ಬಡವರಿಗೆ ತಂತ್ರಜ್ಞಾನ: ಭಾರತ ಮುಂಚೂಣಿ

7

ಬಡವರಿಗೆ ತಂತ್ರಜ್ಞಾನ: ಭಾರತ ಮುಂಚೂಣಿ

Published:
Updated:
ಬಡವರಿಗೆ ತಂತ್ರಜ್ಞಾನ: ಭಾರತ ಮುಂಚೂಣಿ

ಬೆಂಗಳೂರು: ಅಭಿವೃದ್ಧಿ ಹೊಂದಿದ ತಂತ್ರಜ್ಞಾನದ ಬಳಕೆಯ ವಿಷಯದಲ್ಲಿ ಬಡವರನ್ನು ಮಾರುಕಟ್ಟೆ ಎಂದು ಪರಿಗಣಿಸದೇ, ಪಾಲುದಾರರು ಎಂಬ ಭಾವನೆಯಲ್ಲಿ ನೋಡಿದಾಗ ಮಾತ್ರ ಭಾರತವು ಸುಸ್ಥಿರ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಕನ್ನಡಿಗ ಡಾ.ಎಚ್.ಹರೀಶ್ ಹಂದೆ ಅಭಿಪ್ರಾಯಪಟ್ಟರು.ಸಂಸ್ಥೆಯ ಆಹ್ವಾನದ ಮೇರೆಗೆ ಬುಧವಾರ `ಪ್ರಜಾವಾಣಿ~ ಕಚೇರಿಗೆ ಆಗಮಿಸಿದ್ದ ಅವರು ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು. ಉತ್ಪಾದನಾ ವಲಯದಲ್ಲಿ ಚೀನಾ ಮುಂದಿದ್ದರೆ, ಬಡವರಿಗೆ ಅಗತ್ಯವಿರುವ ತಂತ್ರಜ್ಞಾನ ಅಭಿವೃದ್ಧಿಪಡಿಸುವಲ್ಲಿ ಭಾರತ ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ. ಆದರೆ, ಅವುಗಳನ್ನು ಜನತೆಗೆ ತಲುಪಿಸುವ ವಿಧಾನದಲ್ಲಿ ಸಮಸ್ಯೆಯಿದೆ ಎಂದರು.`ಭಾರತದಲ್ಲಿ ಬಡವರಿಂದ ಹಣದ ಹರಿವಿಗೆ ಪೂರಕವಾದ ಮಾರುಕಟ್ಟೆ ವ್ಯವಸ್ಥೆಯೇ ರಾರಾಜಿಸುತ್ತಿದೆ. ಯಾವ ವಸ್ತುಗಳ ಮಾರಾಟದಲ್ಲೂ ಹಣ ಬಡವರನ್ನು ತಲುಪುವ ವ್ಯವಸ್ಥೆ ಇಲ್ಲಿ ಇಲ್ಲ. ಇದರಿಂದಾಗಿ ಆರ್ಥಿಕ ಅಸಮತೋಲನ ಹೆಚ್ಚುತ್ತಲೇ ಇದೆ~ ಎಂದು ಹೇಳಿದರು.ಕಬ್ಬಿಣ ಯುಗದಲ್ಲಿ ಮೂರು ಕಲ್ಲಿನ ಒಲೆಯ ಬಳಕೆಯನ್ನು ಮನುಷ್ಯ ಕಂಡುಕೊಂಡಿದ್ದ. ದೇಶದ ಶೇಕಡ 70ರಷ್ಟು ಜನರು ಅದೇ ಮಾದರಿಯನ್ನು ಈಗಲೂ ಬಳಸುತ್ತಿದ್ದಾರೆ. ಚಂದ್ರನ ಮೇಲೆ ಮನುಷ್ಯನನ್ನು ಕಳುಹಿಸಲು ಉತ್ಸುಕವಾಗಿರುವ ಆಡಳಿತ ವ್ಯವಸ್ಥೆಗೆ ಬಡವರ ಕಷ್ಟವನ್ನು ಪರಿಹರಿಸುವ ವಿಷಯದಲ್ಲಿ ಹೆಚ್ಚು ಆಸಕ್ತಿ ಕಾಣುತ್ತಿಲ್ಲ. ದೇಶದ ಅಭಿವೃದ್ಧಿಯ ದರ ಶೇ 8ರಷ್ಟಿದೆ ಎಂಬ ಕೇಂದ್ರ ಸರ್ಕಾರದ ಹೇಳಿಕೆ ಒಂದು ದೊಡ್ಡ `ಜೋಕ್~ ಎಂದು ವಿಶ್ಲೇಷಿಸಿದರು.`ಬಡವರು ಸರ್ಕಾರದ ಸಹಾಯಧನದಲ್ಲಿ (ಸಬ್ಸಿಡಿ) ಬದುಕುತ್ತಿದ್ದಾರೆ ಎಂಬ ಮಾತು ತಲೆತಲಾಂತರದಿಂದ ಭಾರತದಲ್ಲಿ ಚಾಲ್ತಿಯಲ್ಲಿದೆ. ಆದರೆ, ಅದು ನಿಜವಾದ ಸಂಗತಿಯಲ್ಲ. ಬಡವರ ಸಬ್ಸಿಡಿಯಲ್ಲಿ ಶ್ರೀಮಂತರು ಸುಖವಾಗಿ ಬದುಕುತ್ತಿದ್ದಾರೆ. ಸಬ್ಸಿಡಿ ಒದಗಿಸುವುದನ್ನೇ ನೆಪವಾಗಿಸಿಕೊಳ್ಳುವ ಶ್ರೀಮಂತರು ಬಡವರ ಶ್ರಮವನ್ನು ರಿಯಾಯಿತಿ ದರದಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ದೇಶದ ಬಡವರಿಗೆ ತಾಳ್ಮೆ ಹೆಚ್ಚಿರುವುದರಿಂದಲೇ ಶ್ರೀಮಂತರು ಇನ್ನೂ ಆರಾಮವಾಗಿ ಇದ್ದಾರೆ~ ಎಂದರು.`ನಗರಗಳಲ್ಲಿ ಇರುವ `ಮಾಲ್~ಗಳು ಬಡವರಿಗೆ ಅವಮಾನ ಮಾಡುವುದಕ್ಕಾಗಿಯೇ ತಲೆ ಎತ್ತಿವೆ. ಸಹಸ್ರಾರು ಜನರು ಬಡತನದಲ್ಲಿ ನರಳುತ್ತಿರುವಾಗ ವೈಭೋಗದ ಜೀವನಕ್ಕಾಗಿ ಮಾಲ್‌ಗಳನ್ನು ಅವಲಂಬಿಸುವ ನಾವು ನಮ್ಮಳಗೆ ಭ್ರಷ್ಟರಾಗಿದ್ದೇವೆ. ಈ ಮನೋಭಾವವನ್ನು ತೊಲಗಿಸಿದರೆ ಮಾತ್ರವೇ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ~ ಎಂದು ಹಂದೆ ಹೇಳಿದರು.ಸೌರಶಕ್ತಿಯೇ ಪರಿಹಾರ: ವಿದ್ಯುತ್ ಕೊರತೆ ದೇಶದ ಅಭಿವೃದ್ಧಿಗೆ ಬಹುದೊಡ್ಡ ಅಡ್ಡಿ. ಗ್ರಾಮೀಣ ಪ್ರದೇಶದಲ್ಲಿ ಈ ಕಾರಣದಿಂದಲೇ ಹೆಣ್ಣು ಮಕ್ಕಳು ಶಾಲೆ ತ್ಯಜಿಸಿ ಉರುವಲು ಸಂಗ್ರಹಣೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.ಎಲ್ಲ ಕುಟುಂಬಗಳಿಗೂ ವಿದ್ಯುತ್ ಸಂಪರ್ಕ ದೊರೆತಿದ್ದರೆ ಶಿಕ್ಷಣ ವಂಚಿತ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿತ್ತು ಎಂದರು.`ಸೌರ ಶಕ್ತಿ ಬಳಕೆಯಲ್ಲಿ ಆರ್ಥಿಕ ಜ್ಞಾನ ಅಗತ್ಯ. ಸಾಮಾಜಿಕ, ಆರ್ಥಿಕ ಮತ್ತು ಪರಿಸರದ ಸುಸ್ಥಿರತೆ ಕಾಯ್ದುಕೊಳ್ಳಲು ಸೌರ ಶಕ್ತಿ ಬಳಕೆ ಉತ್ತಮ ಮಾರ್ಗ. ಆದರೆ, ದೊಡ್ಡ ಪ್ರಮಾಣದ ವಿದ್ಯುತ್ ಯೋಜನೆಗಳ ಮೂಲಕ ಸೌರಶಕ್ತಿಯ ಬಳಕೆ ಹೆಚ್ಚು ಪರಿಣಾಮಕಾರಿ ಅಲ್ಲ. ಆಯಾ ಕುಟುಂಬದ ಅಗತ್ಯಕ್ಕೆ ಅನುಗುಣವಾಗಿ ಈ ಶಕ್ತಿಮೂಲವನ್ನು ವ್ಯವಸ್ಥಿತವಾಗಿ ಬಳಸಿಕೊಂಡರೆ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ~ ಎಂದು ಹೇಳಿದರು.ಅಣು ಶಕ್ತಿ, ಉಷ್ಣ ವಿದ್ಯುತ್ ಸ್ಥಾವರಗಳ ಮೂಲಕವೇ ವಿದ್ಯುತ್ ಕೊರತೆಗೆ ಪರಿಹಾರ ಕಂಡುಕೊಳ್ಳುವ ಧಾವಂತ ಎಲ್ಲರಲ್ಲಿದೆ. ದೊಡ್ಡ ಪ್ರಮಾಣದ ಬಂಡವಾಳ ನಿರೀಕ್ಷಿಸುವ ಈ ಯೋಜನೆಗಳು ಬಡವರಿಗೆ ಅಗತ್ಯವಿರುವ ವಿದ್ಯುತ್ ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸಲಾರವು ಎಂದರು.ಕರ್ನಾಟಕ ಮಾದರಿ: `1993ರಲ್ಲಿ ಅಮೆರಿಕದಿಂದ ನಾನು ಕರ್ನಾಟಕಕ್ಕೆ ಹಿಂದಿರುಗಿದಾಗ ಇಲ್ಲಿ ಕುಟುಂಬವಾರು ಸೌರಶಕ್ತಿ ಬಳಕೆ ಯೋಜನೆಗೆ ಚಾಲನೆ ನೀಡುವ ಪ್ರಸ್ತಾವ ಮುಂದಿಟ್ಟಿದ್ದೆ. ಆಗ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕರು ಈ ಪರಿಕಲ್ಪನೆ ಅನುಷ್ಠಾನ ಯೋಗ್ಯವಲ್ಲ ಎಂದಿದ್ದರು. ಆದರೆ ಯಾವುದೇ ಸಹಾಯಧನದ ನೆರವಿಲ್ಲದೇ 1.20 ಲಕ್ಷ ಕುಟುಂಬಗಳನ್ನು ಸೌರಶಕ್ತಿಯ ಬಳಕೆಯ ವ್ಯಾಪ್ತಿಗೆ ತಂದಿದ್ದೇವೆ. ಈ ಯೋಜನೆ `ಕರ್ನಾಟಕದ ಮಾದರಿ~ ಎಂದೇ ಜಗತ್ತಿನಾದ್ಯಂತ ಮನ್ನಣೆ ಪಡೆದಿದೆ~ ಎಂದು ತಮ್ಮ ಸಾಧನೆಯನ್ನು ವಿವರಿಸಿದರು.ಧಾರವಾಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಗ್ರಾಮೀಣ ಬ್ಯಾಂಕ್‌ಗಳ ಸಾಲದ ನೆರವಿನಿಂದ ಬಡವರಿಗೆ ಸೌರ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ಯಾವುದೇ ಸಹಾಯಧನದ ನೆರವಿಲ್ಲದ ಈ ಯೋಜನೆ ಅತ್ಯಂತ ಯಶಸ್ವಿಯಾಗಿ ಮುನ್ನಡೆಯಿತು. ಜಗತ್ತಿನ ಯಾವುದೇ ದೇಶದಲ್ಲೂ ಈ ಪರಿಕಲ್ಪನೆಯಲ್ಲಿ ಸೌರಶಕ್ತಿಯ ಬಳಕೆ ಅನುಷ್ಠಾನಕ್ಕೆ ಬಂದಿಲ್ಲ. ಇಂತಹ ವಿಶಿಷ್ಟ ಯೋಜನೆಯೇ `ಕರ್ನಾಟಕದ ಮಾದರಿ~ ಎಂದರು.`ನಾವು ಸ್ಥಾಪಿಸಿರುವ `ಸೆಲ್ಕೋ~ ಸಂಸ್ಥೆಯ ಮಾರಾಟ ಮಾದರಿಯೇ ವಿಭಿನ್ನವಾಗಿದೆ. ಗ್ರಾಮೀಣ ಬ್ಯಾಂಕ್‌ಗಳ ನೆರವಿನಲ್ಲಿ ಸೌರ ವಿದ್ಯುತ್ ಸಂಪರ್ಕ ಒದಗಿಸುವ ಜೊತೆಗೆ ಸ್ಥಳೀಯವಾಗಿ ನಿರ್ವಹಣಾ ಕೇಂದ್ರಗಳನ್ನೂ ಸ್ಥಾಪಿಸಲಾಗಿದೆ. ಬಡವರಿಗೆ ಬೆಳಕು ಒದಗಿಸುವ ಸದುದ್ದೇಶದಿಂದ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಇಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಿದ್ಧರಿದ್ದರೆ 15 ವರ್ಷಗಳ ನನ್ನ ಅನುಭವವನ್ನು ಧಾರೆ ಎರೆಯಲು ಸಿದ್ಧನಿದ್ದೇನೆ~ ಎಂದು ಉತ್ತರಿಸಿದರು.ತಮ್ಮ ಸಂಸ್ಥೆಯ ಯೋಜನೆಗಳು ಬಹುಪಾಲು ಕರ್ನಾಟಕಕ್ಕೆ ಸೀಮಿತವಾಗಿದ್ದವು. ಗುಜರಾತ್‌ನ ಕೆಲವೆಡೆ ಈಗ ಸೌರವಿದ್ಯುತ್ ಸಂಪರ್ಕ ಯೋಜನೆಗೆ ಚಾಲನೆ ನೀಡಲಾಗಿದೆ. ಒಡಿಶಾ, ಬಿಹಾರ ಸೇರಿದಂತೆ ಇನ್ನೂ ಕೆಲ ರಾಜ್ಯಗಳಿಗೆ ವಿಸ್ತರಿಸುವ ಉದ್ದೇಶವಿದೆ. ಹಲವು ರಾಷ್ಟ್ರಗಳು ತಮ್ಮ `ಕರ್ನಾಟಕ ಮಾದರಿ~ಯನ್ನು ಬಳಸಿಕೊಳ್ಳಲು ಮುಂದಾಗಿದೆ ಎಂದು ಹೇಳಿದರು.`ಸ್ವಂತ ಲಾಭವೇ ಮುಖ್ಯ~

`ಐಐಟಿ, ಐಐಎಂ ಅಥವಾ ಐಐಎಸ್‌ಸಿಗಳಲ್ಲಿ ಬಡವರ ಬದುಕು ಸುಧಾರಿಸುವ ಸಂಶೋಧನೆಗಳು ನಡೆಯುತ್ತಿಲ್ಲ. ಬದಲಾಗಿ ಅಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಜನ ಕಲ್ಯಾಣಕ್ಕಿಂತ ಸ್ವಂತ ಕಲ್ಯಾಣಕ್ಕೇ ಹೆಚ್ಚು ಆದ್ಯತೆ ನೀಡುತ್ತಾರೆ~ ಎಂದು ಹಂದೆ ಅಸಮಾಧಾನ ವ್ಯಕ್ತಪಡಿಸಿದರು.`ನಮ್ಮ ಸರ್ಕಾರಗಳು ಐಐಟಿ, ಐಐಎಸ್‌ಸಿಗಳಿಗೆ ಪ್ರತಿ ವರ್ಷವೂ ನೂರಾರು ಕೋಟಿ ರೂಪಾಯಿ ನೆರವು ಒದಗಿಸುತ್ತಿವೆ. ಆದರೆ ಅಲ್ಲಿ ಬಡವರ ಜೀವನಮಟ್ಟ ಸುಧಾರಿಸುವ ಯಾವ ಆವಿಷ್ಕಾರವೂ ಆಗುತ್ತಿಲ್ಲ. ಅವುಗಳಿಗಿಂತ ಕೈಗಾರಿಕಾ ತರಬೇತಿ ಸಂಸ್ಥೆಗಳು, ಪಾಲಿಟೆಕ್ನಿಕ್ ಕಾಲೇಜುಗಳೇ ಹೆಚ್ಚಿನ ಕೊಡುಗೆ ನೀಡುತ್ತಿವೆ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry