ಬಡ ವಿದ್ಯಾರ್ಥಿಗಳಿಗೆ ಐಟಿಐ ವರ

ಗುರುವಾರ , ಜೂಲೈ 18, 2019
22 °C

ಬಡ ವಿದ್ಯಾರ್ಥಿಗಳಿಗೆ ಐಟಿಐ ವರ

Published:
Updated:

ತಿಪಟೂರು: ಗ್ರಾಮೀಣ ಮತ್ತು ದೀನ ದಲಿತ ವಿದ್ಯಾರ್ಥಿಗಳಿಗೆ ವರವಾಗಿರುವ ಸರ್ಕಾರಿ ಐಟಿಐಗಳ ಪ್ರವೇಶಕ್ಕೆ ಈ ವರ್ಷ ಆನ್‌ಲೈನ್ ಅರ್ಜಿ ಸಲ್ಲಿಕೆ ವ್ಯವಸ್ಥೆ ಆರಂಭಿಸಲಾಗಿದ್ದು, ಆಕಾಂಕ್ಷಿಗಳಿಗೆ ಅನುಕೂಲವಾಗಿದೆ.ಹೆಚ್ಚು ಓದಿಸಲು ಶಕ್ತಿ ಇಲ್ಲದವರು ತಮ್ಮ ಮಕ್ಕಳು ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ಮುಗಿಸಿದ ತಕ್ಷಣ ಯಾವುದಾದರೂ ವೃತ್ತಿಪರ ತರಬೇತಿ ಮುಗಿಸಿ ಕೆಲಸ ಹಿಡಿದು ಸಂಬಳ ತರುವಂತಾಗಲಿ ಎಂದು ಆಶಿಸುವುದು ಸಹಜ. ಇದಕ್ಕೆ ಐಟಿಐ ಪೂರಕ. ಆದರೆ ಖಾಸಗಿ ಐಟಿಐಗಳ ಡೊನೇಷನ್ ಹಾವಳಿಗೆ ಹೆದರಿ ಹಿಂದೆ ಸರಿಯುತ್ತಿದ್ದವರಿಗೆ ಸರ್ಕಾರಿ ಐಟಿಐಗಳು ಒಂದಷ್ಟು ಅವಕಾಶ ಕಲ್ಪಿಸಿವೆ.ಈ ಮೊದಲು ಜಿಲ್ಲಾ ಮಟ್ಟದಲ್ಲಿ ಅರ್ಜಿ ಪಡೆದು ನಿರ್ದಿಷ್ಟ ಮಾನದಂಡ ಆಧರಿಸಿ ಆ ವ್ಯಾಪ್ತಿಯ ಕಾಲೇಜುಗಳಿಗೆ ಪ್ರವೇಶ ಕಲ್ಪಿಸಲಾಗುತ್ತಿತ್ತು. ಆದರೆ ಈ ಬಾರಿ ಆನ್‌ಲೈನ್ ವ್ಯವಸ್ಥೆ ಜತೆಗೆ ರಾಜ್ಯದ ಯಾವುದೇ ಸರ್ಕಾರಿ ಐಟಿಐಗೆ ಯಾವ ಜಿಲ್ಲೆಯ ವಿದ್ಯಾರ್ಥಿಯಾದರೂ ತನ್ನ ಊರಿನಿಂದಲೇ ಅರ್ಜಿ ಸಲ್ಲಿಸಿ, ಅರ್ಹತೆ ಇದ್ದರೆ ಪ್ರವೇಶ ಪಡೆಯಬಹುದು.ವೃತ್ತಿ ಶಿಕ್ಷಣ ವಿಷಯ ಪ್ರವೇಶದಲ್ಲಿ ಸರ್ಕಾರೇತರ ಸಂಸ್ಥೆಗಳ ಸರ್ಕಾರಿ ಕೋಟಾ ನಿಗದಿ ಬಗ್ಗೆ ವ್ಯಾಪಕ ಚರ್ಚೆಗಳಾಗಿವೆ. ದುರ್ದೈವವೆಂದರೆ ಅನುದಾನಿತ ಐಟಿಐಗಳ ಸರ್ಕಾರಿ ಸೀಟು ಪಾಲಿನ ಬಗ್ಗೆ ಹೆಚ್ಚು ಒತ್ತಡ ಕೇಳಿಬಂದಿಲ್ಲ. ಈ ವರ್ಷ ಸೀಟು ಹಂಚಿಕೆ ನಿಗದಿ ಪ್ರಸ್ತಾಪವಾಗಿದ್ದರೂ ಅದು ಕೈಗೂಡಿಲ್ಲ. ಹಾಗಾದರೆ ಅನುದಾನಿತ ಐಟಿಐಗಳ ಪ್ರವೇಶದಲ್ಲಿ ನ್ಯಾಯ ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ಈ ಸಂಸ್ಥೆಗಳಲ್ಲಿ ಐಟಿಐ ಸೇರಲು ಆಸಕ್ತಿ ತೋರುವ ದೀನದಲಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.ಇನ್ನು ಐಟಿಐಗಳ ನಿಯಂತ್ರಣಕ್ಕೆ ರಾಜ್ಯದಲ್ಲಿ ವ್ಯವಸ್ಥೆ ಇದೆ. ಜಿಲ್ಲಾ ಮಟ್ಟದಲ್ಲಿ ಮೇಲುಸ್ತುವಾರಿ ಇಲಾಖೆ ಇಲ್ಲ. ಕಾರ್ಮಿಕ ಇಲಾಖೆಯ ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯ ವ್ಯಾಪ್ತಿಯಲ್ಲಿ ಐಟಿಐಗಳು ಇವೆ. ಅನುದಾನಿತ ಮತ್ತು ಅನುದಾನರಹಿತ ಐಟಿಐಗಳ ನಿಯಂತ್ರಣ ವ್ಯವಸ್ಥೆ ದುರ್ಬಲ ಎಂಬ ದೂರಿದೆ.

ಈ ಎಲ್ಲ ನ್ಯೂನತೆಗಳ ನಡುವೆಯೂ ಸರ್ಕಾರಿ ಐಟಿಐಗಳು ಬಡವರ ಪಾಲಿಗೆ ಆಶಾಕಿರಣವಾಗಿದೆ.ವಿದ್ಯಾರ್ಥಿನಿಯರಿಗೆಂದೇ 1993ರಲ್ಲಿ ತಿಪಟೂರಿನಲ್ಲಿ ಆರಂಭವಾದ ಸರ್ಕಾರಿ ಐಟಿಐ ನೂರಾರು ಮಂದಿಗೆ ಉದ್ಯೋಗ ಹಿಡಿಯಲು ನೆರವಾಗಿದೆ. ಎಸ್‌ಎಸ್‌ಎಲ್‌ಸಿ ಆಧರಿಸಿ 2 ವರ್ಷದ ಇಎಂ ಟ್ರೇಡ್ (ಪ್ರವೇಶ ಮಿತಿ 42) ಜತೆಗೆ ಪಿಯುಸಿ ಆದವರಿಗೆ ಒಂದು ವರ್ಷದ ಕೋಪಾ ಟ್ರೇಡ್ (ಪ್ರವೇಶ ಮಿತಿ 52) ಇದೆ. ಇವೆರಡೂ ಕೋರ್ಸ್‌ಗಳು ವಿದ್ಯಾರ್ಥಿನಿಯರಿಗೆ ಮಾತ್ರ.ವರ್ಲ್ಡ್ ಬ್ಯಾಂಕ್ ಯೋಜನೆಯಡಿ 2009ರಲ್ಲಿ ಇದೇ ಕಾಲೇಜಿನಲ್ಲಿ ಎಸ್‌ಎಸ್‌ಎಲ್‌ಸಿ ಆಧರಿಸಿದ 2 ವರ್ಷದ ಸಿಒಇ ಕೋರ್ಸ್ (ಪ್ರವೇಶ ಮಿತಿ 120) ಆರಂಭವಾಗಿದೆ. ಒಂದೂವರೆ ವರ್ಷದ ಪಠ್ಯ ಮತ್ತು ಪ್ರಾಯೋಗಿಕ ತರಬೇತಿ ಜತೆಗೆ ಆರು ತಿಂಗಳ ಕಂಪನಿ ನಿಯೋಜನೆ ಕಾರ್ಯ ತರಬೇತಿಯನ್ನು ಒಳಗೊಂಡಿದೆ. ಈ ಕೋರ್ಸ್ ಕೂಡ ವಿದ್ಯಾರ್ಥಿನಿಯರಿಗೆಂದೇ ಆರಂಭಿಸಿದೆ. ಅಗತ್ಯ ಸಂಖ್ಯೆಯ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸದ ಗಂಡು ಮಕ್ಕಳನ್ನೂ ಸೇರಿಸಿಕೊಳ್ಳಲಾಗಿದೆ.ಸುಧಾರಣೆ ಅಗತ್ಯ

ಸುಮಾರು 5 ಎಕರೆ ಸರ್ಕಾರಿ ಜಾಗ ಒಳಗೊಂಡ ತಿಪಟೂರು ಸರ್ಕಾರಿ ಐಟಿಐನ ಎರಡು ಕಟ್ಟಡ ಸಹಿತ ಸೌಲಭ್ಯ ಉತ್ತಮವಾಗಿದೆ. ದೊಡ್ಡ ಸಮಸ್ಯೆ ಎಂದರೆ ಬಸ್ ನಿಲ್ದಾಣದಿಂದ ಸುಮಾರು ಮೂರೂವರೆ ಕಿಮೀ ದೂರದಲ್ಲಿದೆ. ನಡೆದು ಹೋಗುವ ತ್ರಾಸದ ಜತೆಗೆ ಹೆಣ್ಣು ಮಕ್ಕಳಿಗೆ ಹೆದರಿಕೆ ಹುಟ್ಟಿಸುವ ಪ್ರದೇಶದಲ್ಲಿದೆ. ಕಲ್ಲುಜಲ್ಲಿಯಿಂದ ಕೂಡಿದ ರಸ್ತೆಯ ಇಕ್ಕೆಲಗಳಲ್ಲಿ ಕಾಡು ಜಾಲಿ ಬೆಳೆದಿದೆ. ರಸ್ತೆ ಸುಧಾರಿಸಿದರೆ ಆತಂಕ ತಪ್ಪುತ್ತದೆ ಎನ್ನುವುದು ವಿದ್ಯಾರ್ಥಿನಿಯರ ಆಂಬೋಣ.ಇನ್ನು ಸಂಸ್ಥೆಗಿದ್ದ ಪ್ರತ್ಯೇಕ ಕೊಳವೆಬಾವಿಯಲ್ಲಿ ನೀರಿನ ಇಳುವರಿ ಕುಸಿದಿರುವುದರಿಂದ ನೀರಿನ ಸಮಸ್ಯೆ ಎದುರಾಗಿದೆ. ಇಬ್ಬರು ಕಿರಿಯ ತರಬೇತುದಾರರ ಹುದ್ದೆ ಖಾಲಿ ಇವೆ. ಸಿಒಇ ವಿಭಾಗಕ್ಕೆ ಬೇಕಾದ 9 ತರಬೇತುದಾರರ ಪೈಕಿ ಒಬ್ಬರೂ ಕಾಯಂ ಸಿಬ್ಬಂದಿಯಿಲ್ಲ. ಅತಿಥಿ ತರಬೇತುದಾರರನ್ನು ಆದರಿಸಲಾಗಿದೆ. ಒಂದಷ್ಟು ಕೊರತೆ ನಿವಾರಣೆಯಾದರೆ ಮಕ್ಕಳಿಗೆ ಉತ್ತಮ ತರಬೇತಿ ಸಿಗುವುದರಲ್ಲಿ ಅನುಮಾನವಿಲ್ಲ.

-

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry