ಬುಧವಾರ, ಮೇ 12, 2021
18 °C

ಬಡ ಮಕ್ಕಳಿಗೆ ಶಿಕ್ಷಣ ಸೌಲಭ್ಯದ ಅಗತ್ಯವಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಶಿಕ್ಷಣ ಪಡೆಯಲು ಅಸಮರ್ಥರಾದ ಬಡ ಮಕ್ಕಗಳಿಗೆ ಶಿಕ್ಷಣ ಸೌಲಭ್ಯ ಕಲ್ಪಿಸಬೇಕಾದ ಅಗತ್ಯವಿದೆ~ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಸಲಹೆ ನೀಡಿದರು.ನಗರದ ಚಾಮರಾಜಪೇಟೆಯ `ಆದರ್ಶ ವಿದ್ಯಾ ಸಂಘ~ಕ್ಕೆ 40 ವಸಂತಗಳು ತುಂಬಿದ ಪ್ರಯುಕ್ತ ನಗರದ ಅರಮನೆ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ `ಆದರ್ಶ ಉತ್ಸವ~ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, `ನಾವು ಮಾಡುವ ಸೇವೆ ಬಡವರನ್ನು ತಲುಪಬೇಕು.ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಮಾತ್ರಕ್ಕೇ ತೃಪ್ತರಾಗಬಾರದು. ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ ಆರ್ಥಿಕ ನೆರವನ್ನು ನೀಡಬೇಕು~ ಎಂದು ಸಲಹೆ ನೀಡಿದರು.`ಕರ್ನಾಟಕಕ್ಕೆ ಜೈನರ ಕೊಡುಗೆ ಸಾಕಷ್ಟಿದೆ. ಹಲವಾರು ಸಂಘ ಸಂಸ್ಥೆಗಳ ಮೂಲಕ ರಾಜ್ಯದಲ್ಲಿ ಹಲವು ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಶಿಕ್ಷಣವನ್ನೂ ನೀಡುತ್ತಿದ್ದಾರೆ~ ಎಂದು ಶ್ಲಾಘಿಸಿದರು.`ಮಹಾತ್ಮ ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಅಹಿಂಸೆಯನ್ನು ಒಂದು ಅಸ್ತ್ರವನ್ನಾಗಿ ಪ್ರಯೋಗಿಸಿದರು. ಅದನ್ನು ಲೋಕಕ್ಕೆ ನೀಡಿದ್ದು ಭಗವಾನ್ ಮಹಾವೀರರು. ಆ ಪರಂಪರೆಯ ಹಲವಾರು ಮುನಿಗಳನ್ನು ನಾನು ಭೇಟಿಯಾಗಿದ್ದೇನೆ.ಜೈನಧರ್ಮವು ರಾಷ್ಟ್ರನಿರ್ಮಾಣಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ರಾಜ್ಯಕ್ಕೂ ರಾಜಸ್ತಾನದ ಜೈನರ ಸಹಾಯ ಸಾಕಷ್ಟಿರುವುದರಿಂದ ರಾಜ್ಯದ ಜನತೆ ಅವರನ್ನು ಗೌರವಿಸುತ್ತಾರೆ~ ಎಂದರು.ಇದಕ್ಕೂ ಮುನ್ನ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಮತ್ತು ಉತ್ಸವ ಸಂಘಟನಾ ಸಮಿತಿ ಅಧ್ಯಕ್ಷ ಕೆ.ಕೆ.ಬನ್ಸಾಲಿ, `ಸಂಸ್ಥೆಯು ಕಳೆದ 40 ವರ್ಷಗಳಲ್ಲಿ ಹಲವು ಕಾಲೇಜುಗಳನ್ನು ಸ್ಥಾಪನೆ ಮಾಡಿದೆ. 28 ಕಿವುಡ, ಮೂಗ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ.ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುತ್ತಮ ಅಂಕ ಪಡೆದ 126 ವಿದ್ಯಾರ್ಥಿಗಳ ಪಿಯು ಶಿಕ್ಷಣದ ವೆಚ್ಚವನ್ನು ಸಂಸ್ಥೆಯೇ ಭರಿಸಲಿದೆ~ ಎಂದರು.ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು `ಆದರ್ಶ ಸಮಾಜ ರತ್ನ~ ಪ್ರಶಸ್ತಿಯನ್ನು ನೀಡುವವರೆಗೂ ಕಾರ್ಯಕ್ರಮದಲ್ಲಿದ್ದರು. ನಂತರ ಬೇರೊಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಬೇಕಿದ್ದುದರಿಂದ ಕಾರ್ಯಕ್ರಮ ಮಧ್ಯೆ ನಿರ್ಗಮಿಸಿದರು.ಸಂಸದ ಪಿ.ಸಿ.ಮೋಹನ್, ವಿಧಾನಪರಿಷತ್ ಸದಸ್ಯ ಲೆಹರ್ ಸಿಂಗ್, ರಾಜಸ್ತಾನದ ಮಾಜಿ ಗೃಹ ಸಚಿವ ಗುಲಾಬ್‌ಚಂದ್ ಕಠಾರಿಯಾ, ಕರ್ನಾಟಕ ರಾಜ್ಯ ನಾವೀನ್ಯತಾ (ಇನ್ನೋವೇಷನ್) ಪರಿಷತ್ತಿನ ಅಧ್ಯಕ್ಷ ಡಾ.ಎಚ್.ಪ್ರಕಾಶ್‌ಚಂದ್ ಖಿಂಚ, ಸಂಸ್ಥೆಯ ಅಧ್ಯಕ್ಷ ಹಸ್ತಿಮಲ್ ಸಿಸೋಡಿಯಾ, ಗೌರವ ಕಾರ್ಯದರ್ಶಿ ವಿ.ಪ್ರೇಮರಾಜ್ ಜೈನ್ ಉಪಸ್ಥಿತರಿದ್ದರು. ಸಂಸ್ಥೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.