ಬಡವರನ್ನು ತಲುಪದ ಗ್ರಾಮೀಣ ಸಾಲ

7

ಬಡವರನ್ನು ತಲುಪದ ಗ್ರಾಮೀಣ ಸಾಲ

Published:
Updated:

ಒಂದು ತೊಟ್ಟಿಯಲ್ಲಿ ನೀರು ತುಂಬಲು ಒಂದು ಕೊಳವೆಗೆ 10 ಗಂಟೆ ಬೇಕು, ಅದನ್ನು ಖಾಲಿ ಮಾಡಲು ಇನ್ನೊಂದು ಕೊಳವೆಗೆ ಕೇವಲ ಒಂದು ಗಂಟೆ ಸಾಕು ಎಂದಿಟ್ಟುಕೊಳ್ಳಿ. ಎರಡೂ ಕೊಳವೆಗಳನ್ನು ತೆರೆದಿಟ್ಟುಕೊಂಡರೆ ಆ ತೊಟ್ಟಿ ತುಂಬಲು ಎಷ್ಟು ಹೊತ್ತು ಬೇಕಾಗಬಹುದು? ಇಂತಹ ಸ್ಥಿತಿಯಲ್ಲಿ ಆ ತೊಟ್ಟಿಯಲ್ಲಿ ನೀರು ತುಂಬಲು ಸಾಧ್ಯವೇ ಇಲ್ಲ.ಶಾಲಾ ಮಕ್ಕಳಿಗೆ ನೀಡುವಂತಹ ಕುತೂಹಲದ ಗಣಿತದ ಪ್ರಶ್ನೆ ಇದಲ್ಲ. ಗ್ರಾಮೀಣ ಸಾಲ ನೀಡಿಕೆ ವಿಚಾರದಲ್ಲಿ ಸರ್ಕಾರದ ಕಾರ್ಯಗಳಿಗೆ ಇದೊಂದು  ಸಂಕೇತವಾಗುತ್ತದೆ.

`ಎಲ್ಲರನ್ನೂ ಒಳಗೊಂಡ~ ಆರ್ಥಿಕ ಅಭಿವೃದ್ಧಿ ಎಂಬ ಪದ ಇಂದು ಅತ್ಯಂತ ಫ್ಯಾಷನ್ ಆಗಿಬಿಟ್ಟಿದೆ. ಜನರನ್ನೆಲ್ಲ ಪ್ರಗತಿ ಪಥದಲ್ಲಿ ಸೇರಿಸಿಕೊಂಡು ಹೋಗುವ ಮಾತು ಬಹಳ ಆಕರ್ಷಕವಾಗಿಯೂ ಕಾಣಿಸುತ್ತದೆ.

 

ಆದರೆ, ಸರ್ಕಾರದ ನೀತಿಗಳು ಮಾತ್ರ ಗ್ರಾಮೀಣ ಭಾಗದ ಸಣ್ಣ ಮತ್ತು ಅತಿಸಣ್ಣ ರೈತರನ್ನು ಗ್ರಾಮೀಣ ಸಾಲ ನೀಡಿಕೆಯ ಪ್ರಕ್ರಿಯೆಯಿಂದ ದೂರವೇ ಇಡುತ್ತಿದೆ. ಎಲ್ಲರನ್ನೂ ಸೇರಿಸುವ ಕ್ರಿಯೆಗಿಂತ ಎಲ್ಲರನ್ನೂ ಹೊರಗಿಡುವ ಕ್ರಿಯೆ ಬಹಳ ವೇಗವಾಗಿ ನಡೆಯುತ್ತಿದೆ. ಸರ್ಕಾರದ ಈಗಿನ ನೀತಿಗಳಿಂದ ಗ್ರಾಮೀಣ ಭಾಗದ ಕಡು ಬಡವರಿಗೆ ಬ್ಯಾಂಕ್ ಸಾಲ ಖಂಡಿತ ಸಿಗಲಾರವು ಎಂಬುದು ಸ್ಪಷ್ಟವಾಗುತ್ತದೆ.ಜನರ ಕಷ್ಟಗಳಿಗೆ ನಾವು ಸ್ಪಂದಿಸುತ್ತಿದ್ದೇವೆ ಎಂದು ಹೇಳಿಕೊಳ್ಳುವುದಕ್ಕೆ ಬೇಕಾದ ಅಂಕಿಅಂಶಗಳೆಲ್ಲ ಸರ್ಕಾರದ ಬಳಿ ಇದೆ. ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಇತ್ತೀಚೆಗೆ ನೀಡಿದ ಹೇಳಿಕೆಯೇ ಇದಕ್ಕೆ ಸಾಕ್ಷಿ.ರೈತರಿಗೆ ಕೃಷಿ ಸಾಲ ನೀಡಿಕೆ ವಿಚಾರದಲ್ಲಿ 2011-12ನೇ ಸಾಲಿನಲ್ಲಿ ರೂ 4.75 ಲಕ್ಷ ಕೋಟಿ ಸಾಲ ನೀಡಿಕೆಯ ಗುರಿ ಇಟ್ಟುಕೊಳ್ಳಲಾಗಿದ್ದು, ಸೆಪ್ಟೆಂಬರ್ ವೇಳೆಗೆ ರೂ 2.23 ಲಕ್ಷ ಕೋಟಿ  ಒದಗಿಸಲಾಗಿದೆ. ಹೀಗಾಗಿ ಈ ವರ್ಷವೂ ಗುರಿ ಮೀರಿ ಸಾಲ ನೀಡಿಕೆ ಆಗುವುದು ನಿಶ್ಚಿತ ಎಂಬ ವಿಶ್ವಾಸ ಅವರದಾಗಿತ್ತು. ಅವರ ಮಾತಿಗೆ ಧ್ವನಿಗೂಡಿಸಿದ `ನಬಾರ್ಡ್~ ಅಧ್ಯಕ್ಷರು, ಈ ವರ್ಷ ಸಾಲ ನೀಡಿಕೆ ಪ್ರಮಾಣ ್ಙ5.2 ಲಕ್ಷ ಕೋಟಿಗಳಿಗೆ ಹೆಚ್ಚಲಿದೆ ಎಂದರು.ಬ್ಯಾಂಕ್‌ಗಳು ಇತ್ತೀಚಿನ ದಿನಗಳಲ್ಲಿ ಸಾಧಿಸುತ್ತಿರುವ ಸಾಲ ನೀಡಿಕೆ ಗುರಿ ಗಮನಿಸಿದರೆ ಅವರ ಅಂದಾಜುಗಳು ಸುಳ್ಳಲ್ಲ. 2004ರ್ಲ್ಲಲಿ ಸರ್ಕಾರವು ಸಾಂಸ್ಥಿಕ ಕೃಷಿ ಸಾಲ ನೀಡಿಕೆ ಪ್ರಮಾಣ ಮೂರು ವರ್ಷದಲ್ಲಿ ದ್ವಿಗುಣಗೊಳ್ಳಬೇಕು ಎಂದು ಬಯಸಿತ್ತು. ಆ ಗುರಿ ಎರಡೇ ವರ್ಷದಲ್ಲಿ ಈಡೇರಿಬಿಟ್ಟಿತ್ತು. ಅಲ್ಲಿಂದೀಚೆಗೆ ಸರ್ಕಾರ ಭಾರಿ ದೊಡ್ಡ ಗುರಿಗಳನ್ನೇ ಹಾಕುತ್ತ ಬಂದಿದೆ.ಪ್ರತಿ ಬಾರಿಯೂ ಗುರಿ ಮೀರಿದ ಸಾಧನೆಯೇ ನಡೆದಿದೆ. 2008-09ರಲ್ಲಿ ಗ್ರಾಮೀಣ ಸಾಲ ನೀಡಿಕೆ ಗುರಿಯನ್ನು ರೂ 2.80 ಲಕ್ಷ ಕೋಟಿಗೆ ನಿಗದಿಪಡಿಸಲಾಗಿತ್ತು. ಆ ವರ್ಷ ರೂ 2.87 ಲಕ್ಷ ಕೋಟಿ ಸಾಲ ನೀಡಿಕೆಯಾಗಿತ್ತು. 2009-10ರಲ್ಲಿ ರೂ 3.25 ಲಕ್ಷ ಕೋಟಿ ಗುರಿ ಇಟ್ಟುಕೊಂಡಿದ್ದರೆ, 3.75 ಲಕ್ಷ ಕೋಟಿ ಸಾಧನೆಯಾಗಿತ್ತು. 2010-11ರಲ್ಲಿ ರೂ 3.85 ಲಕ್ಷ ಕೋಟಿ ಗುರಿ ಇಟ್ಟುಕೊಳ್ಳಲಾಗಿದ್ದರೆ, ರೂ 4.47 ಲಕ್ಷ ಕೋಟಿಗಳಷ್ಟು ಸಾಲ ನೀಡಲಾಗಿತ್ತು.ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಗುರಿ ಇಟ್ಟುಕೊಂಡು ಅದನ್ನು ಸಾಧಿಸುವುದು ನಿಶ್ಚಿತ. `ನಬಾರ್ಡ್~ನ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಕೆ.ಮಿಶ್ರಾ ಅವರು ಹೇಳುವಂತೆ ಮುಂದಿನ ಪಂಚವಾರ್ಷಿಕ ಯೋಜನಾ ಅವಧಿಯಲ್ಲಿ ಕೃಷಿ ಕ್ಷೇತ್ರಕ್ಕೆ ರೂ 40 ಲಕ್ಷ ಕೋಟಿಗಳ ಅಗತ್ಯ ಇದೆ.ರೈತರ ಆತ್ಮಹತ್ಯೆ ಏಕೆ?

ಬ್ಯಾಂಕ್‌ಗಳಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಗತ್ಯ ಇರುವವರಿಗೆ ಸಾಲ ಸಿಗುತ್ತಿದೆ ಎಂದಾದರೆ ಖಾಸಗಿ ಹಣಕಾಸು ಮೂಲಗಳಿಂದ ಸಾಲ ಪಡೆದು ಅದನ್ನು ತೀರಿಸಲಾಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಏಕೆ ಹೆಚ್ಚುತ್ತಿವೆ? ಎಲ್ಲರನ್ನೂ ಕಾಡುತ್ತಿರುವ ಮೂಲಭೂತ ಪ್ರಶ್ನೆ ಇದು. ಆದರೆ, ಇದಕ್ಕೆ ಸರ್ಕಾರದಿಂದ ಸ್ಪಷ್ಟ ಉತ್ತರವೇ ಇಲ್ಲ. ಅವರ ನೀತಿಗಳಿಂದಲೇ ಇದೆಲ್ಲ ನಡೆಯುತ್ತಿದೆ ಎಂಬುದನ್ನು ವಿವರಿಸಿ ಹೇಳಬೇಕಿಲ್ಲ.ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋದ ಮಾಹಿತಿ ಪ್ರಕಾರ 1995ರಿಂದ 2010ರ ನಡುವೆ ದೇಶದಲ್ಲಿ 2,56,913 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷವೇ 15,964 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸಂಖ್ಯೆ ಕಡಿಮೆಯಾಗಿದೆ ಎಂದು ಸರ್ಕಾರ ಹೇಳಿಕೊಳ್ಳಬಹುದು. ಆದರೆ, ವರ್ಷಕ್ಕೆ 15 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದೆಂದರೆ ಸಣ್ಣ ಸಂಗತಿಯೇ?ಇಷ್ಟು ದೊಡ್ಡ ಸಂಖ್ಯೆಯಲ್ಲಿ ರೈತರು ಸಾಲ ವಿಚಾರದ್ಲ್ಲಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ, ಅಂತಹವರ ಸಂಖ್ಯೆ ಕೇವಲ 800 ಎಂದು ರಾಜ್ಯಗಳು ಹೇಳುತ್ತಿವೆ ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಸಮರ್ಥಿಸಿಕೊಳ್ಳುತ್ತಾರೆ. ಈ ವಿಚಾರದ ಬಗ್ಗೆ ಅಧ್ಯಯನ ನಡೆಸಲು ಜಂಟಿ ಸಂಸದೀಯ ಸಮಿತಿ ರಚಿಸುವುದಾಗಿ ಅವರು ಹೇಳಿದ್ದಾರೆ.ರೈತರ ಕಷ್ಟಗಳ ಬಗ್ಗೆ ಜನಪ್ರತಿನಿಧಿಗಳು ಗಂಭೀರ ಚಿಂತನೆಗೆ ತೊಡಗಿರುವುದು ಸ್ವಾಗತಾರ್ಹ ಕ್ರಮ.  ಸರ್ಕಾರ ಇದರ ಜತೆಗೆ ಕೃಷಿ ಸಾಲ ವಿಚಾರದಲ್ಲಿ ತಾನು ಮಾಡಿದಂತಹ ನೀತಿಗಳನ್ನು, ಅವುಗಳ ಪರಿಣಾಮಗಳನ್ನು ಪುನರ್ ಪರಿಶೀಲಿಸುವ ಕ್ರಮವನ್ನೂ ಕೈಗೊಳ್ಳಬೇಕು.ಸಾಲ ನೀಡಿಕೆ ಗುರಿ ಈಡೇರುತ್ತಿರುವ ಬಗ್ಗೆ ಸರ್ಕಾರ ನೀಡುತ್ತಿರುವ ಹೇಳಿಕೆಯ ಜತೆಯಲ್ಲೇ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿರುವುದು ಸರ್ಕಾರದ ನೀತಿಗಳ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಇದರ ಜತೆಗೆ ಇನ್ನಷ್ಟು ವಿದ್ಯಮಾನಗಳು ಸಹ ಕೃಷಿ ಸಾಲವು ಗ್ರಾಮೀಣ ಭಾಗದ ಅಗತ್ಯ ಇರುವವರಿಂದ ದೂರವೇ ಉಳಿದಿರುವುದನ್ನು ತೋರಿಸುತ್ತವೆ.ದೇಶದಲ್ಲಿರುವ ರೈತ ಸಮುದಾಯದ ಪೈಕಿ ಸಣ್ಣ ಮತ್ತು ಅತಿಸಣ್ಣ ರೈತರ ಪ್ರಮಾಣ ಶೇ 80ಕ್ಕಿಂತ ಅಧಿಕ ಇದೆ. ದೊಡ್ಡ ಪ್ರಮಾಣದಲ್ಲಿ ಬ್ಯಾಂಕ್ ಶಾಖೆಗಳು ಆರಂಭವಾಗಿದ್ದರೂ ಸಾಲ ಪಡೆದುಕೊಳ್ಳುವ ವಿಚಾರದಲ್ಲಿ ಇವರ ಪಾಲು ಕ್ಷುಲ್ಲಕವಾಗಿಬಿಟ್ಟಿದೆ. ಅಂದರೆ ಇವರಿಗೆ ಸಾಕಷ್ಟು ಪ್ರಮಾಣದಲ್ಲಿ ಸಾಲವನ್ನೇ ನೀಡಲಾಗುತ್ತಿಲ್ಲ.ಸರ್ಕಾರವು 2010ರ ಜೂನ್‌ನಲ್ಲಿ ನೇಮಿಸಿದ ಯು.ಸಿ.ಸಾರಂಗಿ ಸಮಿತಿ ನೀಡಿದ ವರದಿಯಂತೆ ಅತಿಸಣ್ಣ ರೈತರಲ್ಲಿ ಕೇವಲ ಶೇ 14ರಷ್ಟು ಮಂದಿ ಮಾತ್ರ ಸಾಂಸ್ಥಿಕ ಹಣಕಾಸು ಮೂಲಗಳಿಂದ ಸಾಲ ಸೌಲಭ್ಯ ಪಡೆದಿದ್ದಾರೆ. ವಿಶ್ವಬ್ಯಾಂಕ್ ಸಹ ಇಂತಹದೇ ವರದಿ ನೀಡಿದ್ದು, ಅತಿಸಣ್ಣ ರೈತರಲ್ಲಿ ಶೇ 87ರಷ್ಟು ಮಂದಿ ಹಾಗೂ ಸಣ್ಣ ರೈತರಲ್ಲಿ ಶೇ 70ರಷ್ಟು ಮಂದಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುತ್ತಿಲ್ಲ ಎಂದು ಹೇಳಿದೆ.ದೊಡ್ಡ ಮತ್ತು ಸಣ್ಣ ರೈತರನ್ನು ಸೇರಿಸಿಕೊಂಡು ಹೇಳುವುದಾದರೆ ಶೇ 51ರಷ್ಟು ರೈತರು ಯಾವುದೇ ಬ್ಯಾಂಕಿಂಗ್ ಸೇವೆ ಪಡೆಯುತ್ತಿಲ್ಲ. ಇಂತಹ ಹಲವು ಅಧ್ಯಯನಗಳೂ ಈ ಮಾತಿಗೆ ಪೂರಕವಾದ ವರದಿಯನ್ನೇ ನೀಡಿವೆ. ರಂಗರಾಜನ್ ಸಮಿತಿ ಸಹ ಇಂತಹದೇ ಅಧ್ಯಯನ ನಡೆಸಿ ಶೇ 27ರಷ್ಟು ಕೃಷಿ ಕುಟುಂಬಗಳಿಗೆ ಮಾತ್ರ ಸಾಂಸ್ಥಿಕ ಮೂಲಗಳಿಂದ ಹಣಕಾಸಿನ ನೆರವು ಸಿಗುತ್ತಿದೆ, ಇಲ್ಲೂ ಮೂರನೇ ಒಂದರಷ್ಟು ಮಂದಿ ಖಾಸಗಿ ಹಣಕಾಸು ಮೂಲಗಳಿಂದ ಸಾಲ ಪಡೆಯುತ್ತಾರೆ ಎಂದು ತಿಳಿಸಿದೆ. ಅಂದರೆ ಶೇ 18ರಷ್ಟು ಕೃಷಿ ಕುಟುಂಬಗಳು ಮಾತ್ರ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಪಡೆಯುತ್ತಿವೆ ಎಂದಾಯಿತು.ಸರ್ಕಾರ ಏನೇ ಹೇಳಿಕೊಂಡರೂ ಬ್ಯಾಂಕ್‌ಗಳಿಂದ ಸಾಲ ಪಡೆದ ಈ ಅದೃಷ್ಟವಂತ ರೈತರಾರೂ ಸಣ್ಣ ರೈತರಲ್ಲ ಎಂಬುದು ವಾಸ್ತವ ಸಂಗತಿ.ಇದೆಲ್ಲ ಆಕಸ್ಮಿಕ ವಿದ್ಯಮಾನಗಳಲ್ಲ. 1990ರಿಂದೀಚೆಗೆ ಅನುಸರಿಸಿಕೊಂಡು ಬಂದ ನೀತಿಗಳ ಫಲ ಇದು. ಬ್ಯಾಂಕ್‌ಗಳ ಲಾಭ ಗಳಿಕೆಯ ಮೇಲಿನ ಕಾಳಜಿಯಿಂದಾಗಿ ಅವುಗಳು ಗ್ರಾಮೀಣ ಭಾಗದ ಬಡವರಿಂದ ದೂರ ಇರುವಂತೆ ಮಾಡಿದೆ. ಗ್ರಾಮೀಣ ಸಾಲ ನೀಡಿಕೆ ಪ್ರಮಾಣ ಹೆಚ್ಚಿಸಬೇಕು ಎಂದು ಹೇಳುತ್ತಲೇ ಗ್ರಾಮೀಣ ಭಾಗದಲ್ಲಿನ ಶಾಖೆಗಳ ಸಂಖ್ಯೆ  ಕಡಿತಗೊಳಿಸಲಾಗುತ್ತಿದೆ. ಆರ್‌ಬಿಐ ಮಾಹಿತಿ ಪ್ರಕಾರ 1991ರಲ್ಲಿ 35,206 ಶಾಖೆಗಳು ಗ್ರಾಮೀಣ ಭಾಗದಲ್ಲಿದ್ದರೆ, 2011ರ್ಲ್ಲಲಿ ಇವುಗಳ ಸಂಖ್ಯೆ 33,602ಕ್ಕೆ ಕುಸಿದಿದೆ. ವಾಣಿಜ್ಯ ಬ್ಯಾಂಕ್‌ಗಳ ಗ್ರಾಮೀಣ ಭಾಗದ ಪಾಲು ಶೇ 58.46ರಿಂದ ಶೇ 36.10ಕ್ಕೆ ಕುಸಿದಂತಾಗಿದೆ.ಗ್ರಾಮೀಣ ಭಾಗದಲ್ಲಿ ಸಾಲ ನೀಡುವುದಕ್ಕಾಗಿಯೇ ಸ್ಥಾಪನೆಗೊಂಡಂತಹ ಹಣಕಾಸು ಸಂಸ್ಥೆಗಳ ಕಾರ್ಯವಿಧಾನವನ್ನೂ ಪರಿಷ್ಕರಿಸಲಾಗಿದೆ. ಉದಾಹರಣೆಗೆ ಸಹಕಾರಿ ಸಂಘಗಳ ಸಾಲ ನೀಡಿಕೆ ಪ್ರಮಾಣ 1993-94ರಲ್ಲಿ ಶೇ 62ರಷ್ಟಿದ್ದುದು 2009ರಲ್ಲಿ ಶೇ 12ರಷ್ಟು ಕುಸಿತ ಕಂಡಿದೆ.ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ (ಆರ್‌ಆರ್‌ಬಿ) ಕತೆಯಂತೂ ಇದೆಲ್ಲಕ್ಕಿಂತ ಭಯಾನಕವಾದುದು. ಗ್ರಾಮೀಣ ಭಾಗದ ಬಡತನ ರೇಖೆಗಿಂತ ಕೆಳಗೆ ಇರುವ ಜನರಿಗೆ ಅಗ್ಗದ ಸಾಲ ನಿಡುವುದಕ್ಕಾಗಿಯೇ ಇಂತಹ ಸಂಸ್ಥೆಗಳನ್ನು ಸ್ಥಾಪಿಸಿದ್ದಾಗಿತ್ತು. ಅವುಗಳು ತಮ್ಮ ಮೂಲ ಉದ್ದೇಶವನ್ನೆಲ್ಲ ಗಾಳಿಗೆ ತೂರಿಬಿಟ್ಟಿವೆ.ಅವುಗಳು ಇಂದು ಹೆಚ್ಚಿನ ವಾಣಿಜ್ಯ ಬ್ಯಾಂಕ್‌ಗಳನ್ನೂ ಮೀರಿಸುವ ಮಟ್ಟಿಗೆ ಲಾಭದ ಮೇಲೆ ದೃಷ್ಟಿ ನೆಟ್ಟಿವೆ. ಅವುಗಳು ಇಂದು ಪ್ರಾದೇಶಿಕ ಬ್ಯಾಂಕ್‌ಗಳಾಗಿ ಉಳಿದಿಲ್ಲ. ಈ ಬ್ಯಾಂಕ್‌ಗಳಲ್ಲಿನ ನಿರ್ವಹಣಾ ವೆಚ್ಚ ಇತರ ಬ್ಯಾಂಕ್‌ಗಳಿಗಿಂತ ಅಧಿಕ ಇದೆ. ಗ್ರಾಮೀಣ ಸಾಲ ನೀಡಿಕೆ ಬದಲಿಗೆ ಹೆಚ್ಚು ಲಾಭ ಗಳಿಸುವ ಕ್ಷೇತ್ರದತ್ತ ಸಾಲ ನೀಡುವುದೇ ಈ ಬ್ಯಾಂಕ್‌ಗಳ ಆದ್ಯತೆಯಾಗಿಬಿಟ್ಟಿದೆ. ಅವುಗಳ ಶಾಖೆಗಳು ಇಂದು ನಗರಗಳಲ್ಲಿ ಮಾತ್ರವಲ್ಲ, ಮಹಾನಗರಗಳಲ್ಲೂ ಸ್ಥಾಪನೆಗೊಂಡಿವೆ.ಗ್ರಾಮೀಣ ಜನರ ಹಣಕಾಸು ಸೇವೆಗಾಗಿ ಇದ್ದ ಹಣಕಾಸು ಸಂಸ್ಥೆಗಳು ತಮ್ಮ ಕರ್ತವ್ಯ ಮರೆತು ಲಾಭದತ್ತ ದೃಷ್ಟಿ ನೆಟ್ಟಿರುವುದರಿಂದಲೇ ಖಾಸಗಿ ಹಣಕಾಸು ಸಂಸ್ಥೆಗಳು ಭಾರಿ ಬಡ್ಡಿ ವಿಧಿಸಿ ಜನರನ್ನು ಶೋಷಿಸುತ್ತಿವೆ. ದುಬಾರಿ ಬಡ್ಡಿ ನೀಡುವಷ್ಟರ ಮಟ್ಟಿಗೆ ಕೃಷಿ ಇಳುವರಿ ಇರುವುದಿಲ್ಲ, ಇದರ ಪರಿಣಾಮವಾಗಿ ರೈತರು ಆತ್ಮಹತ್ಯೆಗೆ ಶರಣಾಗುವಂತಾಗುತ್ತದೆ. ಸರ್ಕಾರಕ್ಕೆ ಕಾಳಜಿ ಇದೆಯೇ?

ಸರ್ಕಾರಕ್ಕೆ ರೈತರ ಕಲ್ಯಾಣದ ಬಗ್ಗೆ ನಿಜಕ್ಕೂ ಆಸಕ್ತಿ ಇದೆ ಎಂದಾದರೆ ಗ್ರಾಮೀಣ ಬ್ಯಾಂಕ್‌ಗಳನ್ನು ವಾಣಿಜ್ಯೀಕರಣಗೊಳಿಸುವ ತನ್ನ ನೀತಿಗಳನ್ನು ಸ್ಥಗಿತಗೊಳಿಸಬೇಕು.ರೈತರ ಅಗತ್ಯಗಳಿಗೆ ತಕ್ಕಂತೆ ಸುಧಾರಣೆಗಳನ್ನು ತರಬೇಕು. ರೈತರಿಗೆ ಯಾವುದೇ ಕಷ್ಟ ನೀಡದೆ, ಸಕಾಲಕ್ಕೆ, ಅವರಿಗೆ ಪಾವತಿಗೆ ಅನುಕೂಲ ಆಗುವ ರೀತಿಯಲ್ಲಿ ಸಾಲ ದೊರಕಿಸುವಂತೆ ಮಾಡಬೇಕು. ಕೃಷಿಯಲ್ಲಿ ಅತಂತ್ರ ಪರಿಸ್ಥಿತಿ ಯಾವತ್ತೂ ಇರುತ್ತದೆ. ಬೆಳೆ ನಾಶದಿಂದ ರೈತರಿಗೆ ಸಾಲ ಮರುಪಾವತಿ ಮಾಡುವುದು ಕಷ್ಟವಾದರೆ ಈ ವರ್ಷದ ಕೃಷಿ ಚಟುವಟಿಕೆ ಮುಂದುವರಿಸುವುದಕ್ಕಾಗಿ ಅಥವಾ ರೈತರು ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುವ ಕಾರ್ಯಗಳಿಗಾಗಿ ಅವರಿಗೆ ಸಬ್ಸಿಡಿ ನೀಡುವ ವ್ಯವಸ್ಥೆ ಬರಬೇಕು, ಸರ್ಕಾರಕ್ಕೆ ಮನಸ್ಸು ಮಾಡಿದರೆ ಮಾರ್ಗ ಖಂಡಿತ ಇದೆ.ಗ್ರಾಮೀಣ ಬ್ಯಾಂಕ್‌ಗಳನ್ನು ವಾಣಿಜ್ಯೀಕರಣಗೊಳಿಸುವ ಪರಿಪಾಠವನ್ನು ಸರ್ಕಾರ ತಕ್ಷಣ ನಿಲ್ಲಿಸಬೇಕು. ಗ್ರಾಮೀಣ ಭಾಗದ ಸಣ್ಣ, ಅತಿಸಣ್ಣ ರೈತರು, ಬಡವರಿಗಾಗಿಯೇ ಸ್ಥಾಪನೆಗೊಂಡ ಸಹಕಾರಿ ಸಂಘಗಳು ಮತ್ತು `ಆರ್‌ಆರ್‌ಬಿ~ಗಳು ತಮ್ಮ ಸ್ಥಾಪನೆಯ ಉದ್ದೇಶಕ್ಕೆ ವಿಮುಖವಾಗಿ ಕಾರ್ಯನಿರ್ವಹಿಸುತ್ತ ಹೋದರೆ ಎಲ್ಲರನ್ನೂ ಹಣಕಾಸು ಕ್ಷೇತ್ರಕ್ಕೆ ಒಳಪಡಿಸುವ ಸರ್ಕಾರದ `ಮಂತ್ರ~ದಿಂದ ಯಾವುದೇ ಫಲ ಸಿಗಲು ಸಾಧ್ಯವಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry