ಬುಧವಾರ, ಮಾರ್ಚ್ 3, 2021
31 °C

ಬಣ್ಣದ ಕ್ಯಾಂಡಿಯೂ ಬಟ್ಟೆಯ ವಿನ್ಯಾಸವೂ

–ರೋಹಿಣಿ ಮುಂಡಾಜೆ Updated:

ಅಕ್ಷರ ಗಾತ್ರ : | |

ಬಣ್ಣದ ಕ್ಯಾಂಡಿಯೂ ಬಟ್ಟೆಯ ವಿನ್ಯಾಸವೂ

ನೇಪಾಳಕ್ಕೆ ಹೋದವರು ಸ್ವಲ್ಪ ಖಾರ, ಸ್ವಲ್ಪ ಸಿಹಿ ಸ್ವಾದದ ಕ್ಯಾಂಡಿ ‘ಟಿಟೋರಾ’ ಸವಿದಿರಬಹುದು. ಸಿಲಿಕಾನ್‌ ಸಿಟಿಯ ಇಬ್ಬರು ‘ಚಡ್ಡಿದೋಸ್ತ್‌’ಗಳು ಬಾಲ್ಯದಲ್ಲಿ ಸವಿದ ಆ ಕ್ಯಾಂಡಿಯನ್ನು ಅದೆಷ್ಟು ಮೆಚ್ಚಿದ್ದರೆಂದರೆ, ತಮ್ಮ ವಸ್ತ್ರವಿನ್ಯಾಸಕ್ಕೆ ಅವರಿಟ್ಟಿರುವ ಹೆಸರು ಟಿಟೋರಾ!ಎತ್ತಣ ಕ್ಯಾಂಡಿ ಎತ್ತಣದ ವಸ್ತ್ರ ವಿನ್ಯಾಸ ಮಾರಾಯರೆ ಎಂದು ಕೇಳಿದರೆ, ಕ್ಯಾಂಡಿಯನ್ನು ಮನೆಯವರ ಕಣ್ತಪ್ಪಿಸಿ ಮೆಲ್ಲಲು ತಮ್ಮ ಹಾಸಿಗೆಯ ಅಡಿಯಲ್ಲಿ ಬಚ್ಚಿಟ್ಟು ಕದ್ದುಮುಚ್ಚಿ ತಿನ್ನುತ್ತಿದ್ದ ದಿನಗಳನ್ನು ಮೆಲುಕು ಹಾಕುತ್ತಾರೆ! ತಾವು ಚೀಪಿ ಚೀಪಿ ಆ ಕ್ಯಾಂಡಿಯನ್ನು ಆಸ್ವಾದಿಸುತ್ತಿದ್ದ ಹಾಗೆ, ತಮ್ಮನ್ನದು ಆವರಿಸಿದ್ದ ಹಾಗೆ ತಾವು ವಿನ್ಯಾಸ ಮಾಡುವ ಉಡುಪುಗಳನ್ನು ತಮ್ಮ ಗ್ರಾಹಕರು ಇಷ್ಟಪಡಬೇಕೆಂಬುದು ಅವರ ಪರಿಕಲ್ಪನೆಯಂತೆ!ಹೀಗೆ, ತಮ್ಮ ಬಾಲಲೀಲೆಗಳ ಚುಂಗನ್ನು ಭವಿಷ್ಯದ ದಾರದೊಂದಿಗೆ ಪೋಣಿಸುತ್ತಾ ‘ಟಿಟೋರಾ’ ಎಂಬ ಉಡುಪುಗಳ ಮೂಲಕ ಯುವ ಗ್ರಾಹಕರ ಮನಸ್ಸು ಗೆದ್ದಿರುವ ವಿನ್ಯಾಸಕರ ಹೆಸರು ಸಂಜನಾ ರೈ ಮತ್ತು ಸ್ನೇಹಾ ಸತ್ಯಪ್ರಕಾಶ್‌. ಯುಬಿ ಸಿಟಿಯಲ್ಲಿ ‘ಇವೊಲ್ಯೂಶನ್’ ಎಂಬ ಮಳಿಗೆಯ ವಾರ್ಡ್‌ರೋಬ್‌ಗಳಲ್ಲಿನ ಉಡುಪುಗಳಲ್ಲಿ ಅವರು ತುಂಬಿರುವುದು ತಮ್ಮ ಕನಸಿನ ಬಣ್ಣಗಳನ್ನು, ವಿನ್ಯಾಸಗಳನ್ನು.ಸಂಜನಾ ನೇಪಾಳದವರು, ಸ್ನೇಹಾ ಬೆಂಗಳೂರಿನವರು. ಆದರೆ ಇಬ್ಬರೂ ನಗರದ ವ್ಯಾಲಿ ಸ್ಕೂಲ್‌ನಿಂದ ಹಿಡಿದು ಲಂಡನ್‌ನಲ್ಲಿ ತಮ್ಮಿಷ್ಟದ ಶಿಕ್ಷಣ ಪಡೆಯುವಲ್ಲಿವರೆಗೂ ಸಹಪಾಠಿಗಳು ಹಾಗೂ ಜೀವದ ಗೆಳತಿಯರು.‘ನನ್ನ ಕುಟುಂಬ ನೇಪಾಳದಲ್ಲಿದ್ದುದರಿಂದ ಟಿಟೋರಾ ಯಥೇಚ್ಛವಾಗಿ ಸಿಗುತ್ತಿತ್ತು. ಸ್ನೇಹಾಳಿಗೂ ಅದರ ರುಚಿ ತೋರಿಸಿದ್ದೆ. ಇಬ್ಬರಿಗೂ ಇಷ್ಟವಾಯಿತು. ನಮ್ಮ ವಿದ್ಯಾಭ್ಯಾಸ ಮುಗಿಯುವ ಹೊತ್ತಿಗೆ ಅಭಿರುಚಿಗಳು ಅಲ್ಪಸ್ವಲ್ಪ ಬದಲಾದರೂ ವಸ್ತ್ರವಿನ್ಯಾಸಕರಾಗಬೇಕೆಂಬ ಕನಸು ಇಬ್ಬರಲ್ಲೂ ಬಲವಾಗಿತ್ತು. ಅದನ್ನೇ ವೃತ್ತಿಯಾಗಿ ಸ್ವೀಕರಿಸುವ ಹೊತ್ತಿಗೆ ನಮ್ಮ ಲೇಬಲ್‌ಗೆ ಏನು ಹೆಸರಿಡುವುದೆಂದು ಚರ್ಚಿಸಿದೆವು. ಇಬ್ಬರಿಗೂ ಏಕಕಾಲಕ್ಕೆ ಹೊಳೆದದ್ದು ಟಿಟೋರಾ. ‘ಟಿಟೋರಾ’ ಕ್ಯಾಂಡಿಯೂ ಪ್ರಖರವಾದ ಬಣ್ಣಗಳಿಂದ ಕಣ್ಸೆಳೆಯುತ್ತದೆ. ನಮ್ಮ ವಿನ್ಯಾಸದ ಉಡುಪುಗಳೂ ಹಾಗೆಯೇ. ಪ್ರಖರ ಹಾಗೂ ಹಿಡಿದಿಡುವಂತಹ ಬಣ್ಣಗಳಿಂದ ಕೂಡಿರುವುದು ವಿಶೇಷ’ ಎಂದು ವಿವರಿಸುತ್ತಾರೆ ಸಂಜನಾ.ಚೌಕಟ್ಟಿನಾಚೆ ಚಾಚಿ

‘ನಮ್ಮ ಕಲ್ಪನೆಗಳು ಯಾವಾಗಲೂ ಯಾವುದೇ ಚೌಕಟ್ಟಿನ ಸೀಮೆಯಲ್ಲಿರಬಾರದು. ಸಾಂಪ್ರದಾಯಿಕ ಚೌಕಟ್ಟಿನಿಂದಾಚೆ ನಮ್ಮ ಕಲ್ಪನೆ/ಚಿಂತನೆಗಳನ್ನು ಹರಿಯಬಿಟ್ಟಾಗ ಹೊಸ ಲೋಕ ಗೋಚರಿಸುತ್ತದೆ. ನಮ್ಮ ಕ್ರಿಯಾಶೀಲತೆಯ ಬೇರು ಅಲ್ಲಿರುತ್ತದೆ. ನಮ್ಮ ವಿನ್ಯಾಸದ ಉಡುಪುಗಳಲ್ಲಿ ಕಾಣುವುದು ಇಂತಹುದೇ ಕ್ರಿಯಾಶೀಲ ಚಿಂತನೆಗಳನ್ನು’ ಎಂದು ಸ್ನೇಹಾ ತಮ್ಮ ಪರಿಕಲ್ಪನೆಯನ್ನು ಮುಂದಿಡುತ್ತಾರೆ.ಸ್ನೇಹಾಗೆ ಸಣ್ಣ ವಯಸ್ಸಿನಿಂದಲೂ ಉಡುಗೆ ತೊಡುಗೆ ಮತ್ತು ಕರಕುಶಲ ಕಲೆಗಳ ಬಗ್ಗೆ ಒಂದು ತೂಕ ಹೆಚ್ಚಿನ ಒಲವು. ಸಂಜನಾ ಛಾಯಾಗ್ರಹಣ ಹಾಗೂ ರಿಟೇಲ್‌ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆಯಲು ಲಂಡನ್‌ಗೆ ಹೊರಟು ನಿಂತಾಗ, ಸ್ನೇಹಾ ದಿ ಲಂಡನ್‌ ಕಾಲೇಜ್‌ ಆಫ್‌ ಫ್ಯಾಷನ್‌ನಲ್ಲಿ ಫ್ಯಾಷನ್‌ ಬಗ್ಗೆ ಪದವಿ ಪಡೆಯಲು ನಿರ್ಧರಿಸಿದರು. ಅಲ್ಲಿ ಸಮಯ ಸಿಕ್ಕಾಗಲೆಲ್ಲ ಅವರು ಯಾವ್ಯಾವುದೋ ಬಗೆಯ ಉಡುಗೆಗಳನ್ನು ವಿನ್ಯಾಸ ಮಾಡುತ್ತಿದ್ದರಂತೆ. ಪ್ರತಿ ಬಾರಿಯೂ ಹೊಸತನವನ್ನು ತಮ್ಮ ವಿನ್ಯಾಸದಲ್ಲಿ ತೋರುವಂತೆ ಮಾಡಿ ಸ್ನೇಹಿತರ ವಲಯದಲ್ಲಿ ಗಮನ ಸೆಳೆಯುತ್ತಿದ್ದರಂತೆ.‘ಇವೊಲ್ಯೂಶನ್‌’ ಮಳಿಗೆಯಲ್ಲಿರುವ ಹೆಚ್ಚಿನ ಉಡುಗೆಗಳು ಚಿತ್ತಾಕರ್ಷಕ,  ಬಣ್ಣದ ಉಡುಗೆಗಳು. ವೈಬ್ರೆಂಟ್ ಕಲರ್ಸ್. ಅಂದರೆ ಬಣ್ಣದ ವಿಕಸನ!

ಮನಸ್ಸಿನಿಂದ ಯುವಕರಾಗಿರುವಂಥವರೇ ತಮ್ಮ ಗ್ರಾಹಕರು ಎಂದು ಹೇಳುತ್ತದೆ ಈ ಜೋಡಿ.ಗಾಢವಾದ, ಸಂವೇದನಾಶೀಲ ವರ್ಣ ಸಂಯೋಜನೆಯ ಬಣ್ಣಗಳುಳ್ಳ ಉಡುಪು ಯುವಜನರನ್ನಷ್ಟೇ ಸೆಳೆಯುವುದಲ್ಲ. ಒಳ್ಳೆಯ ಉಡುಗೆ ಧರಿಸಲು ವಯಸ್ಸಿನ ಇತಿಮಿತಿ ಇರುವುದಿಲ್ಲ. ನಾವು ಧರಿಸುವ ಉಡುಗೆಯು ನಮ್ಮ ಮನಸ್ಥಿತಿ, ಆಲೋಚನಾಕ್ರಮ, ಬದುಕನ್ನು ಪರಿಭಾವಿಸುವ ಬಗೆ, ನಮ್ಮ ಮೂಡ್‌ ಹೀಗೆ ಬೇರೆ ಬೇರೆ ಆಯಾಮಗಳ ಪ್ರತೀಕ. ಹಾಗಾಗಿ ವೈಬ್ರೆಂಟ್ ಬಣ್ಣಗಳನ್ನು ಯುವಕರೇ ಧರಿಸಬೇಕೆಂದೇನೂ ಇಲ್ಲವೆನ್ನುವುದು ಇವರ ವಿಶ್ಲೇಷಣೆ.

ಲೆಹೆಂಗಾ ವಿನ್ಯಾಸಕ್ಕೆ ಗ್ರಾಹಕರಿಂದ ಮೆಚ್ಚುಗೆಗೆ ಪಾತ್ರರಾಗಿರುವ ಟಿಟೋರಾ ಜೋಡಿ ಈ ಬೇಸಿಗೆಗಾಗಿ ಸಿದ್ಧಪಡಿಸಿರುವ ‘ಲಾಟೀನ್‌’ಗಳು ಈಗ ಒಳ್ಳೆಯ ಬೇಡಿಕೆ ಗಿಟ್ಟಿಸಿಕೊಳ್ಳುತ್ತಿದ್ದಾವಂತೆ. ತೋಳಿಲ್ಲದ ಕತ್ತರಿ ಕತ್ತಿನ ಟಾಪ್‌ ಅಥವಾ ಒನ್‌ ಪೀಸ್‌ ಉಡುಗೆಯೇ ‘ಲಾಟೀನ್‌’.ಚೌಕಟ್ಟು ಮೀರಿದಂಥ ಚಿಂತನೆಗಳನ್ನು ವಿನ್ಯಾಸಕ್ಕಿಳಿಸುವ ಇವರ ಶೈಲಿಯನ್ನು ಪ್ರತಿ ಉಡುಪಿನಲ್ಲಿಯೂ ಕಾಣಬಹುದು. ಹೂವು, ಬಳ್ಳಿಯಂತಹ ಸಾಂಪ್ರದಾಯಿಕ ವಿನ್ಯಾಸದ ನಡುವೆ ಹಕ್ಕಿ, ಆನೆಯ ವಿನ್ಯಾಸವನ್ನು ಗಾಢವಾದ ಚಿನ್ನದ ಬಣ್ಣದಲ್ಲಿ ಮೂಡಿಸುವುದು ಇವರ ವಿಶೇಷ. ಧರಿಸಿದ ಉಡುಪಿಗೆ ಒಪ್ಪುವಂತಹ ಪರಿಕರಗಳನ್ನೂ ಬಯಸುವ ಗ್ರಾಹಕರಿಗಾಗಿ ಬಟ್ಟೆಯ ವಿನ್ಯಾಸವನ್ನೇ ಹೋಲುವ ಕೈಚೀಲಗಳು, ಪೋಟ್ಲಿಗಳೂ ಲಭ್ಯ.ಚಿತ್ರಕಲೆಯಲ್ಲಿ ಪಳಗಿದ ಕೈ ಸ್ನೇಹಾ ಅವರದ್ದು. ಈ ಪರಿಣತಿ ವಸ್ತ್ರ ವಿನ್ಯಾಸಕ್ಕೇನಾದರೂ ನೆರವಾಗಿದೆಯೇ ಎಂದು ಕೇಳಿದರೆ, ‘ಬಣ್ಣಗಳ ಸಂಯೋಜನೆಯಲ್ಲಿ ನಾವು ಗೆದ್ದಿರುವುದು ನನ್ನ ಚಿತ್ರಕಲೆಯ ಅನುಭವದಿಂದಲೇ. ಆದರೆ ಲಂಡನ್‌ನಲ್ಲಿನ ವಾಸ್ತವ್ಯದಿಂದಾಗಿ ವಸ್ತ್ರ ವಿನ್ಯಾಸ ಕ್ಷೇತ್ರದ ಹರಹುಗಳನ್ನು ಪರಿಚಯ ಮಾಡಿಕೊಳ್ಳಲು ಸಾಧ್ಯವಾಯಿತು’ ಎನ್ನುತ್ತಾರೆ ಸ್ನೇಹಾ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.