ಬಡ್ಡಿರಹಿತ ಕೃಷಿ ಸಾಲ ನೀಡಲು ಚಿಂತನೆ

7

ಬಡ್ಡಿರಹಿತ ಕೃಷಿ ಸಾಲ ನೀಡಲು ಚಿಂತನೆ

Published:
Updated:
ಬಡ್ಡಿರಹಿತ ಕೃಷಿ ಸಾಲ ನೀಡಲು ಚಿಂತನೆ

ಬೆಂಗಳೂರು:  `ರಾಜ್ಯದ ರೈತರ ಹಿತಕಾಯುವ ಉದ್ದೇಶದಿಂದ ರೈತರಿಗೆ ಬಡ್ಡಿರಹಿತ ಕೃಷಿ ಸಾಲ ನೀಡುವ ಚಿಂತನೆ ಸರ್ಕಾರದ ಮುಂದಿದೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ `ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಅನುಭವ ಕಾರ್ಯಕ್ರಮದ ರಾಷ್ಟ್ರೀಯ ಕಾರ್ಯಾಗಾರ~ ಹಾಗೂ ಹಾಸನ ಜಿಲ್ಲೆಯ `ಮಡೆನೂರು ಜೈವಿಕ ಇಂಧನ ಪಾರ್ಕ್~ ಬಗ್ಗೆ ಮಾಹಿತಿ ನೀಡುವ ವೆಬ್‌ಸೈಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ರಾಜ್ಯ ಸರ್ಕಾರ ರೈತರ ಹಿತದೃಷ್ಟಿಯಿಂದ ರೈತರ ಕೃಷಿ ಸಾಲದ ಬಡ್ಡಿದರವನ್ನು ಶೇಕಡಾ ಮೂರರಿಂದ ಒಂದಕ್ಕೆ ಇಳಿಸಿದೆ. ಈ ಬಡ್ಡಿದರವೂ ರೈತರಿಗೆ ಹೊರೆಯಾಗಬಾರದು ಎಂಬ ಉದ್ದೇಶದಿಂದ ಬಡ್ಡಿರಹಿತ ಕೃಷಿ ಸಾಲ ನೀಡುವ ಆಲೋಚನೆ ಸರ್ಕಾರದ ಮುಂದಿದೆ. ರೈತರ ಮೇಲೆ ಯಾವುದೇ ಆರ್ಥಿಕ ಹೊರೆ ಬೀಳಬಾರದು ಎಂಬುದು ಸರ್ಕಾರದ ಚಿಂತನೆ~ ಎಂದು ತಿಳಿಸಿದರು.`ಕೃಷಿ ವಿಜ್ಞಾನವನ್ನು ಕಲಿಯುವ ವಿದ್ಯಾರ್ಥಿಗಳಿಗೆ ಪಠ್ಯ ಜ್ಞಾನದ ಜೊತೆಗೆ ಪ್ರಾಯೋಗಿಕ ಜ್ಞಾನದ ಕಲಿಕೆ ಹೆಚ್ಚು ಪರಿಪೂರ್ಣತೆಯನ್ನು ನೀಡುತ್ತದೆ. ವಿಶ್ವವಿದ್ಯಾಲಯಗಳಲ್ಲಿ ಕೃಷಿ ವಿಷಯಗಳನ್ನು ಕಲಿತರೂ ಕೆಲವೊಮ್ಮೆ ಅದನ್ನು ಕಾರ್ಯರೂಪಕ್ಕೆ ತರುವುದು ಕೃಷಿ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ. ಹೀಗಾಗಿ ಕೃಷಿ ವಿದ್ಯಾರ್ಥಿಗಳು ರೈತರ ಜೊತೆಗೆ ಹೆಚ್ಚು ಒಡನಾಡುವುದು ಅವರ ಕಲಿಕೆಗೆ ಹಾಗೂ ಕೃಷಿ ಸಂಶೋಧನೆಗೆ ಪೂರಕವಾಗಲಿದೆ.

 
ವಿನಾಕಾರಣ ಗೊಂದಲ

ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, `ಕೇಂದ್ರದಿಂದ ರಾಜ್ಯಕ್ಕೆ ಆಗಮಿಸಿರುವ ಬರ ಅಧ್ಯಯನ ತಂಡವನ್ನು ರಾಜ್ಯದ ಸಚಿವರು ಭೇಟಿ ಮಾಡಲಿಲ್ಲ ಎಂದು ಮಾಧ್ಯಮಗಳು ವಿನಾಕಾರಣ ಗೊಂದಲ ಸೃಷ್ಟಿಸುತ್ತಿವೆ. ಆದರೆ ವಾಸ್ತವವಾಗಿ ಬರ ಅಧ್ಯಯನ ತಂಡವನ್ನು ಸಚಿವರು ಭೇಟಿ ಮಾಡುವ ಅಗತ್ಯವಿಲ್ಲ. ಬರ ಅಧ್ಯಯನ ತಂಡದ ಅಧಿಕಾರಿಗಳು ಸ್ವತಂತ್ರವಾಗಿ ಬರದ ಸ್ಥಿತಿಗತಿಗಳ ಅಧ್ಯಯನ ನಡೆಸಬೇಕಾಗುತ್ತದೆ. ಆದರೆ ಮಾಧ್ಯಮಗಳು ಸಚಿವರು ತಂಡವನ್ನು ಭೇಟಿ ಮಾಡದ ವಿಚಾರವನ್ನೇ ದೊಡ್ಡದ್ದು ಮಾಡಿ ವಿವಾದ ಸೃಷ್ಟಿಸುತ್ತಿವೆ ಎಂದರು.

ಮಾಧ್ಯಮಗಳು ಕೇವಲ ವಿವಾದಗಳಿಗಷ್ಟೇ ಪ್ರಾಮುಖ್ಯತೆ ನೀಡದೇ ಅಭಿವೃದ್ಧಿಯ ಪರವಾದ ಕೆಲಸಗಳ ಬಗ್ಗೆಯೂ ದೃಷ್ಟಿ ಹರಿಸಬೇಕು~ ಎಂದು ಅವರು ಹೇಳಿದರು.

ರೈತರೊಂದಿಗೆ ಕ್ಷೇತ್ರಕಾರ್ಯದಲ್ಲಿ ತೊಡಗುವ ಮೂಲಕ ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ನೇರವಾಗಿ ಅರಿಯಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಅನುಭವದ ಕಾರ್ಯಕ್ರಮ ಮಹತ್ವದ್ದಾಗಿದೆ.

 

ಇದಕ್ಕಾಗಿ ರಾಜ್ಯ ಸರ್ಕಾರ ಪ್ರತಿ ವಿದ್ಯಾರ್ಥಿಗೆ, ತಿಂಗಳಿಗೆ 1500 ರೂಪಾಯಿ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ~ ಎಂದು ಅವರು ತಿಳಿಸಿದರು.`ಇಲ್ಲಿಯವರೆಗೆ 43 ಬರ ಪೀಡಿತ ತಾಲ್ಲೂಕುಗಳಲ್ಲಿ ಜಾರಿಯಲ್ಲಿದ್ದ `ಭೂ ಚೇತನ~ ಕಾರ್ಯಕ್ರಮವನ್ನು ನೀರಾವರಿ ಪ್ರದೇಶಗಳ 25 ಸಾವಿರ ಹೆಕ್ಟೇರ್ ಭೂಮಿಗೂ ವಿಸ್ತರಿಸುವ ಬಗ್ಗೆ ಚಿಂತನೆ ನಡೆದಿದೆ. ಕೃಷಿ ಉತ್ಪಾದನೆ ಹಾಗೂ ಮಾರುಕಟ್ಟೆ ಅಭಿವೃದ್ಧಿಗಾಗಿ 1.10 ಲಕ್ಷ ಕೋಟಿ ರೂಪಾಯಿಗಳ ಒಡಂಬಡಿಕೆಗೆ ವಿದೇಶಿ ಕಂಪೆನಿಗಳ ಜೊತೆಗೆ ಸಹಿ ಹಾಕಲಾಗಿದೆ~ ಎಂದರು.`ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳಿಂದ ಕೃಷಿಗಾಗಿಯೇ ಪ್ರತ್ಯೇಕ ಬಜೆಟ್ ರೂಪಿಸುತ್ತಿದೆ. ಈ ವರ್ಷ 1,96,000 ರೈತರಿಗೆ ಸುವರ್ಣ ಭೂಮಿ ಯೋಜನೆಯಡಿ ಸಹಾಯಧನ ನೀಡಲಾಗಿದೆ. ರೈತರಿಗೆ ಹೊಸ ತಂತ್ರಜ್ಞಾನಗಳ ಬಗ್ಗೆ ತಿಳುವಳಿಕೆ ನೀಡಲು ಈ ವರೆಗೆ 841 ರೈತರನ್ನು ಚೀನಾ ಹಾಗೂ 190 ರೈತರನ್ನು ಇಸ್ರೇಲ್ ದೇಶಗಳಿಗೆ ಅಧ್ಯಯನ ಪ್ರವಾಸ ಕಳುಹಿಸಲಾಗಿತ್ತು. ಸರ್ಕಾರ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದಕ್ಕೆ ಈ ಕಾರ್ಯಕ್ರಮಗಳೇ ಉದಾಹರಣೆ~ ಎಂದರು.ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ವೈ.ಬಿ.ರಾಮಕೃಷ್ಣ ಮಾತನಾಡಿ, `ಪ್ರತಿ ಜಿಲ್ಲೆಯಲ್ಲೂ ಜೈವಿಕ ಇಂಧನ ತಯಾರಿಕೆಯ ಬಗ್ಗೆ ಮಾಹಿತಿ ನೀಡುವ ಮಾದರಿ ಹಾಗೂ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಜೈವಿಕ ಇಂಧನ ತಯಾರಿಕೆಯ ಘಟಕಗಳನ್ನು ಸ್ಥಾಪಿಸಿ ಇಂಧನ ಸ್ವಾವಲಂಬನೆಯನ್ನು ಸಾಧಿಸುವ ಉದ್ದೇಶ ಮಂಡಳಿಯ ಮುಂದಿದೆ~ ಎಂದರು. ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ನಾರಾಯಣಗೌಡ ಮಾತನಾಡಿ, `ಕೃಷಿ ವಿದ್ಯಾರ್ಥಿಗಳಿಗೆ ಕೃಷಿಯ ತಳಮಟ್ಟದ ಸಮಸ್ಯೆಗಳೂ ತಿಳಿಯಬೇಕು ಎಂಬ ಉದ್ದೇಶದಿಂದ ಗ್ರಾಮೀಣ ಕೃಷಿ ಅನುಭವ ಕಾರ್ಯಕ್ರಮವನ್ನು ಆರು ವರ್ಷಗಳ ಹಿಂದೆ ರೂಪಿಸಲಾಯಿತು. ಸದ್ಯ ಕೃಷಿ ಪದವಿಯ ಎಂಟನೇ ಸೆಮಿಸ್ಟರ್‌ನಲ್ಲಿರುವ ಈ ಕಾರ್ಯಕ್ರಮವನ್ನು ಏಳನೇ ಸೆಮಿಸ್ಟರ್‌ಗೇ ಅಳವಡಿಸುವ ಬಗ್ಗೆ ವಿಶ್ವವಿದ್ಯಾಲಯ ಚಿಂತನೆ ನಡೆಸುತ್ತಿದೆ~ ಎಂದರು.ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಉಪ ಮಹಾ ನಿರ್ದೇಶಕ ದೇವ ಕುಮಾರ್ ಮಾತನಾಡಿ, `ರಾಜ್ಯ ಸರ್ಕಾರ ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನಿಡುತ್ತಿದ್ದು, ಕೃಷಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಮೌಲ್ಯಯುತ ವಿದ್ಯಾರ್ಥಿ ವೇತನವನ್ನೂ ನೀಡುತ್ತಿರುವುದು ಶ್ಲಾಘನೀಯ.ದೇಶದಲ್ಲಿ ಈ ವರೆಗೆ ಒಟ್ಟು ಏಳು ಸಾವಿರ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಅನುಭವ ಕಾರ್ಯಕ್ರಮದ ಮೂಲಕ ಕೃಷಿಯ ನಿಜ ಸ್ವರೂಪವನ್ನು ತಿಳಿಯುವ ಪ್ರಯತ್ನ ಮಾಡಿದ್ದಾರೆ. ಕೃಷಿ ವಿದ್ಯಾರ್ಥಿಗಳು ಕೇವಲ ಅಧ್ಯಯನಕ್ಕಷ್ಟೇ ಸೀಮಿತವಾಗದೇ ರೈತರೊಂದಿಗೆ ಒಡನಾಟವಿಟ್ಟುಕೊಂಡು ಕೃಷಿಯ ತಳಮಟ್ಟದ ಸಮಸ್ಯೆಗಳನ್ನು ಅರಿತು, ಪರಿಹಾರ ಕಂಡುಕೊಳ್ಳುವ ಕೆಲಸದಲ್ಲಿ ತೊಡಗಬೇಕು~ ಎಂದು ಕರೆ ನೀಡಿದರು.

ಕೃಷಿ ಹಾಗೂ ಆಹಾರ ಸಂಸ್ಕರಣಾ ಸಚಿವ ಉಮೇಶ್ ವಿ. ಕತ್ತಿ, ಕೃಷಿ ವಿಶ್ವವಿದ್ಯಾಲಯದ ಕುಲಸಚಿವ ಎಚ್. ವಿ.ನಂಜಪ್ಪ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry