ಬಡ್ಡಿ ದರ ಮತ್ತೆ ಹೆಚ್ಚಳ?

7

ಬಡ್ಡಿ ದರ ಮತ್ತೆ ಹೆಚ್ಚಳ?

Published:
Updated:

ಮುಂಬೈ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ಹಣಕಾಸು ನೀತಿಯ ದ್ವಿತೀಯ ತ್ರೈಮಾಸಿಕದ ಪರಾಮರ್ಶೆ ನಡೆಸಲಿದ್ದು, ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಮತ್ತೆ ಹೆಚ್ಚಿಸುವ ನಿರೀಕ್ಷೆ ಇದೆ.ಗರಿಷ್ಠ ಮಟ್ಟದಲ್ಲಿ ಇರುವ ಆಹಾರ ಹಣದುಬ್ಬರ ಮತ್ತು ವಾರ್ಷಿಕ ಹಣದುಬ್ಬರಗಳಿಗೆ ಕಡಿವಾಣ ವಿಧಿಸಲು `ಆರ್‌ಬಿಐ~ ಈ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಬ್ಯಾಂಕಿಂಗ್ ವಲಯ ನಿರೀಕ್ಷಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ದರವನ್ನು ಶೇ 8ರಿಂದ ಶೇ  7.5ಕ್ಕೆ ಅಂದಾಜಿಸುವ ಸಾಧ್ಯತೆಗಳೂ ಇವೆ.ಸಾಲದ ಬೇಡಿಕೆ ಹೆಚ್ಚಿಸಲು ಮತ್ತು ಬ್ಯಾಂಕ್‌ಗಳ ವಸೂಲಾಗದ ಸಾಲದ ಪ್ರಕರಣಗಳನ್ನು ತಗ್ಗಿಸಲು ಬ್ಯಾಂಕ್ ಬಡ್ಡಿ ದರ ಹೆಚ್ಚಳ ನಿರ್ಧಾರ ಕೈಬಿಡಬೇಕು ಎಂದು ಬ್ಯಾಂಕ್‌ಗಳ ಮುಖ್ಯಸ್ಥರು ಕೇಂದ್ರೀಯ ಬ್ಯಾಂಕ್‌ಗೆ ಸಲಹೆ ನೀಡಿದ್ದರೂ ಅದು ಕಾರ್ಯರೂಪಕ್ಕೆ ಬರುವ ಸಾಧ್ಯತೆ ಕಡಿಮೆ. ಅಲ್ಪಾವಧಿ ಬಡ್ಡಿ ದರಗಳಾದ ರೆಪೊ ಮತ್ತು ರಿವರ್ಸ್ ರೆಪೊಗಳು ಮತ್ತೆ ಶೇ 0.25ರಷ್ಟು ಹೆಚ್ಚುವ ಸಾಧ್ಯತೆಗಳು ಹೆಚ್ಚಿಗೆ ಇವೆ ಎಂದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ಎಂ. ಕೆ. ಟಂಕಸಾಲೆ ಅಭಿಪ್ರಾಯಪಟ್ಟಿದ್ದಾರೆ.ಬೆಲೆ ಏರಿಕೆಗೆ ಕಡಿವಾಣ ಹಾಕಲು ಕಠಿಣ ಹಣಕಾಸು ನೀತಿ ಮುಂದುವರೆಸುವ ಅಗತ್ಯ ಇದೆ ಎಂದು ವಿಜಯ ಬ್ಯಾಂಕ್ ಅಧ್ಯಕ್ಷ ಎಚ್. ಎಸ್. ಉಪೇಂದ್ರ ಕಾಮತ್ ಹೇಳಿದ್ದಾರೆ.2010ರ ಮಾರ್ಚ್ ತಿಂಗಳಿನಿಂದೀಚೆಗೆ `ಆರ್‌ಬಿಐ~ ಶೇ 3.50ರಷ್ಟು ಬಡ್ಡಿ ದರಗಳನ್ನು ಹೆಚ್ಚಿಸಿದೆ.  ಆದರೆ, ಇದರಿಂದ ನಿರೀಕ್ಷಿಸಿದ ಫಲಿತಾಂಶ ಕಂಡು ಬಂದಿಲ್ಲ.  ಆದರೆ, ಇದರಿಂದ ಆರ್ಥಿಕ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮಗಳು ಕಂಡು ಬಂದಿವೆ. ಕಳೆದ ಕೆಲ ತಿಂಗಳುಗಳಿಂದ ಕೈಗಾರಿಕಾ ಉತ್ಪಾದನೆಯು ಕುಂಠಿತಗೊಂಡಿದೆ.

ಒಂದು ವೇಳೆ ಈ ಬಾರಿಯೂ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಿದರೆ, 30 ತಿಂಗಳಲ್ಲಿ 13ನೇ ಬಾರಿಗೆ ಇಂತಹ ನಿರ್ಧಾರ ಕೈಗೊಂಡಂತೆ ಆಗಲಿದೆ.ಡಾಲರ್ ಎದುರು ರೂಪಾಯಿ ಬೆಲೆ ಕುಸಿಯುತ್ತಿರುವುದರಿಂದ ಹಣದುಬ್ಬರದ ಮೇಲೆ ಇನ್ನಷ್ಟು ಒತ್ತಡ ಹೆಚ್ಚಿದೆ. ಕೈಗಾರಿಕಾ ವೃದ್ಧಿ ಕುಂಠಿತಗೊಂಡಿರುವುದು ಮತ್ತು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ `ಆರ್‌ಬಿಐ~ ಎದುರು ಸೀಮಿತ ಆಯ್ಕೆಗಳಿವೆ.ದೇಶದಲ್ಲಿ ಬ್ಯಾಂಕ್ ಬಡ್ಡಿ ದರಗಳನ್ನು ಕಡಿಮೆ ಮಟ್ಟಕ್ಕೆ ಇಳಿಸುವುದು ನಮ್ಮ ಉದ್ದೇಶವಾಗಿದ್ದರೂ ಅದಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ ಎಂದು ಆರ್‌ಬಿಐ ಗವರ್ನರ್ ಡಿ. ಸುಬ್ಬರಾವ್ ಈ ಮೊದಲೇ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry