ಬಡಾವಣೆಗೆ ಹಬ್ಬದ ಬಣ್ಣ

7

ಬಡಾವಣೆಗೆ ಹಬ್ಬದ ಬಣ್ಣ

Published:
Updated:

ಮೂವತ್ತು ವರ್ಷಗಳ ಹಿಂದೆ ಬ್ರಿಟಿಷ್ ಶೈಲಿಯ ಕೆಂಪು ಹೆಂಚಿನ ಕಟ್ಟಡಗಳಿದ್ದ ಕಾಕ್ಸ್‌ಟೌನ್ ಪ್ರದೇಶದಲ್ಲಿ ಈಗ ಬೃಹತ್ ಐಷಾರಾಮಿ ಬಂಗಲೆಗಳು ತಲೆಯೆತ್ತಿವೆ. ಒಂದು ಕಾಲದಲ್ಲಿ ಈ ಪ್ರದೇಶದಲ್ಲಿ ಕ್ರಿಶ್ಚಿಯನ್ನರ ನೂರಾರು ಮನೆಗಳಿದ್ದವು. ಆದರೆ, ನಗರ ಬೆಳೆದಂತೆ ಭೂಮಿಯ ಬೆಲೆ ಗಗನಕ್ಕೇರತೊಡಗಿತು. ವಾಸವಿದ್ದ ಜಾಗವನ್ನು ಮಾರಾಟ ಮಾಡಿ ಕಮ್ಮನಹಳ್ಳಿಗೆ ಹೋಗಿ ನೆಲೆನಿಂತರು. ಇದು ಕಾಕ್ಸ್‌ಟೌನ್‌ನಲ್ಲಿದ್ದ ಬಹುತೇಕ ಕ್ರಿಶ್ಚಿಯನ್ನರು ಹಾಗೂ ಬಡಾವಣೆ ವಾಸಿಗಳು ಸ್ಥಳಾಂತರಗೊಂಡ ಕಥೆ.ನಾಲ್ಕು ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಕಾಕ್ಸ್‌ಟೌನ್ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಬಹುಸಂಖ್ಯೆಯಲ್ಲಿ ವಾಸವಿದ್ದಾರೆ. ಫ್ರೇಜರ್‌ಟೌನ್, ಬಾಣಸವಾಡಿ, ಕಮ್ಮನಹಳ್ಳಿ, ರಿಚ್ಮಂಡ್‌ಟೌನ್, ಡೇವಿಸ್ ರಸ್ತೆ, ಲಿಂಗರಾಜಪುರ, ಶಿವಾಜಿನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಕ್ರಿಶ್ಚಿಯನ್ ಸಮುದಾಯದವರು ಹೆಚ್ಚಾಗಿ ವಾಸವಾಗಿದ್ದಾರೆ. ಮುನ್ನೂರು ವರ್ಷಗಳ ಇತಿಹಾಸವಿರುವ ನಗರದ ಕ್ಯಾಥೋಲಿಕ್ ಕ್ರಿಶ್ಚಿಯನ್ನರ ಆಚರಣೆ, ಜೀವನ ಶೈಲಿಯಲ್ಲಿ ಅನೇಕ ಬದಲಾವಣೆಗಳಾಗಿವೆ.ಒಂದೊಂದು ಚರ್ಚ್‌ಗಳ ವ್ಯಾಪ್ತಿಗೂ ಇಂತಿಷ್ಟು ಮಂದಿ ಭಕ್ತರು ಇರುತ್ತಾರೆ. ಭಾನುವಾರದ ಪ್ರಾರ್ಥನೆಗೆ ಆ ಪ್ರದೇಶದ ಚರ್ಚ್‌ಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ. (ಇತರೆ ಚರ್ಚ್‌ಗಳಿಗೂ ಹೋಗಿ ಪ್ರಾರ್ಥನೆ ಸಲ್ಲಿಸಬಹುದು) ಸುಮಾರು 30ರಿಂದ 40 ಸಾವಿರ ಜನಸಂಖ್ಯೆಗೆ ಕಾಕ್ಸ್‌ಟೌನ್‌ನ ಫ್ರಾನ್ಸಿಸ್ ಝೇವಿಯರ್ ಕೆಥೆಡ್ರಲ್ ಚರ್ಚ್ ಪ್ರಾರ್ಥನೆಯ ಕೇಂದ್ರವಾಗಿದೆ. ಡೇವಿಸ್‌ರಸ್ತೆ, ಬಾಣಸವಾಡಿ, ಶಿವಾಜಿನಗರ, ಲಿಂಗರಾಜಪುರ, ಫ್ರೇಜರ್‌ಟೌನ್, ನಾಗಶೆಟ್ಟಿಹಳ್ಳಿ ಸೇರಿ ಸುತ್ತಮುತ್ತಲಿನ ಬಡಾವಣೆಗಳ ಕ್ರೈಸ್ತರು ಪ್ರಾರ್ಥನೆ ಸಲ್ಲಿಸಲು 10ಕ್ಕೂ ಹೆಚ್ಚು ಚರ್ಚ್‌ಗಳಿವೆ.`ನಲ್ವತ್ತು ವರ್ಷಗಳಿಂದ ಕಾಕ್ಸ್‌ಟೌನ್‌ನಲ್ಲಿ ವಾಸವಾಗಿದ್ದೇವೆ. 30 ವರ್ಷಗಳ ಹಿಂದೆ ನಮಗೆ ಬಡತನವಿತ್ತು. ಉದ್ಯೋಗದ ಸಮಸ್ಯೆ ಕಾಡುತ್ತಿತ್ತು. ಕಡಿಮೆ ಸಂಬಳಕ್ಕೆ ದುಡಿಯಬೇಕಾದ ಅನಿವಾರ್ಯವಿತ್ತು. ಹಣಕಾಸಿನ ಸಮಸ್ಯೆಯಂತೂ ಹೇಳುವಂತೆಯೇ ಇಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಎಂಜಿನಿಯರ್, ವೈದ್ಯಕೀಯ ವೃತ್ತಿಯಲ್ಲಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ಶಿಕ್ಷಣ ಕ್ಷೇತ್ರದಲ್ಲೂ ಕ್ರೈಸ್ತರು ದುಡಿಯುತ್ತಿರುವುದರಿಂದ ಜೀವನ ಮಟ್ಟ ಸುಧಾರಿಸಿದೆ' ಎಂದು ಸಿಂಹಾವಲೋಕನ ಮಾಡುತ್ತಾರೆ ಡೊನತ್ ಫರ್ನಾಂಡಿಸ್.`ಐವತ್ತು ವರ್ಷಗಳ ಹಿಂದೆ ಮೌಢ್ಯವಿತ್ತು. ಅಕ್ಷರ ಜ್ಞಾನ ಅಷ್ಟಾಗಿ ಇರಲಿಲ್ಲ. ಆದರೆ ಕಳೆದ 20 ವರ್ಷಗಳಿಂದ ಅದು ಬದಲಾಗಿದೆ. ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡುವ ಮೂಲಕ ಮಧ್ಯಮ ವರ್ಗದ ಕ್ರಿಶ್ಚಿಯನ್ನರು ಬದಲಾವಣೆ ಕಂಡುಕೊಂಡಿದ್ದಾರೆ' ಎಂದು ಅವರು ವಿವರಿಸುತ್ತಾರೆ.

`ಕ್ರಿಸ್‌ಮಸ್ ಹಬ್ಬ ಬಂತೆಂದರೆ ಸಾಕು ಮನೆಯನ್ನು ಸಿಂಗರಿಸಿ, ಮನೆಯ ಮುಂದೆ ಆಕಾಶಬುಟ್ಟಿ, ಕ್ರಿಸ್‌ಮಸ್ ಟ್ರೀ, ದೀಪಾಲಂಕಾರದಿಂದ ಸಿಂಗರಿಸುತ್ತೇವೆ. ನೆರೆಮನೆಯವರಿಗೆ ಶುಭಾಶಯ ಕೋರುವ ಮೂಲಕ, ಸ್ನೇಹ ಬಾಂಧವ್ಯ ಬೆಳೆಸುತ್ತೇವೆ. ಪಕ್ಕದ ಮನೆಯವರು ಯಾರೆಂಬುದೇ ಗೊತ್ತಿರದ ಬೆಂಗಳೂರಿನಲ್ಲಿ ಇಂಥ ಹಬ್ಬಗಳು ಸ್ನೇಹದ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತವೆ. ಬಡವ, ಬಲ್ಲಿದರೆನ್ನದೆ ಹಾಗೂ ಮೇಲು ಕೀಳು ಎಂಬುದನ್ನು ಬದಿಗೊತ್ತಿ ಯೇಸು ಕ್ರಿಸ್ತನನ್ನು ಆರಾಧಿಸುತ್ತೇವೆ. ಮನೆ ಮನೆಗಳಿಗೂ ಸುಣ್ಣ ಬಣ್ಣದ ಅಲಂಕಾರ. ಅಂದು ತಮ್ಮ ಶಕ್ತ್ಯಾನುಸಾರ ಐದರಿಂದ ಹತ್ತು ವಿಧದ ಸಿಹಿ ತಿನಿಸುಗಳನ್ನು ಹಂಚುತ್ತೇವೆ' ಎಂದು ತಮ್ಮ ಪ್ರದೇಶದ ಹಬ್ಬದ ಸಂಭ್ರಮವನ್ನು ಬಣ್ಣಿಸುತ್ತಾರೆ ಫರ್ನಾಂಡಿಸ್.`ರಾಜ್ಯದ ಕ್ರಿಶ್ಚಿಯನ್ನರಿಗೆ ಮುನ್ನೂರು ವರ್ಷಗಳ ಇತಿಹಾಸವಿದೆ. ಕ್ರಿ.ಶ 14ನೇ ಶತಮಾನದಲ್ಲಿ ಅಂದರೆ 1345-46ನೇ ಇಸವಿ ವೇಳೆಯಲ್ಲಿ ಆನೇಕಲ್ ತಾಲ್ಲೂಕಿನಲ್ಲಿ ಕ್ರಿಶ್ಚಿಯನ್ನರು ಕಾಣಿಸಿಕೊಂಡರು. ಅಂತಹ ಇತಿಹಾಸವಿರುವ ಕ್ರಿಶ್ಚಿಯನ್ನರು ವೈದ್ಯಕೀಯ, ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಗಣನೀಯ. ವಿವೇಕನಗರ, ರಿಚರ್ಡ್ಸ್ ಟೌನ್, ಕಮ್ಮನಹಳ್ಳಿ, ಆರ್.ಟಿ.ನಗರ ಹಾಗೂ ಫ್ರೇಜರ್‌ಟೌನ್ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸವಿದ್ದಾರೆ. ಶಿವಾಜಿನಗರದಲ್ಲಿ ಇವರ ಸಂಖ್ಯೆ 15 ಸಾವಿರಕ್ಕೂ ಹೆಚ್ಚು. ಇಂದಿನ ಪೀಳಿಗೆ ಜನರಲ್ಲಿ ದೇವರ ಮೇಲಿನ ನಂಬಿಕೆ ಕಡಿಮೆಯಾಗಿಲ್ಲ. ಕ್ರಿಸ್‌ಮಸ್ ಆಚರಣೆಯಲ್ಲಿ ಸಂಪೂರ್ಣ ತೊಡಗಿಕೊಳ್ಳುತ್ತಾರೆ' ಎಂದು ಹೇಳುತ್ತಾರೆ ಶಿವಾಜಿನಗರದ ಸೇಂಟ್ ಮೇರೀಸ್ ಬೆಸಿಲಿಕದ ಫಾದರ್ ಎಲ್. ಅರುಳಪ್ಪ.ಸಮನ್ವಯದ ಉತ್ಸವ: ಕ್ರಿಶ್ಚಿಯನ್ನರು ಮಾತ್ರವಲ್ಲದೇ ಮುಸ್ಲಿಂ ಹಾಗೂ ಹಿಂದೂಗಳು ಪಾಲ್ಗೊಳ್ಳುವ ಈ ಕ್ರಿಸ್‌ಮಸ್ ಹಬ್ಬಕ್ಕೆ ಈ ಬಾರಿ ವಿಶೇಷ ಸಿದ್ಧತೆ ನಡೆಸಿದ್ದೇವೆ. ಮೂರು ಲಕ್ಷಕ್ಕೂ ಹೆಚ್ಚಿನ ಭಕ್ತರು ಸೇರುವ ಈ ಚರ್ಚ್ ರಾಜ್ಯವಲ್ಲದೇ ಹೊರರಾಜ್ಯಗಳಿಂದಲೂ ಭಕ್ತರನ್ನು ಆಕರ್ಷಿಸುತ್ತಿದೆ. ಡಿ.25ರಿಂದ ಜನವರಿ 1ರ ವರೆಗೆ ಉತ್ಸವ ವಿರುತ್ತದೆ. ಬಾಲ ಯೇಸು ಪ್ರತಿಮೆಯನ್ನು ತೇರಿನಲ್ಲಿ ಕೂರಿಸಿ ಅಲಂಕಾರ ಮಾಡುತ್ತಾರೆ. ರಾಜ್ಯದಲ್ಲಿ ಮಳೆ ಬೆಳೆಯಾಗಲಿ, ರೈತಾಪಿ, ಕಾರ್ಮಿಕ ವರ್ಗ ಸುಖ ಸಂತೋಷದಿಂದ ಬಾಳಲಿ ಹಾಗೂ ರಾಜ್ಯ ಅಭಿವೃದ್ಧಿ ಪಥದತ್ತ ಸಾಗಲಿ' ಎಂದು ಹಾರೈಸುತ್ತಾರಂತೆ.ರಾಮಮೂರ್ತಿನಗರ, ಬಾಣಸವಾಡಿ, ಹೊರಮಾವು, ಹೊಯ್ಸಳನಗರ ಮತ್ತಿತರೆ ಬಡಾವಣೆಗಳಲ್ಲಿ ಪ್ರಾಟೆಸ್ಟಂಟ್ ಕ್ರಿಶ್ಚಿಯನ್ನರು ಹೆಚ್ಚಾಗಿ ವಾಸವಾಗಿದ್ದಾರೆ. ಮಧ್ಯಮ ವರ್ಗದ ಮಂದಿಯೇ ಹೆಚ್ಚಾಗಿರುವ ಈ ಪ್ರದೇಶಗಳಲ್ಲಿ ತೆಲುಗು, ತಮಿಳು ಹಾಗೂ ಮಲಯಾಳಿ ಹಾಗೂ ಹಿಂದಿ ಭಾಷೆಯ ಕ್ರಿಶ್ಚಿಯನ್ನರನ್ನು ಕಾಣಬಹುದು. ಹೋಲಿ ಫ್ಯಾಮಿಲಿ ಚರ್ಚ್, ಡೇವಿಡ್ ಮೆಮೋರಿಯಲ್ ಚರ್ಚ್, ಬಾಪ್ಟಿಸ್ಟ್ ಚರ್ಚ್ ಸೇರಿದಂತೆ ಅನೇಕ ಚರ್ಚ್‌ಗಳಿವೆ.`ಅತ್ಯಂತ ಸಡಗರದಿಂದ ಹಬ್ಬ ಆಚರಿಸುತ್ತೇವೆ. ಕ್ಯಾರಲ್ ಗೀತೆಯನ್ನು ಹಾಡಿಕೊಂಡು ಮನೆಮನೆಗಳಿಗೆ ಭೇಟಿ ನೀಡುತ್ತೇವೆ. ಉಡುಗೊರೆ ವಿನಿಮಯ ಮಾಡಿಕೊಳ್ಳುತ್ತೇವೆ. ಈ ಭಾಗದಲ್ಲಿ ಹೆಚ್ಚಿನ ಮಂದಿ ಉದ್ಯೋಗಸ್ಥರೇ. ಮನೆಮನೆಯಲ್ಲೂ ದೀಪಗಳ ಅಲಂಕಾರದಿಂದ ಬಡಾವಣೆಗೆ ಹೊಸ ಗೆಟಪ್ಪು ಬಂದಿರುತ್ತದೆ' ಎಂದು ವಿವರಿಸುತ್ತಾರೆ ರಾಮಮೂರ್ತಿನಗರ ನಿವಾಸಿ ರೆವರೆಂಡ್ ಸಿ. ನಿರಂಜನ ಕುಮಾರ್. ಒಟ್ಟಿನಲ್ಲಿ ಕ್ರಿಸ್ತನ ಜನ್ಮದಿನದ ಆಚರಣೆಗೆ ನಗರದ ಬಡಾವಣೆಗಳು ಸ್ಪರ್ಧೆಯೋಪಾದಿಯಲ್ಲಿ ಸಿದ್ಧವಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry