ಮಂಗಳವಾರ, ಜೂನ್ 15, 2021
21 °C

ಬಣ್ಣದೋಕುಳಿಯಲ್ಲಿ ಮಿಂದೇಳಲು ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ನಗರದ ಜನತೆಯನ್ನು ರಂಗಿನಲ್ಲಿ ಮೀಯಿಸಲು, ಮೋಜಿನ ಸಾಮಗ್ರಿಗಳನ್ನು ಮಾರಲು ಮಿರಜ್‌ನ ಹತ್ತಾರು ವ್ಯಾಪಾರಿಗಳು ಇಲ್ಲಿಯ ಸುಭಾಷ್‌ ರಸ್ತೆಗೆ ಭಾನುವಾರ ಲಗ್ಗೆಯಿಟ್ಟಿದ್ದರು.ಬಗೆ ಬಗೆಯ ಬಣ್ಣಗಳು, ಪಿಚಕಾರಿ, ವಿಗ್‌, ನೋಡಿದ ತಕ್ಷಣ ಭಯ ತರಿಸುವಂತಹ ಭೂತದ ಮುಖವಾಡಗಳನ್ನು ಈ ವ್ಯಾಪಾರಿಗಳು ಲೋಡು­ಗಟ್ಟಲೇ ತಂದು ಭಾನುವಾರ ರಾತ್ರಿಯವರೆಗೂ ಮಾರಿದರು. ಸಂಜೆಯಾಗುತ್ತಿದ್ದಂತೆ ಇಡೀ ರಸ್ತೆ ಗ್ರಾಹಕರು, ವ್ಯಾಪಾರಿಗಳಿಂದ ತುಂಬಿ ಹೋಗಿತ್ತು. ಸೋಮವಾರ ನಡೆಯುವ ಬಣ್ಣ­ದಾಟಕ್ಕಾಗಿ ತರಹೇವಾರಿ ಬಣ್ಣಗಳನ್ನು ಖರೀದಿಸಲು ತಮ್ಮ ಪೋಷಕರನ್ನು ಕಾಡಿಸಿ ಪೀಡಿಸಿ ಕರೆತಂದಿದ್ದರು.ವಾಹನಗಳಿಂದ ಗಿಜಿಗುಡುತ್ತಿದ್ದ ರಸ್ತೆಯಲ್ಲಿ ಕಾಲಿಡಲೂ ಆಗದಷ್ಟು ಗ್ರಾಹಕರು ತುಂಬಿ­ಹೋಗಿ­ದ್ದರು. ಗ್ರಾಹಕರು ಹಾಗೂ ವಾಹನ­ಗಳನ್ನು ನಿಯಂತ್ರಿಸಲು ಟ್ರಾಫಿಕ್‌ ಪೊಲೀಸರನ್ನು ನಿಯೋಜಿಸಲಾಗಿತ್ತು. ನಿತ್ಯವೂ ಹೂಮಾರುವ ಹೂವಾಡಗಿತ್ತಿ­ಯರು ಮಿರಜ್‌ನ ವ್ಯಾಪಾರಿಗಳ ಮುಂದೆ ಮಂಕಾಗಿದ್ದರು. ಆದಷ್ಟು ಬೇಗನೇ ಮನೆ ತಲುಪುವ ಉದ್ದೇಶದಿಂದ ಕಡಿಮೆ ಬೆಲೆಗೆ ಹೂಗಳನ್ನು ಮಾರಾಟ ಮಾಡುತ್ತಿದ್ದರು.

ವ್ಯಾಪಾರ ಕಷ್ಟ ಸುಖ ಹಂಚಿಕೊಂಡ ಮಿರಜ್‌ನ ಮಧ್ಯವಯಸ್ಕ ವ್ಯಾಪಾರಿ ಮುಮ್ತಾಜ್‌, ‘ಏನೇ ವಸ್ತುಗಳನ್ನು ಖರೀದಿ­ಸಿದರೂ ಹತ್ತು ರೂಪಾಯಿ. ಆದರೆ, ಯಾಕೊ ಅಷ್ಟೊಂದು ವ್ಯಾಪಾರ ಆಗಿಲ್ಲ’ ಎಂದರು.ಮೆಹಬೂಬ್‌ ಅಲಿ ಮಾತನಾಡಿ, ‘ಸಂಜೆಯಾ­ಗು­ತ್ತಿದ್ದಂತೆಯೇ ಗಿರಾಕಿಗಳು ಬರುತ್ತಿದ್ದಾರೆ. ವ್ಯಾಪಾ­ರ­­ದಲ್ಲಿ ಸುಧಾರಣೆ ಕಾಣುತ್ತಿದೆ’ ಎಂದರು.

ಕಾಮದಹನ: ನಗರದಲ್ಲಿ ಒಟ್ಟಾರೆ 145 ಕಾಮಣ್ಣಗಳನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಕಾಮನಕಟ್ಟಿ, ಶುಕ್ರವಾರಪೇಟೆ, ರವಿವಾರಪೇಟೆ, ಹೊಸಯಲ್ಲಾಪುರ ಸೇರಿದಂತೆ ವಿವಿಧೆಡೆ ಸೋಮವಾರ ಮಧ್ಯರಾತ್ರಿ ಕಾಮಣ್ಣನ ಮೂರ್ತಿ­ಗಳನ್ನು ದಹನ ಮಾಡಲಾಯಿತು. ಕೆಲವನ್ನು ಸೋಮವಾರ ಬೆಳಗಿನ ಜಾವ ದಹಿಸಲಾಯಿತು.ಬಿಗಿ ಪೊಲೀಸ್‌ ಬಂದೋಬಸ್ತ್‌: ಸೋಮ­ವಾರದ ಹೋಳಿ ಹಬ್ಬವನ್ನು ಶಾಂತಿಯುತವಾಗಿ ನೆರವೇರಿಸುವ ಸಲುವಾಗಿ ಪೊಲೀಸ್‌ ಇಲಾಖೆ ಬಿಗಿ ಬಂದೋಬಸ್ತ್‌ ಕೈಗೊಂಡಿದೆ. ಇಬ್ಬರು ಎಸಿಪಿಗಳು, ಎಂಟು ಪೊಲೀಸ್‌ ಇನ್‌ಸ್ಪೆಕ್ಟರ್‌­ಗಳು, 15 ಪಿಎಸ್‌ಐಗಳು, 25 ಎಎಸ್‌ಐಗಳು, 250 ಕಾನ್‌ಸ್ಟೆಬಲ್‌ಗಳು, ಮೂರು ಕೆಎಸ್‌­ಆರ್‌ಪಿ ಹಾಗೂ ನಾಲ್ಕು ನಗರ ಸಶಸ್ತ್ರ ಪೊಲೀಸ್‌ ಪಡೆಯ ಪ್ಲಟೂನ್‌ಗಳು ಹಾಗೂ ಗೃಹರಕ್ಷಕ­ದಳದ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸ­ಲಾಗಿದೆ ಎಂದು ಎಸಿಪಿ ಎಚ್‌.ಎಸ್‌.ಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.ಹುಬ್ಬಳ್ಳಿ: ಹಲಗೆ ಸದ್ದು

ಹುಬ್ಬಳ್ಳಿ:
ಹೋಳಿ ಹಬ್ಬಕ್ಕೆ ನಗರ ಸಜ್ಜು­ಗೊಂಡಿದ್ದು, ಬಣ್ಣಗಳ ಖರೀದಿ ಜೋರಾಗಿದೆ. ವಿವಿಧ ಓಣಿಗಳಲ್ಲಿ ರತಿ–ಮನ್ಮಥರ ಪ್ರತಿಮೆ ಪ್ರತಿಷ್ಠಾಪನೆಗೊಳ್ಳುತ್ತಿರುವಂತೆ, ಹಲಗೆ ಸದ್ದು ಹೆಚ್ಚಾಗಿತ್ತು.ಹಳೆ ಹುಬ್ಬಳ್ಳಿಯ ಮೇದಾರ ಓಣಿಯಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಪ್ರತಿಷ್ಠಾಪನೆಗೊಂಡಿದ್ದ ಕಾಮಣ್ಣನ ಮೂರ್ತಿಗೆ ಭಕ್ತರು ಪೂಜೆ ಸಲ್ಲಿಸಿದರು. ನಗರದಲ್ಲಿ 150ಕ್ಕೂ ಹೆಚ್ಚು ಕಾಮಣ್ಣನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಅಲ್ಲದೆ ಕಮರಿಪೇಟೆ, ಜಯನಗರ, ಭೂಸಪ್ಪ ಚೌಕ, ಲೈನ್‌ ಬಜಾರ್‌ ಮತ್ತು ಬಾರಾಕೋಟ್ರಿಯಲ್ಲಿ ಗಡಿಗೆ ಒಡೆಯುವ ಸ್ಪರ್ಧೆ ಏರ್ಪಡಿಸಲಾಗಿದ್ದು, ಯುವಕರು ಸಂತಸದಿಂದ ಪಾಲ್ಗೊಂಡರು.ವಿದ್ಯಾನಗರ, ಗೋಕುಲ ರಸ್ತೆ, ದುರ್ಗದಬೈಲ್‌ನಲ್ಲಿ ಬಣ್ಣಗಳ ಖರೀದಿ ಚುರುಕು ಪಡೆದಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.