ಸೋಮವಾರ, ಏಪ್ರಿಲ್ 19, 2021
25 °C

ಬಡ್ಡಕಟ್ಟೆ: ತಾತ್ಕಾಲಿಕ ಸೇತುವೆ ನದಿಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಟ್ವಾಳ: ತಾಲ್ಲೂಕಿನಲ್ಲಿ ಪ್ರಸಕ್ತ ‘ಭಗವಾನ್‌ಕಟ್ಟೆ’ಯಾಗಿ ಮರು ನಾಮಕರಣಗೊಂಡಿರುವ ಬಡ್ಡಕಟ್ಟೆ ಹಳೆ ಸೇತುವೆಗೆ ಕೊನೆಗೂ ‘ಕಾಯಕಲ್ಪ’ ನೀಡಲಾಗುತ್ತಿದ್ದು, ಹಳೆ ಸೇತುವೆಯನ್ನು ಕೆಡಗುವ ಕೆಲಸ ಭರದಿಂದ ನಡೆಯುತ್ತಿದೆ. ಕೆಆರ್‌ಡಿಸಿ ಯೋಜನೆಯಡಿ ರೂ.30ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸೇತುವೆಯು ಬಂಟ್ವಾಳ ಪೇಟೆಯಿಂದ ಜಕ್ರಿಬೆಟ್ಟು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತದೆ.

ಈಗಾಗಲೇ ಧರ್ಮಸ್ಥಳ ಮತ್ತಿತರ ಕಡೆಗಳಿಗೆ ಸಂಚರಿಸಲು ಬಿ.ಸಿ.ರೋಡ್‌ನಿಂದ ನೇರವಾಗಿ ಬಂಟ್ವಾಳ ಬೈಪಾಸ್ ಮೂಲಕ ಜಕ್ರಿಬೆಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ಕಾರಿ ವೇಗದೂತ ಬಸ್ ಮತ್ತಿತರ ಘನ ವಾಹನಗಳು ಸಂಚರಿಸುತ್ತಿವೆ.ಬಂಟ್ವಾಳ ಪೇಟೆ ಮೂಲಕ ಹಾದು ಹೋಗುವ ವಾಮದಪದವು, ಸರಪಾಡಿ, ಕಕ್ಯಪದವು, ಕಾರಿಂಜ ಮತ್ತಿತರ ಕಡೆಗಳಿಗೆ ಸಂಚರಿಸಲು ಬಡ್ಡಕಟ್ಟೆ ನೇತ್ರಾವತಿ ಕಿರು ನದಿಗೆ ಸೇತುವೆ ಅನಿವಾರ್ಯವಾಗಿದೆ. ಸುಮಾರು 50ವರ್ಷಕ್ಕೂ ಮೊದಲು ನಿರ್ಮಾಣಗೊಂಡಿದ್ದ ಈ ಸೇತುವೆ ದುರ್ಬಲಗೊಂಡು ಘನವಾಹನ ಸಂಚಾರ ನಿಷೇಧಿಸಲಾಗಿದ್ದು, ಕುಸಿತದ ಭೀತಿ ಎದುರಾಗಿತ್ತು. ಈ ಬಗ್ಗೆ ‘ಪ್ರಜಾವಾಣಿ’ ಸಹಿತ ವಿವಿಧ ಮಾಧ್ಯಮಗಳಲ್ಲಿ ಬೆಳಕು ಚೆಲ್ಲಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು.ಇಲ್ಲಿನ ಪುರಸಭೆ ವ್ಯಾಪ್ತಿಯ ಈ ಸೇತುವೆ ಕಾಮಗಾರಿ ತ್ವರಿತಗೊಳಿಸುವ ಹಿನ್ನೆಲೆಯಲ್ಲಿ ಗುತ್ತಿಗೆದಾರರು ನಿರ್ಮಿಸಿದ್ದ ತಾತ್ಕಾಲಿಕ ಸೇತುವೆಗೆ ಪುರಸಭೆಯಿಂದಲೇ ಸಿಮೆಂಟಿನ ಬೃಹತ್ ಕೊಳವೆ ಪೈಪ್‌ಗಳನ್ನು ನೀಡಲಾಗಿದೆ ಎಂದು ಪುರಸಭಾಧ್ಯಕ್ಷ ಬಿ.ದಿನೇಶ ಭಂಡಾರಿ ತಿಳಿಸಿದರು.ಈ ಹಿಂದೆ ಸೇತುವೆಯಲ್ಲಿ ಒಂದು ವಾಹನ ಸಂಚರಿಸುತ್ತಿದ್ದರೆ, ನೂತನ ಸೇತುವೆ ಅಗಲವಾಗಿ ಏಕಕಾಲದಲ್ಲಿ ಎರಡೆರಡು ವಾಹನ ಸಂಚರಿಸಬಹುದು. ಸೇತುವೆ ಎರಡೂ ಬದಿ ಗುದ್ದು ಕಂಬಗಳ ಮೇಲೆ ಘನ ಛಾವಣಿ ನಿರ್ಮಾಣವಾಗುತ್ತದೆ. ಮಧ್ಯೆ ಭಾಗದಲ್ಲಿ ಇರುವ ಆಧಾರ ಸ್ತಂಭಕ್ಕೆ ಸರಳು ಸಹಿತ ಕಾಂಕ್ರೀಟ್ ಕವಚ ಅಳವಡಿಸಲಾಗುತ್ತಿದೆ ಎಂದು ಪುರಸಭಾ ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಹೇಳಿದರು.ಕಳೆದ ಮಳೆಗಾಲದಲ್ಲಿ ಈ  ತಾತ್ಕಾಲಿಕ ಸೇತುವೆ ಎರಡೆರಡು ಬಾರಿ ನದಿಪಾಲಾಗಿರುವ ಬಗ್ಗೆ ಸ್ಥಳೀಯರಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.ಎರಡೆರಡು ಬಾರಿ ಪ್ರಸ್ತಾವನೆ: ಈ ಸೇತುವೆಗೆ ರೂ.30ಲಕ್ಷ ಮತ್ತು ಪಾಣೆಮಂಗಳೂರು ಕಿರುಸೇತುವೆ ನಿರ್ಮಾಣಕ್ಕೆ ರೂ.50ಲಕ್ಷ ಮೊತ್ತದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿದ್ದೆ. ಇದೀಗ ಪಾಣೆಮಂಗಳೂರು ಸೇತುವೆ ಕೈಬಿಟ್ಟು ಬಡ್ಡಕಟ್ಟೆ ಸೇತುವೆಗೆ ಮಾತ್ರ ಅನುದಾನ ಮಂಜೂರಾಗಿದೆ ಎಂದು ಶಾಸಕ ಬಿ.ರಮಾನಾಥ ರೈ ತಿಳಿಸಿದರು. ಬಡ್ಡಕಟ್ಟೆ ಮತ್ತು ಇಲ್ಲಿಗೆ ಸಮೀಪದ ಕೊಟ್ರಮಣಗುಂಡಿ ಸೇತುವೆ ಕಾಮಗಾರಿಗೆ ಆದ್ಯತೆ ನೀಡುವಂತೆ ಆಗ್ರಹಿಸಿ ತಾನು ಸಚಿವನಾಗಿದ್ದ ವೇಳೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಪೈಕಿ ಕೊಟ್ರಮಣಗುಂಡಿ ಸೇತುವೆ ಈಗಾಗಲೇ ನಿರ್ಮಾಣಗೊಂಡಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.ಒಟ್ಟಿನಲ್ಲಿ ಈ ಸೇತುವೆ ಕಾಮಗಾರಿ ಪೂರ್ಣಗೊಂಡಲ್ಲಿ ಇಲ್ಲಿನ ನಿತ್ಯಾನಂದ ಭಜನಾ ಮಂದಿರಕ್ಕೆ ಆಗಮಿಸುವ ನೂರಾರು ಮಂದಿ ಭಕ್ತರಿಗೂ ಅನುಕೂಲಕರವಾಗಲಿದೆ ಎಂದು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಬಿ.ಮಂಜುನಾಥ ಸಪಲ್ಯ ತಿಳಿಸಿದ್ದಾರೆ.ಮೊದಲೇ ಕಿರಿದಾಗಿರುವ ಬಂಟ್ವಾಳ ಪೇಟೆಯಲ್ಲಿ ಇದೀಗ ವಾಹನ ಓಡಾಟಕ್ಕೆ ತೀರಾ ತೊಡಕಾಗಿದ್ದು, ಮುಂಬರುವ ಮಳೆಗಾಲಕ್ಕೆ ಮುಂಚಿತವಾಗಿ ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕು ಎಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ

  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.