ಬಡ್ತಿ ಮೀಸಲಾತಿ ಮಸೂದೆ ಮಂಡನೆ

7
ಸಮಾಜವಾದಿ ಪಕ್ಷ ವಿರೋಧ, ಸೋಮವಾರ ಮತಕ್ಕೆ?

ಬಡ್ತಿ ಮೀಸಲಾತಿ ಮಸೂದೆ ಮಂಡನೆ

Published:
Updated:

ನವದೆಹಲಿ (ಪಿಟಿಐ): ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ವಿವಾದಾತ್ಮಕ ಮಸೂದೆಯನ್ನು ಕೊನೆಗೂ ರಾಜ್ಯಸಭೆ ಗುರುವಾರ ಚರ್ಚೆಗೆ ತೆಗೆದುಕೊಂಡಿತು.ಸಂವಿಧಾನದ 117ನೇ ತಿದ್ದುಪಡಿ ಮಸೂದೆಯನ್ನು ಮಂಡಿಸಿದ ಸಿಬ್ಬಂದಿ ಖಾತೆ ರಾಜ್ಯ ಸಚಿವ ವಿ. ನಾರಾಯಣಸ್ವಾಮಿ, ಎಸ್‌ಸಿ ಮತ್ತು ಎಸ್‌ಟಿ ನೌಕರರು ಸರ್ಕಾರಿ ಉದ್ಯೋಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದಿರುವುದರಿಂದ ಮತ್ತು ಈ ವರ್ಗದ ಜನರು ಹಿಂದುಳಿದಿರುವುದಿಂದ ಈ ಮಸೂದೆ ಅತ್ಯಂತ ಪ್ರಮುಖವಾದದ್ದು ಎಂದರು.ಬಿಎಸ್‌ಪಿ, ಸಿಪಿಎಂ, ಸಿಪಿಐ, ಟಿಎಂಸಿ ಮತ್ತು ಜೆಡಿಯು ಬೆಂಬಲ ಸೂಚಿಸಿದರೆ, ಎಸ್‌ಪಿ ಮಸೂದೆಯನ್ನು ವಿರೋಧಿಸಿತು. ಮಸೂದೆಯನ್ನು ಸೋಮವಾರ ಮತಕ್ಕೆ ಹಾಕುವ ಸಾಧ್ಯತೆ ಇದೆ.ಇದಕ್ಕೂ ಮೊದಲು, ಎಸ್‌ಪಿ ಸದಸ್ಯರು ತೀವ್ರ ಗದ್ದಲ ಮಾಡಿದರು. ಈ ಸಂದರ್ಭದಲ್ಲಿ ಸಭಾಧ್ಯಕ್ಷರು ಇಬ್ಬರು ಸದಸ್ಯರನ್ನು ಹೊರಹೋಗುವಂತೆ ಸೂಚಿಸಿದರು. ಇದು ವಾದ ಮತ್ತು ಪ್ರತಿವಾದಗಳಿಗೆ ಎಡೆಮಾಡಿಕೊಟ್ಟಿತು. ಕಡೆಗೆ ಎಸ್‌ಪಿ ಎಲ್ಲಾ ಸದಸ್ಯರು ಸಭಾತ್ಯಾಗ ಮಾಡಿದರು.ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಮಾತನಾಡಿ, ಮಸೂದೆ ಅಂಗೀಕಾರವಾಗುವ ಅವಶ್ಯಕತೆ ಇದೆ ಎಂದರು. ಮಸೂದೆಗೆ ಒಪ್ಪಿಗೆ ಸೂಚಿಸಿದ  ಪ್ರತಿಪಕ್ಷದ ನಾಯಕ ಅರುಣ್‌ಜೇಟ್ಲಿ, ಕೆಲವು ಮಾರ್ಪಾಡುಗಳನ್ನು ಮಾಡಬೇಕೆಂದೂ ಸಲಹೆ ಇತ್ತರು.ಈ ಮಧ್ಯೆ, ಬೆಳಿಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಅವರನ್ನು ಭೇಟಿ ಮಾಡಿ ಮಸೂದೆ ಕುರಿತು ಮನವೊಲಿಸಲು ಯತ್ನಿಸಿದರು. ಆದರೆ ಪಕ್ಷ ಮಸೂದೆಯನ್ನು ವಿರೋಧಿಸುತ್ತದೆ ಎಂದು ಮುಲಾಯಂ ಪ್ರಧಾನಿ ಅವರಿಗೆ ಸ್ಪಷ್ಟಪಡಿಸಿದರು.ನೌಕರರ ದಿಢೀರ್ ಮುಷ್ಕರ

ಲಖನೌ ವರದಿ: ಈ ಮಧ್ಯೆ ಮಸೂದೆಯನ್ನು `ಬಲವಂತವಾಗಿ ಅಂಗೀಕರಿಸಲು' ಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಉತ್ತರಪ್ರದೇಶ ಸರ್ಕಾರದ ಸುಮಾರು 18 ಲಕ್ಷ ನೌಕರರು ಮತ್ತು ಅಧಿಕಾರಿಗಳು ಗುರುವಾರ ಕೆಲಸ ಬಹಿಷ್ಕರಿಸಿ ದಿಢೀರ್ ಮುಷ್ಕರ ಕೈಗೊಂಡರು.ಪ್ರತಿಭಟನಾಕಾರರು ಮಸೂದೆ ವಿರೋಧಿಸಿ ರ‌್ಯಾಲಿ ನಡೆಸಿದರು. ವಿಧಾನಸಭೆ ಬಳಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಶುಕ್ರವಾರ ಧರಣಿ ನಡೆಸಲಾಗುವುದು ಎಂದು ಸರ್ವಜನ ಹಿತ ಸಂರಕ್ಷಣ ಸಮಿತಿಯ ಅಧ್ಯಕ್ಷ ಶೈಲೇಂದ್ರ ದುಬೆ ಹೇಳಿದ್ದಾರೆ.ಸಭಾಧ್ಯಕ್ಷರಲ್ಲಿ ವಿಶ್ವಾಸ: ಮಾಯಾವತಿ

ಉಪರಾಷ್ಟ್ರಪತಿಯೂ ಆದ ರಾಜ್ಯಸಭಾಧ್ಯಕ್ಷ ಹಮೀದ್ ಅನ್ಸಾರಿ ಅವರ ಬಗ್ಗೆ ಗೌರವವಿದೆ ಮತ್ತು ಅವರಲ್ಲಿ ವಿಶ್ವಾಸವೂ ಇದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಗುರುವಾರ ಹೇಳಿದ್ದಾರೆ. ಆದರೆ, ನೇರವಾಗಿ ಅನ್ಸಾರಿ ಅವರ ಕ್ಷಮೆಯನ್ನು ಅವರು ಕೋರಿಲ್ಲ.ರಾಜ್ಯಸಭೆ ಕಲಾಪವನ್ನು ಸುಸೂತ್ರವಾಗಿ ನಡೆಸಲು ಅನ್ಸಾರಿ ಅವರು ವಿಫಲರಾಗಿದ್ದಾರೆ ಎಂದು ಮಾಯಾವತಿ ಬುಧವಾರವಷ್ಟೆ ಸದನದಲ್ಲಿ ಹರಿಹಾಯ್ದಿದ್ದರು.ಈ ಮಧ್ಯೆ, ಹಮೀದ್ ಅನ್ಸಾರಿ ಅವರ ಬಗ್ಗೆ ರಾಜ್ಯಸಭೆ  ವಿಶ್ವಾಸ ವ್ಯಕ್ತಪಡಿಸಿದೆ. ಪ್ರಧಾನಿ ಮನಮೋಹನ್ ಸಿಂಗ್, ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ, ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಅವರು ಅನ್ಸಾರಿ ಅವರ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry