ಬಡಾವಣೆಗಳಲ್ಲಿ ಅವ್ಯವಸ್ಥೆ, ನಗರಸಭೆಗೆ ಉತ್ತಮ ರಸ್ತೆ!

7

ಬಡಾವಣೆಗಳಲ್ಲಿ ಅವ್ಯವಸ್ಥೆ, ನಗರಸಭೆಗೆ ಉತ್ತಮ ರಸ್ತೆ!

Published:
Updated:

ಬೀದರ್: ಮಳೆ ಬಂದರೆ ನಗರ ವ್ಯಾಪ್ತಿಯ ವಿವಿಧ ಬಡಾವಣೆ ರಸ್ತೆಗಳಿರಲಿ, ಹೆಚ್ಚು ಜನ ಸಂಚಾರದ ಒತ್ತಡವಿರುವ ಪ್ರಮುಖ ರಸ್ತೆಗಳಲ್ಲಿಯೂ ಸಂಚರಿಸುವುದು ಕಷ್ಟ. ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಕಳೆದ ಮೂರು ನಾಲ್ಕು ದಿನಗಳಲ್ಲಿ ಜನರಿಗೆ ಸ್ವತಃ ಅನುಭವಕ್ಕೆ ಬಂದಿರುವ ಸಂಗತಿ ಇದು.ರಸ್ತೆ ದುರಸ್ತಿ ಮಾಡಿ ಎಂಬ ಬೇಡಿಕೆ ನಿರಂತರವಾಗಿದ್ದು, ಆಗಾಗ್ಗೆ ಪ್ರತಿಭಟನೆಯ ರೂಪದಲ್ಲಿಯೂ ವ್ಯಕ್ತವಾಗುತ್ತಿದೆ. ಈಚೆಗೆ ಎಪಿಎಂಸಿ ವರ್ತಕರು, ವ್ಯಾಪಾರಿಗಳು ಕೂಡಾ ರಸ್ತೆ ದುರಸ್ತಿಗೆ ಆಗ್ರಹಪಡಿಸಿ ಬೀದಿಗೆ ಇಳಿದಿದ್ದರು. ಅಲ್ಲಲ್ಲಿ, ಸಿಮೆಂಟ್ ಕಾಂಕ್ರೀಟ್ ರಸ್ತೆ ಆಗುತ್ತಿದ್ದರೂ ಆಗಬೇಕಾದ ರಸ್ತೆಗಳ ಪಟ್ಟಿ ದೊಡ್ಡದಿದೆ.ಆದರೂ, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ನಗರಸಭೆ ವ್ಯಾಪ್ತಿಯ ಬಡಾವಣೆಗಳ ರಸ್ತೆಗಳನ್ನು ಹೊರತುಪಡಿಸಿ, ಆದ್ಯತೆಯ ಮೇರೆಗೆ ನಗರಸಭೆ ಕಚೇರಿ ಪ್ರಾಂಗಣದ ವ್ಯಾಪ್ತಿಯಲ್ಲಿಯೇ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಗುಣಮಟ್ಟದ ರಸ್ತೆ ಈಗಾಗಲೇ ಮುಗಿಯುವ ಹಂತಕ್ಕೆ ಬಂದಿದೆ.ನಗರಸಭೆ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಹೊಂದಿಕೊಂಡಂತೆ ಇರುವ ಸ್ಥಳದಲ್ಲಿ ಎರಡು ಬದಿಯ ರಸ್ತೆಗೆ ಸಂಪರ್ಕ ಕಲ್ಪಿಸುವಂತೆ ರಸ್ತೆ ನಿರ್ಮಾಣ ಆಗುತ್ತಿದ್ದು, ನಗರಸಭೆಯ ಬರುವ ವಾಹನಗಳು, ಕಚೇರಿ ವಾಹನಗಳಿಗೆ ಅನುವಾಗುವಂತೆ ನಿರ್ಮಿಸಲಾಗುತ್ತಿದೆ ಎಂದು ಸಮರ್ಥನೆಯನ್ನು ನೀಡಲಾಗುತ್ತಿದೆ.ಇನ್ನೊಂದೆಡೆ, ನಗರಸಭೆ ವಾರ್ಡ್‌ಗಳ ವ್ಯಾಪ್ತಿಗೆ ಬರುವ 15-20 ವರ್ಷ ಹಳೆಯದಾದ ಬಡಾವಣೆಗಳಲ್ಲಿಯೂ ಜನರು ಸರಿಯಾದ ರಸ್ತೆ ಸೌಲಭ್ಯವಿಲ್ಲದೇ, ಮಳೆ ಬಂದರಂತೂ ಇನ್ನಿಲ್ಲದ ಪ್ರಯಾಸ ಪಡುತ್ತಾ ದಿನ ಕಳೆಯುವ ಸ್ಥಿತಿ ಮುಂದುವರಿದೆ.ಈ ಕುರಿತು ನಗರಸಭೆಯ ಆಯುಕ್ತ ರಾಮದಾಸ್ ಅವರನ್ನು ಸಂಪರ್ಕಿಸಿದಾಗ, `ನಗರಸಭೆಯ ಆವರಣದಲ್ಲಿ ಉದ್ಯಾನ ಅಭಿವೃದ್ಧಿ ಪಡಿಸುವ ಉದ್ದೇಶವಿದೆ. ಪೂರಕವಾಗಿ ಈಗ ರಸ್ತೆಯನ್ನು

ಅಭಿವೃದ್ಧಿಪಡಿಸುವ ಕಾಮಗಾರಿ ನಡೆಯುತ್ತಿದೆ. ಹಾಗಂತ, ನಾವು ಬಡಾವಣೆಗಳ ರಸ್ತೆಗಳನ್ನು ಕಡೆಗಣಿಸಿಲ್ಲ~ ಎನ್ನುತ್ತಾರೆ. ಬಡಾವಣೆಗಳಲ್ಲಿ ಇರುವ ರಸ್ತೆಗಳು ಹಾಳಾಗಿರುವುದು, ಸಮಸ್ಯೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಹಾಗೆಂದು, ನಗರಸಭೆ ಆವರಣ ಚೆನ್ನಾಗಿರಬಾರದು ಎಂದೇನಿಲ್ಲ.ಹಿಂದೆಯೇ ಈ ಕೆಲಸ ಆಗಬೇಕಿತ್ತು. ಈಗ ಮಾಡುತ್ತಿದ್ದೇವೆ. ನಗರಸಭೆಗೆ ಅನೇಕ ಜನರು ಬರುತ್ತಾರೆ. ಉದ್ಯಾನ, ಆರಾಮದಾಯಕ ಕುರ್ಚಿ ಅಳವಡಿಸಿದರೆ ಅವರಿಗೂ ಅನುಕೂಲ ಆಗುತ್ತದೆ ಎನ್ನುತ್ತಾರೆ.ಬಡಾವಣೆಗಳ ರಸ್ತೆಗಳ ನಿರ್ಮಾಣ ಮತ್ತು ಪಾರ್ಕ್‌ಗಾಗಿ ನಿಗದಿಯಾಗಿರುವ ಪ್ರದೇಶಗಳ ಸಂರಕ್ಷಣೆಗೂ ಒತ್ತು ನೀಡುತ್ತಿದ್ದು, ಆದ್ಯತೆಯ ಮೇರೆಗೆ ಇದನ್ನು ಜಾರಿಗೊಳಿಸಲಾಗುವುದು ಎಂದರು. ಮೊದಲಿನಿಂತೆ ವಾರ್ಡ್‌ಗಳ ಬದಲಿಗೆ ಆದ್ಯತೆಯ ಮೇರೆಗೆ ದುರಸ್ತಿ ಮಾಡಬೇಕಾದ ರಸ್ತೆಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸುತ್ತಿದ್ದು, ಜೊತೆಗೆ, ಬರುವ ದಿನಗಳಲ್ಲಿ ಬಡಾವಣೆಗಳಲ್ಲಿ ಪಾರ್ಕ್‌ಗೆಂದು ಗುರುತಿಸಿದ ಸ್ಥಳಗಳಿಗೆ ಬೇಲಿ ಹಾಕಿ, ಅದನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಸಮರ್ಥನೆ ನೀಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry