ಬಣ್ಣದ ಲೋಕದಲ್ಲು ಮುಗ್ಧ ಕಾಮನಬಿಲ್ಲು!

7

ಬಣ್ಣದ ಲೋಕದಲ್ಲು ಮುಗ್ಧ ಕಾಮನಬಿಲ್ಲು!

Published:
Updated:

ಆಧುನಿಕ ಹಂಸತೂಲಿಕಾತಲ್ಪ ಎನ್ನಬಹುದಾದ ಮಂಚ. ಅದರ ಮೇಲೆ ನಟ ರಣವೀರ್ ಎದೆಯುಬ್ಬಿಸಿಕೊಂಡು ಕೂತಿದ್ದಾರೆ. ದೇಹದ ಅರ್ಧಭಾಗವನ್ನು ಅವರಿಗೆ ಸೋಕಿಸಿಕೊಂಡು ನಿರ್ಲಿಪ್ತಭಾವ ಬೀರುತ್ತಾ ಮೈಚೆಲ್ಲಿಕೊಂಡು ಮಲಗಿದ ನಟಿ ಅನುಷ್ಕಾ ಶರ್ಮಾ ಕೂದಲುಗಳು ಮಂಚದಿಂದ ಕೆಳಗೆ ಜಲಪಾತದೋಪಾದಿಯಲ್ಲಿ ಇಳಿಬಿದ್ದಿವೆ. ತುಟಿಬಣ್ಣ ಢಾಳು ಕೆಂಪು. ಕ್ಯಾಮೆರಾ ಫ್ಲಾಷ್ ಬೆಳಕು ಚೆಲ್ಲಿದ್ದೇ ತಡ ಅನುಷ್ಕಾ ದಿಗ್ಗನೆದ್ದು ಕೂತರು. `ಮಂಚ ಹತ್ತುವುದು ತುಂಬಾ ಕಷ್ಟವಪ್ಪಾ~ ಎಂದ ಅವರಿಂದ ಹೊರಟಿದ್ದು ವಿಚಿತ್ರವಾದ, ಭಯ ಬೆರೆತ ಉಸಿರು.

ಅನುಷ್ಕಾ ಅವರನ್ನು ಬಹುತೇಕ ನಟಿಯರ ಪಟ್ಟಿಗೆ ಸೇರಿಸುವುದು ಕಷ್ಟ. ಯಾಕೆಂದರೆ, ಅವರಿಗೆ ಶಾಪಿಂಗ್ ಇಷ್ಟವಿಲ್ಲ. ಬಟ್ಟೆ, ಬ್ಯಾಗು, ಚಪ್ಪಲಿಗಳ ಮೋಹವಿಲ್ಲ. ಅಫೇರ್‌ಗಳಿಂದ ಸದಾ ದೂರ. ರಣವೀರ್ ಜೊತೆ ತಮ್ಮ ಹೆಸರು ಕೇಳಿಬಂದಾಗ ಬೆಚ್ಚಿಬಿದ್ದದ್ದು ಅವರ ಮುಗ್ಧತೆಗೆ ಹಿಡಿದ ಕನ್ನಡಿ.

`ಅಭಿನಯ ನನ್ನ ಆದ್ಯತೆ. ಕುಣಿಯುವುದು, ರೊಮಾನ್ಸ್ ಮಾಡುವುದು ಅದರ ಭಾಗವಷ್ಟೇ. ಒಮ್ಮೆ ರಣವೀರ್‌ಗೆ ನನ್ನ ಕಾರಿನಲ್ಲಿ ಡ್ರಾಪ್ ಕೊಟ್ಟುಬಂದೆ, ಅಷ್ಟೇ. ಅದನ್ನು ಯಾರು ಕಂಡರೋ, ಪತ್ರಿಕೆಗಳಲ್ಲಿ ನಮ್ಮಿಬ್ಬರ ಮಧ್ಯೆ ಸಂಬಂಧವಿದೆ ಎಂದು ಬರೆದರು. ನಾನಿಷ್ಟ ಪಟ್ಟ ತಿನಿಸನ್ನು ರಣವೀರ್ ಕೈಯಾರೆ ಮಾಡಿ ತಿನ್ನಿಸಿದ ಎಂಬ ಕಲ್ಪನಾ ಸಾಹಿತ್ಯವೂ ಆ ಬರಹದಲ್ಲಿ ಬೆರೆತಿತ್ತು. ನನಗೆ ಶಾಕ್ ಆಯಿತು. ಆ ದಿನ ಸರಿಯಾಗಿ ಊಟ ಕೂಡ ಮಾಡಲಿಲ್ಲ. ಆಮೇಲೆ ಆತ್ಮೀಯರೆಲ್ಲಾ ಬಾಲಿವುಡ್‌ನಲ್ಲಿ ಇದು ಇದ್ದಿದ್ದೇ, ಚಿಂತಿಸಬೇಡ ಎಂದು ಬುದ್ಧಿ ಹೇಳಿದರು. ನನಗೂ ಅದು ನಿಜವೆನ್ನಿಸಿತು. ಕೆಲವು ತಿಂಗಳುಗಳ ಪತ್ರಿಕೆಗಳನ್ನು ತಿರುವಿಹಾಕಿದೆ. ಎಲ್ಲರ ಬಗ್ಗೆ ಗಾಸಿಪ್ ಬರೆಯುವುದು ಕೆಲವರಿಗೆ ಚಾಳಿಯಾಗಿದೆ ಎಂಬುದು ಸ್ಪಷ್ಟವಾಯಿತು. ನನಗೂ ರಣವೀರ್‌ಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂಬುದಷ್ಟೇ ಸತ್ಯ~- ಹೀಗೆ ಅನುಷ್ಕಾ ಅವಕಾಶ ಸಿಕ್ಕಾಗಲೆಲ್ಲಾ ಸ್ಪಷ್ಟನೆ ನೀಡುತ್ತಿದ್ದಾರೆ.

ಅನುಷ್ಕಾ ಮನಸ್ಥಿತಿಯಲ್ಲಿ ಸಂಪ್ರದಾಯದ ಬೇರುಗಳು ಕಾಣಿಸುತ್ತವೆ. ಮಗು ಮಾಡುವಂಥ ಚಟುವಟಿಕೆಗಳನ್ನು ಅವರು ಈಗಲೂ ಕಾಪಿಟ್ಟುಕೊಂಡಿರುವುದು ಇನ್ನೊಂದು ವಿಶೇಷ. ಇಂದಿಗೂ ಅವರು `ಸೆರೆಲ್ಯಾಕ್~ ಕಲೆಸಿಕೊಂಡು ಚಪ್ಪರಿಸುತ್ತಾ ತಿನ್ನುತ್ತಾರೆ. ಚಿಕ್ಕಂದಿನಲ್ಲಿ ಚಾಕೊಲೇಟ್ ಕವರ್‌ಗಳಿಂದ ತುಂಬಿಸಿದ ಡಬ್ಬವನ್ನು ಪದೇಪದೇ ತೆಗೆದು ನೋಡುವುದುಂಟು. ಬಾಲ್ಯದಲ್ಲಿ ತೊಡುತ್ತಿದ್ದ ಸೊಗಸಾದ ಫ್ರಾಕು ಕಪಾಟಿನಲ್ಲಿ ಜತನವಾಗಿದೆ. ಗುಬ್ಬಚ್ಚಿಯಂತೆ ಮುದುರಿಕೊಂಡು ಮಲಗುವುದು ಚಾಳಿ. ಬೆಳಗ್ಗೆ ಸೂರ್ಯ ಕಾಲು ದಿನ ಪೂರೈಸಿದ ಮೇಲೆ ಏಳುವುದು ಇಷ್ಟ. ಅಂಗಡಿಗೆ ಹೋಗುವುದೆಂದರೆ ಅಲರ್ಜಿ. ಅನಿವಾರ್ಯವಾಗಿ ಹೋದರೆ ಯಾವುದನ್ನು ಕೊಳ್ಳುವುದೆಂಬ ಗೊಂದಲ.

ತಾನು ಅತಿ ಸುಂದರಿಯಲ್ಲ ಎಂದು ಖುದ್ದು ಹೇಳಿಕೊಳ್ಳುವ ಅನುಷ್ಕಾ, ನಟಿಯೊಬ್ಬಳ ಸೌಂದರ್ಯ ಅನಾವರಣಗೊಳ್ಳುವುದು ಅಭಿನಯದ ಮೂಲಕ ಎಂಬ ತತ್ವ ನುಡಿಯುತ್ತಾರೆ. ಅವರ ಈ ಅಭಿಪ್ರಾಯಕ್ಕೆ ಕರಣ್ ಜೋಹರ್ ಸಮರ್ಥನೆಯೂ ಸಿಕ್ಕಿದೆ. ಭವಿಷ್ಯದಲ್ಲಿ ತಾವು ಅದ್ಭುತ ನಟಿಯಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಕರಣ್ ಹೇಳಿದಾಗ ಅನುಷ್ಕಾಗೆ ಮೋಡದ ಮೇಲೆ ತೇಲಿದ ಅನುಭವವಾಯಿತಂತೆ.

`ಬದ್ಮಾಷ್ ಕಂಪೆನಿ~ ಹಾಗೂ `ಬ್ಯಾಂಡ್ ಬಾಜಾ ಬಾರಾತ್~ ಚಿತ್ರಗಳು ಅನುಷ್ಕಾ ಮನೆಗೆ ಕಾಲ್‌ಷೀಟ್ ಕೇಳಿಕೊಂಡು ಬರುವವರ ಸಂಖ್ಯೆಯನ್ನು ಹೆಚ್ಚಿಸಿವೆ. ವಿಶಾಲ್ ಭಾರದ್ವಾಜ್ ಹಾಗೂ ಯಶ್ ಚೋಪ್ರಾ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿರುವುದರಿಂದ ಆತ್ಮವಿಶ್ವಾಸ ಸಹಜವಾಗಿಯೇ ಹೆಚ್ಚಾಗಿದೆ.

`ಈ ಉದ್ಯಮದಲ್ಲಿ ಅತಿ ಸುಂದರಿಯರಿದ್ದಾರೆ. ಹುಡುಗನಾಗಿದ್ದರೆ ಕತ್ರಿನಾ ಕೈಫ್ ಚುಂಬಿಸುವ ಮನಸ್ಸು ನನ್ನದೂ ಆಗುತ್ತಿತ್ತೋ ಏನೋ? ಸಣ್ಣ ವಯಸ್ಸಿಗೇ ಬಂದು ಇಲ್ಲಿ ಹೆಸರು ಮಾಡಿದ ಕರೀನಾ ಕಪೂರ್ ಕೂಡ ನನಗಿಷ್ಟ. ಪ್ರಿಯಾಂಕಾ ಚೋಪ್ರಾ ತರಹದ ಕಷ್ಟಜೀವಿಗಳೂ ಇಲ್ಲಿ ಜಾಗ ಮಾಡಿಕೊಂಡಿದ್ದಾರೆ. ಅವರೆಲ್ಲರಿಗೆ ಹೋಲಿಸಿದರೆ ನಾನು ರೂಪವತಿಯಲ್ಲ. ದಿನದಿಂದ ದಿನಕ್ಕೆ ನಟನೆಯಲ್ಲಿ ಮಾಗುತ್ತಾ ಹೋದರೆ ನಾನೂ ಮುಂದೊಂದು ದಿನ ಸುಂದರಿಯಾಗಿಯೇ ಕಾಣುತ್ತೇನೆಂಬ ವಿಶ್ವಾಸದಲ್ಲೇ ಬದುಕುತ್ತಿದ್ದೇನೆ. ಹೃದಯ ಸೌಂದರ್ಯ ಹೆಚ್ಚಿಸಿಕೊಳ್ಳುವುದು ನನ್ನ ಆದ್ಯತೆ. ಕಾಲ ಕೆಟ್ಟುಹೋಗಿದೆ ಎನ್ನುವ ಮಂದಿಗೆ ನಾನು `ಇಲ್ಲ~ ಎಂಬ ಉತ್ತರ ಹೇಳುವ ಹೆಣ್ಣುಮಗಳಾಗಬೇಕೆಂಬ ಆಸೆ. ಅದು ಈಡೇರಲಿ ಎಂದು ಎಲ್ಲರೂ ಹರಸಿ~- ಥೇಟ್ ಸಂಪ್ರದಾಯಸ್ಥ ಹೆಣ್ಣುಮಗಳಂತೆ ಹೀಗೆ ಕೇಳಿಕೊಳ್ಳುವ ಅನುಷ್ಕಾ ನಿಜಕ್ಕೂ ವಿಭಿನ್ನ. ಯಾಕೆಂದರೆ, ಯಾರದ್ದೋ ಜೊತೆ ಸಂಬಂಧವಿದೆ ಎಂಬ ಗಾಸಿಪ್ ಪ್ರಕಟವಾದಾಗ ಅವರು ಆತ್ಮೀಯರ ತೊಡೆ ಮೇಲೆ ಮಲಗಿ ಸದ್ದೇ ಇಲ್ಲದೆ ನಿಮಿಷಗಟ್ಟಲೆ ಅತ್ತುಬಿಡುತ್ತಾರಂತೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry