ಸೋಮವಾರ, ಜೂನ್ 14, 2021
23 °C

ಬಡತನದಲ್ಲಿ ಅರಳಿದ ಪ್ರತಿಭೆಗಳು...

ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

ಬಡತನದಲ್ಲಿ ಅರಳಿದ ಪ್ರತಿಭೆಗಳು...

ಈ ಪ್ರತಿಭೆಗಳು ಬಡತನದಲ್ಲಿ ಅರಳಿದ ಕುಸುಮಗಳು. ಬಡತನದ ಬೇಗೆಯಲ್ಲಿಯೇ ಬದುಕು ರೂಪಿಸಿಕೊಳ್ಳುತ್ತಿರುವ ಸಾಧಕಿಯರು. ವಿಜಾಪುರದ ಬಿಎಲ್‌ಡಿಇ ಸಂಸ್ಥೆಯ ಮಹಿಳಾ ಕಾಲೇಜಿನ ಶಾರೂಬಾಯಿ ಅಲಿಯಾಸ್ ಸಾಯಿರಾಬಾನು ಹಾಗೂ ಅಂಜನಾ ಜೋಡಿ ಕರಾಟೆಯಲ್ಲಿ ಮೋಡಿ ಮಾಡಿದೆ.ದೇಶದ ವಿವಿಧೆಡೆ ನಡೆದ ರಾಷ್ಟ್ರ-ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಬೇಟೆಯಾಡಿರುವ ಈ ಜೋಡಿಗೆ ಈಗ ಇಜಿಪ್ತ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಒಲಿದು ಬಂದಿದೆ. ಅಲ್ಲಿಗೆ ತೆರಳಲು ಬೇಕಿರುವ ಹಣ ಹೊಂದಿಸಿ ೊಳ್ಳಲು ಅವರಿಬ್ಬರು ಹರಸಾಹಸ ಪಡುತ್ತಿದ್ದಾರೆ.ಶಾರೂಬಾಯಿ ದಡೇದ ವಿಜಾಪುರ ತಾಲ್ಲೂಕು ಶಿರನಾಳದವರು. ಈಕೆಯ ಮೂಲ ಹೆಸರು ಸಾಯಿರಾಬಾನು. ಪ್ರಾಥಮಿಕ ಶಾಲೆಯಲ್ಲಿ ಹೆಸರು ನೋಂದಣಿಯ ಸಂದರ್ಭದಲ್ಲಿ ಆದ ತಪ್ಪಿನಿಂದ ಆಕೆ `ಶಾರೂಬಾಯಿ~ ಎಂದು ಕರೆಯಿಸಿಕೊಳ್ಳುತ್ತಿದ್ದಾಳೆ!

ಈಕೆಗೆ ಎಂಟು ಜನ ಸಹೋದರಿಯರು. ತಂದೆ ಅಲ್ಲಾಬಕ್ಷ ನಿಧನರಾಗಿದ್ದಾರೆ. ತಾಯಿ ಅಮೀನಮಾ ಸಂಸಾರದ ನೊಗ ಹೊತ್ತಿದ್ದಾರೆ. ಐವರು ದೊಡ್ಡ ಸಹೋದರಿಯರಿಗೆ ಮದುವೆಯಾಗಿದ್ದು, ಸಾಯಿರಾಬಾನು ಸೇರಿದಂತೆ ಇತರ ಮೂವರು ಓದುತ್ತಿದ್ದಾರೆ.

ಪುಣೆ, ಗೋವಾಗಳಲ್ಲಿ ನಡೆದ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದಿದ್ದಾಳೆ.`ಆಸ್ತಿಗಾಗಿ ಮತ್ತೊಬ್ಬರು ನನ್ನ ತಂದೆಯನ್ನು ಕೊಲೆ ಮಾಡಿದ್ದಾರೆ. ಗ್ರಾಮದಲ್ಲಿರುವ ತೋಟದಲ್ಲಿ ಬರುವ ನಿಂಬೆ ಬೆಳೆಯೇ ನಮ್ಮ ಜೀವನಕ್ಕೆ ಆಧಾರ. ಗಂಡಸು ಮಕ್ಕಳಿಲ್ಲದೆ, ಕೋರ್ಟ್-ಕಚೇರಿ ಅಲೆಯುತ್ತ ನಮ್ಮ ತಾಯಿ ಬಹಳಷ್ಟು ಕಷ್ಟ ಅನುಭವಿಸಿದ್ದಾಳೆ. ಯಾರ ಸಹಕಾರವೂ ದೊರೆಯದೇ ಕುಗ್ಗಿ ಹೋಗಿದ್ದಳು.`ಸಾಯಿರಾಬಾನು ಅವಳನ್ನೇ ಗಂಡಸು ಮಗು ಎಂದು ತಿಳಿದುಕೊ. ಆಕೆಗೆ ಕರಾಟೆ ಕಲಿಸಿ ಗಟ್ಟಿ ಮಾಡು~ ಎಂದು ವಕೀಲರು ತಾಯಿಗೆ ಧೈರ್ಯ ತುಂಬಿದ್ದರು. ವಕೀಲರ ಆ ಮಾತು ನನಗೆ ಪ್ರೇರಣೆಯಾಯಿತು. ಸವಾಲಾಗಿ ಸ್ವೀಕರಿಸಿ ಎರಡೂವರೆ ವರ್ಷದಿಂದ ಕರಾಟೆ ಕಲಿಯುತ್ತಿದ್ದೇನೆ. ನನ್ನ ಸಾಧನೆ ಕಂಡು ಅಮ್ಮಳಲ್ಲಿದ್ದ ಗಂಡು ಮಕ್ಕಳು ಇಲ್ಲ ಎಂಬ ಕೊರಗು ಈಗ ಹೊರಟೇ ಹೋಗಿದೆ~ ಎನ್ನುತ್ತಾಳೆ ಶಾರೂಬಾಯಿ ಅಲ್ಲಲ್ಲ ಸಾಯಿರಾಬಾನು.ಈಕೆಯದ್ದು ಬಹುಮುಖ ಪ್ರತಿಭೆ. ಕಬಡ್ಡಿ, ಈಜು ಸ್ಪರ್ಧೆಗಳಲ್ಲಿಯೂ ಪ್ರಶಸ್ತಿ ಬಾಚಿಕೊಂಡಿದ್ದು, ಕುದುರೆ ಸವಾರಿಯಲ್ಲಿಯೂ ಸೈ ಎನಿಸಿಕೊಂಡಿದ್ದಾಳೆ.

ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿರುವ ಸಾಯಿರಾಬಾನು, ಫೈಟಿಂಗ್ ಪ್ರವೀಣೆ. ಪುಣೆ, ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾಳೆ.ಅಂಜನಾ ಮೆಂಡೆಗಾರ ವಿಜಾಪುರದ ಅಕ್ಕಮಹಾದೇವಿ ರಸ್ತೆಯ ನಿವಾಸಿ. ತಂದೆ ಲಾರಿ ಚಾಲಕ. ತಾಯಿ ಗೃಹಿಣಿ. ಮನೆಯವರ ಮನಗೆದ್ದು ಈಕೆ ಮೂರು ವರ್ಷಗಳಿಂದ ಕರಾಟೆ ಕಲಿಯುತ್ತಿದ್ದಾಳೆ.ಗೋವಾ, ಪುಣೆಯಲ್ಲಿ ನಡೆದ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಈಕೆಯೂ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾಳೆ. ಈಕೆ ಉತ್ತಮ ಅಥ್ಲಿಟ್ ಮತ್ತು ಸೈಕ್ಲಿಸ್ಟ್ ಸಹ.ಈ ಜೋಡಿಗೆ ಬಿಎಲ್‌ಡಿಇ ಸಂಸ್ಥೆ, ಡಿಸಿಸಿ ಬ್ಯಾಂಕ್‌ನವರು ಪ್ರೋತ್ಸಾಹ ನೀಡಿದ್ದಾರೆ. ಜಿಲ್ಲಾ ಆಡಳಿತ ಸನ್ಮಾನಿಸಿ ಪುರಸ್ಕರಿಸಿದೆ. ಹಲವು ಸಂಘ-ಸಂಸ್ಥೆಗಳ ಪ್ರಶಸ್ತಿಯೂ ಬಂದಿವೆ. ಪರೀಕ್ಷೆಯಲ್ಲಿಯೂ ಉತ್ತಮ ಅಂಕ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಶಾರೂಬಾಯಿಗೆ ಐಪಿಎಸ್ ಅಧಿಕಾರಿ ಆಗುವ ಕನಸಿದ್ದರೆ, ಸೇನೆ ಸೇರಬೇಕು ಇಲ್ಲವೆ ಪಿಎಸ್‌ಐ ಆಗಬೇಕು ಎನ್ನುತ್ತಿದ್ದಾಳೆ ಅಂಜನಾ.ಜಮಖಂಡಿಯಲ್ಲಿ ನಡೆದ ಖಾದಿ ಉತ್ಸವದ ಸಂದರ್ಭದಲ್ಲಿ ಈ ಯುವತಿಯರು ಅಲ್ಲಿ ಕರಾಟೆ ಪ್ರದರ್ಶನ ನೀಡಿದರು. ಅದನ್ನು ಮೆಚ್ಚಿ ಅಲ್ಲಿಯ ಮುಬಾರಕ ಸಾರವಾನ, ಬಂದೇನವಾಜ್ ಜಂಬಗಿ ಎಂಬವರು ಈಜಿಪ್ಟ್‌ಗೆ ತೆರಳಲು ಶಾರೂಬಾಯಿಗೆ 25 ಸಾವಿರ ಧನಸಹಾಯ ಮಾಡಿದ್ದಾರೆ.`ಕರಾಟೆಯಲ್ಲಿ ಈ ಸಾಧನೆ ಮಾಡಲು ನಮ್ಮ ತರಬೇತುದಾರ ವಿಜಯಕುಮಾರ ರಾಠೋಡ ಅವರ ಪ್ರೋತ್ಸಾಹವೇ ಕಾರಣ. ನಮ್ಮ ಕಾಲೇಜಿನ ಪ್ರಾಚಾರ್ಯರೂ, ಬೋಧಕರು ಸಹಕಾರ ನೀಡುತ್ತಿದ್ದಾರೆ~ ಎನ್ನುತ್ತಾರೆ ಈ ಯುವ ಕರಾಟೆ ಪಟುಗಳು.ಈಜಿಪ್ಟ್‌ನಲ್ಲಿ ಆಗಸ್ಟ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಹೃದಯರ ನೆರವಿನ ನಿರೀಕ್ಷೆಯಲ್ಲಿದ್ದಾರೆ  ಸಾಯಿರಾಬಾನು (8749003231) ಹಾಗೂ ಅಂಜನಾ (9632750020). 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.