ಬಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಪ್ರದಾನ

7

ಬಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಪ್ರದಾನ

Published:
Updated:

ರಾಯಚೂರು: ಬಡ ಮತ್ತು ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ ಅವರಿಗೆ ಸೂಕ್ತ ನೆರವು ನೀಡುವ ಮೂಲಕ ಏಳ್ಗೆಗೆ ಪ್ರಯತ್ನಿಸುವ ಮನೋಭಾವ ಈ ಭಾಗದ ಜನತೆ ಬೆಳೆಸಿಕೊಳ್ಳಬೇಕು. ವರ್ಷಕ್ಕೆ ಒಬ್ಬ ವಿದ್ಯಾರ್ಥಿಗೆ ಕೈಲಾದಷ್ಟು ಸಹಾಯ ಮಾಡಿದರೆ ಅಂಥ ವಿದ್ಯಾರ್ಥಿಗಳ ಭವಿಷ್ಯ ಬಂಗಾರ ಆಗುತ್ತದೆ. ಹೈದರಾಬಾದ್ ಕರ್ನಾಟಕ ಶೈಕ್ಷಣಿಕ ಕ್ಷೇತ್ರದಲ್ಲಿ ಹಿರಿಮೆ ಮೆರೆಯಲು ಸಹಕಾರಿಯಾಗಲಿದೆ ಎಂದು ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್ ಸುಖಾಣಿ ಹೇಳಿದರು.ಶನಿವಾರ ಇಲ್ಲಿನ ಐಎಂಎ ಸಭಾಭವನದಲ್ಲಿ ನವಜೀವನ ಮಹಿಳಾ ಒಕ್ಕೂಟ ಮತ್ತು ಪ್ರೇರಣಾ ಸಂಸ್ಥೆ ಸಂಯುಕ್ತವಾಗಿ ಆಯೋಜಿಸಿದ್ಧ ಸಮಾರಂಭದಲ್ಲಿ ಇನ್‌ಫೋಸಿಸ್ ಪ್ರತಿಷ್ಠಾನ ನೆರವಿನ ಶಿಷ್ಯವೇತವನ್ನು ಹೈದರಾಬಾದ್ ಕರ್ನಾಟಕ ಪ್ರದೇಶದ ಎಂಜಿನಿಯರಿಂಗ್ ಮತ್ತು ವೈದ್ಯಕೀಯ 32 ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ತಮ್ಮ ಸಂಸ್ಥೆಯಾದ ತಾರಾನಾಥ ಶಿಕ್ಷಣ ಸಂಸ್ಥೆಯು ಹಲವು ದಶಕಗಳಿಂದ ಪ್ರತಿ ವರ್ಷ 100 ಮಕ್ಕಳಿಗೆ ಶಿಷ್ಯವೇತನ ನೀಡುತ್ತಿದೆ. ಈ ದಿಶೆಯಲ್ಲಿ ನಾಗರಿಕ ಆಸಕ್ತಿಯೂ ಬೇಕು ಎಂದು ನುಡಿದರು.ಪ್ರೇರಣಾ ಸಂಸ್ಥೆಯ ಕಾರ್ಯದರ್ಶಿ ಪ್ರಮೋದ ಕುಲಕರ್ಣಿ ಅವರು ಮಾತನಾಡಿ, ಕೆಲ ವರ್ಷಗಳ ಹಿಂದೆ ಅಶಕ್ತರಾದ ಒಬ್ಬ ವ್ಯಕ್ತಿಗೆ ನಮ್ಮ ಅಂಗಡಿಯಲ್ಲಿ ಒಂದು ಚಿಕ್ಕ ಕೆಲಸ ಕೊಡಲಾಯಿತು. ಅದರ ಉದ್ದೇಶ ಆತನ ಮಗಳ ಶಿಕ್ಷಣಕ್ಕೆ ಅನುಕೂಲ ಆಗಲಿ ಎಂಬುದಾಗಿತ್ತು. ಬಾಲ್ಯದಿಂದಲೇ ಆಸಕ್ತಿಯಿಂದ ಓದುತ್ತಿದ್ದ ಆ ಬಾಲಕಿಗೆ ವರ್ಷಕ್ಕೆ  4-5 ಸಾವಿರ ನೆರವು ದೊರಕಿಸುತ್ತ ಬರಲಾಗಿತ್ತು. ಈಗ ಆ ವಿದ್ಯಾರ್ಥಿನಿ ಬೆಂಗಳೂರು ವಿವಿಯಲ್ಲಿ ಎಂಎಸ್ಸಿಯಲ್ಲಿ 7 ಚಿನ್ನದ ಪದಕ ವಿಜೇತೆ. ಸಂಶೋಧನಾ ವಿದ್ಯಾರ್ಥಿ. ಇದೊಂದು ಉದಾಹರಣೆಯಷ್ಟೇ ಎಂದರು.

ಮಕ್ಕಳಲ್ಲಿ ಪ್ರತಿಭೆ ಪ್ರಜ್ವಲಿಸುತ್ತಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು. ಹಣಕಾಸಿನ ಕೊರತೆ ಕಾರಣಕ್ಕೆ ಆ ಪ್ರತಿಭೆ ವಿದ್ಯಾರ್ಥಿ ದೆಸೆಯಲ್ಲಿಯೇ ಮುರುಟಲು ಬಿಡಬಾರದು ಎಂದು ಹೇಳಿದರು.ಬೆಂಗಳೂರಿನಲ್ಲಿ ಅಂಬೇಡ್ಕರ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಗಂಗಾವತಿಯ ಸುಧಾ, ದಾವಣಗೆರೆಯಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಸೇಡಂ ತಾಲ್ಲೂಕಿನ ಮುಧೋಳ ಗ್ರಾಮದ ವಿದ್ಯಾರ್ಥಿನಿ ನಗ್ಮಾ, ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಬೀದರ್‌ನ ಸಂಗಮೇಶ ಹಾಗೂ ಭಾಲ್ಕಿಯ ಓಂಕಾರ ಅವರಿಗೆ ವೇದಿಕೆಯಲ್ಲಿ ಸಾಂಕೇತಿಕವಾಗಿ ಶಿಷ್ಯ ವೇತನ ಚೆಕ್ ಪ್ರದಾನ ಮಾಡಲಾಯಿತು.ಪ್ರಾಸ್ತಾವಿಕ ಮಾತನಾಡಿದ ನವಜೀವನ ಮಹಿಳಾ ಒಕ್ಕೂಟದ ಸಂಚಾಲಕಿ ಮಂಜುಳಾ ಅವರು ಮಾತನಾಡಿ, ತಮ್ಮ ಸಂಘಟನೆಯು ದೇವದಾಸಿ, ಉದ್ಯೋಗ, ಆಹಾರ ಹಕ್ಕು, ಉದ್ಯೋಗ ಖಾತ್ರಿ ಯೋಜನೆ, ಬಾಲಕಾರ್ಮಿಕ ಪದ್ಧತಿ ವಿರುದ್ಧ, ಬಾಲ್ಯ ವಿವಾಹ ಪದ್ಧತಿ, ಮಹಿಳಾ ದೌರ್ಜನ್ಯ ವಿರುದ್ಧ ಸೇರಿದಂತೆ ಹಲವು ರೀತಿಯ ಹೋರಾಟ ಮಾಡಿಕೊಂಡು ಬಂದಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಈ ಭಾಗದ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಈ ಕಾರ್ಯ ಮಾಡುತ್ತಿದೆ ಎಂದು ವಿವರಿಸಿದರು.ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಪ್ರೇರಣಾ ಸಂಸ್ಥೆ 1,840, ಧಾರವಾಡದ ವಿದ್ಯಾ ಪೋಷಕ ಸಂಸ್ಥೆಯು 586, ರಾಯಚೂರಿನ ನವಜೀವನ ಮಹಿಳಾ ಒಕ್ಕೂಟ ಸಂಸ್ಥೆಯು 49 ವಿದ್ಯಾರ್ಥಿ ಸೇರಿದಂತೆ ಒಟ್ಟು 2,475 ವಿದ್ಯಾರ್ಥಿಗಳಿಗೆ 2001ರಿಂದ 2012ರ ಅವಧಿಯಲ್ಲಿ 92,44,400 ರೂಪಾಯಿ ಶಿಷ್ಯವೇತನ ದೊರಕಿಸಲಾಗಿದೆ. ಈ ದಿನ ನವಜೀವನ ಮಹಿಳಾ ಒಕ್ಕೂಟವು 32 ವಿದ್ಯಾರ್ಥಿಗಳಿಗೆ 7 ಲಕ್ಷ ಮೊತ್ತವನ್ನು ಇನ್‌ಫೋಸಿಸ್ ಪ್ರತಿಷ್ಠಾನ ನೆರವಿನಡಿ ದೊರಕಿಸುತ್ತಿದೆ ಎಂದು ಪ್ರೇರಣಾ ಸಂಸ್ಥೆಯ ಸಂಚಾಲಕ ದಯಾನಂದ ವಿವರಿಸಿದರು. ನವಜೀವನ ಮಹಿಳ ಒಕ್ಕೂಟದ ಸಂಚಾಲಕರಾದ ಅಭಯಕುಮಾರ, ಗ್ರಾಮ ವಿಕಾಸ ಸಂಸ್ಥೆಯ ಸಂಚಾಲಕ ಹಫಿಜುಲ್ಲಾ ಮತ್ತಿತರರು ಉಪಸ್ಥಿತರಿದ್ದರು. ಶರಣಬಸವ ಗಲಗ ಕಾರ್ಯಕ್ರಮ ನಿರೂಪಿಸಿದರು. ಜೋಸ್ಫಿನಾ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry