`ಬಣಜಿಗರು ಬಸವಣ್ಣನ ವಾರಸುದಾರರು'

7

`ಬಣಜಿಗರು ಬಸವಣ್ಣನ ವಾರಸುದಾರರು'

Published:
Updated:

ಬೀಳಗಿ: ಶೋಷಣಾರಹಿತ ಸಮಾಜ ನಿರ್ಮಾಣದ ಕನಸು ಕಂಡು ಹೋರಾಟ ಮಾಡಿದ ಬಸವಣ್ಣನ ಹಾಗೂ ಅವರ ಪರಿವಾರದವರ ನೇರ ವಾರಸುದಾರರು ಬಣಜಿಗರಾಗಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ರಾಷ್ಟ್ರಮಟ್ಟದ ಅಧಿಕಾರ ದೊರೆತಾಗಲೂ ಬಣಜಿಗ ಸಮಾಜದ ನಾಯಕರು ಸಂಕುಚಿತ ಮನೋಭಾವ ಹೊಂದದೇ ಎಲ್ಲ ವರ್ಗದ ಏಳ್ಗೆಗೆ  ಶ್ರಮಿಸಿದ್ದಾರೆಂದು ವಿಧಾನಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಹೇಳಿದರು.ಬುಧವಾರ ಇಲ್ಲಿನ ಮಿನಿ ವಿಧಾನಸೌಧದ ಹೊರಾಂಗಣದಲ್ಲಿ ನಡೆದ ತಾಲ್ಲೂಕು ಬಣಜಿಗ ಸಮಾಜದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬಣಜಿಗರೇ ಪ್ರೇರಕ ಶಕ್ತಿ. ಮಠಮಾನ್ಯಗಳು ಶೈಕ್ಷಣಿಕ ರಂಗದಲ್ಲಿ ಕ್ರಾಂತಿಯನ್ನು ಮಾಡಿವೆ. ಬಣಜಿಗ ಸಮಾಜದವರು ತಮ್ಮ ಕಾಯಕದ ಆದಾಯದಿಂದ ಬಂದ ಬಹುಭಾಗವನ್ನು ಮಠಗಳಿಗೆ ನೆರವು ನೀಡಿ ಪ್ರೇರಕ ಶಕ್ತಿಯಾಗಿ ನಿಂತಿದ್ದರಿಂದಲೇ ಇದು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಾವು ವಿಧಾನಪರಿಷತ್ ಸಭಾಪತಿ, ಜಗದೀಶ ಶೆಟ್ಟರ್ ವಿಧಾನಸಭಾಧ್ಯಕ್ಷರು. ನಾವು ಮೂವರು ಬಣಜಿಗರು ಸೇರಿ ತೆಗೆದುಕೊಂಡ ನಿರ್ಣಯವೇ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣಗೊಳ್ಳಲು ಕಾರಣವಾಯಿತು ಎಂದು ತಿಳಿಸಿದರು.ರಾಜ್ಯ ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಗವಿಸಿದ್ದಪ್ಪ ಕೊಪ್ಪಳ ಧ್ವಜಾರೋಹಣ ನೆರವೇರಿಸಿದರು. ಕರ್ನಾಟಕದ ಇತಿಹಾಸ ಬರೆಯುವಾಗ ಬಣಜಿಗ ಸಮಾಜವನ್ನು ನಿರ್ಲಕ್ಷಿಸಿ ಬರೆದರೆ ಅಪೂರ್ಣವಾಗುವುದು. ಮಹಿಳೆಯರು ಅನಕ್ಷರಸ್ಥರಾಗಿದ್ದರೂ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುತ್ತಿದ್ದರು. ಇಂದಿನ ಮಹಿಳೆಯರು ಅಕ್ಷರಸ್ಥರಾಗಿದ್ದರೂ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.

ದಕ್ಷಿಣ ಕಾಶಿ ಗವಿಮಠದ ಸ್ವತಂತ್ರ ಬಸವಲಿಂಗ ಶಿವಯೋಗಿಗಳು, ಶಿರೋಳ ಸಿದ್ಧಾರೂಢ ಮಠದ ಶಂಕರಾರೂಢ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬಣಜಿಗ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ನಿಂಗನೂರ ಅಧ್ಯಕ್ಷತೆವಹಿಸಿದ್ದರು.ತಾತಾಸಾಹೇಬ ಬಾಂಗಿ ಬಸವೇಶ್ವರರ ಭಾವಚಿತ್ರಕ್ಕೆ, ಡಾ. ಮಧುಬಾಲಾ ಲಿಗಾಡೆ ಅವರು ಜಯದೇವಿತಾಯಿ ಲಿಗಾಡೆ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಪ್ರಕಾಶ ತಪಶೆಟ್ಟಿ ಯುವ ಘಟಕವನ್ನು, ತಾರಾದೇವಿ ವಾಲಿ ಮಹಿಳಾ ಘಟಕವನ್ನು ಧ್ವಜ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಶಿವಾನಂದ ಶೆಲ್ಲಿಕೇರಿ ಸಂಪಾದನೆಯ `ಸಿರಿ ಬಣಜಿಗ' ಸ್ಮರಣ ಸಂಚಿಕೆಯನ್ನು ಚಲನಚಿತ್ರ ನಟ ಎಸ್. ದೊಡ್ಡಣ್ಣ ಲೋಕಾರ್ಪಣೆ ಮಾಡಿದರು.ಶಾಸಕರಾದ ಎಂ.ಕೆ.ಪಟ್ಟಣಶೆಟ್ಟಿ, ಮಹಾಂತೇಶ ಕೌಜಲಗಿ, ಉದ್ಯಮಿಗಳಾದ ಲಿಂಗರಾಜ ವಾಲಿ, ಎನ್.ಬಿ. ಬನ್ನೂರ, ಡಾ. ಚಂದ್ರಶೇಖರ ಸಾಂಬ್ರಾಣಿ, ಸಿದ್ದಣ್ಣ ಸಕ್ರಿ, ರಾಜೇಂದ್ರ ತಪಶೆಟ್ಟಿ, ಪ್ರೇಮಕ್ಕ ಅಂಗಡಿ ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಬಣಜಿಗ ಸಮಾಜದ ಸಾಧಕರನ್ನು, ವಿಶ್ವಸ್ಥ ಮಂಡಳಿಯ ಸದಸ್ಯರನ್ನು ಸನ್ಮಾನಿಸಲಾಯಿತು.ಇದಕ್ಕೂ ಮುನ್ನ ಪೂರ್ಣ ಕುಂಭ ಹೊತ್ತ ಎರಡು ಸಾವಿರಕ್ಕೂ ಹೆಚ್ಚು ಮಹಿಳೆಯರು ಬಸವೇಶ್ವರ ದೇವಸ್ಥಾನದಿಂದ ವಿವಿಧ ವಾದ್ಯ ವೈಭವಗಳೊಂದಿಗೆ, ಜನಪದ ಕಲಾ ತಂಡಗಳ ಮೆರವಣಿಗೆ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು ವೇದಿಕೆಗೆ ತಲುಪಿದರು.ಮಕ್ಕಳು ಬಸವಣ್ಣ, ಚನ್ನಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ವರ್ತಕರ ಪೋಷಾಕು ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಬಸವರಾಜ ಖೋತ ಸ್ವಾಗತಿಸಿದರು. ಮಲ್ಲಿಕಾರ್ಜುನ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದಣ್ಣ ಬಾಗಶೆಟ್ಟಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry