿರ್ದಿಷ್ಟವಾದ ಶಾಲಾ ಕಟ್ಟಡವಾಗಲೀ, ಕಾರ್ಯಾಲಯವಾಗಲೀ ಇಲ್ಲ. ಈ ಶಾಲಾ ವಾಹನ ನಗರದಲ್ಲಿ ಸಂಚರಿಸುತ್ತಾ ಇರುತ್ತದೆ. ಎಲ್ಲಿ ದುಡಿಯುವ, ನಿರ್ಗತಿಕ ಮಕ್ಕಳು ಕಾಣಸಿಗುತ್ತಾರೋ ಅಲ್ಲಿ ಬಿಡಾರ ಹೂಡುತ್ತದೆ.ಅವರ ಮನವೊಲಿಸಿ ವಾಹನಕ್ಕೆ ಹತ್ತಿಸಿಕೊಳ್ಳುತ್ತದೆ. ಮೊದಲು ಶಿಕ್ಷಕರ ಗುಂಪು 6ರಿಂದ 14 ವರ್ಷದೊಳಗಿನ ಮಕ್ಕಳನ್ನು ವಯೋಮಾನಕ್ಕೆ ತಕ್ಕಂತೆ ವಿಂಗಡಿಸುತ್ತದೆ. ಮೊದಲೇ ಸಿದ್ಧಪಡಿಸಿ ಇಟ್ಟುಕೊಂಡ ಪಾಠವನ್ನು ಅವರಿಗೆ ಬೋಧಿಸುತ್ತದೆ. ಹೀಗೆ ಈ ಪ್ರಕ್ರಿಯೆ ಕೆಲ ತಿಂಗಳುಗಳ ಕಾಲ ನಡೆಯುತ್ತದೆ.ಮುಂದೆ ಮಕ್ಕಳು ತಕ್ಕಷ್ಟು ಸಾಮರ್ಥ್ಯ ಗಳಿಸಿಕೊಂಡ ಮೇಲೆ ಅವರನ್ನು ಶಾಲೆಗಳಿಗೆ ಸೇರಿಸುವ ವ್ಯವಸ್ಥೆ ಮಾಡಲಾಗುತ್ತದೆ.`ಚಿಟ್ಟೆಗಳು ಪ್ರಕೃತಿಯ ಸುಂದರ ಸೃಷ್ಟಿ. ಮಕ್ಕಳೂ ಹಾಗೆಯೇ. ಚಿಟ್ಟೆಗಳು ತಮ್ಮ ಉಳಿವಿಗಾಗಿ ಹೂವಿಂದ ಹೂವಿಗೆ ಹಾರುತ್ತವೆ. ಬೀದಿ ಮಕ್ಕಳೂ ಅಷ್ಟೆ. ಜೀವನೋಪಾಯಕ್ಕಾಗಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸುತ್ತಾಡುತ್ತಿರುತ್ತವೆ. ಚಿಟ್ಟೆಗಳದು ಅತ್ಯಲ್ಪ ಜೀವಿತಾವಧಿ. ಈ ಮಕ್ಕಳದು ಅತ್ಯಲ್ಪಾವಧಿಯ ಬಾಲ್ಯ. ಅಂದರೆ ಬೀದಿ ಮಕ್ಕಳ ಬದುಕು ಥೇಟ್ ಚಿಟ್ಟೆಗಳ ಹಾಗೆ~ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕಿ ರೀಟಾ ಪಾನೀಕರ್.ಹಲವು ಸರ್ಕಾರಿ ಸಂಸ್ಥೆಗಳು, ಕಾರ್ಪೊರೇಟ್, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಶಿಕ್ಷಣ ಪ್ರೇಮಿಗಳ ಬೆಂಬಲದಿಂದ `ಬಟರ್‌ಫ್ಲೈಸ್~ ಸುಮಾರು 23 ವರ್ಷಗಳಿಂದ ತನ್ನ ಈ ಅದಮ್ಯವಾದ ಕಾಯಕವನ್ನು ನಡೆಸಿಕೊಂಡು ಬಂದಿದೆ.ಎಲ್ಲ ಸೌಲಭ್ಯವಿದ್ದೂ ಕಳಪೆ ಗುಣಮಟ್ಟ ನೀಡುವ ನಮ್ಮ ಶಾಲೆಗಳು ಮತ್ತು ಶಿಕ್ಷಕರು ಈ `ಚಿಟ್ಟೆ~ಗಳಿಂದ ಕಲಿಯಬೇಕಾದುದು ಸಾಕಷ್ಟಿದೆ ಎನಿಸುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.