ಗುರುವಾರ , ಆಗಸ್ಟ್ 13, 2020
25 °C
`ಅನ್ನಭಾಗ್ಯ'ಕ್ಕೆ ಕನಕಪುರದಲ್ಲಿ ಚಾಲನೆ : ಆಧಾರ್ ಕಾರ್ಡ್ ಮಾಡಿಸಲು ಸಲಹೆ

ಬಡವರ ಹೊಟ್ಟೆ ತುಂಬಿಸುವ ಯೋಜನೆ: ಕೆ.ಜೆ.ಜಾರ್ಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಡವರ ಹೊಟ್ಟೆ ತುಂಬಿಸುವ ಯೋಜನೆ: ಕೆ.ಜೆ.ಜಾರ್ಜ್

ರಾಮನಗರ:  `ಬಡತನದಿಂದ ಹಸಿದವರ ಹೊಟ್ಟೆಗೆ ಹಿಟ್ಟು ನೀಡುವ ಮಹತ್ವದ ಉದ್ದೇಶದಿಂದ ಸರ್ಕಾರ `ಅನ್ನಭಾಗ್ಯ' ಯೋಜನೆ ಜಾರಿಗೊಳಿಸಿದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿಯಾಗಿ ಕನಕಪುರ ತಾಲ್ಲೂಕಿನ ಕಬ್ಬಾಳು ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ `ಅನ್ನಭಾಗ್ಯ' ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಚುನಾವಣೆಗೂ ಮೊದಲು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಒಂದು ರೂಪಾಯಿಗೆ ಒಂದು ಕೆ.ಜಿಯಂತೆ 30 ಕೆ.ಜಿ ಅಕ್ಕಿ ನೀಡುವ ಯೋಜನೆ ಘೋಷಿಸಿತ್ತು. ಅಧಿಕಾರಕ್ಕೆ ಬಂದು ಕೆಲವೇ ದಿನಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಪಕ್ಷ ಮತ್ತು ಸರ್ಕಾರ ತನ್ನ ಬದ್ಧತೆಯನ್ನು ತೋರಿದೆ ಎಂದು ಅವರು ಹೇಳಿದರು.ಕೆಲ ವಿರೋಧಿಗಳು ಈ ಮಹತ್ವದ ಯೋಜನೆ ಬಗ್ಗೆ ಟೀಕೆಗಳನ್ನು ಮಾಡಿದ್ದಾರೆ. ಈ ಯೋಜನೆ ಜನರನ್ನು ಸೋಮಾರಿಯನ್ನಾಗಿಸುತ್ತದೆ ಎಂದು ಜರಿದಿದ್ದಾರೆ. ಆದರೆ ಇದು ನೈಜವಾಗಿ ಬಡವರ ಹಸಿವು ನೀಗಿಸುವ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ಯೋಜನೆಯಾಗಿದೆ ಎಂದು ಅವರು ತಿರುಗೇಟು ನೀಡಿದರು.ಶಾಸಕರು ಉತ್ತಮ ಕೆಲಸ ಮಾಡುತ್ತಿದ್ದಾರೆ:

ಕುಡಿಯುವ ನೀರಿನ ಸಮಸ್ಯೆ ಜಿಲ್ಲೆಯಲ್ಲಿ ವ್ಯಾಪಕವಾಕವಾಗಿದೆ. ಹೀಗಿರುವಾಗ ಕನಕಪುರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಮೂಲಕ ಶಾಸಕರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಈ ಕೆಲಸವನ್ನು ಸರ್ಕಾರ ರಾಜ್ಯದಾದ್ಯಂತ ಮಾಡಬೇಕಾದ ಅಗತ್ಯ ಇದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.ಆಧಾರ್ ಕಾರ್ಡ್ ಮಾಡಿಸಿ:

ಆಧಾರ್ ಕಾರ್ಡ್ ಮೂಲಕ ನೇರವಾಗಿ ಫಲಾನುಭವಿಗಳಿಗೆ ಸಬ್ಸಿಡಿ ಹಣ ನೀಡಲಾಗುತ್ತಿದೆ. ಇದರಿಂದ ಹಣ ಸೋರಿಕೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ. ಆದ್ದರಿಂದ ಎಲ್ಲರೂ ಆಧಾರ್ ಕಾರ್ಡ್ ಮಾಡಿಸಿ ಎಂದು ಅವರು ಕಿವಿಮಾತು ಹೇಳಿದರು.ವಿಧಾನ ಪರಿಷತ್ತಿನ ಸದಸ್ಯ ಗೋವಿಂದರಾಜು ಮಾತನಾಡಿದರು. ಜಿ.ಪಂ ಪ್ರಭಾರಿ ಅಧ್ಯಕ್ಷೆ ಎಸ್.ಬಿ.ಗೌರಮ್ಮ, ಸದಸ್ಯೆ ನಳಿನಿ, ನಕಪುರ ತಾ.ಪಂ ಅಧ್ಯಕ್ಷೆ ನಾಗರತ್ನಮ್ಮ, ಉಪಾಧ್ಯಕ್ಷ ಬಿ.ಸಿ.ರವಿಕುಮಾರ್, ಕಬ್ಬಾಳು ಗ್ರಾ.ಪಂ ಅಧ್ಯಕ್ಷ ಮಾರೇಗೌಡ, ಉಪಾಧ್ಯಕ್ಷೆ ಬಿ. ಮಂಜುಳ, ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ, ಜಿ.ಪಂ ಸಿಇಒ ಡಾ. ಎಂ.ವಿ.ವೆಂಕಟೇಶ್, ತಹಶೀಲ್ದಾರ್ ಡಾ. ದಾಕ್ಷಾಯಿಣಿ, ಎಸ್.ಪಿ ಅನುಪಮ್ ಅಗ್ರವಾಲ್, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಸ್. ರವಿ, ಮುಖಂಡರಾದ ಮರಿದೇವರು, ರಘುನಂದನ್ ರಾಮಣ್ಣ ಉಪಸ್ಥಿತರಿದ್ದರು.ಅಕ್ಕಿ ನೀಡಿಕೆ ದಂದೆ ಆಗದಿರಲಿ: ಡಿಕೆಶಿ

ಕನಕಪುರ:
`ಸರ್ಕಾರದ ಮಹತ್ವಾಕಾಂಕ್ಷೆಯ `ಅನ್ನಭಾಗ್ಯ' ಯೋಜನೆಯನ್ನು ದಲ್ಲಾಳಿಗಳು ಮತ್ತು ಮಧ್ಯವರ್ತಿಗಳು ದುರುಪಯೋಗ ಪಡಿಸಿಕೊಂಡು ದೊಡ್ಡ ದಂಧೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಅಧಿಕಾರಿಗಳ ಸದಾ ಎಚ್ಚರವಾಗಿದ್ದುಕೊಂಡು ಇದು ದಂಧೆಯ ರೂಪ ತಾಳದಂತೆ ನೋಡಿಕೊಂಡು ಅರ್ಹರಿಗೆ ಅಕ್ಕಿ ದೊರೆಯುವಂತೆ ಮಾಡಬೇಕು' ಎಂದು ಶಾಸಕ ಡಿ.ಕೆ.ಶಿವಕುಮಾರ್ ಎಚ್ಚರಿಸಿದರು.ಈ ಯೋಜನೆಗೆ ಸರ್ಕಾರ 4.300 ಕೋಟಿ ರೂಪಾಯಿ ವಿನಿಯೋಗಿಸುತ್ತಿದ್ದು, 87 ಲಕ್ಷ ಜನರಿಗೆ ಅನುಕೂಲವಾಗಲಿದೆ. ಇದಕ್ಕೆ ಕೇಂದ್ರ ಸರ್ಕಾರ 40 ಸಾವಿರ ಟನ್ ಅಕ್ಕಿ ಒದಗಿಸಲಿದೆ. ಕಾಂಗ್ರೆಸ್ ಜನರ ಋಣ ತೀರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದೆ ಎಂದು ಅವರು ಹೇಳಿದರು.ತಾಲ್ಲೂಕಿನಲ್ಲಿ ಇನ್ನೂ 8000 ಬಿಪಿಎಲ್ ಕಾರ್ಡ್‌ಗಳು ವಿತರಣೆ ಆಗಬೇಕಿದೆ. ಚುನಾವಣೆ ಮುಗಿದ ನಂತರ ಕ್ಷೇತ್ರದಲ್ಲಿ 2500 ಜನರಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವ ಕಾರ್ಯ ಜಾರಿಗೊಳಿಸಲಾಗಿದೆ. ಡಿ.ಕೆ.ಟ್ರಸ್ಟ್ ಮೂಲಕ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಗಿದೆ' ಎಂದರು.`ಚುನಾವಣೆಯಲ್ಲಿ ಸೋತ ವಿರೋಧಿಗಳು ಇದಕ್ಕೆ ವಿವಿಧ ರೀತಿಯ ವ್ಯಾಖ್ಯಾನ ಮಾಡುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನ ಇಲ್ಲ. ಇನ್ನೂ ಐದು ವರ್ಷ ನಮ್ಮ ಈ ರೀತಿಯ ಸೇವಾ ಮುಂದುವರಿಯುತ್ತವೆ. ನಮ್ಮ ಕಾರ್ಯಗಳ ಬಗ್ಗೆ ತುಟಿ ಬಿಚ್ಚುವುದಕ್ಕೆ ಯಾರಿಂದಲೂ ಅಗುವುದಿಲ್ಲ' ಎಂದರು.`ವಿರೋಧ ಪಕ್ಷದವರು ಅಧಿಕಾರದಲ್ಲಿ ಇದ್ದಾಗ ಇಂತಹ ಸೇವಾ ಕೆಲಸ ಮಾಡಬೇಕಿತ್ತು. ಆಗ ಮಾಡದೆ, ಈಗ ಅಧಿಕಾರ ಇಲ್ಲದಾಗ ಎಷ್ಟು ಕೂಗಿಕೊಂಡರೂ ಪ್ರಯೋಜನಕ್ಕೆ ಬರುವುದಿಲ್ಲ' ಎಂದು ಅವರು ದೂರಿದರು.ಔಟ್‌ಪೋಸ್ಟ್‌ಗೆ ಮನವಿ: ಕನಕಪುರಕ್ಕೆ ಸಂಚಾರ ಪೊಲೀಸ್ ಠಾಣೆ ಮತ್ತು ಸಂಗಮ ಬಳಿ ಔಟ್ ಪೋಸ್ಟ್ ಸ್ಥಾಪಿಸುವಂತೆ ಡಿ.ಕೆ.ಶಿವಕುಮಾರ್ ಅವರು ಗೃಹ ಸಚಿವರಲ್ಲಿ ಮನವಿ ಮಾಡಿದರು.5,594 ಮೆಟ್ರಿಕ್ ಟನ್ ಅಕ್ಕಿ ಬಿಡುಗಡೆ

ಜಿಲ್ಲೆಯಲ್ಲಿ 18,982 ಅಂತ್ಯೋದಯ ಮತ್ತು 1,99,708 ಬಿಪಿಎಲ್ ಪಡಿತರ ಚೀಟಿದಾರರು ಜುಲೈ ತಿಂಗಳಿಂದ `ಅನ್ನಭಾಗ್ಯ' ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಜಿಲ್ಲೆಯ 569 ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಣೆಗೆ ಕ್ರಮ ಕೈಗೊಂಡಿದ್ದು 5,594 ಮೆಟ್ರಿಕ್ ಟನ್ ಅಕ್ಕಿಯನ್ನು ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.