ಬಣ್ಣದಿಂದ ಬಣ್ಣಕ್ಕೆ!

7

ಬಣ್ಣದಿಂದ ಬಣ್ಣಕ್ಕೆ!

Published:
Updated:

ಹೊಸಚಿತ್ರಗಳ ಹಿನ್ನೆಲೆಯನ್ನು ಕೆದಕಿ: ನಾಯಕ ಚಿತ್ರದ ನಿರ್ಮಾಪಕನ ಮಗ ಇಲ್ಲವೇ ಸೋದರ. ನಿರ್ದೇಶಕ ನಾಯಕನ ಗೆಳೆಯ. ಇಂಥ ‘ಕೌಟುಂಬಿಕ ಚಿತ್ರ’ಗಳು ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಸಾಕಷ್ಟು ಬಂದುಹೋಗಿವೆ. ‘ಒಲವೇ ಮಂದಾರ’ ಚಿತ್ರದ ಹಿನ್ನೆಲೆ ಕೂಡ ಭಿನ್ನವಾದುದೇನಲ್ಲ. ಅದರ ನಿರ್ಮಾಪಕ ಬಿ.ಗೋವಿಂದರಾಜು ‘ರಾಜಕುಮಾರ್ ಅಭಿಮಾನಿಗಳ ಸಂಘ’ದೊಂದಿಗೆ ಗುರ್ತಿಸಿಕೊಂಡವರು. ತಮ್ಮ ಮಗ ಶ್ರೀಕಾಂತನಿಗೆ ನಾಯಕ ಪಟ್ಟ ದೊರಕಿಸಿಕೊಡಲಿಕ್ಕಾಗಿ ಅವರು ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ.ನಿರ್ಮಾಪಕ-ನಾಯಕನ ಸಂಬಂಧಕ್ಕಷ್ಟೇ ಹೋಲಿಕೆ ನಿಲ್ಲುತ್ತದೆ. ಶ್ರೀಕಾಂತ್ ಅವರನ್ನು ಮಾತನಾಡಿಸಿದರೆ ಉತ್ಸಾಹಿ ವ್ಯಕ್ತಿತ್ವವೊಂದು ಎದುರುಗೊಳ್ಳುತ್ತದೆ.ಹಾಗೆ ನೋಡಿದರೆ ಬಹುತೇಕ ನಾಯಕರಂತೆ ಶ್ರೀಕಾಂತ್ ಚಿಕ್ಕಂದಿನಿಂದ ಸಿನಿಮಾ ಕನಸು ಕಂಡ ಹುಡುಗನೇನಲ್ಲ. ಜಾಣ ವಿದ್ಯಾರ್ಥಿಯಂತೆ ಹೈಸ್ಕೂಲು ಮುಗಿಸಿದ ಚಿಗುರುಮೀಸೆಯ ತರುಣ ಬಣ್ಣದ ಕನಸುಗಳೊಂದಿಗೆ ಪ್ರವೇಶಿಸಿದ್ದು ಬೆಂಗಳೂರಿನ ಚಿತ್ರಕಲಾ ಪರಿಷತ್ತನ್ನು. ಪರಿಷತ್ತಿನ ಮೆಟ್ಟಿಲುಗಳ ಮೇಲೆ ಕನಸು ಕಾಣುತ್ತ ದಿನ ಕಳೆಯುತ್ತಿದ್ದ ಆತ, ಆರಂಭದಲ್ಲಿ ಚಿತ್ರಕಲೆಯ ಮಟ್ಟುಗಳನ್ನು ಗಂಭೀರವಾಗಿ ಪರಿಗಣಿಸಿದ್ದ. ವೃತ್ತಪತ್ರಿಕೆಗಳನ್ನು ಬಳಸಿಕೊಂಡು ಶ್ರೀಕಾಂತ್ ರೂಪಿಸಿದ್ದ ‘ಗ್ಲೋಬಲ್ ವಾರ್ಮಿಂಗ್’ ಬಗೆಗಿನ ಚಿತ್ರರೂಪಕ ಸಹೃದಯರ ಗಮನಸೆಳೆದಿತ್ತು. ಆ ದಿನಗಳಲ್ಲೇ ನೃತ್ಯ, ಸಂಗೀತದ ಸೆಳೆತಕ್ಕೂ ಆತ ಒಳಗಾದ.ಗೆಳೆಯನೊಬ್ಬ ರೂಪಿಸಿದ ವಿಡಿಯೊ ಇನ್‌ಸ್ಟಾಲೇಷನ್ ಶ್ರೀಕಾಂತ್ ಬದುಕಿನ ದಿಕ್ಕನ್ನೇ ಬದಲಿಸಿತು. ನಟನೆಯ ಹಸಿವು ಜಾಗೃತವಾದದ್ದು ಅಗಲೇ. ಚಿತ್ರಕಲಾವಿದರು ಸಿನಿಮಾ ನಿರ್ದೇಶಕರಾಗುವುದು ಅಪರೂಪವೇನಲ್ಲ. ಸೂರಿಯಿಂದ ಹುಸೇನ್‌ವರೆಗೆ ದೊಡ್ಡದೊಂದು ಪರಂಪರೆಯಿದೆ. ಆದರೆ, ಶ್ರೀಕಾಂತ್ ತುಳಿದದ್ದು ನಟನೆಯ ಹಾದಿಯನ್ನು. ಪರಿಷತ್ತಿನಲ್ಲಿದ್ದಾಗಲೇ ರಂಗಪ್ರವೇಶ ಮಾಡಿದ್ದೂ ಆಯಿತು.ನಟನಾಗುವ ಆಸೆಯನ್ನು ಮಗ ತೋಡಿಕೊಂಡಾಗ ಗೋವಿಂದರಾಜು ಅವರು ಒಂದೇ ಮಾತಿಗೆ ಹೂಂ ಎನ್ನಲಿಲ್ಲ. ಮೊದಲು ನಟನೆಯ ಪಟ್ಟುಗಳನ್ನು ಕಲಿತುಕೋ ಎಂದರು. ವೈಜಾಗ್‌ಗೆ ತೆರಳಿದ ಶ್ರೀಕಾಂತ್, ಅಲ್ಲಿನ ಇನ್‌ಸ್ಟಿಟ್ಯೂಟ್ ಒಂದರಲ್ಲಿ ನಟನೆಯ ಪ್ರಾಥಮಿಕ ಸಂಗತಿಗಳನ್ನು ಅರ್ಥ ಮಾಡಿಕೊಂಡಿದ್ದಾಯಿತು. ಫೈಟು, ನೃತ್ಯ- ಮುಂತಾಗಿ ಸಮಯ ಸರಿಯಿತು. ಮೂರು ವರ್ಷಗಳ ಸಿದ್ಧತೆಯ ನಂತರ ಮಗ ಎದುರು ನಿಲ್ಲುವ ವೇಳೆಗಾಗಲೇ ಗೋವಿಂದರಾಜು ಸಿನಿಮಾ ನಿರ್ಮಿಸಲು ಮನಸ್ಸು ಮಾಡಿಯಾಗಿತ್ತು.ಸಿನಿಮಾ ನಿರ್ಮಾಣದ ಕನಸಲ್ಲಿ ಆರಂಭವಾದದ್ದು ಕಥೆಗಳ ಹುಡುಕಾಟ. ಸುಮಾರು ಅರವತ್ತು ಕಥೆಗಳನ್ನು ಕೇಳಿದರೂ ಯಾವುದೂ ಅಪ್ಪಮಗನಿಗೆ ಇಷ್ಟವಾಗಲಿಲ್ಲ. ಕೊನೆಗೆ, ಜಯತೀರ್ಥ ಅವರು ಹೇಳಿದ ಕಥೆ ಇಬ್ಬರಿಗೂ ಭಿನ್ನವಾಗಿದೆ ಅನ್ನಿಸಿತು. ಹಾಗೆ ಸೆಟ್ಟೇರಿದ್ದು ‘ಒಲವೇ ಮಂದಾರ’.ಚಿತ್ರದಲ್ಲವರದು ಶ್ರೀಮಂತ ತಂದೆಯ ಮಗನ ಪಾತ್ರವಂತೆ. ನಿಜಜೀವನದಲ್ಲೂ ಅವರು ಶ್ರೀಮಂತ ತಂದೆಯ ಮಗನೇ. ಆದರೆ, ಈ ಅಪ್ಪಮಗನಿಗೆ ಸಿನಿಮಾ ಶೋಕಿಯ ಬಾಬತ್ತಲ್ಲ. ಬದಲಾಗಿ, ಅವರ ಪಾಲಿಗದು ಒಂದು ಪ್ರಯೋಗಶೀಲ ಮಾಧ್ಯಮ.ಹಾಗೆ, ಹಿರಿಯ ಕಲಾವಿದ ಬಿ.ಕೆ.ಎಸ್.ವರ್ಮ ಅವರ ಪುತ್ರ ಪ್ರದೀಪ್ ವರ್ಮ ‘ಒಲವೇ ಮಂದಾರ’ದ ಗೀತೆಗಳ ಶೃಂಗಾರದಲ್ಲಿ ನೆರವಾಗಿದ್ದಾರಂತೆ.ಪ್ರದೀಪ್ ಹಾಗೂ ಶ್ರೀಕಾಂತ್ ಗೆಳೆಯರು. ನಿರ್ದೇಶಕ ಜಯತೀರ್ಥ ಅವರಿಗೆ ರಂಗಭೂಮಿ ಹಿನ್ನೆಲೆಯಿದೆ. ನಾಯಕಿ ಆಕಾಂಕ್ಷಾ ಕೂಡ ರಂಗಭೂಮಿಯ ನಂಟು ಹೊಂದಿದ ಹುಡುಗಿಯೇ.ಕನಸುಕಂಗಳ ತಂಡ ‘ಒಲವೇ ಮಂದಾರ’ ಮೂಲಕ ಕುತೂಹಲವನ್ನಂತೂ ಉಂಟುಮಾಡಿದೆ. ಮಂದಾರ ಅರಳಲಿಕ್ಕೆ, ಅದರ ಸೊಗಸು-ಸೊಗಡಿನ ನಿರ್ಣಯಕ್ಕೆ ದಿನ ದೂರವಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry