ಬಡತನ ನಿರ್ಮೂಲನೆ: ಜಾಗೃತಿ ಅಗತ್ಯ

7

ಬಡತನ ನಿರ್ಮೂಲನೆ: ಜಾಗೃತಿ ಅಗತ್ಯ

Published:
Updated:

ಆನೇಕಲ್: `ಭಾರತದಲ್ಲಿ ಬಡತನ ನಿರ್ಮೂಲನೆ ಹಾಗೂ ಆರ್ಥಿಕ ಸಬಲೀಕರಣ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವ ಆರ್ಥಿಕ ಸಂಸ್ಥೆಗಳ ಅವಶ್ಯಕತೆಯಿದೆ~ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಕುಮಾರ್ ನುಡಿದರು.ಅವರು ಪಟ್ಟಣದಲ್ಲಿ ಉಜ್ಜೀವನ್ ಆರ್ಥಿಕ ಸೇವಾ ಸಂಸ್ಥೆ ವತಿಯಿಂದ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಅಂಗನವಾಡಿಗಳಿಗೆ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.`ಜನರಲ್ಲಿ ಆರ್ಥಿಕ ಸಾಕ್ಷರತೆ ಮೂಡಿಸುವುದರಿಂದ ಬಡತನದಿಂದ ಮುಕ್ತಿ ಪಡೆಯಲು ಮಾರ್ಗ ತೋರಿದಂತಾಗುತ್ತದೆ. ಶಿಕ್ಷಣ ಮತ್ತು ಆರೋಗ್ಯ ಅತ್ಯಂತ ಪ್ರಮುಖವಾದ ಮಾನವ ಸಂಪನ್ಮೂಲಗಳು. ಈ ಸಂಪನ್ಮೂಲಗಳು ಆರ್ಥಿಕ ಸಾಧನೆ ಹೊಂದಲು ಜನರಿಗೆ ನೆರವಾಗುತ್ತವೆ. ಈ ನಿಟ್ಟಿನಲ್ಲಿ ಉಜ್ಜೀವನ್ ಸಂಸ್ಥೆಯು ಆರ್ಥಿಕ ಸೇವೆಗಳ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವುದು~ ಶ್ಲಾಘನೀಯ ಎಂದರು.ಸಂಸ್ಥೆಯ ವಲಯ ವ್ಯವಸ್ಥಾಪಕ ಚಂದ್ರಶೇಖರ್ ಮಾತನಾಡಿ,  `ಉಜ್ಜೀವನ್ ಆರ್ಥಿಕ ಸೇವಾ ಸಂಸ್ಥೆಯು ತಾಲ್ಲೂಕಿನಲ್ಲಿ ನಾಲ್ಕು ಸಾವಿರ ಸದಸ್ಯರನ್ನು ನೋಂದಾಯಿಸಿದ್ದು, ಗುಂಪುಗಳಿಗೆ ಕಡಿಮೆ ಬಡ್ಡಿದರದಲ್ಲಿ ಕಿರುಸಾಲ ನೀಡುತ್ತಿದೆ. ಸ್ವಯಂ ಉದ್ಯೋಗ, ಶಿಕ್ಷಣ, ಹೈನುಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಈ ಸಾಲಿನಲ್ಲಿ 4 ಕೋಟಿ ರೂ. ಸಾಲ ನೀಡಲಾಗಿದೆ. ಎಲ್ಲಾ ಗುಂಪುಗಳೂ ಸಹ ಸಾಲ ಮರುಪಾವತಿಯಲ್ಲಿ ಉತ್ತಮ ಸಾಧನೆ ತೋರಿವೆ ಎಂದರು. ಆರ್ಥಿಕ ಅರಿವು ಕಾರ್ಯಕ್ರಮಗಳು, ಆರೋಗ್ಯ ತಪಾಸಣಾ ಶಿಬಿರಗಳು, ವೃತ್ತಿ ತರಬೇತಿ, ಶೌಚಾಲಯ ಮತ್ತು ಸ್ವಚ್ಛತೆ, ಶೈಕ್ಷಣಿಕ ಕ್ಷೇತ್ರಕ್ಕೆ ನೆರವು, ವಿದ್ಯಾರ್ಥಿ ವೇತನ ಮತ್ತಿತರ ಸೇವೆಗಳನ್ನು ಸಂಸ್ಥೆಯು ಸಾಮಾಜಿಕ ಅಭಿವೃದ್ಧಿ ಯೋಜನೆಯಡಿಯಲ್ಲಿ ನೀಡುತ್ತಿದೆ~ ಎಂದು ತಿಳಿಸಿದರು.ಪತ್ರಕರ್ತ ರವಿಶಾಸ್ತ್ರಿ ಮಾತನಾಡಿ ಆರೋಗ್ಯ, ವಸತಿ, ಆಹಾರ, ಶಿಕ್ಷಣದ ಜೊತೆಗೆ ಜನರು ಉಳಿತಾಯ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಉಳಿತಾಯವು ಕಷ್ಟಕಾಲದ ಆಪದ್ಬಾಂಧವನಿದ್ದಂತೆ. ಮದುವೆ, ಶಿಕ್ಷಣ, ಗೃಹ ನಿರ್ಮಾಣ, ಆರೋಗ್ಯ ಸಮಸ್ಯೆ ಮತ್ತಿತರ ಸಂದರ್ಭದಲ್ಲಿ ಕೂಡಿಟ್ಟ ಹಣ ಕಾಯುತ್ತದೆ ಎಂದರು.ತಾಲ್ಲೂಕಿನ 9 ಅಂಗನವಾಡಿ ಹಾಗೂ ಒಂದು ಸರ್ಕಾರಿ ಶಾಲೆಗೆ ಅವಶ್ಯಕವಿರುವ ಸಾಮಗ್ರಿಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಪಟ್ಟಣದ ಹೆಚ್‌ಡಿಎಫ್‌ಸಿ ಬ್ಯಾಂಕ್ ಮ್ಯಾನೇಜರ್ ಪ್ರಕಾಶ್, ಸಂಸ್ಥೆಯ ರಾಜೇಂದ್ರ ಪ್ರಸಾದ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry