ಶುಕ್ರವಾರ, ನವೆಂಬರ್ 15, 2019
23 °C

ಬಡವರ ಫ್ರಿಜ್ ಕೇಳುವವರೇ ಇಲ್ಲ!

Published:
Updated:

ಗದಗ: ಫೆಬ್ರುವರಿ ಆರಂಭದಲ್ಲಿಯೇ ನೆತ್ತಿ ಸುಡುವ ರಣಬಿಸಿಲಿಗೆ ಜನರು ಬಸವಳಿದಿದ್ದಾರೆ. ಅಷ್ಟರ ಮಟ್ಟಿಗೆ ಈ ಬಾರಿ ಬೇಸಿಗೆ ಜೋರಾಗಿದೆ. ಹೊರಗೆ ಬಂದರೆ ಸಾಕು ಜನರು ನೆರಳು ಹುಡುಕುವಂತಾಗಿದೆ. ಬೇಸಿಗೆ ಬಂತೆಂದರೆ ಎಲ್ಲರ ಚಿತ್ತ ಮಣ್ಣಿನ ಮಡಿಕೆ ಕೊಳ್ಳುವುದರತ್ತ ಇರುತ್ತದೆ. ಕುಂಬಾರರು ಮತ್ತು ವ್ಯಾಪಾರಿಗಳು ಸ್ವಲ್ಪ ಮಟ್ಟಿಗೆ ಹಣ ಮಾಡಿಕೊಳ್ಳುತ್ತಾರೆ. ಮಡಿಕೆ ಕೊಂಡೊಯ್ದು ಅದರ ನೀರನ್ನು ಕುಡಿದು ಬಾಯಾರಿಕೆ ತಣಿಸಿಕೊಳ್ಳಲು ಜನರು ಕಾತರರಾಗಿರುತ್ತಾರೆ.ಆದರೆ ಈ ಬಾರಿ ಮಣ್ಣಿನ ಮಡಿಕೆಗಳನ್ನು ಕೇಳುವವರೇ ಇಲ್ಲ. ಬೇಸಿಗೆ ಆರಂಭದಲ್ಲಿ ನಗರದ ಫುಟ್‌ಪಾತ್ ಮತ್ತು ಹೆದ್ದಾರಿ ರಸ್ತೆ ಪಕ್ಕದಲ್ಲಿ ಮಡಿಕೆ ಮಾರಾಟ ನೋಡುತ್ತಿದ್ದೇವು. ಮಡಿಕೆಗಳಿಗೆ ಡಿಮಾಂಡ್ ಕಡಿಮೆಯಾದ ಕಾರಣ ವ್ಯಾಪಾರಿಗಳ ಸಂಖ್ಯೆಯೂ ಕಡಿಮೆಯಾಗಿದೆ.

`ಬಡವರ ಫ್ರಿಜ್' ಎಂದೆ ಕರೆಯಲ್ಪಡುವ ಮಣ್ಣಿನ ಮಡಿಕೆ ಅನಾದಿಕಾಲದಿಂದಲೂ ಬಳಸಲಾಗುತ್ತಿದೆ. ಈಗಲೂ ಗ್ರಾಮೀಣ ಪ್ರದೇಶದಲ್ಲಿ ಅಡುಗೆ ಮಾಡಲು ಮಡಿಕೆಗಳನ್ನು ಬಳಸಲಾಗುತ್ತದೆ.ಮಡಿಕೆಯಲ್ಲಿಟ್ಟ ನೀರು ಫ್ರಿಜ್ ನೀರಿನಷ್ಟೇ ತಂಪಾಗಿರುತ್ತದೆ. ಜನರು ಸಹ ಸಾಮಾನ್ಯ ಮಡಿಕೆ ಕೊಳ್ಳುವುದಕ್ಕಿಂತ ಆಕರ್ಷಕವಾಗಿರುವ ಮತ್ತು ನಲ್ಲಿ ಸೌಲಭ್ಯವಿರುವ ಮಡಿಕೆ ಕೊಳ್ಳಲು ಇಷ್ಟ ಪಡುತ್ತಾರೆ.ಇತ್ತೀಚಿನ ದಿನಗಳಲ್ಲಿ ಸ್ಟೀಲ್, ಪ್ಲಾಸ್ಟಿಕ್ ಹಾವಳಿಯಿಂದ ಮಣ್ಣಿನ ಮಡಿಕೆಗೆ ತುಸು ಹಿನ್ನೆಡೆಯಾಗಿದೆ. ನಗರ ಪ್ರದೇಶದಲ್ಲೂ ವ್ಯಾಪಾರ ಅಷ್ಟಕಷ್ಟೇ. ಹಳೇ ಬಸ್ ನಿಲ್ದಾಣ, ತೋಂಟದಾರ್ಯ ಮಠ, ಎಲೆಗಾರ ಪ್ಲಾಟ್ ಸೇರಿದಂತೆ ಕೆಲ ಕುಂಬಾರ ಮನೆಗಳಲ್ಲಿ ಮಡಿಕೆ ಮಾರಾಟ ಮಾಡಲಾಗುತ್ತಿದೆ. ಈ ಬಾರಿ ವ್ಯಾಪಾರಿಗಳ ಸಂಖ್ಯೆಯೂ ಕಡಿಮೆಯಾಗಿದೆ. ರಾಣೆಬೆನ್ನೂರು, ಲಕ್ಷ್ಮೇಶ್ವರದಿಂದ ಮಡಿಕೆಗಳನ್ನು ತರಿಸಲಾಗುತ್ತಿದೆ.ನಗರದ ಹಳೇ ಬಸ್ ನಿಲ್ದಾಣ ಬಳಿ ಮೂರು ದಶಕಗಳಿಂದ ಮಡಿಕೆ ವ್ಯಾಪಾರ ಮಾಡಿಕೊಂಡಿರುವ ಈರಪ್ಪ ಚಕ್ರಸಾಲಿ ಅವರು ಮಡಿಕೆ ವ್ಯಾಪಾರ ಕುರಿತು `ಪ್ರಜಾವಾಣಿ' ಜತೆ ಮಾತನಾಡಿದರು.`ನಾಲ್ಕೈದು ವರ್ಷಗಳ ಹಿಂದೆ ಹಬ್ಬದ ಸಂದರ್ಭಗಳಲ್ಲಿ ವ್ಯಾಪಾರ ಜೋರಾಗಿತ್ತು. ಈ ಬಾರಿ ದಿನಕ್ಕೆ 10-15 ಮಡಿಕೆ ಮಾರಾಟವಾದರೆ ಅದೇ ಹೆಚ್ಚು. ಗ್ರಾಹಕರು ತೀರಾ ಕಡಿಮೆ ಬೆಲೆಗೆ ಕೇಳುತ್ತಾರೆ. ಕೆಲವು ಚೌಕಾಸಿ ಮಾಡಿ ಕೊಳ್ಳುತ್ತಾರೆ. ಏನು ಗಿಟ್ಟುವುದಿಲ್ಲ. ನಮ್ಮಲ್ಲಿ ರೂ. 50 ಮತ್ತು 200 ರೂಪಾಯಿ ಬೆಲೆಯುಳ್ಳ ಮಡಿಕೆ ಇದೆ. ಸಿಗುವ ಅಲ್ಪ ಹಣದಲ್ಲಿಯೇ ಸಂಸಾರ ಸಾಗಬೇಕು' ಎನ್ನುತ್ತಾರೆ ಅವರು.ಹೌದು, ಕುಂಬಾರಿಕೆ ಇಂದು ಲಾಭದಾಯಕ ವೃತ್ತಿಯಾಗಿಲ್ಲ. ಎಷ್ಟೋ ಕುಂಬಾರ ಜನರು ಇಂದು ತಮ್ಮ ಕುಲಕಸುಬನ್ನು ತೊರೆದು ಇತರೆ ಉದ್ಯೋಗಳಲ್ಲಿ ತೊಡಗಿಕೊಂಡಿದ್ದಾರೆ. ಮಡಿಕೆಗಳ ತಯಾರಿಕೆಗೆ ಕೂಲಿ ಕಾರ್ಮಿಕರ ಕೊರತೆ ಇದೆ. ಹೀಗಾಗಿ ಮಡಿಕೆ ಬೆಲೆಯೂ ಹೆಚ್ಚಾಗಿದೆ.

ಪ್ರತಿಕ್ರಿಯಿಸಿ (+)