ಶುಕ್ರವಾರ, ಫೆಬ್ರವರಿ 26, 2021
30 °C

ಬಡ ಮಕ್ಕಳ ಶಿಕ್ಷಣಕ್ಕೆ ಸಹಕರಿಸಲು ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಡ ಮಕ್ಕಳ ಶಿಕ್ಷಣಕ್ಕೆ ಸಹಕರಿಸಲು ಕರೆ

ದಾವಣಗೆರೆ: ಆರ್ಯವೈಶ್ಯ ಸಮಾಜದ ಶ್ರೀಮಂತರು ಬಡ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಅವರಿಗೆ ಉಚಿತವಾಗಿ ಶಿಕ್ಷಣ ಕಲ್ಪಿಸುವ ಕಾರ್ಯಕ್ಕೆ ಒತ್ತು ಕೊಡಬೇಕು ಎಂದು ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ರಾಜನಹಳ್ಳಿ ರಮಾನಂದ ಕರೆ ನೀಡಿದರು.ಕರ್ನಾಟಕ ರಾಜ್ಯ ಆರ್ಯವೈಶ್ಯ ಅಧಿಕಾರಿಗಳ ಮತ್ತು ವೃತ್ತಿನಿರತರ ಸಂಘಗಳ ಒಕ್ಕೂಟದ ವತಿಯಿಂದ ನಗರದ ಎಂಸಿಸಿ `ಬಿ~ ಬ್ಲಾಕ್‌ನ ಸದ್ಯೋಜಾತ ಸ್ವಾಮೀಜಿ ಮಠದಲ್ಲಿ ಆಯೋಜಿಸಿದ್ದ `ಅವೋಪ ಡಿವಿಜಿ ಕಾನ್-2012~ ರಾಜ್ಯಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮೀಣ ಪ್ರದೇಶಗಳಲ್ಲಿ ಆರ್ಯವೈಶ್ಯ ಸಮಾಜದವರು ಶೂದ್ರರಂತೆ ಬದುಕುತ್ತಿದ್ದಾರೆ. ಅಂಥವರಿಗೆ ಉತ್ತಮ ಜೀವನ ಕಲ್ಪಿಸಲು ಸಂಘ ಮುಂದಾಗಬೇಕು. ಹಣ ನೀಡುವುದಷ್ಟೇ ದಾನವಲ್ಲ; ಜ್ಞಾನ ಕೊಡುವುದು ಸಹ ದಾನ. ಹೀಗಾಗಿ, ಜ್ಞಾನವನ್ನು ಸಮಾಜದ ಒಳಿತಿಗಾಗಿ ದಾನ ಮಾಡಬೇಕು. ಬೇರೆ ಸಮಾಜದಲ್ಲಿರುವ ಒಳ್ಳೆಯ ಗುಣಗಳನ್ನು ಅನುಸರಿಸಿ, ಈ ಮೂಲಕ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ, ಹಿರಿಯ ವರ್ತಕ ಕಾಸಲ್ ಎಸ್. ವಿಠ್ಠಲ್ ಮಾತನಾಡಿ, ಸಂಘ ಸಮಾಜದ ಒಳಿತಿಗೆ ಶ್ರಮಿಸಬೇಕು. ಸಮಾಜದವರಿಗೆ ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ಶೀಘ್ರವೇ ಸಹಕಾರಿ ಬ್ಯಾಂಕ್ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಇದಕ್ಕೆ ಸಮಾಜದವರು ಸಹ ಒಪ್ಪಿದ್ದಾರೆ ಎಂದು ತಿಳಿಸಿದರು.

ಸಮಾಜದಲ್ಲಿ ಮೌಢ್ಯಗಳು ಹೆಚ್ಚಾಗಿದ್ದು, ಅದನ್ನು ತೊಡೆದು ಹಾಕಿ ಏಕತೆ ಸಾಧಿಸುವ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.ಮುಖ್ಯ ಅತಿಥಿಯಾಗಿದ್ದ ಅಖಿಲ ಭಾರತ ಆರ್ಯವೈಶ್ಯ ಮಹಾಸಭಾಗಳ ಒಕ್ಕೂಟದ ಅಧ್ಯಕ್ಷ ಆರ್.ಪಿ. ರವಿಶಂಕರ್ ಮಾತನಾಡಿ, ಸಂಘದಿಂದ ನಿರಂತರವಾಗಿ ಅಭಿವೃದ್ಧಿ ಕಾರ್ಯಗಳು ನಡೆಯಬೇಕು. ಸಂಘ ಚಿಂತಕರ ಚಾವಡಿ ಇದ್ದಂತೆ. ಅನಗತ್ಯ ವಿಚಾರಗಳನ್ನು ಚರ್ಚಿಸುವ ಬದಲಿಗೆ, ಸಮಾಜದ ಅಭಿವೃದ್ಧಿಗೆ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.ಮುಂದಿನ ವರ್ಷದಿಂದ 500 ಬಡ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿಸುವ ನಿರ್ಧಾರ ಮಾಡಬೇಕು. ಸ್ವಾತಂತ್ರ್ಯ ಪೂರ್ವದಿಂದಲೂ ಸಮಾಜದ ಜನಗಣತಿ ನಡೆದಿಲ್ಲ. ಮೇ ತಿಂಗಳಲ್ಲಿ ಗಣತಿಆರಂಭವಾಗಲಿದ್ದು, ಮನೆ ಬಳಿ ಬರುವ ಕಾರ್ಯಕರ್ತರಿಗೆ ಸಮರ್ಪಕ ಮಾಹಿತಿ ನೀಡಿ ಸಹಕರಿಸಬೇಕು ಎಂದು ಕೋರಿದರು.ಅರ್ಯವೈಶ್ಯ ಅಧಿಕಾರಿಗಳ ಮತ್ತು ವೃತ್ತಿನಿರತ ಸಂಘ (ಆವೋಪ) ಕರ್ನಾಟಕ ಘಟಕದ ಅಧ್ಯಕ್ಷ ಸಂಜೀವಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸ್ದ್ದಿದ್ದರು. ಕರ್ನಾಟಕ ಆರ್ಯವೈಶ್ಯ ಮಹಾಸಭಾ ಕಾರ್ಯದರ್ಶಿ ಎಸ್.ಕೆ. ಶೇಷಾಚಲ, `ಅವೋಪ~ಗಳ ಒಕ್ಕೂಟ ಕಾರ್ಯದರ್ಶಿ ಪಿ. ದೇವೇಂದ್ರಪ್ಪ, ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ಡಿ.ವಿ. ಸತ್ಯನಾರಾಯಣಶೆಟ್ಟಿ, ಕರ್ನಾಟಕ ಆರ್ಯವೈಶ್ಯ ಮಹಿಳಾ ಮಹಾಸಭಾದ ಅಧ್ಯಕ್ಷೆ ವಿಮಲಾ ಅಶ್ವಥ್ ಮತ್ತಿತರರು ಹಾಜರಿದ್ದರು.ಅವೋಪ ಅಧ್ಯಕ್ಷ ಡಾ.ವಿ. ಜಗನ್ನಾಥಕುಮಾರ್ ಸ್ವಾಗತಿಸಿದರು. ಎಸ್.ಎಂ. ಭೀಮರಾಜ್ ಕಾರ್ಯಕ್ರಮ ನಿರೂಪಿಸಿದರು. ಅವೋಪ ಪ್ರಧಾನ ಕಾರ್ಯದರ್ಶಿ ಮಾಕಂ ನಾಗರಾಜ ಗುಪ್ತ ವಂದಿಸಿದರು.`ಅವೋಪ~ ಸಮ್ಮೇಳನದ ನಿರ್ಣಯ

ನಗರದ ಸದ್ಯೋಜಾತ ಸ್ವಾಮಿಗಳ ಮಠದಲ್ಲಿ ನಡೆದ ಕರ್ನಾಟಕ ರಾಜ್ಯ ಆರ್ಯವೈಶ್ಯ ಅಧಿಕಾರಿಗಳ ಮತ್ತು ವೃತ್ತಿನಿರತ ಸಂಘಗಳ ಒಕ್ಕೂಟದ 6ನೇ ರಾಜ್ಯಮಟ್ಟದ ಸಮ್ಮೇಳನದಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.ಸಮಾಜದ ಬಡ, ಆರ್ಥಿಕ ಹಿಂದುಳಿದ ಮಕ್ಕಳಿಗೆ ಆರ್ಥಿಕ ನೆರವು ನೀಡುವುದು. ಸ್ವ-ಉದ್ಯೋಗ ಕೈಗೊಳ್ಳುವವರಿಗೆ ಧನಸಹಾಯ ಮಾಡುವುದು. ಅಧಿಕಾರಿಗಳು ರಾಷ್ಟ್ರೀಯ ಸಮ್ಮೇಳನ, ಸಮಾರಂಭಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು. ಗಾಂಧಿ ಜಯಂತಿಯನ್ನು ಇನ್ನು ಮುಂದೆ ವಿಶೇಷ ರೀತಿಯಲ್ಲಿ ಆಚರಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಮಾಕಂ ನಾಗರಾಜ ಗುಪ್ತ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.