ಬುಧವಾರ, ಜೂನ್ 23, 2021
30 °C
ಯಥೇಚ್ಛ ಮೊಟ್ಟೆ ಬಳಕೆ, ಅರೆಬೆತ್ತಲೆ ಮೆರವಣಿಗೆ

ಬಣ್ಣದ ಹಬ್ಬ: ಅಸಭ್ಯ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಪ್ರತಿವರ್ಷದಂತೆ ಪಡ್ಡೆಹುಡು­ಗರ ಅರೆಬೆತ್ತಲೆ ಹುಚ್ಚಾಟದಿಂದ ಓಕುಳಿ ಹಬ್ಬ ಅರ್ಥಕಳೆದುಕೊಂಡಿದ್ದನ್ನು ಹೊರ­ತು­ಪಡಿಸಿದರೆ ಸೋಮವಾರ ಬಣ್ಣದ ಹಬ್ಬವನ್ನು ಪಟ್ಟಣದಲ್ಲಿ ಶಾಂತಿ, ಸಂಭ್ರಮ ಉತ್ಸಾಹದಿಂದ ಆಚರಿಸಲಾ­ಯಿತು. ಆದರೆ ಕಿಡಿಗೇಡಿಗಳ ಕಿರಿಕಿರಿಗೆ ಹೆದರಿದ ಬಹುತೇಕ ಜನ ಓಕುಳಿಯಾಟ ಮುಗಿಯುವವರೆಗೂ ಮನೆ ಬಿಟ್ಟು ಬರಲಿಲ್ಲ.ಸಮಾಜದ ವಿವಿಧ ವರ್ಗಗಳಿಗೆ ಸ್ನೇಹಿತರು, ಮಕ್ಕಳು, ಮಹಿಳೆಯರು ಉಲ್ಲಾಸದಿಂದ ಪರಸ್ಪರ ಓಕುಳಿ ಎರೆಚಾಟದಲ್ಲಿ ತೊಡಗುವ ಮೂಲಕ ಬಾಂಧವ್ಯ ಬೆಸುಗೆಗೆ ಹೊಸ ಭಾಷ್ಯ ಬರೆದರು. ಆದರೆ ಇದು ಕೆಲ ಕಾಲೊನಿ­ಗಳಿಗೆ ಸೀಮಿತವಾಗಿತ್ತು. ವಿವಿಧ ಸಂಘಟನೆಗಳ ಪ್ರಮುಖರು, ವರ್ತಕರು, ಬಣ್ಣದಲ್ಲಿ ಮಿಂದೆದ್ದರು. ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಅನೇಕ ಗುಂಪುಗಳು ರಣಬಿಸಿಲು ಲೆಕ್ಕಿಸದೆ ಮಧ್ಯಾಹ್ನ­ದವರೆಗೂ ಬಣ್ಣ ಎರೆಚಾಟದಲ್ಲಿ ನಿರತರಾಗಿದ್ದವು.ಓಕುಳಿ ಹಬ್ಬದ ಅಂಗವಾಗಿ ಅಂಗಡಿ ಮುಂಗಟ್ಟುಗಳು ಮುಚ್ಚಿರುವುದು, ವಾಹನ ಸಂಚಾರ ಸ್ಥಗಿತಗೊಂಡಿದ್ದು, ನಿರ್ಜನ ರಸ್ತೆಗಳಿಂದಾಗಿ ಪಟ್ಟದಲ್ಲಿ ಅಘೋಷಿತ ಬಂದ್‌ನಂತೆ ಗೋಚರಿಸಿತು. ಸರ್ಕಾರಿ ಕಚೇರಿಗಳಲ್ಲಿ ನೌಕರರ ಮತ್ತು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ  ಇಳಿಮುಖವಾಗಿತ್ತು. ಸಾರಿಗೆ, ಖಾಸಗಿ ವಾಹನಗಳು ಹೆಚ್ಚಾಗಿ ರಸ್ತೆಗೆ ಇಳಿಯದ ಕಾರಣ ಪ್ರಯಾಣಿಕರು, ಆಸತ್ರೆಗೆ ತೆರ­ಳು­ತ್ತಿದ್ದ ರೋಗಿಗಳು ಪರದಾಡಿದರು.ಮೊಟ್ಟೆಗಳ ಬಳಕೆ: ಪೋಲಿಗಳ ಗುಂಪು ತಲೆಗೆ ಮನಸೋ ಇಚ್ಛೆ ಟೊಮೆಟೊ, ಮೊಟ್ಟೆಗಳನ್ನು ಠಪ್ಪನೆ ಒಡೆ­ಯುವುದು ಅದರ ಮೇಲೆ ರಾಸಾ­ಯನಿಕ ಬಣ್ಣಗಳನ್ನು ಎರಚುತ್ತಿದ್ದುದು ಸಾಮಾನ್ಯವಾಗಿತ್ತು. ಪಾನಮತ್ತರಾಗಿದ್ದ ಕೆಲ ಕಿಡಿಗೇಡಿಗಳಿಗೆ ಮೈಮೇಲೆ ಪರಿವೇ ಇರಲಿಲ್ಲ. ಪರಸ್ಪರ ಬಟ್ಟೆ ಹರಿಯುತ್ತ ಅರೆಬೆತ್ತಲೆಯಲ್ಲಿ ತಿರುಗಾಡುತ್ತಿದ್ದುದು ಸಭ್ಯತೆಯ ಎಲ್ಲೆ ಮೀರಿದಂತೆ ಕಂಡು­ಬಂತು. ಅನೇಕ ಯುವಕರು ದ್ವಿಚಕ್ರ ವಾಹನಗಳ ಸೈಲೆನ್ಸರ್‌ಗಳನ್ನು ತೆಗೆದು ಅತಿ ವೇಗದಲ್ಲಿ ವಾಹನ ಓಡಾಡಿಸುತ್ತ ಭಯದ ವಾತಾವರಣ ನಿರ್ಮಿಸಿದ್ದು ಹನಮಸಾಗರ ರಸ್ತೆಯಲ್ಲಿ ಕೆಲ ಹುಡುಗರು ಸಾರ್ವಜನಿಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರೂ ಪೊಲೀಸರ ಮೌನಕ್ಕೆ ಸಾರ್ವಜನಿಕರು ಆಕ್ಷೇಪಿಸಿದರು.ಓಕುಳಿ ಹಬ್ಬದಲ್ಲಿ ಎಲ್ಲ ಜನಾಂಗ­ದವರು ಭಾಗವಹಿಸಿ ಸಹೋದರತ್ವ ಮೆರೆ­ದರು ಎಂದು ರಾಜಕೀಯ ಕಾರ್ಯ­ಕರ್ತ ರಜಾಕ್‌ ಸುಳ್ಳದ್‌, ಪುರಸಭೆ ಸದಸ್ಯರಾದ ಸಂತೋಷ್‌ ಸರಗಣಾಚಾರ, ಕಲ್ಲೇಶ ತಾಳದ ಹೇಳಿದರು. ಆದರೆ ಅರ್ಥಪೂರ್ಣ ಆಚರಣೆಯಾಗಬೇಕಿದ್ದ ಓಕುಳಿ ಅಸಭ್ಯತೆ ಸಾಕ್ಷಿಯಾಗುತ್ತಿದೆ ಎಂದು ಹೈ.ಕ ಹೋರಾಟ ಸಮಿತಿ ಮುಖಂಡ ವೀರೇಶ ಬಂಗಾರಶೆಟ್ಟರ್‌ ಅಸಮಾಧಾನ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.