ಶನಿವಾರ, ಮೇ 28, 2022
26 °C

ಬಣವೆ ಸುತ್ತ ನಕಲಿ ವಿದ್ಯುತ್ ತಂತಿ!

ವಿಶೇಷ ವರದಿ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಣವೆ ಸುತ್ತ ನಕಲಿ ವಿದ್ಯುತ್ ತಂತಿ!

ಗುಲ್ಬರ್ಗ: ಇದು ಕಾಡುಹಂದಿ ದಾಳಿ ತಡೆಯಲು ರೈತರೇ ಕಂಡುಕೊಂಡ ಉಪಾಯ. ಖರ್ಚು ಅಲ್ಪ; ಲಾಭ ಮಾತ್ರ ಅಪಾರ! ಹೊಲದಲ್ಲಿ ಒಟ್ಟಿದ ಮೇವು ಕಾಡುಹಂದಿಗಳಿಂದ ಹಾಳಾಗುವುದನ್ನು ತಡೆಯಲು, ಆ ಪ್ರಾಣಿಗಳಿಗೇ `ಮೋಸ~ ಮಾಡುವ ವಿಧಾನವಿದು.ರಾಶಿಯಾದ ಬಳಿಕ ಮೇವನ್ನು ರೈತರು ಮನೆಗೆ ಸಾಗಿಸಿ, ಒಟ್ಟುತ್ತಾರೆ. ಮನೆಯ ಹಿತ್ತಿಲು ಅಥವಾ ಕೊಟ್ಟಿಗೆಯಲ್ಲಿ ಸ್ಥಳಾವಕಾಶ ಇಲ್ಲದೇ ಹೋದರೆ ಹೊಲದಲ್ಲೇ ಬಣವೆ ಒಟ್ಟುತ್ತಾರೆ. ಅಂಥ ಸಂದರ್ಭದಲ್ಲಿ ಬಣವೆ ಮೇಲೆ ಮಣ್ಣಿನ ಹೆಂಟೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿ, ಮೇಲ್ಭಾಗದಲ್ಲಿ ಜಾಲಿ ಅಥವಾ ಇನ್ನಾವುದೇ ಗಿಡದ ಮುಳ್ಳು ಹೊದೆಸುತ್ತಾರೆ. ಬೇರೆ ಬಿಡಾಡಿ ದನಗಳು, ಬಣವೆಯನ್ನು ಕೆದಕಿ ಮೇವು ತಿನ್ನದಂತೆ ಮಾಡಲು ಈ ವಿಧಾನ ಅನುಸರಿಸಲಾಗುತ್ತದೆ.ಆದರೆ ಕಾಡಹಂದಿಗಳಿಗೆ ಈ ರಕ್ಷಣಾ ವ್ಯವಸ್ಥೆ ಲೆಕ್ಕಕ್ಕೇ ಇಲ್ಲ. ರಾತ್ರಿ ಸಮಯಲ್ಲಿ ನಾಲ್ಕಾರು ಹಂದಿಗಳು ಒಮ್ಮೆಲೇ ಧಾವಿಸಿ, ಬಣವೆಯನ್ನು ಒಂದು ಕಡೆಯಿಂದ ಕೆದಕುತ್ತವೆ. ಅಷ್ಟಕ್ಕೂ ಇವು ಮೇವು ತಿನ್ನುವುದಿಲ್ಲ; ಬದಲಾಗಿ ಅದರಲ್ಲಿ ಉಳಿದುಕೊಂಡಿರುವ ತೆನೆಗಳನ್ನು ಭಕ್ಷಿಸಲು ಹೀಗೆ ಮಾಡುತ್ತವೆ. ಸುತ್ತ ಮುಳ್ಳುಗಳಿದ್ದರೂ ಅವುಗಳನ್ನು ಲೆಕ್ಕಿಸದೇ ಒಂದು ಕಡೆ ಮಣ್ಣನ್ನು ಕೆದಕಿ ಮೇವಿನ ಮಧ್ಯೆ ಕಾಣುವ ತೆನೆ ತಿನ್ನಲು ಯತ್ನಿಸುತ್ತವೆ. ಈ ರೀತಿ ಕೆದಕುವಾಗ ಹಾಳಾಗುವ ಪ್ರಮಾಣವೇ ಹೆಚ್ಚು.ಈ ಕಾಟ ತಡೆಯಲು ರೈತರು ಉಪಾಯ ಕಂಡುಕೊಂಡಿದ್ದಾರೆ. ಅದೆಂದರೆ- ಬಣವೆ ಸುತ್ತ ತಂತಿ ಕಟ್ಟುವುರು. ನಾಲ್ಕೂ ಮೂಲೆಗಳಲ್ಲಿ ಸಾಮಾನ್ಯ ಕಟ್ಟಿಗೆ ತುಂಡು ನೆಟ್ಟು, ಅವುಗಳಿಗೆ ಬೈಂಡಿಂಗ್ ವೈರ್ ಸುತ್ತುತ್ತಾರೆ. ಇದು ನೆಲದಿಂದ ಸುಮಾರು ಎರಡು ಅಡಿ ಎತ್ತರದಲ್ಲಿ ಇರುತ್ತದೆ.ಸುಳಿಯುವುದೇ ಇಲ್ಲ

ತೋಟದ ರಕ್ಷಣೆಗೆ ವಿದ್ಯುತ್ ಬೇಲಿ ಇದ್ದ ಕಡೆ `ಕರೆಂಟ್ ಶಾಕ್~ ಅನುಭವಿಸಿದ ಕಾಡಹಂದಿಗಳು ಮತ್ತೆ ಅಂಥ ಕಡೆ ಹೋಗುವುದಿಲ್ಲ. ಇದನ್ನೇ ಅನುಸರಿಸಿ, ಸುಮ್ಮನೇ ತಂತಿ ಬಿಗಿದಿದ್ದರೂ ಅದನ್ನು ಮುಟ್ಟಿ ಶಾಕ್ ಹೊಡೆಸಿಕೊಳ್ಳುವ ಭಯದಿಂದ ಕಾಡುಹಂದಿಗಳು ಅತ್ತ ಸುಳಿಯುವುದೇ ಇಲ್ಲ. “ನನ್ನ ಹೊಲದಲ್ಲಿನ ಈ ಬಣವೆ ಮೇಲ್ಭಾಗ ಕೆದಕಿದ ಕಾಡುಹಂದಿಗಳು ತಿನ್ನೋದಕ್ಕಿಂತ ಹಾಳು ಮಾಡಿದ್ದೇ ಜಾಸ್ತಿ. ಆದರೆ ಪಕ್ಕದಲ್ಲಿರುವ ಬಣವೆ ನೋಡಿ... ಅದರ ಸುತ್ತ ಸುಮ್ಮನೇ ತಂತಿ ಸುತ್ತಿದ್ದೊಂದೇ ನಾನು ಮಾಡಿದ್ದು. ಕರೆಂಟ್ ಕನೆಕ್ಷನ್ ಕೊಟ್ಟೇ ಇಲ್ಲ. ಆದರೂ ಅದರ ಸಮೀಪ ಹಂದಿ ಹೋಗಿಲ್ಲ” ಎಂದು ಸ್ಟೇಷನ್ ಬಬಲಾದ ಗ್ರಾಮದ ರೈತ ಸಣ್ಣಪ್ಪ `ಪ್ರಜಾವಾಣಿ~ ಜತೆ ತಮ್ಮ ಅನುಭವ ಹಂಚಿಕೊಂಡರು.ವಿದ್ಯುತ್ ಇಲ್ಲದಿದ್ದರೂ ಅದು ಕಾಡುಹಂದಿಗಳಿಗೆ ಗೊತ್ತಾಗುವುದಿಲ್ಲ. ಬರೀ ತಂತಿ ನೋಡಿಯೇ ಅತ್ತ ಹೋಗದಂತೆ ರೈತರು ಬಣವೆ ರಕ್ಷಣೆಗೆ ಮಾಡುವ ಈ ತಂತ್ರ ವಿಶಿಷ್ಟವಲ್ಲವೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.