ಬಡವರಿಗೆ ಉತ್ತಮ ಶಿಕ್ಷಣ ಸಿಕ್ಕರೆ ಸಮಾನತೆ

ಶುಕ್ರವಾರ, ಜೂಲೈ 19, 2019
28 °C

ಬಡವರಿಗೆ ಉತ್ತಮ ಶಿಕ್ಷಣ ಸಿಕ್ಕರೆ ಸಮಾನತೆ

Published:
Updated:

ಪೀಣ್ಯ ದಾಸರಹಳ್ಳಿ: `ಶ್ರೀಮಂತ ಮಕ್ಕಳ ರೀತಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತಾದಾಗ ಮಾತ್ರ ಯಾವುದೇ ತಾರತಮ್ಯ ಇಲ್ಲದೇ ಎಲ್ಲರೂ ಸಮಾನತೆಯಿಂದ ಬದುಕಬಹುದು~ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನುಡಿದರು.ಸಾರ್ವಜನಿಕ ಜಾಗೃತಿ ವೇದಿಕೆಯು ಶನಿವಾರ ನಂದಿನಿ ಬಡಾವಣೆಯ ಭೈರವೇಶ್ವರ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಸಮವಸ್ತ್ರ ಹಾಗೂ ಪಠ್ಯ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.`ರಾಜ್ಯದಲ್ಲಿ ಇನ್ನೂ ಶೇ 30ರಷ್ಟು ಮಂದಿ ಅನಕ್ಷರಸ್ಥರು ಅಕ್ಷರ ಜ್ಞಾನವಿಲ್ಲದೇ ಬದುಕುತ್ತಿದ್ದಾರೆ. ಸರ್ಕಾರ ಅವರಿಗೆ ಅಕ್ಷರಾಭ್ಯಾಸ ಕಲಿಸಲು ಮುಂದಾದಲ್ಲಿ ತಿಳಿವಳಿಕೆಯಿಂದ ಜೀವನ ಸಾಧಿಸಲು ಸಹಕಾರಿಯಾಗಲಿದೆ~ ಎಂದು ಅವರು ಪ್ರತಿಪಾದಿಸಿದರು.`ಸಾರ್ವಜನಿಕ ಸಂಘ- ಸಂಸ್ಥೆಗಳ ಸಹಭಾಗಿತ್ವದಲ್ಲಿ ಸರ್ಕಾರ ಶಿಕ್ಷಣಕ್ಕೆ ಒತ್ತು ನೀಡಬೇಕು. ಇದರಿಂದ ಬಡ ಮಕ್ಕಳಿಗೆ ಇನ್ನೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾದೀತು~ ಎಂದು ಅವರು ಸಲಹೆ ಮಾಡಿದರು.ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, `ವಿದ್ಯಾರ್ಥಿಗಳ ಬದುಕನ್ನೇ ಬದಲಾಯಿಸುವ ಶಿಕ್ಷಣ ಕ್ಷೇತ್ರಕ್ಕೆ ಉಳ್ಳವರು ನೆರವಿನ ಹಸ್ತ ಚಾಚುವ ಮೂಲಕ ಬಡ ಮಕ್ಕಳು ಕೂಡ ಉನ್ನತ ಮಟ್ಟಕ್ಕೆ ಬೆಳೆಯಲು ನೆರವಾಗಬೇಕು~ ಎಂದರು.`ಶಿಕ್ಷಣದ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿರುವುದರಿಂದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಾ ಬರುತ್ತಿವೆ~ ಎಂದರು.ಶಾಸಕ ಮತ್ತು ವೇದಿಕೆ ಅಧ್ಯಕ್ಷ ನೆ.ಲ.ನರೇಂದ್ರಬಾಬು ಮಾತನಾಡಿ, ವೇದಿಕೆ ವತಿಯಿಂದ 50 ಸಾವಿರ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಲಾಗುತ್ತಿದೆ. ಕಳೆದ 21 ವರ್ಷಗಳಿಂದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತಹ ಹಲವು ಪಠ್ಯ ಸಾಮಗ್ರಿ ಗಳನ್ನು ನೀಡಲಾಗಿದೆ ಎಂದರು.ಮಾಜಿ ಸಚಿವೆ ರಾಣಿ ಸತೀಶ್, ನಿವೃತ್ತ ಪೊಲೀಸ್ ಅಧಿಕಾರಿ ಜೀಜಾ ಹರಿಸಿಂಗ್, ನಟ ಕೆ.ಎಸ್.ಎಲ್.ಸ್ವಾಮಿ, ಕೆಪಿಸಿಸಿ ಸದಸ್ಯೆ ಭಾರತಿ, ಮುಖಂಡರಾದ ನೆ.ಲ. ರವಿಶಂಕರ್, ಕೃಷ್ಣಮೂರ್ತಿ,ರಾಮಕೃಷ್ಣ, ಮಹೇಶ್ ಕುಮಾರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry