ಬಡತನ ಮತ್ತು ಬಿಕಿನಿ

7

ಬಡತನ ಮತ್ತು ಬಿಕಿನಿ

Published:
Updated:

`ಕ್ಯಾಲೆಂಡರ್‌ಗಾಗಿ ಪೋಸು ಕೊಟ್ಟ ಮಾತ್ರಕ್ಕೆ ಚಿತ್ರಗಳಲ್ಲೂ ಬಿಕಿನಿಯಲ್ಲಿ ಅಭಿನಯಿಸುತ್ತೇನೆ ಎಂದರ್ಥವಲ್ಲ~- ನಟಿ ಐಂದ್ರಿತಾ ರೇ ತೀಕ್ಷ್ಣ ಮಾತಿದು. ಸಿಸಿಎಲ್ ಪಂದ್ಯಾವಳಿಯ ಕ್ಯಾಲೆಂಡರ್‌ಗಾಗಿ ಬಿಕಿನಿಯಲ್ಲಿ ಪೋಸು ಕೊಟ್ಟಿದ್ದನ್ನು ಸಮರ್ಥಿಸಿಕೊಂಡರು ಐಂದ್ರಿತಾ. ಇದು ವಿವಾದ ಮಾಡುವಂತಹ ವಿಷಯವೇ ಅಲ್ಲ.ಅಷ್ಟಕ್ಕೂ ನಾನು ಫೋಟೋಗಾಗಿ ಬಿಕಿನಿಯಲ್ಲಿ ನಿಂತುಕೊಂಡದ್ದು ಒಂದು ಸುಂದರ ಆಹ್ಲಾದಕರ ವಾತಾವರಣದಲ್ಲಿ. ಅಲ್ಲಿ ಕೊಳಕನ್ನು ಹುಡುಕುವುದು ಸರಿಯಲ್ಲ. ಅಲ್ಲದೆ ಅದು ಕೇವಲ ಫೋಟೋಗಾಗಿ ಕೊಟ್ಟ ಪೋಸು. ಚಲನಚಿತ್ರಗಳಲ್ಲಿ ನನ್ನಿಂದ ಇದನ್ನು ನಿರೀಕ್ಷೆ ಮಾಡುವ ಅಗತ್ಯವಿಲ್ಲ ಎಂಬ ಪ್ರತಿಕ್ರಿಯೆ ಅವರದು.ಕನ್ನಡದ ಕೆಲವು ನಟಿಯರು ನೀವು ಈ ರೀತಿ ಪೋಸು ನೀಡಿದ ಬಗ್ಗೆ ಲೇವಡಿ ಮಾಡಿದ್ದಾರಲ್ಲಾ? ಎಂಬ ಪ್ರಶ್ನೆ ಇಟ್ಟರೆ ಐಂದ್ರಿತಾ ನಗುತ್ತಾರೆ. `ಈ ಟೀಕೆಯನ್ನು ನಾನು ಕೇಳಿದಾಗಲೂ ಇದನ್ನೇ ಮಾಡಿದ್ದು, ನಕ್ಕು ಸುಮ್ಮನಾದೆ! ಪ್ರಚಾರಕ್ಕಾಗಿ ಇಂಥ ಸಿಲ್ಲಿ ವಿಚಾರಗಳನ್ನು ಕೆಲವರು ಬಳಸಿಕೊಳ್ಳುತ್ತಾರೆ. ದೇಶದೆಲ್ಲೆಡೆ ಜೊತೆಗೆ ನಮ್ಮ ರಾಜ್ಯದಲ್ಲಿ ತುಂಬಾ ಸಮಸ್ಯೆಗಳಿವೆ. ಬಡತನದಂತಹ ಸಮಸ್ಯೆಗಳು ಸುತ್ತಮುತ್ತಲೂ ಇವೆ. ಅವುಗಳ ಬಗ್ಗೆ ಚರ್ಚಿಸುವ ಬದಲು ಬಿಕಿನಿಯಂತಹ ಕ್ಷುಲ್ಲಕ ವಿಚಾರದ ಬಗ್ಗೆ ಚರ್ಚೆ ನಡೆಸುವುದರಿಂದ ಯಾವ ಉಪಯೋಗವಿದೆ~ ಎನ್ನುವುದು ಅವರ ಪ್ರಶ್ನೆ.`ಸಿನಿಮಾ ಉದ್ಯಮದಲ್ಲಿ ವಿವಾದವೆನ್ನುವುದು ಸಹಜ. ನಾನಾಗಿಯೇ ಯಾವ ವಿವಾದ ಸೃಷ್ಟಿಸುವ ಗೋಜಿಗೆ ಹೋಗುವುದಿಲ್ಲ. ವಿವಾದಗಳು ಅವಾಗಿಯೇ ಉದ್ಭವವಾಗುತ್ತವೆ. ಹೀಗಾಗಿ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ~ ಎನ್ನುವುದು ಅವರ ಸ್ಪಷ್ಟನೆ.

ಏನೋ ಇದೆ...

ತಮ್ಮ ಕುರಿತ ಗಾಸಿಪ್‌ಗಳ ಬಗ್ಗೆಯೂ ಐಂದ್ರಿತಾ ತಲೆಕೆಡಿಸಿಕೊಂಡಿಲ್ಲ. `ದಿಗಂತ್ ಮತ್ತು ನಮ್ಮಿಬ್ಬರ ನಡುವೆ ಏನೋ ಇದೆ ಎಂಬುದು ಬರೀ ಗುಸುಗುಸು ಅಷ್ಟೇ. ವಾಸ್ತವವಾಗಿ ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಒಟ್ಟಿಗೆ ಚಿತ್ರಗಳನ್ನು ಮಾಡುವಾಗ ಗಾಸಿಪ್‌ಗಳು ಇದ್ದದ್ದೇ. ರೊಮ್ಯಾನ್ಸ್ ಒಂದು ಸಲಕ್ಕೆ ಬರುತ್ತೆ ಹೋಗುತ್ತೆ. ಸದ್ಯಕ್ಕೆ ನಾನು ಸಿಂಗಲ್! ಆದರೆ ಆಗುವುದು ಮಾತ್ರ ಲವ್ ಮ್ಯಾರೇಜ್! ಇದು ಖಚಿತ~ ಎಂದು ಐಂದ್ರಿತಾ ಹೇಳಿದರು.

ಅಂದಹಾಗೆ ಪಾತ್ರಗಳ ವಿಷಯದಲ್ಲಿ ಐಂದ್ರಿತಾ ಈಗ ಸಾಕಷ್ಟು ಚೂಸಿ ಆಗಿದ್ದಾರಂತೆ. `ಆರಂಭದ ದಿನಗಳಲ್ಲಿ ಬಂದ ಪಾತ್ರಗಳನ್ನೆಲ್ಲಾ ಒಪ್ಪಿಕೊಂಡಿದ್ದೆ. ಈಗ ಹಾಗಿಲ್ಲ. ಅಳೆದು ತೂಗಿಯೇ ಪಾತ್ರ ಆಯ್ಕೆ ಮಾಡಿಕೊಳ್ಳುತ್ತೇನೆ. ಒಳ್ಳೆ ನಿರ್ದೇಶಕ ಮತ್ತು ನಿರ್ಮಾಪಕರ ಚಿತ್ರಗಳನ್ನು ಒಪ್ಪಿಕೊಳ್ಳುತ್ತೇನೆ. ಪಾತ್ರ ನನಗೆ ಹೊಂದಿಕೊಳ್ಳುವಂತಿರಬೇಕು~ ಎನ್ನುವ ಅವರಿಗೆ, ಪಕ್ಕಾ ಕಮರ್ಷಿಯಲ್ ಚಿತ್ರಗಳ ಪಾತ್ರಗಳು ತಮಗೆ ಹೊಂದುತ್ತವೆ ಅನ್ನಿಸಿದೆ. ತಮ್ಮ ಚಿತ್ರಗಳೆಲ್ಲವೂ ಹಿಟ್ ಆಗುತ್ತಿವೆ ಎಂಬ ಖುಷಿಯೂ ಇದೆ. ಮುಂಚೆ ಬಿಜಿಯಾಗಿದ್ದಾಗ ಅವರಿಗೆ ಬೇರೆ ಭಾಷೆಗಳಿಂದ ಸಾಕಷ್ಟು ಆಫರ್‌ಗಳು ಬಂದಿದ್ದವಂತೆ. ಆದರೆ ಕನ್ನಡಕ್ಕೆ ಆದ್ಯತೆ ನೀಡಿದ್ದರಿಂದ ಅನ್ಯಭಾಷೆ ಚಿತ್ರಗಳತ್ತ ಕಣ್ಣು ಹಾಯಿಸಲಿಲ್ಲ. ಈಗ ಚೂಸಿಯಾಗಿದ್ದು ನಟಿಸುವ ಚಿತ್ರಗಳು ಕಡಿಮೆಯಾಗುತ್ತಿವೆ. ಹೊರರಾಜ್ಯದ ಆಫರ್‌ಗಳೂ ಮೊದಲಿನಂತೆ ಬರುತ್ತಿಲ್ಲವಂತೆ.

ಪಾರಿಜಾತದ ಘಮ

`ಮನಸಾರೆ~ ಬಳಿಕ ದಿಗಂತ್ ಜೊತೆಯಲ್ಲಿ ನಟಿಸಿದ ಚಿತ್ರ `ಪಾರಿಜಾತ~ದ ಬಗ್ಗೆ ಐಂದ್ರಿತಾಗೆ ಅತೀವ ನಿರೀಕ್ಷೆಗಳಿವೆ. `ನಮ್ಮಿಬ್ಬರ ಜೋಡಿಯ ಚಿತ್ರದ ಬಗ್ಗೆ ಜನರಲ್ಲಿ ಹೆಚ್ಚು ನಿರೀಕ್ಷೆ ಇದೆ. ಚಿತ್ರದಲ್ಲಿ ಮೆಚ್ಯೂರ್ಡ್‌ ಪಾತ್ರ ತಮ್ಮದು. ಹಾಸ್ಯ ಮತ್ತು ರೊಮ್ಯಾನ್ಸ್ ಎರಡೂ ಬೆರೆತಿದೆ. ಕಥೆಯೂ ಚೆನ್ನಾಗಿದೆ. ಹೀಗಾಗಿ ಚಿತ್ರ ಗೆದ್ದೇ ಗೆಲ್ಲುತ್ತದೆ~ ಎಂಬ ನಿರೀಕ್ಷೆ ಅವರದು.ದುನಿಯಾ ವಿಜಯ್ ಜೊತೆ ನಟಿಸುತ್ತಿರುವ `ರಜನಿಕಾಂತ~ ಚಿತ್ರದ ಬಗ್ಗೆಯೂ ಅವರು ಮೆಚ್ಚುಗೆ ಮಾತನ್ನಾಡುತ್ತಾರೆ. ಇಲ್ಲಿ ವಿಜಿಯದು ದ್ವಿಪಾತ್ರ. ಒಂದೇ ಮುಖದ ಎರಡು ವಿಭಿನ್ನ ವ್ಯಕ್ತಿತ್ವದ ಪಾತ್ರಗಳೊಂದಿಗೆ ನಟಿಸುವುದು ಇಲ್ಲಿ ಸ್ವಲ್ಪ ಸವಾಲಿನ ಕೆಲಸ ಎನ್ನುತ್ತಾರೆ ಅವರು.ಮಾತು `ಪರಮಾತ್ಮ~ ಚಿತ್ರದತ್ತ ಹೊರಳಿದಾಗ, ಆ ಚಿತ್ರದಲ್ಲಿನ ತಮ್ಮ ಪಾತ್ರ ಎರಡನೇ ನಾಯಕಿಯದು ಎಂದೇನೂ ನನಗೆ ಅನ್ನಿಸಲಿಲ್ಲ ಎಂದರು ಐಂದ್ರಿತಾ. ತಮಗೆ ಚಾಲೆಂಜಿಂಗ್ ಎನಿಸಿದ ಆ ಪಾತ್ರವನ್ನು ಹಾಗೂ ಚಿತ್ರದ ಕಥೆಯನ್ನು ಐಂದ್ರಿತಾ `ದಿಲ್ ತೋ ಪಾಗಲ್ ಹೈ~ ಚಿತ್ರದೊಂದಿಗೆ ಸಮೀಕರಿಸಿದರು. `ಯೋಗರಾಜ್ ಭಟ್ ಚಿತ್ರದಲ್ಲಿ ನಟಿಸಲು ಎಲ್ಲಾ ನಟಿಯರೂ ಬಯಸುತ್ತಾರೆ. ಅಂಥದ್ದರಲ್ಲಿ ನನಗೆ ಎರಡನೇ ಸಲ ಅವಕಾಶ ಸಿಕ್ಕಿದೆ. ನಾನು ಈ ವಿಚಾರದಲ್ಲಿ ಅದೃಷ್ಟವಂತೆ~ ಎಂದರು. ಅಂದಹಾಗೆ, `ಮನಸಾರೆ~ ಅವರ ಸಾರ್ವಕಾಲಿಕ ಮೆಚ್ಚಿನ ಚಿತ್ರ.`ರಜನಿಕಾಂತ~ ಹೊರತುಪಡಿಸಿ ಐಂದ್ರಿತಾ ಕೈಯಲ್ಲಿ ಸದ್ಯಕ್ಕೆ ಬೇರೆ ಚಿತ್ರಗಳಿಲ್ಲ. ಅತ್ತ ಚೂಸಿಯಾಗಲು ಹೊರಟಿದ್ದರೆ ಇತ್ತ ಅವಕಾಶಗಳೂ ಕಡಿಮೆಯಾಗುತ್ತಿವೆ. `ಪಾರಿಜಾತ~ ಪರಿಮಳ ಬೀರಿದರೆ ತಮ್ಮ ಅದೃಷ್ಟದ ದೆಸೆಯೂ ಬದಲಾಗಬಹುದು ಎಂಬ ನಿರೀಕ್ಷೆ ಅವರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry