ಬಣ್ಣ

7
ಆಕಾರ ಮತ್ತು ಕೌತುಕ

ಬಣ್ಣ

Published:
Updated:
ಬಣ್ಣ

ಕಲಾವಿದನ ಕೌತುಕ, ಜಗತ್ತನ್ನು ನೋಡುವ ಬೆರಗುಗಣ್ಣು, ಹುಟ್ಟುವ ಪ್ರಶ್ನೆ, ಕಂಡುಕೊಳ್ಳುವ ಇಲ್ಲವೆ ಕಂಡುಕೊಳ್ಳಲಾಗದ ಉತ್ತರಗಳು, ಉಳಿಯುವ ಶೇಷ, ಪಡೆಯುವ ಉಪಲಬ್ಧ... ಕಲಾಕೃತಿಗಳ ರೂಪ ಪಡೆಯುತ್ತವೆ!

ಚಿತ್ರಕಲೆ ಮತ್ತು ಕಲಾವಿದನ ಒಳಗನ್ನು ಬಗೆಯುವ ಕಲಾಕೃತಿ ಬರಿಯ ಬಣ್ಣ ಮತ್ತು ಆಕಾರಗಳಷ್ಟೆ ಆಗಿರುವುದಿಲ್ಲ. ಅಲ್ಲಿ ಬದುಕಿನ ನೋಟ, ಹೊಳಹು, ಸತ್ಯಮಿಥ್ಯೆಗಳು, ಅಕ್ಷರದಲ್ಲಿ ಸಿಗದೆ ಬರಿಗಣ್ಣಿಗೋ ಒಳಗಣ್ಣಿಗೋ ಮಾತ್ರ ನಿಲುಕಬಲ್ಲಂಥ ವಾಸ್ತವಗಳಿರುತ್ತವೆ. ಪ್ರತಿ ವೀಕ್ಷಣೆಯಲ್ಲಿಯೂ ಹೊಸ ಬಗೆಯಲ್ಲಿ ಎದುರಾಗುವ ಕಲಾಕೃತಿ ಅನುಭೂತಿಯನ್ನೂ ಕಟ್ಟಿಕೊಡಬಲ್ಲದು.

ನಲಪದ್ ಹೋಟೆಲ್ ಬೆಂಗಳೂರು ಇಂಟರ್‌ನ್ಯಾಷನಲ್‌ನಲ್ಲಿರುವ ಗ್ಯಾಲರಿ ಕ್ರೆಸೆಂಟ್‌ನಲ್ಲಿ ಶನಿವಾರ ಆರಂಭವಾಗಲಿರುವ ಏಳು ಮಂದಿ ಕಲಾವಿದರ ಚಿತ್ರಕಲಾ ಪ್ರದರ್ಶನ ಇಂತಹುದೊಂದು ಅನುಭವವನ್ನು ನೀಡುವುದು ನಿಶ್ಚಿತ.

ಅಬ್‌ಸ್ಟ್ರಾಕ್ಟ್‌ನಿಂದ ವಾಸ್ತವ (ರಿಯಾಲಿಸ್ಟಿಕ್)ದವರೆಗಿನ ಬಹುಬಗೆಯ ಹರಹುಗಳಲ್ಲಿವೆ ಇಲ್ಲಿನ ಕಲಾಕೃತಿಗಳು.

ಕೋಲ್ಕತ್ತಾದ ಆನಂದ್ ಸಿಂಗ್, ಮಂಗಳೂರಿನ ಅನಿಲ್ ದೇವಾಡಿಗ, ಮುಂಬೈಯ ಸುನಿಲ್ ಜಾಧವ್ ಮತ್ತು ದೀಪಕ್ ಗುಡ್ಡದಕೇರಿ, ಹೈದರಾಬಾದ್‌ನ ರಾಜು ಎಪುರಿ, ಶಿವಾಜಿ ತಲ್ಲವಜುಲ ಮತ್ತು ಸುಂದರ್ ವಾಲ್ಕರ್ ಹಾಗೂ ಸುನಿಲ್ ಜಾಧವ್ ಅವರು ತಮ್ಮ ಕಲಾಕೃತಿಗಳನ್ನು ಈ ಬಾರಿ ಪ್ರದರ್ಶಿಸಲಿದ್ದಾರೆ.

ತೇವವಿಲ್ಲದ ಬ್ರಶ್‌ನ ಹೆಜ್ಜೆಜಾಡುಗಳನ್ನು ಹೊತ್ತು ತೀರಾ ವಾಸ್ತವವೆನಿಸುವ ಆನಂದ್ ಅವರ ಕಲಾಕೃತಿಗಳು ಆಪ್ತವೆನಿಸುತ್ತವೆ. ಕಲಾವಿದರ ನೆಚ್ಚಿನ ಬುದ್ಧ, ಗಣೇಶ ಮತ್ತು ಮನುಷ್ಯರ ನಾನಾ ಮುಖಗಳನ್ನು ಅವರೂ ದಾಖಲಿದ್ದಾರೆ. ಇದು ತಮ್ಮ ಹೊಸ ಪ್ರಯತ್ನಗಳನ್ನು ಪರಿಚಯಿಸುವಲ್ಲಿ ಅವರು ಸೋತಂತೆ ಭಾಸವಾಗುತ್ತದೆ.

ಅನಿಲ್ ದೇವಾಡಿಗ ಆಕಾರ ಮತ್ತು ನಿರಾಕಾರಗಳೊಂದಿಗೆ ತಮ್ಮ ಕೈಚಳಕ ಅಥವಾ ಕುಂಚದ ಚಳಕವನ್ನು ಪ್ರದರ್ಶಿಸಿದ್ದಾರೆ. ಬಣ್ಣಗಳ ಸಂಯೋಜನೆಯಲ್ಲೇ ಕೌತುಕವನ್ನು ಕಟ್ಟಿಕೊಟ್ಟಿರುವುದು ಮತ್ತೊಬ್ಬ ಕಲಾವಿದ ದೀಪಕ್ ಗುಡ್ಡದಕೇರಿ ಅವರ ವೈಶಿಷ್ಟ್ಯ. ಮಹಿಳೆ, ಪುರುಷ ಮತ್ತು ಅವರ ಭಾವಗಳನ್ನು ಭಾವುಕವಾಗಿಯೇ ಪಡಿಮೂಡಿಸುವುದರಲ್ಲಿ ನಿಪುಣರು.

ಸಾಮಾನ್ಯವಾದ ಗ್ರಾಮೀಣ ಬದುಕಿಗೆ ಕುಂಚ ಸ್ಪರ್ಶ ನೀಡಿ ಚಿತ್ರಕಾವ್ಯ ಮೂಡಿಸುವುದು ಶಿವಾಜಿ ಅವರಿಗೆ ಅಚ್ಚುಮೆಚ್ಚು. ಗ್ರಾಮೀಣ ಹೆಣ್ಣುಮಕ್ಕಳು, ಅವರ ಪರಿಸರದೊಂದಿಗೆ ಬೆಸೆದಿರುವ ಬಂಧನ ಇತ್ಯಾದಿ ಅವರ ಕಲಾಕೃತಿಗಳಿಗೆ ಜೀವ ತುಂಬುವ ಪೂರಕ ಅಂಶಗಳು. ಹೈದರಾಬಾದ್ ಮೂಲದ ಸುಂದರ್ ವಾಲ್ಕರ್ ಅವರು ಇಂಗ್ಲೆಂಡ್ ನಿವಾಸಿ. ಅಲ್ಲಿಯೂ ತಮ್ಮ ಕಲಾಯಾನವನ್ನು ಮುಂದುವರಿಸಿರುವ ಸುಂದರ್, ಲ್ಯಾಂಡ್‌ಸ್ಕೇಪ್‌ಗಳನ್ನು ಚಿತ್ರಿಸುವಲ್ಲಿ ಗಂಭೀರ ಪ್ರಯತ್ನ ಮಾಡುತ್ತಲೇ ಇದ್ದಾರೆ. ಅಂತಹ ಅವರ ಪ್ರಯತ್ನಗಳನ್ನು ಈ ಪ್ರದರ್ಶನದಲ್ಲಿ ಕಾಣಬಹುದು.

ವಾಸ್ತುಶಿಲ್ಪ ವೈಭವ ಛಾಯಾಗ್ರಾಹಕರಂತೆ ಕಲಾವಿದರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಸುನಿಲ್ ಜಾಧವ್ ಅವರನ್ನೂ ವಿವಿಧ ಐತಿಹಾಸಿಕ ಪಾರಂಪರಿಕ ತಾಣಗಳು ಸೆಳೆದಿವೆ. ವಾಸ್ತಶಿಲ್ಪವನ್ನು ವಿವಿಧ ಆಯಾಮಗಳಲ್ಲಿ ಅವರು ಪರಿಭಾವಿಸಿರುವ ರೀತಿ ಕಲಾಕೃತಿಗಳಲ್ಲಿ ದಟ್ಟವಾಗಿ ತೋರುತ್ತದೆ.

ಹೈಗ್ರೌಂಡ್ಸ್‌ನ ಕ್ರೆಸೆಂಟ್ ರಸ್ತೆಯಲ್ಲಿರುವ `ನಲಪದ್ ಹೋಟೆಲ್ ಬೆಂಗಳೂರು ಇಂಟರ್‌ನ್ಯಾಷನಲ್'ನಲ್ಲಿರುವ `ಗ್ಯಾಲರಿ ಕ್ರೆಸೆಂಟ್'ನಲ್ಲಿ ಈ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಶನಿವಾರದಿಂದ ಫೆ.15ರವರೆಗೂ ದಿನಾ ಬೆಳಿಗ್ಗೆ 11ರಿಂದ ಸಂಜೆ 7ರವರೆಗೂ ವೀಕ್ಷಣೆಗೆ ಲಭ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry