ಶುಕ್ರವಾರ, ನವೆಂಬರ್ 22, 2019
20 °C

ಬಡ ಯುವತಿಯಿಂದ ಸಿರಿತನಕ್ಕೆ ಸವಾಲ್

Published:
Updated:
ಬಡ ಯುವತಿಯಿಂದ ಸಿರಿತನಕ್ಕೆ ಸವಾಲ್

ಬಳ್ಳಾರಿ: ಮನೆ ತುಂಬಾ ಬಡತನವೇ ತುಂಬಿದ್ದರೂ ಆತ್ಮವಿಶ್ವಾಸ, ಛಲ, ಧೈರ್ಯದಲ್ಲಿ ಶ್ರೀಮಂತೆಯಾದ ಯುವತಿಯೊಬ್ಬರು ಆರ್ಥಿಕ ಮತ್ತು ರಾಜಕೀಯವಾಗಿ ಬಲಾಢ್ಯರಾದವರಿಗೆ ಸೆಡ್ಡು ಹೊಡೆದು ವಿಜಯನಗರ (ಹೊಸಪೇಟೆ) ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದು ಕುತೂಹಲ ಮೂಡಿಸಿದ್ದಾರೆ.ಚುನಾವಣೆ, ರಾಜಕೀಯ ಯಾವುದರ ಬಗ್ಗೆಯೂ ಅರಿವಿರದಿದ್ದ 28 ವರ್ಷದ ಯುವತಿ ತಮ್ಮ ಕುಟುಂಬದ ಮೇಲೆ ಅಧಿಕಾರಸ್ಥ ಪ್ರತಿನಿಧಿಗಳು ನಡೆಸಿದ ದೌರ್ಜನ್ಯ, ಕಿರುಕುಳದಿಂದ ರೊಚ್ಚಿಗೆದ್ದು ಅಖಾಡಕ್ಕಿಳಿದಿದ್ದಾರೆ.`ಆಪರೇಷನ್ ಟೆಕ್ನಾಲಜಿ' ಕೋರ್ಸ್‌ನಲ್ಲಿ ಡಿಪ್ಲೊಮಾ ಪಡೆದಿರುವ ಹೊಸಪೇಟೆಯ ರೈಲು ನಿಲ್ದಾಣ ರಸ್ತೆ ನಿವಾಸಿ ಎಂ.ಗೌಸಿಯಾ ಅವರೇ ಈ ಧೀರ ಯುವತಿ. ಬಡತನದ ಕುಟುಂಬದಲ್ಲಿ ಹುಟ್ಟಿದ್ದರೂ ಓದುವ ಹವ್ಯಾಸ ಮೈಗೂಡಿಸಿಕೊಂಡ ಕಾರಣ ಕಾನೂನಿಗೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಓದಿ, ಕಾನೂನನ್ನು ಮನನ ಮಾಡಿಕೊಂಡಿದ್ದಾರೆ. ಈಗ ಅವರಿಗೆ ಅದೇ (ಅರಿವು) ತಮ್ಮ ಮನೆಯನ್ನು ಉಳಿಸಿಕೊಳ್ಳಲು ಪ್ರಬಲ ಅಸ್ತ್ರವಾಗಿದೆ.2009ರಲ್ಲಿ ಆರಂಭವಾದ ಕಿರುಕುಳವನ್ನು ವಿವರಿಸುವಾಗ ಗೌಸಿಯಾ ಅವರ ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯಿತು. ಕಣ್ಣೀರು ಅನುಭವಿಸಿದ ಯಾತನೆಯನ್ನು ಹೇಳಿದರೂ `ನಾನು ಎಂಥ ಒತ್ತಡಕ್ಕೂ ಮಣಿಯುವುದಿಲ್ಲ. ನನ್ನ ಮನೆಯನ್ನು ಉಳಿಸಿಕೊಂಡೇ ತೀರುತ್ತೇನೆ. ಇದರಲ್ಲಿ ಯಾವುದೇ ರಾಜಿ ಇಲ್ಲ' ಎಂಬ ಧೈರ್ಯ, ಆತ್ಮವಿಶ್ವಾಸದ ಮಿಂಚು ಸಹ ಆ ಕಂಗಳಲ್ಲಿ ಇತ್ತು.ಗೌಸಿಯಾ ಅವರು ಪಕ್ಷೇತರರಾಗಿ ವಿಜಯನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಮಾಹಿತಿ ತಿಳಿದು ಅವರನ್ನು ಸಂಪರ್ಕಿಸಿದ ಪ್ರಜಾವಾಣಿ ಪ್ರತಿನಿಧಿ ಮುಂದೆ, `ಸುಮಾರು ಐದು ವರ್ಷಗಳಿಂದ  ಎದುರಿಸಿದ ಕಿರುಕುಳ, ದಬ್ಬಾಳಿಕೆ, ತಪ್ಪೋ ಸರಿಯೋ ಎಂಬುದನ್ನು ಪರಿಶೀಲಿಸದೇ ಅಧಿಕಾರಿಗಳೂ ಅಧಿಕಾರಸ್ಥರ ಬೆನ್ನಿಗೆ ನಿಂತು ಕೊಟ್ಟ ತೊಂದರೆ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ' ಎಂದು ವಿವರಿಸಿದರು.ನೀವು ಕಣಕ್ಕಿಳಿಯಲು ಕಾರಣವೇನು?

ಇಂದಿನ ರಾಜಕಾರಣ ಹೊಲಸಾಗಿದೆ. ಉದ್ಯಮಿಗಳೇ ಹೆಚ್ಚಾಗಿ ಚುನಾವಣೆಯಲ್ಲಿ ಆರಿಸಿಬರುತ್ತಿದ್ದಾರೆ. ಅವರ ಉದ್ದೇಶ ತಮ್ಮ ಉದ್ಯಮವನ್ನು ವಿಸ್ತರಿಸಿಕೊಳ್ಳುವುದೇ ಆಗಿರುತ್ತದೆ. ಜನರ ಸೇವೆ ಎಂಬ ಸೋಗು ಹಾಕುತ್ತಾರೆ ಅಷ್ಟೇ. ಜನರು ಸಮಸ್ಯೆ ಹೇಳಿಕೊಳ್ಳಲು ಹೋದರೆ ಪ್ರತಿಕ್ರಿಯಿಸುವುದಿಲ್ಲ. ಚುನಾಯಿತ ಪ್ರತಿನಿಧಿಗಳಿಂದ ನಾನು ಅನುಭವಿಸಿದ ಕಿರುಕುಳವನ್ನು ಇನ್ನೊಬ್ಬರು ಅನುಭವಿಸಬಾರದು. ಹೆಣ್ಣು ಮಕ್ಕಳು, ಬಡವರು ಎಂಬುದನ್ನೂ ನೋಡದೇ ಅಮಾನುಷವಾಗಿ ನಡೆದುಕೊಳ್ಳುತ್ತಿದ್ದಾರೆ. ಇಂಥ ವರ್ತನೆಯನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ತುಳಿತಕ್ಕೆ ಒಳಗಾದವರಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ಸ್ಪರ್ಧಿಸಿದ್ದೇನೆ.ನಿಮಗೆ ಆಗಿರುವ ತೊಂದರೆ ಏನು? ಅದಕ್ಕೆ ಯಾರು ಕಾರಣಕರ್ತರು?

ಗಣಿ ಉದ್ಯಮಿ ಜನಾರ್ದನ ರೆಡ್ಡಿ ಅವರು ನಮ್ಮ ಮನೆಯ ಪಕ್ಕದ ಜಾಗದಲ್ಲಿ ಪಂಚತಾರಾ ಹೋಟೆಲ್ ನಿರ್ಮಿಸಿದ್ದಾರೆ. ಆ ಕಟ್ಟಡಕ್ಕೆ ನಮ್ಮ ಮನೆ ಅವರ ದೃಷ್ಟಿಯಲ್ಲಿ ಕಪ್ಪು ಚುಕ್ಕೆ. ಅದನ್ನು ತೆಗೆದು ಹಾಕಬೇಕು ಎಂದು ಸ್ಥಳೀಯ ಶಾಸಕ ಆನಂದ್‌ಸಿಂಗ್ ಮತ್ತು ನಗರಸಭೆಯ ಆಗಿನ ಸದಸ್ಯರನ್ನು (2009ರಲ್ಲಿ) ಬಳಸಿಕೊಂಡು ನಮ್ಮ ಮೇಲೆ ದೌರ್ಜನ್ಯ ನಡೆಸಿದ್ದರು. ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಅದನ್ನು ತಹಸೀಲ್ದಾರ್ ಕಚೇರಿಗೆ ವರ್ಗಾಯಿಸಿ, ನನಗೇ ಸಮನ್ಸ್ ಜಾರಿ ಮಾಡಿದರು. ಅದನ್ನು ಸ್ವೀಕರಿಸಲಿಲ್ಲ ಎಂದು ಬಂಧಿಸಲು ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ಕಳುಹಿಸಿ ಅವಮಾನ ಮಾಡಿದರು. ಇದನ್ನು ಕಂಡು ಆಘಾತಕ್ಕೆ ಒಳಗಾದ ಸೋದರಿ ತೀರಿಕೊಂಡಳು. ರಾಜಕೀಯವಾಗಿ ಬಲಾಢ್ಯರಾಗಿರುವ ನಾವು ಮನಸ್ಸು ಮಾಡಿದರೆ ಐದು ನಿಮಿಷದಲ್ಲಿ ನಿನ್ನ ಮನೆಯನ್ನು ಉರುಳಿಸಿ ವಶಕ್ಕೆ ತೆಗೆದುಕೊಳ್ಳುತ್ತೇವೆ ಎಂದೂ ಬೆದರಿಕೆ ಹಾಕಿದ್ದರು. ನಮ್ಮ ಮನೆಯ ಜಾಗವನ್ನು ಅವರಿಗೇಕೆ ಬಿಟ್ಟುಕೊಡಬೇಕು. ಅವರಿಗೆ ನಾವೇನೂ ತೊಂದರೆ ಕೊಟ್ಟಿಲ್ಲ. ಆದರೂ ನಮಗೆ ತೊಂದರೆ ತಪ್ಪಲಿಲ್ಲ. ದೇವರು ಶಕ್ತಿ ನೀಡಿದ್ದಾನೆ. ಅವನ ಮೇಲೆ ನಂಬಿಕೆ ಇದೆ. ಹೋರಾಡುತ್ತೇನೆ. ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ.ನಿಮ್ಮ ಸ್ಪರ್ಧೆ ಬಗ್ಗೆ ಜನರು ಏನು ಹೇಳುತ್ತಾರೆ?

ನನ್ನ ಬಳಿ ರೊಕ್ಕ ಇಲ್ಲ. ರೊಕ್ಕ ಇಲ್ಲದ ಈ ಹುಡುಗಿ ಇಷ್ಟೊಂದು ಹೋರಾಟ ಮಾಡುತ್ತಿದ್ದಾಳೆ ಎಂಬ ಭಾವನೆಯಿಂದ ತಮ್ಮ ಹೃದಯದಲ್ಲಿ ಜಾಗ ಕೊಡುತ್ತಾರೆ ಎಂಬ ನಂಬಿಕೆ ಇದೆ.ಪ್ರಚಾರ ಹೇಗೆ? ಚುನಾವಣೆಗೆ ಹಣ ಹೇಗೆ ಹೊಂದಿಸುತ್ತೀರಿ?

ಮನೆ-ಮನೆಗೆ ತೆರಳಿ ಪ್ರಚಾರ ಮಾಡುತ್ತೇನೆ. ಹಣ ಇಲ್ಲ. ಹೊಂದಿಸಲೂ ಆಗಲ್ಲ. ಕೈ ಮುಗಿದು ಮತ ಯಾಚಿಸುತ್ತೇನೆ.ಗೆದ್ದರೆ ಏನು ಮಾಡಬೇಕು ಎಂದು ಯೋಚಿಸಿದ್ದೀರಿ?

ಚುನಾವಣೆಯಲ್ಲಿ ಗೆಲ್ಲಲಿ ಅಥವಾ ಸೋಲಲಿ, ಜನರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು. ತಮ್ಮ ಸಮಸ್ಯೆಯನ್ನು ತಾವೇ ಹೇಗೆ ಬಗೆಹರಿಸಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಡುತ್ತೇನೆ.ಪಕ್ಷೇತರರಾಗಿ ಕಣಕ್ಕಿಳಿಯುವ ಬದಲಿಗೆ ಯಾವುದಾದರೂ ರಾಜಕೀಯ ಪಕ್ಷದ ಚಿಹ್ನೆ ಮೂಲಕ ಸ್ಪರ್ಧಿಸಬಹುದಿತ್ತಲ್ಲಾ?

ನನಗೆ ಯಾವ ರಾಜಕೀಯ ಪಕ್ಷವೂ ಬೇಡ. ಪಕ್ಷೇತರಳಾಗಿಯೇ ಸ್ಪರ್ಧಿಸುತ್ತೇನೆ. ಎಷ್ಟು ವೋಟು ಬಂದರೂ ಪರವಾಗಿಲ್ಲ.ಮನೆಯವರ ಬೆಂಬಲವಿದೆಯೇ?

ತಂದೆ ಮೆಕ್ಯಾನಿಕ್. ಇಬ್ಬರು ಹಿರಿಯ ಸೋದರರು ಉದ್ಯೋಗದಲ್ಲಿದ್ದಾರೆ. ಕಿರಿಯ ಸೋದರರು ಓದುತ್ತಿದ್ದಾರೆ. ಎಲ್ಲರ ಬೆಂಬಲವಿದೆ.

ಗೌಸಿಯಾ ಅವರ ಎದುರಾಳಿಗಳು ಆನಂದ್ ಸಿಂಗ್ (ಬಿಜೆಪಿ), ಅಬ್ದುಲ್ ವಹಾಬ್ (ಕಾಂಗ್ರೆಸ್), ರಾಣಿ ಸಂಯುಕ್ತಾ (ಬಿಎಸ್‌ಆರ್ ಕಾಂಗ್ರೆಸ್). ಈ ಮೂವರೂ ಗಣಿ ಉದ್ಯಮಿಗಳು. ರಾಣಿ ಅವರು ಆನಂದ್ ಸಿಂಗ್ ಅವರ ಸಂಬಂಧಿ.

ಪ್ರತಿಕ್ರಿಯಿಸಿ (+)