ಬಡೇಮಿಯಾ ದಾಖಲೆ ಮೀರುವರೇ ಸಚಿನ್

7

ಬಡೇಮಿಯಾ ದಾಖಲೆ ಮೀರುವರೇ ಸಚಿನ್

Published:
Updated:

‘ಸಚಿನ್ ಜೊತೆಗೆ ದಾಖಲೆ ಹಂಚಿಕೊಳ್ಳಲು ಖುಷಿಯಾಗುತ್ತಿದೆ. 2015ರ ವಿಶ್ವಕಪ್‌ನಲ್ಲಿಯೂ ಮಾಸ್ಟರ್ ಬ್ಲಾಸ್ಟರ್ ಆಡಿ ನನ್ನ ದಾಖಲೆ ಮೀರಿ ನಿಂತರೆ ಇನ್ನೂ ಹೆಚ್ಚು ಸಂತಸವಾಗುತ್ತದೆ’- ಮೂರು ವರ್ಷದ ಹಿಂದೊಮ್ಮೆ ಸಚಿನ್ ತೆಂಡೂಲ್ಕರ್ ನಿವೃತ್ತರಾಗಬೇಕೆಂದು ಹೇಳಿದ್ದ ಪಾಕಿಸ್ತಾನ ಕ್ರಿಕೆಟ್‌ನ ‘ಬಡೇಮಿಯಾ’ ಜಾವೇದ್ ಮಿಯಾಂದಾದ್ ಈಗ ಹೇಳುತ್ತಿರುವ ಮಾತಿದು.ಹೌದು; ಸಚಿನ್ ಬ್ಯಾಟ್ ಮಂತ್ರದಂಡಕ್ಕೆ ಸಮಾನ. ಕಳೆದ ಮೂರು ವರ್ಷಗಳಲ್ಲಿ ಅವರ ಬ್ಯಾಟು ಹರಿಸಿದ ರನ್ನುಗಳ ಸಂಖ್ಯೆ ಮೂರು ಸಾವಿರದ ಲೆಕ್ಕ ಹೇಳುತ್ತವೆ. ಏಕದಿನ ಕ್ರಿಕೆಟ್‌ನಲ್ಲಿ ‘ದ್ವಿಶತಕ’ ಗಳಿಸಿದ ಸಾಧನೆಗೆ ಇದೇ ಫೆಬ್ರುವರಿ 24ರಂದು ಒಂದು ವರ್ಷ ತುಂಬುತ್ತದೆ. 36ರ ವಯಸ್ಸಿನಲ್ಲಿಯೂ, ಟೆಸ್ಟ್, ಏಕದಿನ, ಐಪಿಎಲ್ ಟ್ವೆಂಟಿ-20 ಕ್ರಿಕೆಟ್‌ಗಳಲ್ಲಿ ‘ರಾಜದರ್ಬಾರು’ ನಡೆಸಿರುವ ಮುಂಬೈಕರ್ ಆಟಕ್ಕೆ ಮಿಯಾಂದಾದ್ ಸಂಪೂರ್ಣ ತಲೆ ಬಾಗಿದ್ದಾರೆ.ತಮ್ಮ ಕ್ರಿಕೆಟ್ ಆಟದ ದಿನಗಳಲ್ಲಿ ಭಾರತ ಮತ್ತು ಭಾರತದ ಆಟಗಾರರ ವಿರುದ್ಧ ಸದಾ ಒಂದಿಲ್ಲೊಂದು ಕ್ಯಾತೆ ತೆಗೆಯುವುದರಲ್ಲಿಯೇ ಸಂತೋಷ ಕಾಣುತ್ತಿದ್ದ ‘ಮಿಯಾ’ ಈಗ ಮೆತ್ತಗಾಗಿದ್ದಾರೆ. ಅಲ್ಲದೇ ಸಚಿನ್ ತೆಂಡೂಲ್ಕರ್ ಅವರ ಕ್ರಿಕೆಟ್ ಜೀವನ ನೋಡಿ ಕಲಿಯುವಂತೆ ತಮ್ಮ ದೇಶದ ಕ್ರಿಕೆಟಿಗರಿಗೂ ಕಿವಿಮಾತು ಹೇಳುತ್ತಿದ್ದಾರೆ.ಸ್ಪಾಟ್ ಫಿಕ್ಸಿಂಗ್ ಕಳಂಕದಲ್ಲಿ ತೊಳಲಾಡುತ್ತಿರುವ ಪಾಕ್ ತಂಡ ಮರಳಿ ತನ್ನ ವರ್ಚಸ್ಸನ್ನು ಕಂಡುಕೊಳ್ಳಲು ‘ಸಚಿನ್ ಆದರ್ಶ’ ಪಾಲನೆಯೇ ಸಿದ್ಧಸೂತ್ರ ಎಂದು ಮಿಯಾ ಅರಿತಿದ್ದಾರೆ.  1975ರಿಂದ 1996ರವರೆಗೆ ಮಿಯಾಂದಾದ್ ಪಾಕ್ ಪರ ಆಡಿದ್ದರು. ಇದೀಗ ಆರಂಭವಾಗಿರುವ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಮೂಲಕ ಸಚಿನ್ ಮಿಯಾ ದಾಖಲೆಯನ್ನು ಸರಿಗಟ್ಟಿದ್ದಾರೆ. ಸಚಿನ್ 1989ರ ನವೆಂಬರ್ 15ರಂದು ಪಾಕ್ ವಿರುದ್ಧದ ಪಂದ್ಯದಲ್ಲಿ ಪದಾರ್ಪಣೆ ಮಾಡಿದಾಗಲೂ ಮಿಯಾಂದಾದ್ ಆಡುತ್ತಿದ್ದರು. ಸಚಿನ್ ಆಟವನ್ನು ಅಂದಿನಿಂದಲೇ ನೋಡುತ್ತ ಬಂದಿರುವ ಮಿಯಾ ಕಡೆಗೂ ಮನಸೋತಿದ್ದಾರೆ.ತಮ್ಮ ಮನಮೋಹಕ ಸ್ಕ್ವೇರ್‌ಕಟ್ ಮತ್ತು ರಿವರ್ಸ್ ಸ್ವೀಪ್‌ಗಳ ಮೂಲಕ ರನ್ನುಗಳನ್ನು ಸೂರೆ ಮಾಡುತ್ತಿದ್ದ ಮಿಯಾ, ತಮ್ಮ ಮುಂಗೋಪ ಮತ್ತು ಎದುರಾಳಿಗಳನ್ನು ಹಿಯಾಳಿಸುವುದರಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದರು. 1992ರ ವಿಶ್ವಕಪ್ ಟೂರ್ನಿಯ ಸಿಡ್ನಿ ಪಂದ್ಯ ಅವರ ನಡೆ-ನುಡಿಯ ವೈಖರಿಗೆ ಸಾಕ್ಷಿಯಾಗಿತ್ತು. ಸಚಿನ್ ಮಿಂಚಿನ ಅರ್ಧಶತಕ ಮತ್ತು ಕಪಿಲ್ ಮಿಂಚಿನ ಬ್ಯಾಟಿಂಗ್ ಭಾರತ ನೀಡಿದ್ದ ಸವಾಲಿನ ಮೊತ್ತವನ್ನು ಪಾಕ್ ಬೆನ್ನಟ್ಟಿತ್ತು. ಮಿಯಾ ಬ್ಯಾಟ್ ಮಾಡುತ್ತಿದ್ದ ಸಂದರ್ಭದಲ್ಲಿ ವಿಕೆಟ್‌ಕೀಪರ್ ಕಿರಣ್ ಮೋರೆ ವಟಗುಟ್ಟುತ್ತಿದ್ದಾರೆ ಎಂದು ಸಚಿನ್ ಬೌಲಿಂಗ್ ಮಾಡುವಾಗ ತಕರಾರು ತೆಗೆದಿದ್ದರು. ವಿಚಿತ್ರ ರೀತಿಯಲ್ಲಿ ವರ್ತಿಸಿದ್ದ ಮಿಯಾ ಅಂಪೈರ್ ಡೇವಿಡ್ ಶೇಫರ್ಡ್‌ಗೆ ದೂರು ನೀಡಿದ್ದ ವೈಖರಿ ಯಿಂದಾಗಿ ಏಷ್ಯಾ ಖಂಡದ ಕ್ರಿಕೆಟ್ ಅಭಿಮಾನಿಗಳು ಬೇಸರಪಟ್ಟುಕೊಳ್ಳುವಂತಾಗಿತ್ತು.ಆ ಪಂದ್ಯವನ್ನು ಭಾರತ ಗೆದ್ದುಕೊಂಡಿದ್ದು ಇತಿಹಾಸ. ವಿಶ್ವಕಪ್ ಇತಿಹಾಸದಲ್ಲಿ ಭಾರತ ಎಂದಿಗೂ ಪಾಕಿಸ್ತಾನಕ್ಕೆ ಸೋತಿಲ್ಲ. ಕಟ್ಟಾ ಎದುರಾಳಿಯ ಗೆಲುವಿಗೆ ಹಲವು ಬಾರಿ ಸಚಿನ್ ಅಡ್ಡಗೋಡೆಯಾಗಿ ನಿಂತರು. ಆದರೆ ತಮ್ಮ ಕ್ರಿಕೆಟ್ ಜೀವನದಲ್ಲಿ ಒಂದು ವಿಶ್ವಕಪ್ ಅನ್ನು ಪಾಕ್‌ಗೆ ಗೆದ್ದುಕೊಟ್ಟಿದ್ದು ಮಿಯಾ ಹೆಗ್ಗಳಿಕೆಯಿದ್ದರೂ, ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಗೆಲ್ಲದ ಕೊರಗೂ ಅವರಿಗೆ ಇದ್ದೇ ಇದೆ. 1996ರ ವಿಶ್ವಕಪ್‌ನ ಬೆಂಗಳೂರಿನ ಕ್ವಾರ್ಟರ್‌ಫೈನಲ್‌ನಲ್ಲಿ ಶತಾಯಗತಾಯ ಗೆದ್ದು ಈ ಕೊರತೆ ತೀರಿಸಿಕೊಳ್ಳುವ ಕನಸು ಅವರಿಗೆ ಕೈಗೂಡಲೇ ಇಲ್ಲ.ಆಗ ಸಿದ್ಧು, ಜಡೇಜಾ, ಕನ್ನಡಿಗ ವೆಂಕಿ ಅಡ್ಡ ನಿಂತರು. ಅದೇ ಪಂದ್ಯದಲ್ಲಿ ಕ್ರಿಕೆಟ್ ಜೀವನಕ್ಕೆ ಮಿಯಾ ನಿವೃತ್ತಿ ಘೋಷಿಸಿದರು. ನಂತರ ಪಾಕ್ ಕ್ರಿಕೆಟ್ ಆಡಳಿತದಲ್ಲಿ ಪ್ರಭಾವಿ ವ್ಯಕ್ತಿಯಾಗಿ, ತಂಡದ ಕೋಚ್ ಆಗಿ ಕಾರ್ಯ ನಿರ್ವಸಿದ್ದಾರೆ. ಒಂದು ಕಾಲದಲ್ಲಿ ಸುನೀಲ್ ಗವಾಸ್ಕರ್, ವಿಂಡೀಸ್‌ನ ವಿವಿಯನ್ ರಿಚರ್ಡ್ಸ್, ಆಸ್ಟ್ರೇಲಿಯದ ಅಲನ್ ಬಾರ್ಡರ್, ಇಂಗ್ಲೆಂಡ್‌ನ ಗ್ರಹಾಂ ಗೂಚ್ ಸಾಲಿನಲ್ಲಿ  ನಿಲ್ಲುತ್ತಿದ್ದ ಮಿಯಾ ಬ್ಯಾಟಿಂಗ್ ಶೈಲಿಗೆ ತಲೆದೂಗದವರೇ ಇಲ್ಲ. ಆದರೆ ತಮ್ಮ ವಿಚಿತ್ರ ನಡವಳಿಕೆಗಳಿಂದ ಈಗ ಹೊರ ಬಂದಿದ್ದಾರೆ. ವಿಶಾಲ ಹೃದಯದಿಂದ ಕ್ರಿಕೆಟ್ ಅನ್ನು ‘ಭಾರತೀಯ’ ಆಟಗಾರರನ್ನು ಮುಕ್ತ ಕಂಠದಿಂದ ಪ್ರಶಂಸಿಸುವುದನ್ನು ಕಲಿತಿದ್ದಾರೆ.“ಸಚಿನ್ ಈಗ ತೋರುತ್ತಿರುವ ಅದ್ಭುತ ಪ್ರದರ್ಶನ ಮುಂದುವರಿಯಲಿ. ಅವರು ತಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಕಾಪಾಡಿಕೊಂಡು, ಗಾಯಗಳಿಂದ ರಕ್ಷಿಸಿಕೊಂಡರೆ 2015ರ ವಿಶ್ವಕಪ್ ಆಡಲು ಸಾಧ್ಯವಿದೆ. ಅಂತಹದೊಂದು ಕ್ಷಣವನ್ನು ನೋಡುವ ಆಸೆ ನನಗೂ ಇದೆ. ಇಂತಹ ಮಹಾನ್ ಕ್ರಿಕೆಟಿಗ ನನ್ನ ದಾಖಲೆ ದಾಟುವುದನ್ನು ನೋಡುವುದೇ ಸಂಭ್ರಮ” ಎಂದು ಸುದ್ದಿಸಂಸ್ಥೆಯ ಸಂದರ್ಶನದಲ್ಲಿ ಮಿಯಾ ಹೇಳಿದ ಅವರ ಧ್ವನಿಯಲ್ಲಿ ಒಂದಿಷ್ಟೂ ಅಳಕು ಅಥವಾ ನಾಟಕೀಯತೆ ಇರಲಿಲ್ಲ.ಕ್ರೀಡಾ ಮನೋಭಾವ, ರನ್ನುಗಳ ಸರಾಸರಿ, ದಾಖಲೆಗಳಲ್ಲಿ ಸಚಿನ್‌ಗೆ ಯಾರೂ ಸಾಟಿಯಿಲ್ಲ. ಕಟ್ಟಾ ವಿರೋಧಿಯೊಬ್ಬನ ಮನದಲ್ಲಿಯೂ ಇಂತಹ ಮೃದುಭಾವನೆ ಹುಟ್ಟುವಂತೆ ಮಾಡಿರುವ ‘ರನ್ನುಗಳ ಸಮುದ್ರ’ ಮುಂಬೈಕರ್  ಆಸ್ಟ್ರೇಲಿಯಾ- ನ್ಯೂಜಿಲೆಂಡ್‌ನಲ್ಲಿ ನಡೆಯುವ ವಿಶ್ವಕಪ್ ಟೂರ್ನಿಯಲ್ಲೂ ತಮ್ಮ ಬ್ಯಾಟಿಂಗ್ ಶಕ್ತಿ ತೋರಿಸಲಿ ಎನ್ನುವುದು ಅವರ ಅಭಿಮಾನಿಗಳ ಹಾರೈಕೆಯೂ ಹೌದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry