ಬಡ್ತಿ ಮೀಸಲಾತಿ ಸಮಸ್ಯೆ

7

ಬಡ್ತಿ ಮೀಸಲಾತಿ ಸಮಸ್ಯೆ

Published:
Updated:

ಪರಿಶಿಷ್ಟ ಜಾತಿ ಮತ್ತು ಪಂಗಡದ (ಎಸ್.ಸಿ., ಎಸ್.ಟಿ.) ಸರ್ಕಾರಿ ನೌಕರರ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ, ಸಂಸತ್ತಿನಲ್ಲಿ ಮಂಡನೆಯಾದ  ಒಂದು ಐತಿಹಾಸಿಕ ಮಸೂದೆ, ಈಗ ದೇಶಾದ್ಯಂತವೂ ಚರ್ಚಾಸ್ಪದ ವಿಷಯವೆನಿಸಿದೆ. ಸಾಮಾಜಿಕ ನ್ಯಾಯತತ್ವದ ಇಂಥ ಸಾಂವಿಧಾನಿಕ ವಿಷಯವನ್ನು ಕುರಿತಂತೆ ಪರ ಮತ್ತು ವಿರುದ್ಧದ ಚರ್ಚೆ ಸ್ವಾಭಾವಿಕ. ಆದರೆ, ಅದೇ ಎಸ್.ಸಿ., ಎಸ್.ಟಿ., ಸರ್ಕಾರಿ ನೌಕರರ ಬಡ್ತಿ ಮೀಸಲಾತಿ ಮಸೂದೆ ರಾಷ್ಟ್ರವಿರೋಧಿ ಮತ್ತು ಸಂವಿಧಾನವಿರೋಧಿ ಮಸೂದೆಯಾಗಿದೆ ಎಂಬ ಸಮಾಜವಾದಿ ಪಕ್ಷದ ಅಧ್ಯಕ್ಷರಾದ ಮುಲಾಯಂಸಿಂಗ್ ಯಾದವ್‌ರವರ ಅಭಿಪ್ರಾಯ ಮಾತ್ರ, ಶತಮೂರ್ಖತನದಿಂದ ತುಂಬಿದೆ.ಹಾಗಾದರೆ, ಈ ರೀತಿಯ ಬಡ್ತಿ ಮೀಸಲಾತಿ ನೀತಿಯು ರಾಷ್ಟ್ರವಿರೋಧಿ ಮತ್ತು ಸಂವಿಧಾನ ವಿರೋಧಿಯೇ ಆದ ಪಕ್ಷದಲ್ಲಿ, ಭಾರತ ಸಂವಿಧಾನವು ಪ್ರತಿಪಾದಿಸುವ ಮೀಸಲಾತಿ ನೀತಿಯೂ ರಾಷ್ಟ್ರವಿರೋಧಿಯೂ ಸಂವಿಧಾನ ವಿರೋಧಿ ನೀತಿಯೇ ಆಗಿರಬೇಕಲ್ಲವೆ? ಅಂದಮೇಲೆ, ಮೂಲತಃ ಹಿಂದುಳಿದ ಯಾದವ ಜಾತಿಗೆ ಸೇರಿದ ಮುಲಾಯಂಸಿಂಗ್ ಯಾದವ್, ಭಾರತ ಸಂವಿಧಾನವನ್ನೇ ವಿರೋಧಿಸಬೇಕಲ್ಲವೆ? ವಾಸ್ತವವಾಗಿ, ಈ ಮಸೂದೆಯನ್ನು ಅಂಗೀಕರಿಸುವುದು, ಅಥವಾ ತಿರಸ್ಕರಿಸುವುದು ಲೋಕಸಭೆ ಪರಮಾಧಿಕಾರ. ಆದರೆ, ಈ ಮಸೂದೆಯೇ ರಾಷ್ಟ್ರವಿರೋಧಿ ಮತ್ತು ಸಂವಿಧಾನ ವಿರೋಧಿ ಎನ್ನುವ ಮುಲಾಯಂಸಿಂಗ್ ಯಾದವ್‌ರಂಥ ಸಾಮಾಜಿಕ ನ್ಯಾಯವಿರೋಧಿಗಳು  ರಾಷ್ಟ್ರಮಟ್ಟದ ರಾಜಕಾರಣ ದಲ್ಲಿರುವುದು ಸಂವಿಧಾನ ತತ್ವಕ್ಕೇ ಅಪಮಾನ. ಸದ್ಯ, ಈ ವಿಷಯದಲ್ಲಿ ಕಾಂಗ್ರೆಸ್‌ನ ಯಾವ ನಾಯಕರೂ ಪ್ರತಿಕ್ರಿಯಿಸದಿರುವುದು ಸಾಮಾಜಿಕ ಪ್ರಜ್ಞಾವಂತಿಕೆಯ ಸಂಕೇತ.ಎಸ್.ಸಿ., ಎಸ್.ಟಿ., ಸರ್ಕಾರಿ ನೌಕರರ ಈ ಬಡ್ತಿ ಮೀಸಲಾತಿ ಮಸೂದೆಯನ್ನು, ಮುಲಾಯಂಸಿಂಗ್ ಯಾದವ್ ವಿರೋಧಿಸುತ್ತಿರುವುದಕ್ಕೆ, ಒಂದು ಸ್ಥಳೀಯ ರಾಜಕೀಯ ಕಾರಣವಂತೂ ಇದ್ದೇ ಇದೆ. ಒಂದು ವೇಳೆ, ಅವರು ಈ ಮಸೂದೆಯನ್ನು ಲೋಕಸಭೆಯಲ್ಲಿ ಬೆಂಬಲಿಸಿದ್ದೇ ಆದರೆ, ಆ ಮಸೂದೆಯ ರಾಜಕೀಯ ಲಾಭ, ಬಿ.ಎಸ್.ಪಿ. ನಾಯಕಿ ಮಾಯಾವತಿಗೆ ಹೋಗಬಹುದೆಂಬುದು ಅವರ ರಾಜಕೀಯ ಲೆಕ್ಕಾಚಾರ. ಏಕೆಂದರೆ, ಮಾಯಾವತಿ ಮತ್ತು ಮುಲಾಯಂಸಿಂಗ್ ಯಾದವ್ ಇಬ್ಬರೂ ಉತ್ತರ ಪ್ರದೇಶದವರೇ ಅಲ್ಲವೆ? ಹಾಗೆ ನೋಡಿದರೆ, ಈ ಮಸೂದೆಯನ್ನು ವಿರೋಧಿಸಲು ಬೇಕಾದಷ್ಟು ಬೇರೆ ಬೇರೆ ರಾಜಕೀಯ ತಂತ್ರಗಳೇ ಸಾಧ್ಯವಿದೆ. ಆದರೆ, ರಾಷ್ಟ್ರಮಟ್ಟದ ರಾಜಕಾರಣದಲ್ಲಿರುವ ಇಂಥವರು, ಈ ಮಸೂದೆಯೇ ರಾಷ್ಟ್ರವಿರೋಧಿ ಮತ್ತು ಸಂವಿಧಾನ ವಿರೋಧಿ ಎಂದು ಟೀಕಿಸುವುದರಿಂದ, ಮುಲಾಯಂಸಿಂಗ್ ಯಾದವ್ ಎಂಥ ರಾಷ್ಟ್ರವಿರೋಧಿ ಮತ್ತು ಸಂವಿಧಾನವಿರೋಧಿ ರಾಜಕಾರಣಿ ಎಂಬುದು ಅತ್ಯಂತ ಸುಲಭವಾಗಿಯೇ ಇದರಿಂದ ಮನದಟ್ಟಾಗುವುದಿಲ್ಲವೆ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry