ಬಡ ಹುಡುಗನ ಶ್ರೀಮಂತ ಕನಸು

7

ಬಡ ಹುಡುಗನ ಶ್ರೀಮಂತ ಕನಸು

Published:
Updated:

ಬದುಕು ಯಾವಾಗ ಹೇಗೆ ಕೈತಪ್ಪಿ ಹೋಗುತ್ತದೆಂದು ಯಾರಿಗೂ ತಿಳಿಯುವುದಿಲ್ಲ, ಹಾಗೆಯೇ ಯಾವಾಗ ಅದು ತನ್ನ ದಿಕ್ಕು ಬದಲಿಸಿಕೊಂಡು ಯಶಸ್ಸಿನ ಶಿಖರದತ್ತ ಓಡುತ್ತದೆ ಎಂಬುದೂ ಕೆಲವೊಮ್ಮೆ ನಮ್ಮ ಗಮನಕ್ಕೆ ಬರುವುದಿಲ್ಲ...ಇದು ಯಶಸ್ವಿ ಉದ್ಯಮಿ ವಿ.ಆರ್.ಸತ್ಯನಾರಾಯಣ ಅವರ ಅನುಭವದ ನುಡಿ.ಚಿಕ್ಕ ವಯಸ್ಸಿಗೇ ಬದುಕು ಅವರಿಗೆ ದೊಡ್ಡ ದೊಡ್ಡ ಪಾಠಗಳನ್ನು ಕಲಿಸಿದೆ. 33 ವರ್ಷಗಳಲ್ಲಿ ಕಷ್ಟ-ಸುಖ, ಸೋಲು-ಗೆಲುವು, ಯಶಸ್ಸು- ಅವಮಾನ ಎಲ್ಲವನ್ನೂ ಕಂಡುಬಂದವರು. ಸೋತಾಗ ನೆಲಹಿಡಿಯದೇ, ಗೆದ್ದಾಗ ಬೀಗದೇ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುತ್ತಾ ಬಂದ ಅವರ ಅನುಭವಗಳ ಹರವು ಬಹಳ ದೊಡ್ಡದು.25 ವರ್ಷಗಳ ಹಿಂದೆ... ಶ್ರೀಮಂತ ಬಡಾವಣೆ ಎಂದೇ ಖ್ಯಾತಿ ಪಡೆದ ಜಯನಗರದ ಬೀದಿಗಳಲ್ಲಿ ತಿರುಗುತ್ತಿದ್ದ 12 ವರ್ಷದ ಆ ಬಡ ಹುಡುಗನ ಕಣ್ಣುಗಳಲ್ಲಿ ಮುಗಿಲೆತ್ತರದ ಕನಸುಗಳು ಹೆಪ್ಪುಗಟ್ಟಿ ಕುಳಿತಿದ್ದವು. ದೊಡ್ಡ ದೊಡ್ಡ ಬಂಗಲೆಗಳು, ಅಷ್ಟೇ ದೊಡ್ಡ ಗೇಟುಗಳು, ಆ ಗೇಟಿಗೆ ಕಟ್ಟಿರುತ್ತಿದ್ದ ಸಿಂಹದಂತಹ ನಾಯಿಗಳು, ರಸ್ತೆಗಳ ಮೇಲೆ ಇರುವೆ ಸಾಲಿನಂತೆ ಹರಿದಾಡುವ ಬಣ್ಣ-ಬಣ್ಣದ ಕಾರುಗಳು...ಅವನ್ನೆಲ್ಲ ನೋಡ ನೋಡುತ್ತಾ ತಾನೇ ಕನಸಾಗಿ ನಿಂತು ಬಿಡುತ್ತಿದ್ದ ಹುಡುಗನಿಗೆ ಅಂದು ಜತೆಗಿದ್ದುದು ಹಗಲುಗನಸುಗಳು ಮಾತ್ರ...

`ಹೌದು, ನಾನು ಭಾರಿ ಭಾರೀ ಕನಸುಗಳನ್ನೇ ಕಾಣುತ್ತಿದ್ದೆ. ಆ ಕನಸುಗಳನ್ನು ನನಸಾಗಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಲು ಸ್ವಲ್ಪ ಸಮಯ ಹಿಡಿಯಿತಷ್ಟೆ. ಆದರೆ ಅವು ಕೈಗೆ ಸಿಗುವವರೆಗೂ ನಾನು ನಿದ್ದೆ ಮರೆತು ದುಡಿದಿದ್ದೇನೆ' ಎನ್ನುವ ಸತ್ಯನಾರಾಯಣ ಅವರ ಬದುಕಿನ ಪುಟಗಳಲ್ಲಿ ಎಲ್ಲವೂ ಇದೆ.`ಟೈಲರ್ ಅಪ್ಪನಿಗೆ ಮನೆ ನಡೆಸುವುದೇ ಕಷ್ಟ. ಆದರೂ ಶಿಕ್ಷಣದ ಬಗ್ಗೆ ಹೆಚ್ಚು ಪ್ರೀತಿ. ನನ್ನನ್ನು ಜಯನಗರದ ಸುಸಜ್ಜಿತ ಶಾಲೆಗೆ ಸೇರಿಸಿದರು. ಅಲ್ಲಿ ವಿದ್ಯೆಗಿಂತಲೂ ಆ ಶ್ರೀಮಂತರ ಜೀವನಶೈಲಿ ನನ್ನನ್ನು ಹೆಚ್ಚು ತಟ್ಟಿತ್ತು. ಅವರಿಗೆ ಮಾತ್ರ ದೇವರು ಎಲ್ಲವನ್ನೂ ಕೊಟ್ಟಿದ್ದಾನೆ, ಆದರೆ ನಾವೇಕೆ ಹೀಗೆ? ಎಂಬ ವಿಚಾರ ನನ್ನನ್ನು ಕಾಡಲು ಆರಂಭಿಸಿದ್ದು ಆಗಲೇ. ಅಮ್ಮನಿಗೆ ಇವೇ ಪ್ರಶ್ನೆಗಳನ್ನು ಕೇಳುತ್ತಿದ್ದೆ. ಆಗ ಅಮ್ಮ ಹೇಳುತ್ತಿದ್ದರು - `ಅವರೆಲ್ಲ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆದ್ದರಿಂದ ಅಷ್ಟು ಶ್ರೀಮಂತರಾಗಿದ್ದಾರೆ. ನೀನೂ ಓದಿ, ಕಷ್ಟಪಟ್ಟು ಕೆಲಸ ಮಾಡಿದರೆ ಹಾಗೇ ಆಗಬಹುದು'- ಅಂದು ಮನಸ್ಸಿಗೆ ನಾಟಿದ ಅಮ್ಮನ ಆ ಮಾತು ಇಂದಿಗೂ ಕಿವಿಯಲ್ಲಿಯೇ ಉಳಿದಿದೆ'.`ಮನೆಯ ಹಿರಿಯ ಮಗನಾದ ನನ್ನ ಮೇಲೆ ಅಪ್ಪ-ಅಮ್ಮ ಭಾರಿ ಭರವಸೆಯನ್ನೇ ಇಟ್ಟುಕೊಂಡಿದ್ದರು, ದೊಡ್ಡ ಕನಸುಗಳನ್ನು ಕಟ್ಟಿಕೊಂಡು ಕುಳಿತಿದ್ದರು. ಪಿಯುಸಿ ಮುಗಿಸುವ ಸಮಯಕ್ಕೆ ಓದು ಸಾಕು ಎನಿಸಿತು. ಆದರೆ ಹೆಚ್ಚು ಓದಿಸಬೇಕೆನ್ನುವ ಪೋಷಕರ ಹಂಬಲಕ್ಕೆ ನನ್ನಿಂದ ನ್ಯಾಯ ದೊರಕಿಸಲಾಗಲಿಲ್ಲ. -ನನ್ನ ಮೇಲಿನ ವಿಶ್ವಾಸ ಕಳೆದುಕೊಳ್ಳಬೇಡಿ, ಏನಾದರೂ ಮಾಡುತ್ತೇನೆ- ಎಂಬ ಭರವಸೆಯೊಂದೇ ಅವರಿಗೆ ಅಂದು ನಾನು ನೀಡಿದ ವಾಗ್ದಾನ. ಏನು ಮಾಡುವುದು ಎಂಬ ಆಲೋಚನೆಯ ನಡುವೆಯೇ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲದಿನ ಕೆಲಸ ಮಾಡಿದರೂ ಸಂಬಳ ಸಮಾಧಾನ ತರಲಿಲ್ಲ'.ಮೊದಲ ಸೋಲು

`ಏನಾದರೂ ಮಾಡಬೇಕು, ಹೀಗೇ ಕುಳಿತರೆ ಕನಸು ನನಸಾಗಲು ಸಾಧ್ಯವೇ ಇಲ್ಲ ಎಂದುಕೊಂಡು ಸ್ವಂತ ಉದ್ಯಮದ ಬೆನ್ನು ಹತ್ತಿದೆ. ಒಂದೇ ಹೆಜ್ಜೆಗೆ ಗೆಲುವು ಯಾರಿಗೂ ದಕ್ಕುವುದಿಲ್ಲ. ಅದರಲ್ಲೂ ಬಡವರ ಮೇಲೆ ಗೆಲುವಿಗೂ ಮುನಿಸು... ಅಂತೆಯೇ ಉದ್ಯಮ ಕ್ಷೇತ್ರದಲ್ಲಿ ನನಗೂ ಮೊದಲು ಎದುರಾದದ್ದು ಸೋಲುಗಳೇ'.`ನೂರು ರೂಪಾಯಿಗೆ 10 ರೂಪಾಯಿ ಬಡ್ಡಿಯಂತೆ ರೂ. 50000 ಸಾಲ ಮಾಡಿ ಸ್ವಂತ ಪ್ರಿಂಟಿಂಗ್ ಪ್ರೆಸ್ ಹಾಕಿದೆ. ಯಾವುದೇ ಉದ್ಯಮದಲ್ಲಿ ನಿರ್ವಹಣೆ ಬಹಳ ಮುಖ್ಯ. ಆದರೆ ಅದು ನನಗೆ ಗೊತ್ತೇ ಇರಲಿಲ್ಲ. ಹಣಕಾಸಿನ ವ್ಯವಹಾರವೂ ತಿಳಿದಿರಲಿಲ್ಲ. ಅದೇ 19-20ರ ವಯಸ್ಸು. ಜೀವನದಲ್ಲಿ ಐಶಾರಾಮಿಯಾಗಿರುವ ಹುಚ್ಚು. ಕೈಯಲ್ಲಿ ನಾಲ್ಕು ಕಾಸು ಲಾಭ ಬಂದರೆ ಖರ್ಚು ಮಾಡಿಬಿಡುವ ಚಟ. ಇದೆಲ್ಲದರ ಪರಿಣಾಮ ಸಾಲ ಐದು ಲಕ್ಷಕ್ಕೆ ಏರಿತಷ್ಟೆ, ಯಾವ ಪ್ರಯೋಜನವೂ ಆಗಲಿಲ್ಲ. `ಏನಾದರೂ ಮಾಡುತ್ತೇನೆ' ಎಂದು ಅಪ್ಪ-ಅಮ್ಮನಿಗೆ ಕೊಟ್ಟ ಮಾತು ನನ್ನನ್ನೇ ಹಂಗಿಸಿದಂತಾಗಿ ನೋವಾಯಿತು. ಅಪ್ಪ ಎರಡನೇ ಬಾರಿ ಜರ್ಜರಿತರಾದರು'.ಆದರೂ, `ಚಿಂತೆ ಮಾಡಬೇಡ, ಸಾಧನೆ ಎನ್ನುವುದು ಒಂದೇ ದಿನದಲ್ಲಿ ಮನೆ ಮುಂದೆ ಬಂದು ನಿಲ್ಲುವುದಿಲ್ಲ. ಸೋಲು-ಗೆಲುವು, ಕಷ್ಟ-ಕಾರ್ಪಣ್ಯಗಳನ್ನು ದಾಟಿಕೊಂಡು ಒಂದೊಂದೇ ಮೆಟ್ಟಿಲನ್ನು ಏರಿಕೊಂಡು ಹೋಗಬೇಕಾಗುತ್ತದೆ' ಎಂದು ಅಪ್ಪ ಧೈರ್ಯ ತುಂಬಿದರು ಎಂಬುದನ್ನು ನೆನಪಿಸಿಕೊಳ್ಳುವಾಗ ಸತ್ಯನಾರಾಯಣ ಕಣ್ಣಗಳಲ್ಲಿ ಕಷ್ಟದ ದಿನಗಳ ಕಪ್ಪು-ಬಿಳುಪು ನೆನಪುಗಳ ಛಾಯೆ.ನಂತರ ಸತ್ಯನಾರಾಯಣ ಅವರು ಕೈಹಾಕಿದ್ದೇ `ಸೇಲ್ಸ್‌ಮನ್' ವೃತ್ತಿಗೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ಪನ್ನವೊಂದನ್ನು ಮನೆ-ಮನೆಗೆ ತಲುಪಿಸುವ ಕೆಲಸವದು. ಕೆಲವೇ ದಿನಗಳಲ್ಲಿ ನೇರ ಮಾರುಕಟ್ಟೆ ಉದ್ಯಮದ ಬಗ್ಗೆ ಅವರಿಗೆ ಮಾಹಿತಿ ಸಿಕ್ಕಿತು. ಆ ಕಡೆ ಆಸಕ್ತಿಯೂ ಬೆಳೆಯಿತು.`ಇದೇ ಸಂದರ್ಭದಲ್ಲಿ ಭರತ್ ಚಂದ್ರ ಅವರ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ ನನ್ನ ಜೀವನದ ದಿಕ್ಕನ್ನೇ ಬದಲಿಸಿತು. -ಜೀವನದಲ್ಲಿ ಮುಂದೆ ಬರಬೇಕು, ಆದರೆ ಹೇಗೆ?- ಎಂಬ ಪ್ರಶ್ನೆಗಳಿಗೆ, ಗೊಂದಲಗಳಿಗೆ ಅಲ್ಲಿ ಪರಿಹಾರ ಸಿಕ್ಕಿತು. ಮುಂದಿನ ಹೆಜ್ಜೆಗಳಿಗೆ ಸ್ಪಷ್ಟ ಚಿತ್ರಣವೂ ದೊರಕಿತು. ಮೊದಲು ನಾವು ಏನು, ನಮ್ಮಳಗಿನ ಸಾಮರ್ಥ್ಯವೇನು? ಎಂಬುದನ್ನು ಕಂಡುಕೊಳ್ಳಬೇಕು.ಯಾವ ದಾರಿಯಲ್ಲಿ ನಮಗೆ ಯಶ ಸಿಗುತ್ತದೆ ಎಂಬ ಬಗ್ಗೆ ಪೂರ್ವಾಪರ ಆಲೋಚಿಸಿ ನಂತರ ಆ ಮಾರ್ಗದಲ್ಲಿ ಕೆಲಸ ಮಾಡಬೇಕು ಎಂಬ ಸೂತ್ರಗಳು ಸಿಕ್ಕಿದ್ದು ಅಲ್ಲಿಯೇ' ಎನ್ನುತ್ತಾ ಬದುಕಿನ ಪಥ ಬದಲಾದ ದಿನಗಳನ್ನು ನೆನಪಿಸಿಕೊಂಡರು ಸತ್ಯನಾರಾಯಣ.

`ನಂತರ ತಲೆ ಎತ್ತಿದ್ದೇ `ಕನ್ಸ್ಯುಮರ್ ವರ್ಲ್ಡ್' ಕಂಪೆನಿ(1999). ಅಪ್ಪ ನೀಡಿದ 10 ಸಾವಿರ ರೂಪಾಯಿಯೇ ಆರಂಭಿಕ ಬಂಡವಾಳವಾಯಿತು.ಅವರು ತುಂಬಿದ ಧೈರ್ಯವೇ ಕಂಪೆನಿಯ ಶಕ್ತಿಯಾಗಿತ್ತು. ಒಂದು ತಿಂಗಳ ಬಾಡಿಗೆ ಏಳು ಸಾವಿರ ರೂಪಾಯಿಯನ್ನೂ ತಂದೆಯೇ ತುಂಬಿದ್ದರು. ಆರೋಗ್ಯ ಉತ್ಪನ್ನ, ಪುಸ್ತಕ, ಆಟಿಕೆ ಮುಂತಾದ ಉತ್ಪನ್ನಗಳ ಸಂಪೂರ್ಣ ಮಾರಾಟ ಮತ್ತು ಮಾರುಕಟ್ಟೆ ಜವಾಬ್ದಾರಿಯನ್ನು ಪಡೆದು ಕೆಲಸ ಆರಂಭಿಸಿದೆ. ಆದರೆ ಎಲ್ಲವನ್ನೂ ಒಬ್ಬನೇ ನಿರ್ವಹಿಸುವುದು ಕಷ್ಟವಾಗಿತ್ತು. ಸಹಾಯಕ್ಕೆ ಸೇಲ್ಸ್ ಹುಡುಗರ ಹುಡುಕಾಟ ನಡೆಯಿತು'.ಕಂಡುಕೊಂಡ ಮೊದಲ ಸತ್ಯ

`ಹುರುಪಿನಿಂದಲೇ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದ ಹುಡುಗರು ತಿಂಗಳು ಎರಡು ತಿಂಗಳಲ್ಲಿ ಕೆಲಸ ಬಿಟ್ಟು ಹೋಗುತ್ತಿದ್ದರು. ಇದರಿಂದ ಕಂಪೆನಿಯ ವಹಿವಾಟು ಮತ್ತು ಲಾಭದಲ್ಲಿ ಕುಸಿತವಾಗುತ್ತಿತ್ತು. ಕೆಲಸಗಾರರು ಏಕೆ ಅರ್ಧಕ್ಕೆ ಬಿಟ್ಟು ಹೋಗುತ್ತಾರೆ ಎಂಬ ಬಗ್ಗೆ ಹಗಲೂ ರಾತ್ರಿ ಆಲೋಚಿಸಿದೆ. ಅವರಲ್ಲಿ ಅನೇಕರಿಗೆ ಮಾರಾಟಕ್ಕೆ ಬೇಕಾದ ಕೌಶಲವೇ ಇರಲಿಲ್ಲ. ಕೆಲವರಿಗೆ ಮಾರುಕಟ್ಟೆ ಜ್ಞಾನ ಇರುತ್ತಿರಲಿಲ್ಲ. ದಿನವಿಡೀ ಬೀದಿ ಬೀದಿ ಸುತ್ತಿ ದುಡಿದರೂ ಲಾಭವಿಲ್ಲ ಎನಿಸಿದಾಗ ಅವರು ಕೆಲಸ ಬಿಟ್ಟು ಹೋಗುತ್ತಿದ್ದರು.ಕೇವಲ ತಮ್ಮ ಲಾಭವನ್ನು ಮಾತ್ರ ನೋಡಿಕೊಂಡರೆ ಆಗದು. ಜತೆಗೆ ಕೆಲಸ ಮಾಡುವವರ ಲಾಭವನ್ನೂ ನೋಡಬೇಕು ಎಂಬುದು ನಾನು ಕಂಡುಕೊಂಡ ಮೊದಲ ಸತ್ಯ. ಅಂತೆಯೇ ಜನರನ್ನು ಬಳಸಿಕೊಂಡು ಕಂಪೆನಿಯನ್ನು ಬೆಳೆಸುವುದನ್ನು ಎಲ್ಲರೂ ಮಾಡುತ್ತಾರೆ. ಆದರೆ ಕಂಪೆನಿಯನ್ನು ಬಳಸಿಕೊಂಡು ಬಡ ಜನರನ್ನು ಬೆಳೆಸಬೇಕು ಎಂಬ ನಿಲುವಿಗೆ ಬಂದೆ'.

`ಸಂದರ್ಶನದಲ್ಲಿ ಆಯ್ಕೆಯಾಗುವ ಹುಡುಗರಿಗೆ ಮೊದಲು ತರಬೇತಿ ನೀಡುವುದು. ಮಾರಾಟದ ಸೂತ್ರಗಳು, ಮಾರುಕಟ್ಟೆಯ ಸ್ವಭಾವ, ನಮ್ಮ ಗ್ರಾಹಕರನ್ನು ಮತ್ತು ಸಂಸ್ಥೆಗಳನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಎಂಬ ಸಂಗತಿಗಳ ಬಗ್ಗೆ ಕೆಲಸಗಾರರಿಗೆ ತಿಳಿಸಿಕೊಟ್ಟು ನಂತರ ಅವರನ್ನು ಕ್ಷೇತ್ರಕ್ಕೆ ಕಳುಹಿಸುವ ಮಾರ್ಗ ಕಂಡು ಕೊಂಡ ನಂತರ ಯಶಸ್ವಿಯಾದೆ. ಇಷ್ಟೆಲ್ಲ ಶ್ರಮದ ಫಲವಾಗಿ ಕಂಪೆನಿ 13 ವರ್ಷಗಳಲ್ಲಿ ನಿರೀಕ್ಷೆ ಮೀರಿ ಬೆಳೆದಿದೆ' ಎಂದು ಹೇಳುವಾಗ  ಅವರ ಮೊಗದಲ್ಲಿ ಸಂತಸದಲ್ಲಿ ಹೊನಲು.ಒಂದು ವಲಯದಲ್ಲಿ ಯಶಸ್ಸು ಕಂಡ ಸತ್ಯನಾರಾಯಣ, ತಮ್ಮಂತೆಯೇ ಗೊಂದಲದಲ್ಲಿದ್ದ ಇತರೆ ಉದಯೋನ್ಮುಖ ಉದ್ಯಮಿಗಳಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡುವ `ಕನ್ಸ್ಯುಮ್ಯಾಕ್ಸ್' ವ್ಯಕ್ತಿತ್ವ ವಿಕಸನ ಸಂಸ್ಥೆಯನ್ನೂ ಹುಟ್ಟು ಹಾಕಿದರು. ಯುವ ಹಾಗೂ ಉತ್ಸಾಹಿ ಉದ್ಯಮಿಗಳಿಗೆ ತರಬೇತಿ ನೀಡುವ ಈ ಸಂಸ್ಥೆಯಲ್ಲಿ ಈವರೆಗೆ 7500 ಜನ ಈಗಾಗಲೇ ತರಬೇತಿ ಪಡೆದಿದ್ದಾರೆ.ಮುಂದಿನ ವರ್ಷ ಮತ್ತೆ ಹತ್ತು ಸಾವಿರ ಜನರಿಗೆ ಮಾರ್ಗದರ್ಶನ ನೀಡುವ ಗುರಿ `ಕನ್ಸ್ಯುಮ್ಯಾಕ್ಸ್'ನದ್ದಾಗಿದೆ.ಹೀಗೆ ಹಂತ ಹಂತವಾಗಿ ಬೆಳೆದುಬಂದ ಕಂಪೆನಿ ಈಗ ಒಟ್ಟು 500 ಮಂದಿಗೆ ಉದ್ಯೋಗ ನೀಡಿದೆ. ರಾಜ್ಯದಾದ್ಯಂತ ಇರುವ 21 ಶಾಖೆಗಳಿಂದ ಪ್ರತಿವರ್ಷ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದೆ. ಸೇಲ್ಸ್‌ಮನ್‌ಗಳು, ಬ್ರಾಂಚ್ ಆಫೀಸರ್ಸ್ ಯೋಗ್ಯತಾನುಸಾರ ವೇತನ-ಭತ್ಯೆ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಸತ್ಯನಾರಾಯಣ ಅವರ ಮಾತಿನಲ್ಲಿ ಅಂದುಕೊಂಡಿದ್ದನ್ನು ಕಷ್ಟಪಟ್ಟು ಸಾಧಿಸಿದ ಹೆಮ್ಮೆ, ಸಮಾಧಾನದ ಛಾಯೆ.

ಬಡ ಯುವಕರಿಗೆ ಉದ್ಯೋಗ-ಗುರಿ

`ನೇರ ಮಾರುಕಟ್ಟೆ ಒಂದು ಉದ್ಯಮ ಎನ್ನುವುದಕ್ಕಿಂತ ಒಂದು ಕಲೆ ಎಂದೇ ಹೇಳಬಹುದು. ಇಲ್ಲಿ ಪದವಿಗಿಂತ ಮುಖ್ಯವಾದ ಅಂಶ ಸಾಮರ್ಥ್ಯ. ಅಂತೆಯೇ ಸಂದರ್ಶನಕ್ಕೆ ಬರುವ ಹುಡುಗನಿಗೆ ದುಡಿಯುವ ಅಗತ್ಯ ಎಷ್ಟಿದೆ? ಆತನಲ್ಲಿ ಬೆಳೆಯುವ ಹಂಬಲ ಹೇಗಿದೆ? ಶ್ರಮ ವಹಿಸಿ ದುಡಿಯುವ ಮನಸ್ಸು ಇದೆಯೆ? ಎಂಬುದನ್ನೆಲ್ಲ ಗಮನವಿಟ್ಟು ಮೊದಲು ಕಂಡುಕೊಳ್ಳಲಾಗುತ್ತದೆ. ಮುಂದಿನದನ್ನು ಹೇಗೂ ಕಲಿಸಿಕೊಡಬಹುದು'.`ಈ ಕ್ಷೇತ್ರದಲ್ಲಿ ಭಯ-ಸಂಕೋಚ ಇರಬಾರದು. ಗ್ರಾಹಕರ ಮನ ಒಲಿಸಲು ಉತ್ತಮ ವಾಕ್ ಚಾತುರ್ಯ ಇರಬೇಕು. ಶಿಸ್ತು ಸಂಯಮವೂ ಬೇಕು. ಇದೆಲ್ಲಕ್ಕೂ ಮೊದಲು ನಮ್ಮ ಉದ್ಯೋಗವನ್ನು ನಾವು ಪ್ರೀತಿಸಬೇಕು. ಇಷ್ಟಾದರೆ ನೇರ ಮಾರುಕಟ್ಟೆ ಹೀರೊ ಯಾರು ಬೇಕಾದರೂ ಆಗಬಹುದು ಎನ್ನುವುದೇ ಸತ್ಯನಾರಾಯಣ ಅವರ  `ಉದ್ಯಮ ಮಂತ್ರ'. ಅವರು 2013ನೇ ಸಾಲಿನಲ್ಲಿ ಕನಿಷ್ಠ ಎರಡು ಸಾವಿರ ಬಡ ಯುವಕರಿಗೆ ಉದ್ಯೋಗ ನೀಡುವ ಗುರಿ ಇಟ್ಟುಕೊಂಡಿದ್ದಾರೆ.`ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲೇ, ಸಂಜೆ ಕಾಲೇಜಿನಲ್ಲಿ ಪದವಿ ಗಳಿಸಿದ್ದು ಬಿಟ್ಟರೆ ಹೇಳಿಕೊಳ್ಳುವಂತಹ ಹೆಚ್ಚಿನ ವಿದ್ಯಾರ್ಹತೆ ಏನೂ ಇಲ್ಲ. ಜೀವನದಲ್ಲಿ ಮುಂದೆ ಬರಬೇಕು ಎನ್ನುವ ಛಲ. ಅದರತ್ತ ಓಡುವ ಕಾತರ, ಶ್ರಮ ಇದೇ ನನ್ನ ವಿದ್ಯಾರ್ಹತೆ' ಎನ್ನುವ ಸತ್ಯನಾರಾಯಣ ಅವರು, ಬಡ, ನಿರ್ಗತಿಕ ಯುವಕರಿಗೆ ಅವಕಾಶ ನೀಡಿ ತಮ್ಮಂದಿಗೆ ಅವರನ್ನೂ ಎತ್ತರಕ್ಕೇರಿಸುವ ಗುರಿ ಹೊಂದಿದ್ದಾರೆ.`ಅಂದು ಕಣ್ಣಿನಲ್ಲಿ ಮಡುಗಟ್ಟಿದ್ದ ಕನಸುಗಳು ಇಂದು ಸಾಕಾರಗೊಂಡಿವೆ. ಅಂಥದ್ದೇ ಬಂಗಲೆ, ಕಾರು... ಎಲ್ಲ ಇದೆ. ಆದರೆ, ಅಪ್ಪ ನನ್ನೊಂದಿಗಿಲ್ಲ ಎನ್ನುವುದೊಂದೇ ನೋವು. ಅಮ್ಮ, ತಮ್ಮಂದಿರು, ಪತ್ನಿ, ಎರಡು ಮುದ್ದು ಮಕ್ಕಳ ಸುಃಖ ಸಂಸಾರ'...ನಮ್ಮಂತವರ ಕನಸು ಸಾಕಾರಗೊಳ್ಳಬೇಕು ಎಂದರೆ ಕಠಿಣ ಪರಿಶ್ರಮವೊಂದೇ ದಾರಿ. ಇಂದಿಗೂ ದಿನದಲ್ಲಿ 18 ತಾಸು ಕೆಲಸ ಮಾಡುತ್ತೇನೆ. ಅಂದು ಅನಿವಾರ್ಯವಾಗಿದ್ದ ದುಡಿಮೆ ಇಂದು ಚಟವಾಗಿ ಬಿಟ್ಟಿದೆ' ಎನ್ನುತ್ತಾ ಸತ್ಯನಾರಾಯಣ ಮತ್ತೆ 2013ರ ಕನಸಿಗೆ ಜಾರಿದರು(ಮೊ: 98450 35183).

ಹೆಚ್ಚಿನ ಮಾಹಿತಿಗೆ   www.consumax.netಸೇಲ್ಸ್‌ಮನ್-ಬಾಗಿಲು ತೆಗೀರಿ...

`ಏಕೊ ಗೊತ್ತಿಲ್ಲ, `ಸೇಲ್ಸ್‌ಮನ್' ಎಂದರೆ ಜನರಿಗೆ ತಿರಸ್ಕಾರ.`ಸೇಲ್ಸ್‌ಮನ್' ಎಂದಕೂಡಲೇ ತೆರೆದುಕೊಂಡ ಬಾಗಿಲು ಪಟಾರನೇ ಮುಖಕ್ಕೆ ರಾಚಿದಂತೆ ಮುಚ್ಚಿಕೊಳ್ಳುತ್ತವೆ. ಕೆಲವರಂತೂ ಕಿಟಕಿಯಿಂದಲೇ ನೋಡಿ ಸಾಗಹಾಕುತ್ತಾರೆ. ಬಾಗಿಲನ್ನೂ ತೆಗೆಯುವುದಿಲ್ಲ. `ಮುಂದಿನ ಮನೆಗೆ ಹೋಗಪ್ಪ' ಅಂತ ಭಿಕ್ಷುಕರಂತೆ ನಡೆಸಿಕೊಂಡ ಉದಾಹರಣೆಗಳೂ ಇವೆ. ಅದಕ್ಕೆಲ್ಲ ನಾನೇ ಸಾಕ್ಷಿಯಾಗಿದ್ದೇನೆ. ಇಂಥ ವರ್ತನೆಗಳಿಂದ ಕಣ್ಣೀರು ಹಾಕಿದ್ದೂ ಇದೆ. ಇವರೇಕೆ ನಮ್ಮನ್ನು ಇಷ್ಟು ಕನಿಷ್ಠವಾಗಿ ಕಾಣುತ್ತಾರೆ? ಎಂದು ಹಲುಬುತ್ತ ಊಟ ಮಾಡದೇ ಆ ಇಡೀ ರಾತ್ರಿ ಹೊರಳಾಡಿದ್ದೇನೆ'.ಸತ್ಯನಾರಾಯಣ ಹಳೆಯ ದಿನಗಳನ್ನು ನೆನಪಿಸಿಕೊಂಡರು.ನನ್ನ ಸ್ಥಿತಿಯಷ್ಟೇ ಅಲ್ಲ, ಈ ವೃತ್ತಿಯಎಲ್ಲ ಹುಡುಗರ  ಪಾಡೂ ಇದೇ ಎಂಬುದು ತಿಳಿಯಿತು. ಈ ವೃತ್ತಿಯನ್ನು ಪ್ರೀತಿ-ಗೌರವದಿಂದ ನಿರ್ವಹಿಸುವಂತೆ ಯುವಕ/ಯುವತಿಯರನ್ನು ತಯಾರು ಮಾಡಬೇಕು. ಗೌರವದ ಬದುಕು ಕಲ್ಪಿಸಿಕೊಡುವ ಜತೆಗೆ ಈ ವೃತ್ತಿಯನ್ನು ಸಮಾಜವೂ ಒಪ್ಪಿಕೊಳ್ಳುವಂತೆ ಮಾಡಬೇಕು ಎಂಬ ಹಟವೇ ಕಂಪೆನಿಯ ಹುಟ್ಟಿಗೆ ಕಾರಣವಾಯಿತು'.`ಈ ವೃತ್ತಿಗೆ ಗೌರವ ತಂದುಕೊಡಬೇಕು ಎಂಬ ಕನಸು ನನಸಾಗಿದೆ. ಈಗ ಸೇಲ್ಸ್‌ಮನ್‌ಗಳೂ ಬದಲಾಗಿದ್ದಾರೆ. ಅವರನ್ನು ನಡೆಸಿಕೊಳ್ಳುವ ಗ್ರಾಹಕರ ಮನಸ್ಥಿತಿಯೂ ಸ್ವಲ್ಪ ಮಟ್ಟಿಗೆ ಬದಲಾಗಿದೆ. ಕನಿಷ್ಠ ಪಕ್ಷ ಬಾಗಿಲು ತೆಗೆದು ವಸ್ತುಗಳನ್ನು ನೋಡುತ್ತಾರೆ. ನಾವು ಮೋಸಗಾರರಲ್ಲ, ಕಳ್ಳರೂ ಅಲ್ಲ. ನಮ್ಮಲ್ಲಿ ಉತ್ಪನ್ನ ಖರೀದಿಸುವುದರಿಂದ ಅವರಿಗೂ ಲಾಭವಿದೆ ಎಂಬ ಸತ್ಯವನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ. ಇದಕ್ಕಿಂತಲೂ ದೊಡ್ಡ ಸಾಧನೆ ಯಾವುದೂ ಇಲ್ಲ'...ಉದ್ಯಮ ಬೆಳೆದ ಪರಿ

*  ಮೊದಲು ಪ್ರಿಂಟಿಂಗ್ ಪ್ರೆಸ್‌ಗೆ 50000 ಸಾಲ

*  ಶೇ 10ರ ದರದ ಮಾಸಿಕ ಬಡ್ಡಿ ಹೊರೆ

*   ಅನನುಭವದಿಂದ 5 ಲಕ್ಷಕ್ಕೇರಿದ ಸಾಲ

* ನಂತರ ಸೇಲ್ಸ್‌ಮನ್ ವೃತ್ತಿ-ಸವಾಲು

* 1999ರಲ್ಲಿ `ಕನ್ಸ್ಯುಮರ್ ವರ್ಲ್ಡ್' ಕಂಪೆನಿ

* ಆರಂಭಿಕ ಬಂಡವಾಳ ರೂ. 10,000

*  ದಿನದಲ್ಲಿ 18 ತಾಸು ದುಡಿಮೆ

*  ಈಗ 500 ಮಂದಿಗೆ ಉದ್ಯೋಗ

* ವಾರ್ಷಿಕ ಕೋಟಿ ರೂಪಾಯಿ ವಹಿವಾಟು

* ಕನ್ಸ್ಯುಮ್ಯಾಕ್ಸ್' ವ್ಯಕ್ತಿತ್ವ ವಿಕಸನ ಸಂಸ್ಥೆ

* 75000 ಮಂದಿಗೆ ತರಬೇತಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry