ಬಡತನವೇ ಸಮಸ್ಯೆಗೆ ಮೂಲ: ಬೆಲ್ಲದ

ಶುಕ್ರವಾರ, ಜೂಲೈ 19, 2019
28 °C

ಬಡತನವೇ ಸಮಸ್ಯೆಗೆ ಮೂಲ: ಬೆಲ್ಲದ

Published:
Updated:

ಧಾರವಾಡ: `ಬಡವರು ಮತ್ತು ಸಿರಿವಂತರ ಮಧ್ಯೆ ಹೆಚ್ಚುತ್ತಿರುವ ಕಂದಕವೇ ಬಡವರು ತಮ್ಮ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವಂತೆ ಮಾಡುತ್ತಿದ್ದು, ಈ ಸಮಸ್ಯೆಯ ಹೊಣೆಯನ್ನು ಸರ್ಕಾರವೇ ಹೊರಬೇಕಿದೆ~ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಹೇಳಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. `ಜಾಗತೀಕರಣದಿಂದ ಜನರ ಜೀವನ ಶೈಲಿಯೇ ಬದಲಾಗಿಹೋಗಿದೆ. ಶ್ರೀಮಂತರನ್ನು ಮತ್ತಷ್ಟು ಸಿರಿವಂತರನ್ನಾಗಿ ಮಾಡುವ ಜಾಗತೀಕರಣ, ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡುತ್ತಿದೆ~ ಎಂದು ವಿಷಾದಿಸಿದರು.`ಮನೆತನದ ಆದಾಯದಲ್ಲಿ ಜೀವನ ನಿರ್ವಹಣೆ ಸಾಧ್ಯವಾಗದೆ ಬಡವರು ತಮ್ಮ ಮಕ್ಕಳನ್ನು ಹೋಟೆಲ್, ಗ್ಯಾರೇಜ್ ಸೇರಿದಂತೆ ವಿವಿಧೆಡೆ ಕೆಲಸಕ್ಕೆ ಕಳುಹಿಸುತ್ತಾರೆ. ಬಾಲಕಾರ್ಮಿಕ ಪದ್ಧತಿ ಸಮಸ್ಯೆಯ ಮೂಲವನ್ನು ಗುರುತಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಹೀಗಾಗಿ ಕಾನೂನನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಆಗುತ್ತಿಲ್ಲ~ ಎಂದು ತಿಳಿಸಿದರು.`ಕೇಂದ್ರ ಸರ್ಕಾರ ಶಿಕ್ಷಣದ ಹಕ್ಕನ್ನು ಅನುಷ್ಠಾನಕ್ಕೆ ತಂದಿದ್ದು, ಮಕ್ಕಳು ಹಾಸ್ಟೆಲ್‌ನಲ್ಲಿದ್ದು ಶಿಕ್ಷಣವನ್ನು ಪಡೆಯಬಹುದು~ ಎಂದು ಅವರು ಹೇಳಿದರು. `ಹಣ ಸೋರಿಕೆಯನ್ನು ತಡೆದರೆ ಬಡವರ ಕಲ್ಯಾಣಕ್ಕೆ ಇನ್ನಷ್ಟು ಪರಿಣಾಮಕಾರಿ ಯೋಜನೆಗಳನ್ನು ತರಬಹುದು~ ಎಂದು ಅವರು ಅಭಿಪ್ರಾಯಪಟ್ಟರು.ಸಮಾರಂಭವನ್ನು ಶಾಸಕಿ ಸೀಮಾ ಮಸೂತಿ ಉದ್ಘಾಟಿಸಿದರು. ಬಡ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಹಾಕಿಕೊಂಡಿದೆ ಎಂದು ಅವರು ಹೇಳಿದರು. ಕೊಳಚೆ ಪ್ರದೇಶದ ಮಕ್ಕಳ ಕಲ್ಯಾಣಕ್ಕಾಗಿ ಬಾಲ ವಿಕಾಸ ಅಕಾಡೆಮಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ ತಿಳಿಸಿದರು. ಮಕ್ಕಳ ಸೊಸೈಟಿ ಕಾರ್ಯದರ್ಶಿ ಅನಿಲ್ ಯರಗಟ್ಟಿ, ಪ್ರೊ.ಎಸ್.ವೈ. ಸ್ವಾದಿ ಮತ್ತಿತರರು ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry