ಬಡಿಗೇರರ ಕುಂಚದಲ್ಲಿ ವೈದ್ಯಕೀಯ ತಾರೆಗಳು!

7

ಬಡಿಗೇರರ ಕುಂಚದಲ್ಲಿ ವೈದ್ಯಕೀಯ ತಾರೆಗಳು!

Published:
Updated:
ಬಡಿಗೇರರ ಕುಂಚದಲ್ಲಿ ವೈದ್ಯಕೀಯ ತಾರೆಗಳು!

ಹುಬ್ಬಳ್ಳಿಯ ‘ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ’ (ಕಿಮ್ಸ್) ವಿದ್ಯಾರ್ಥಿಗಳಿಗೆ ಅಲ್ಲಿಯ ಮ್ಯೂಸಿಯಂ ಅಂದರೆ ಪಂಚಪ್ರಾಣ. ಅದು ಹಲವು ವಿಸ್ಮಯಗಳ ತಾಣ. ರೋಗವಿಜ್ಞಾನ ಬೇಸರ ತರಿಸಿದಾಗ ಸೀದಾ ಅವರು ಮ್ಯೂಸಿಯಂಗೆ ಬಂದು ಅಲ್ಲಿಯ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳುತ್ತಾರೆ. ವೈದ್ಯಲೋಕದ ವಿಜ್ಞಾನಿಗಳ ಆ ಪೆನ್ಸಿಲ್ ಸ್ಕೆಚ್‌ಗಳಲ್ಲಿ ಒಂದು ಧ್ವನಿ ಇದೆ.

ಕೃತಿಗಿಳಿದಿರುವ ದೇಹದ ಒಂದೊಂದೇ ಅಂಗಗಳು ಅಂಗರಚನಾ (ಅನಾಟಮಿ) ಶಾಸ್ತ್ರವನ್ನೇ ತೆರೆದಿಟ್ಟಿವೆ. ಕಿಮ್ಸನಲ್ಲಿ ನಡೆದ ಅಪರೂಪದ ಶಸ್ತ್ರಚಿಕಿತ್ಸೆಗೆ ಈ ಮ್ಯೂಸಿಯಂ ಸಾಕ್ಷಿಯಾಗಿದೆ. ದೇಹದ ಕತ್ತರಿಸಿದ ಭಾಗಗಳು, ವೈದ್ಯರ ಉಪಕರಣಗಳು, ಇಂಕ್ ಮಾಧ್ಯಮದಲ್ಲಿ ಚಿತ್ರಿಸಿದ ಖ್ಯಾತ ವೈದ್ಯರ ಪಟಗಳು ಮನಸೆಳೆಯುತ್ತವೆ. ಅಷ್ಟಕ್ಕೂ ಅದು ಮೆಡಿಕಲ್ ಕಾಲೇಜೊಂದರ ಮ್ಯೂಸಿಯಂ. ಅಲ್ಲಿ ವೈದ್ಯಕೀಯ ಕಲಾಕೃತಿ ಬಿಟ್ಟರೆ ಬೇರೇನೂ ಇಲ್ಲ. ಆದರೆ ಆ ಕಲಾಕೃತಿಗಳನ್ನು ಕಟ್ಟಿದ ಕೈಗಳಿಗೆ ವೈದ್ಯಕೀಯ ವಿಜ್ಞಾನ ಗೊತ್ತಿಲ್ಲ, ಅವರು ಅಪ್ಪಟ ಕಲಾವಿದ ಅಷ್ಟೆ. ಅವರೇ ನಾಡಿನ ಹಿರಿಯ ಕಲಾವಿದ ವಿಠ್ಠಲ ದೇವೀಂದ್ರಪ್ಪ ಬಡಿಗೇರ.ವಿ.ಡಿ. ಬಡಿಗೇರ ಅವರ ವೈದ್ಯಕೀಯ ಕಲಾಕೃತಿಗಳು ಕಿಮ್ಸ್ನಲ್ಲಿ ಮಾತ್ರವಲ್ಲ, ರಾಜ್ಯದ ಹಲವು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿವೆ. ಬಳ್ಳಾರಿಯ ವಿಮ್ಸ್, ತುಮಕೂರು ವೈದ್ಯಕೀಯ ಕಾಲೇಜು, ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆ ಮುಂತಾದೆಡೆ ಅವರ ವೈದ್ಯಕೀಯ ಕಲಾಕೃತಿಗಳಿವೆ.ಬಳ್ಳಾರಿಯ ವಿಮ್ಸ್ನಲ್ಲಿ ಮೂರು ವರ್ಷ ಸೇರಿ 31 ವರ್ಷಗಳ ಕಾಲ ಕಿಮ್ಸ್ನಲ್ಲಿ ಕಲಾವಿದನಾಗಿ ದುಡಿದಿರುವ ಬಡಿಗೇರ ಕೇವಲ ಆಸ್ಪತ್ರೆಯ ನಾಲ್ಕು ಗೋಡೆಗಳೊಳಗೆ ಮುಳುಗಿ ಹೋದವರಲ್ಲ. ಪ್ರಕೃತಿಯ ಸೊಗಸನ್ನು ಅವರು ಕುಂಚದಲ್ಲಿ ಕಡೆದು ನಿಲ್ಲಿಸಿದರು. ಜಲವರ್ಣದಲ್ಲಿ ಬಡಿಗೇರ ಮಾಡಿರುವ ಕೆಲಸ ಅಪ್ರತಿಮವಾದುದು. ನೂರಾರು ರೇಖಾಚಿತ್ರಗಳು ಅವರ ಗೆರೆಗಳಲ್ಲಿರುವ ಅದ್ಭುತ ಶಕ್ತಿಯನ್ನು ಸಾರಿ ಹೇಳುತ್ತಿವೆ. ಬಡಿಗೇರ ಚಿತ್ರಿಸಿರುವ ನಿಸರ್ಗ ಚಿತ್ರಗಳಲ್ಲಿ ಚೈತನ್ಯ ಶಕ್ತಿಯಿದೆ.

ಐತಿಹಾಸಿಕ ಸ್ಮಾರಕಗಳಿಗೆ ಅವರು ತಮ್ಮ ಕುಂಚಶಕ್ತಿಯಿಂದ ಜೀವ ತುಂಬಿದ್ದಾರೆ. ರಾಜ್ಯದಾದ್ಯಂತ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ತಮ್ಮ ಅಪಾರ ಅನುಭವದ ಮೂಲಕ ಬಣ್ಣದ ಧರ್ಮ ಅರಿತಿರುವ ಬಡಿಗೇರ, ವರ್ಣಸಂಯೋಜನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಪ್ರಸ್ತುತ 76ರ ವಯಸ್ಸಿನಲ್ಲೂ ಸುಂದರ ನಿಸರ್ಗ ತಾಣದಲ್ಲಿ ಕೂತು ಚಿತ್ರಬರೆಯುವುದು ಅವರಿಗೆ ಖುಷಿ ಕೊಡುವ ಸಂಗತಿ. ಹುಬ್ಬಳ್ಳಿಯ ಅವರ ಮನೆ ಒಂದು ಗ್ಯಾಲರಿ. ಮನೆತುಂಬೆಲ್ಲಾ ಕಲಾಕೃತಿಗಳು.

ದ್ರೋಣಪುರವೆಂಬ ಗ್ರಾಮದಿಂದ...

ಗದಗ ಜಿಲ್ಲೆಯ ರೋಣ ಸಮೀಪದ ಕೃಷ್ಣಾಪುರ ಬಡಿಗೇರರ ಹುಟ್ಟೂರು. ಅವರು ಚಿಕ್ಕಂದಿನಿಂದಲೇ ಬಣ್ಣದತ್ತ ಸೆಳೆತ ಹೊಂದಿದ್ದರು. ಕುಲಕಸುಬು ಬಡಗಿತನ ಇವರಿಗೆ ಒಗ್ಗಲಿಲ್ಲ. ಶಾಲಾ ದಿನಗಳಲ್ಲಿ ಗೋಡೆಯ ಮೇಲಿನ ರಾಮಾಯಣ, ಮಹಾಭಾರತದ ಚಿತ್ರಗಳಿಂದ ಆಕರ್ಷಣೆಗೊಂಡಿದ್ದರು. ಪಠ್ಯದಲ್ಲಿ ಬರುವ ರಾಷ್ಟ್ರನಾಯಕರ ಭಾವಚಿತ್ರಗಳನ್ನು ಪೆನ್ಸಿಲ್‌ನಿಂದ ಬಿಡಿಸಿ ಎಲ್ಲರಿಂದಲೂ ಪ್ರಶಂಸೆಗೆ ಒಳಗಾಗುತ್ತಿದ್ದರು. ರಜೆ ಸಿಕ್ಕಾಗೆಲ್ಲಾ ಸಮೀಪದ ಬಾದಾಮಿಗೆ ಬಂದು ಕುಳಿತುಬಿಡುತ್ತಿದ್ದರು. ಬಾದಾಮಿಯ ಶಿಲ್ಪಕಲೆಯನ್ನು ಕೂಲಂಕಶವಾಗಿ ಕಣ್ತುಂಬಿಕೊಳ್ಳುತ್ತಿದ್ದ ಅವರ ಮನಸ್ಸು ಕಲೆಯತ್ತ ಹೊರಳಿತು.ಬಡಿಗೇರ ಅವರಿಗೆ ಹಾರ್ಮೊನಿಯಂ ನುಡಿಸುವುದೂ ಗೊತ್ತಿದೆ. ನಾಟಕಗಳಿಗೆ ಹಾರ್ಮೊೋನಿಯಂ ಸಾಥ್ ಕೊಟ್ಟ ಅನುಭವ ಅವರದು. ‘ಸಂಗೀತಕ್ಕೆ ಸದಾ ಸಾಥಿ ಇರಬೇಕು, ಸಾಥಿ ಇಲ್ಲದೆ ಒಂಟಿಯಾಗಿ ಮಾಡುವ ಕಲೆ ಎಂದರೆ ಒಂದೇ, ಅದು ಚಿತ್ರಕಲೆ’ ಎಂಬ ಅನುಭವದ ಮಾತು ಅವರದು.ಎಸ್‌ಎಸ್‌ಎಲ್‌ಸಿ ನಂತರ ಬಡಿಗೇರ ಗದುಗಿನ ವಿಜಯ ಮಹಾಂತೇಶ ಲಲತ ಕಲಾ ಮಂದಿರದಲ್ಲಿ ಕಲಾ ಶಿಕ್ಷಕ ತರಬೇತಿ (ಡಿ.ಟಿ.ಸಿ.) ಮುಗಿಸಿದರು. 1960ರಲ್ಲಿ ಹುಬ್ಬಳ್ಳಿಗೆ ಬಂದ ಅವರು, ಮಹಿಳಾ ವಿದ್ಯಾಪೀಠದಲ್ಲಿ ಅರೆಕಾಲಿಕ ಕಲಾಶಿಕ್ಷಕರಾಗಿ ನೇಮಕಗೊಂಡರು. ನಂತರ 1965ರಲ್ಲಿ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಅರೆಕಾಲಿಕ ಕಲಾವಿದ ಹಾಗೂ ಛಾಯಾಗ್ರಾಹಕರಾಗಿ ಕೆಲಸಕ್ಕೆ ಸೇರಿದರು. ಅಲ್ಲಿಂದ ಅವರ ವೈದ್ಯಕೀಯ ಕಲಾಕೃತಿಗಳ ಪರ್ವ ಆರಂಭವಾಯಿತು.ಪ್ರಾಧ್ಯಾಪಕರು ತಮ್ಮ ಪಾಠಗಳಿಗೆ ಬೇಕಾದ ಚಿತ್ರಗಳನ್ನು ಬಡಿಗೇರ ಅವರಿಂದ ಬಿಡಿಸಿಕೊಳ್ಳುತ್ತಿದ್ದರು. ಆಸ್ಪತ್ರೆಯಲ್ಲಿ ಕೈಗೊಳ್ಳುತ್ತಿದ್ದ ಕುಟುಂಬ ಯೋಜನೆ ಮುಂತಾದ ಜನಜಾಗೃತಿ ಕಾರ್ಯಕ್ರಮಗಳಿಗೆ ಭಿತ್ತಿಪತ್ರವನ್ನೂ ಬರೆದುಕೊಡುತ್ತಿದ್ದರು. ವೈದ್ಯಕೀಯ ಕಾಲೇಜಿನ ಎ್ಲ್ಲಾ ವಿಭಾಗಗಳಲ್ಲೂ ಇಂದಿಗೂ ಅವರು ಬಿಡಿಸಿದ ಚಿತ್ರಗಳು, ಛಾಯಾಚಿತ್ರಗಳು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಸಂಗಾತಿಗಳಾಗಿವೆ. ಮೆಡಿಕಲ್ ಕಾಲೇಜಿನ ಅಧ್ಯಯನ ಸಾಮಗ್ರಿಗಳಾಗಿವೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೊರತರುವ ನಿಯತಕಾಲಿಕದಲ್ಲೂ ಅವರ ವೈದ್ಯಕೀಯ ರೇಖಾಚಿತ್ರಗಳು ಪ್ರಕಟವಾಗಿರುವುದು ವಿಶೇಷ.ಸಂಜೀವರೆಡ್ಡಿ ಅವರ ಶಹಭಾಸ್‌ಗಿರಿ!

‘ವಿಶಾಲ ಕರ್ನಾಟಕ’ ಪತ್ರಿಕೆಯ ದೀಪಾವಳಿ ಸಂಚಿಕೆ ಸ್ಪರ್ಧೆಯಲ್ಲಿ ಬಡಿಗೇರ ಅವರು ರಚಿಸಿದ ಮಾಜಿ ಉಪ-ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ ಅವರ ಪೋಟ್ರೈಟ್ ಪ್ರಥಮ ಬಹುಮಾನ ಗಳಿಸಿ ಸಂಚಿಕೆಯ ಮುಖಪುಟದಲ್ಲಿ ಪ್ರಕಟವಾಯಿತು. ಕಾರ್ಯಕ್ರಮವೊಂದರಲ್ಲಿ ಸ್ವತಃ ಸಂಜೀವರೆಡ್ಡಿ ಅವರೇ ಈ ಕಲಾಕೃತಿ ಕಂಡು ಆನಂದ ವ್ಯಕ್ತಪಡಿಸಿದ್ದರು. ಅದಕ್ಕೆ ಸಹಿ ಕೂಡ ಮಾಡಿಕೊಟ್ಟರು.ನಿಸರ್ಗ ಚಿತ್ರ ರಚನೆಯಲ್ಲಿ ವಿಶೇಷ ಪರಿಣತಿ ಹೊಂದಿರುವ ಅವರು, ರಾಷ್ಟ್ರನಿರ್ಮಾಪಕರು ಮತ್ತು ಸ್ವಾತಂತ್ರ್ಯಯೋಧರ ಚಿತ್ರಗಳನ್ನೂ ರಚಿಸಿದ್ದಾರೆ. ಕಾರವಾರದ ಸಮುದ್ರದ ಕಿನಾರೆಯಲ್ಲಿ ಕೂರುತ್ತಿದ್ದ ಅವರು ಮುಂಜಾನೆಯ ಅಲೆಗಳ ಸೌಮ್ಯತೆಯನ್ನು ಕಲಾಕೃತಿಗಳಲ್ಲಿ ದಾಖಲು ಮಾಡಿರುವುದು ಅಪರೂಪವಾಗಿದೆ. ಸಂಜೆಯ ದೂಳಿನ ರಾಶಿಯೊಳಗೆ ಊರೊಳಗೆ ಬರುವ ಜಾನುವಾರುಗಳನ್ನು ಬಹಳ ಮನಮೋಹಕವಾಗಿ ಚಿತ್ರಿಸಿದ್ದಾರೆ. ಮಧ್ಯಾಹ್ನದ ಬಿರುಬಿಸಿಲಿನಲ್ಲಿ ಅರಳಿದ ಬಳ್ಳಾರಿ ಚಿತ್ರಗಳು, ಸಂಜೆಮಳೆಯ ಕಲಾಕೃತಿಗಳು ಭಾವಪೂರ್ಣವಾಗಿವೆ.ಈಗಲೂ ಪ್ರಕೃತಿಯ ಮಡಿಲಿಗೆ ಹೋಗಿ ದಿನಗಟ್ಟಲೇ ಕುಳಿತುಕೊಳ್ಳುವ ಬಡಿಗೇರ ಉತ್ತರ ಕರ್ನಾಟಕದ ಹಲವು ಪ್ರವಾಸಿ ತಾಣಗಳನ್ನು ಚಿತ್ರಿಸಿದ್ದಾರೆ. ವಿಶೇಷವಾಗಿ ಹಾಳು ಹಂಪಿಯ ಸ್ಮಾರಕಗಳು ಅವರ ಕುಂಚದಿಂದ ಜೀವ ತುಂಬಿಕೊಂಡಿವೆ. ಬನಶಂಕರಿ ದೇವಾಲಯದ ಎದುರಿನ ಪುಷ್ಕರಣಿ, ಗೋಕರ್ಣದ ಸುತ್ತಲಿನ ಹಸಿರು ಕೋಟೆ, ದಾಂಡೇಲಿಯ ಕಾಳಿ ನದಿಯ ರೌದ್ರವತಾರ... ಇವೆಲ್ಲವೂ ಅವರ ಕುಂಚದಲ್ಲಿ ಕಲಾಕೃತಿಗಳಾಗಿವೆ.

ಅಪರೂಪದ ಜಲವರ್ಣ

ಭೋರ್ಗರೆಯುವ ಸಮುದ್ರ, ನೀಲಾಕಾಶ, ಮುಗಿಲು ಮುಟ್ಟುತ್ತಿರುವ ಪರ್ವತ, ಯಶೋದೆ ಕೃಷ್ಣರ ಮಮತೆ, ಒಲಿದ ಹೃದಯಗಳ ಶೃಂಗಾರ, ಪ್ರೇಮ ಸಂದೇಶ ಹೊತ್ತು ಹಾರುವ ಪಾರಿವಾಳ, ವೇಷಗಾರರು- ಹೀಗೆ, ಬಡಿಗೇರರ ಕುಂಚದಲ್ಲಿ ಜೀವತಳೆದ ಜಲವರ್ಣ ಚಿತ್ರಿಕೆಗಳೂ ಸಾಕಷ್ಟಿವೆ.ಚಿತ್ರಕಲಾ ಸ್ನಾತಕೋತ್ತರ ವಿದ್ಯಾರ್ಥಿಗಳು ಬಡಿಗೇರ ಅವರ ಬದುಕು ಮತ್ತು ಕಲಾಕೃತಿಗಳ ಕುರಿತು ಸಂಶೋಧನಾ ಪ್ರಬಂಧ ಬರೆದಿದ್ದಾರೆ. ಹಲವು ಸಂಘ ಸಂಸ್ಥೆಗಳು ಅವರ ಕಲಾ ಸೇವೆಗೆ ಗೌರವ ಸಲ್ಲಿಸಿದೆ. ನಿವೃತ್ತಿಯ ನಂತರವೂ ಚಿತ್ರ ರಚನೆಯಲ್ಲಿ ಕೊಂಚವೂ ಉತ್ಸಾಹ ಕಳೆದುಕೊಳ್ಳದ ಬಡಿಗೇರ ಅವರು ತಾವೇ ಸ್ವತಃ ಒಂದು ಕಲಾಕೃತಿಯಂತೆ ಕಾಣಿಸುತ್ತಾರೆ.

-ಯೋಗೇಶ್ ಮಾರೇನಹಳ್ಳಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry