ಬಣ್ಣಬಣ್ಣದ ಹಾಡುಗಳು

7

ಬಣ್ಣಬಣ್ಣದ ಹಾಡುಗಳು

Published:
Updated:

“ಬೆಂಗಳೂರಿನ ಬಗೆಗಿನ ಪ್ರೀತಿಯಿಂದಾಗಿ `ನಮ್ಮ ಬೆಂಗಳೂರು~ ಹಾಡನ್ನು ನಗರಕ್ಕೆ ಸಮರ್ಪಿಸಲಾಗಿದೆ. ಇಡೀ ಹಾಡನ್ನು ನಗರದ ಗೀತೆಯಂತೆ ಪರಿಗಣಿಸಬಹುದು” ಎಂದರು `ಕಲರ್ಸ್‌ ಇನ್ ಬೆಂಗಳೂರು~ ಚಿತ್ರದ ನಿರ್ದೇಶಕ ಜಿ.ಶ್ರೀವತ್ಸ.ಅದು ಚಿತ್ರದ ಧ್ವನಿಸುರಳಿ ಬಿಡುಗಡೆ ಸಮಾರಂಭ. `ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ. ಗಿರಗಿರ ಎನ್ನುವ ಹಾಡು ಟಿ. ಸ್ವಾಮಿ ಎನ್ನುವ ಅಂಗವಿಕಲರೊಬ್ಬರು ಬರೆದದ್ದು. `ಹನಿ ಹನಿ~ ಹಾಡನ್ನು ಸಂತೋಷ್ ರಚಿಸಿದ್ದಾರೆ. `ಏನೋ ವಿಶೇಷ~ ಹಾಡಿಗೆ ಚೈತ್ರ ದನಿಗೂಡಿಸಿದ್ದಾರೆ. `ಮನಿ ಮನಿ~ ಹಾಡನ್ನು ಪಡ್ಡೆ ಹುಡುಗರಿಗೆಂದೇ ರೂಪಿಸಲಾಗಿದೆ.ಸಮಕಾಲೀನ ಹಾಗೂ ಬಾಲಿವುಡ್ ಶೈಲಿಯ ಸಂಗೀತವನ್ನು ಚಿತ್ರಕ್ಕೆ ಬಳಸಿಕೊಳ್ಳಲಾಗಿದೆ~ ಎಂದು ಉತ್ಸಾಹದಿಂದ ಹೇಳಿಕೊಂಡರು.`ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ನಗರ ಕೋಟೆ, ಪಶ್ಚಿಮಘಟ್ಟ ಹಾಗೂ ಶರಾವತಿ ಹಿನ್ನೀರಿನ ಪ್ರದೇಶಗಳಲ್ಲಿ ಇತರೆ ಹಾಡುಗಳ ಚಿತ್ರೀಕರಣ ನಡೆದಿದೆ. ಸಂಗೀತ ನಿರ್ದೇಶಕ ಜೇಮ್ಸ ಆರ್ಕಿಟೆಕ್ಟ್ ಅವರಿಗೆ ಇದು ಎರಡನೇ ಚಿತ್ರ. ಶೇ 90ರಷ್ಟು ಚಿತ್ರೀಕರಣ ಮುಗಿದಿದ್ದು ಏಪ್ರಿಲ್ ಮೊದಲ ವಾರದಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆಗಳಿವೆ~ ಎಂದರು.

ನಿರ್ಮಾಪಕ ಸಿ.ಯೋಗೀಶ್ ತಕ್ಕಮಟ್ಟಿಗೆ ರಂಗಭೂಮಿಯ ಪರಿಚಯ ಉಳ್ಳವರು.ತಮ್ಮದೇ ಊರಿನ ರಂಗತಂಡಗಳು, ಹೆಗ್ಗೋಡಿನ ನೀನಾಸಂ ಬಗ್ಗೆ ತಿಳಿದುಕೊಂಡವರು. “ಚಿತ್ರ ನಿರ್ಮಿಸಬೇಕೆಂಬ ಆಸೆ ಬಹುದಿನಗಳಿಂದ ಇತ್ತು. `ಕಲರ್ಸ್‌...~ ಮೂಲಕ ಅದು ಈಡೇರಿದೆ. ಜೇಮ್ಸ ಒಳ್ಳೆಯ ಸಂಗೀತ ನೀಡಿದ್ದಾರೆ” ಎಂದವರು ಮೆಚ್ಚುಗೆ ಸೂಚಿಸಿದರು.`ಚಿತ್ರದ ಎಲ್ಲಾ ಹಾಡುಗಳು ಸೊಗಸಾಗಿ ಮೂಡಿ ಬಂದಿವೆ. ಹಾಡುಗಳ ದೃಶ್ಯೀಕರಣ ಮನೋಜ್ಞವಾಗಿದೆ. ಬೆಂಗಳೂರಿನ ಮೇಲೆ ಬರೆದಿರುವ ಹಾಡು ಹಿಟ್ ಆಗಲಿದೆ~ ಎನ್ನುವುದು ಜೇಮ್ಸ ಅವರ ವಿಶ್ವಾಸ.ಬೆಂಗಳೂರಿನ ಬದುಕಿನ ಶೈಲಿಯೇ ಚಿತ್ರಕ್ಕೆ ಆಧಾರ. ಜಾಗತೀಕರಣದ ಹೊಡೆತಕ್ಕೆ ಸಿಲುಕಿ ಮಹಾನಗರಗಳ ಬದುಕಿನ ಶೈಲಿ ಬದಲಾಗಿದೆ. ಸಣ್ಣ ಊರುಗಳಿಂದ ಬಂದ ಜನರು ಮಹಾನಗರಗಳ ಬಣ್ಣದ ಬದುಕಿಗೆ ಮಾರುಹೋಗುತ್ತಾರೆ. ಚಿತ್ರದಲ್ಲಿ ಬಣ್ಣದ ಬದುಕು, ಒತ್ತಡದ ಜೀವನ, ಅನಗತ್ಯ ವಿವಾಹ ವಿಚ್ಛೇದನ, ಹಣ ಸಂಪಾದಿಸುವುದಕ್ಕಾಗಿ ನಡೆಸುವ ದುರಾಲೋಚನೆಗಳು, ಹವಾಲಾ, ಆಸ್ತಿ ಮಾಡಲು ದುರಾಸೆ ಮತ್ತಿತರ ಸಮಸ್ಯೆಗಳನ್ನು ಚಿತ್ರಿಸಲಾಗಿದೆ. ಮನರಂಜನೆಯೇ ಚಿತ್ರದ ಮುಖ್ಯ ಉದ್ದೇಶ ಎನ್ನುತ್ತದೆ ಚಿತ್ರದ ಸಾರಾಂಶ.

ಚಿತ್ರದ ಹೊಸಮುಖಗಳಾದ ತುಳಸಿ ಗುಪ್ತ, ಸುಪ್ರಿಯಾ, ಗೌತಮ್, ಉಪಾಸನಾ, ಸತ್ಯಾ ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry