ಬಣ್ಣ ಕಳೆದುಕೊಂಡ ಗೋಡೆ ಚಿತ್ರಗಳು...

7

ಬಣ್ಣ ಕಳೆದುಕೊಂಡ ಗೋಡೆ ಚಿತ್ರಗಳು...

Published:
Updated:
ಬಣ್ಣ ಕಳೆದುಕೊಂಡ ಗೋಡೆ ಚಿತ್ರಗಳು...

ಬೆಂಗಳೂರು: ನಗರದ ಗೋಡೆಗಳ ಮೇಲೆ ಅನಧಿಕೃತ ಭಿತ್ತಿಪತ್ರಗಳ ಹಾವಳಿಯನ್ನು ತಡೆಯುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ನಾಲ್ಕು ವರ್ಷಗಳ ಹಿಂದೆ ನಗರದ ಗೋಡೆಗಳ ಮೇಲೆ ಬರೆಸಿದ್ದ ಚಿತ್ರಗಳು ಈಗ ಚಕ್ಕೆ ಎದ್ದು, ಬಣ್ಣ ಕಳೆದುಕೊಂಡು ಹಾಳಾಗಿವೆ.ನಾಲ್ಕು ವರ್ಷಗಳ ಹಿಂದೆ ವಿವಿಧ ಬಗೆಯ ಚಿತ್ರಗಳಿಂದ ಕಂಗೊಳಿಸುತ್ತಿದ್ದ ಗೋಡೆಗಳು ಈಗ ವಿಕೃತವಾಗುತ್ತಿವೆ.ನಾಲ್ಕು ವರ್ಷಗಳ ಹಿಂದೆ ಭರತ್‌ಲಾಲ್ ಮೀನಾ ಅವರು ಬಿಬಿಎಂಪಿ ಆಯುಕ್ತರಾಗಿದ್ದಾಗ ನಗರದ ಸೌಂದರ್ಯವನ್ನು ಹೆಚ್ಚಿಸಲು ಮತ್ತು ಗೋಡೆಗಳ ಮೇಲೆ ಗಲೀಜು ಮಾಡಬಾರದು ಎಂಬ ಉದ್ದೇಶದಿಂದ 77 ಲಕ್ಷ ರೂಪಾಯಿ ವೆಚ್ಚದಲ್ಲಿ ಗೋಡೆಗಳ ಮೇಲೆ ಚಿತ್ರ ಬಿಡಿಸುವ ಯೋಜನೆಯನ್ನು ರೂಪಿಸಿದ್ದರು. ಸುಮಾರು 75 ರಿಂದ 80 ಮಂದಿ ಕಲಾವಿದರು ನಗರದ ವಿವಿಧ ಕಡೆಗಳ ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸಿದ್ದರು.ಹಂಪಿ, ಬೇಲೂರು, ಹಳೇಬೀಡು, ವನ್ಯಜೀವಿಗಳು, ಜಲಪಾತಗಳು ಹೀಗೆ ನಾಡಿನ ಸಂಸ್ಕೃತಿಯನ್ನು, ಪ್ರಾಕೃತಿಕ ಸಂಪತ್ತನ್ನು ಸಾರುವ ಚಿತ್ರಗಳನ್ನು ಕಲಾವಿದರು ಬಿಡಿಸಿದ್ದರು.ಜನರು ಗಲೀಜು ಮಾಡುವುದನ್ನು ತಡೆಯಲು ಚಿತ್ರಕಲೆಯ ಬಳಕೆ ಆಗುತ್ತಿದೆ ಆದರೆ ಜನರಲ್ಲಿ ಕಲಾಭಿರುಚಿ ಮೂಡಿಸುವ ಘನೋದ್ದೇಶವೇನೂ ಇಲ್ಲ ಎನ್ನುವ ವಿಷಯ ಚರ್ಚೆಗೆ ಗ್ರಾಸವಾಗಿತ್ತು.ಗೋಡೆಯ ಮೇಲೆ ಚಿತ್ರ ಬಿಡಿಸಿದ ನಂತರವೂ ಭಿತ್ತಿಪತ್ರಗಳನ್ನು ಅಂಟಿಸಿದವರಿಗೆ ಮತ್ತು ಗಲೀಜು ಮಾಡಿದವರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಂಡಿತ್ತು. ಆಗ 400 ಪ್ರಕರಣಗಳನ್ನು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಆದರೆ, ಈಗ ಗೋಡೆಗಳ ಚಿತ್ರಗಳು ಬಣ್ಣ ಕಳೆದುಕೊಂಡು ಗಲೀಜಾಗಿರುವ ದೃಶ್ಯಗಳು ನಗರದ ಎಲ್ಲೆಡೆ ಕಂಡು ಬರುತ್ತಿವೆ.`ನಗರವು ಸುಂದರವಾಗಿರಲೆಂದು ಬಿಬಿಎಂಪಿಯು ಯೋಚಿಸಿ ಈ ಯೋಜನೆಯನ್ನು ಜಾರಿಗೊಳಿಸಿತ್ತು. ಈಗ ನೋಡಿದರೆ ಗಲೀಜು ತಡೆಯುವ ಬದಲು ಆ ಚಿತ್ರಗಳೇ ಬಣ್ಣಗೆಟ್ಟು ಗಲೀಜಾಗಿ ಕಾಣುತ್ತಿವೆ. ಅಂದರೆ, ಬಿಬಿಎಂಪಿಯ ಯೋಜನೆ ಫಲಕಾರಿಯಾಗಿಲ್ಲ ಎಂಬುದು ಈಗಿನ ಗಲೀಜಾದ ಚಿತ್ರಗಳು ಮತ್ತು ಭಿತ್ತಿಪತ್ರಗಳನ್ನು  ಅಂಟಿಸಿರುವುದನ್ನು ನೋಡಿದರೆ ತಿಳಿಯುತ್ತದೆ. ಬಿಬಿಎಂಪಿಯು ಸರಿಯಾದ ನಿರ್ವಹಣೆ ಮಾಡಿಲ್ಲದಿರುವುದೂ ಕೂಡ ಇದಕ್ಕೆ ಕಾರಣವಾಗಿದೆ' ಎಂದು ರಾಜಾಜಿನಗರದ ನಿವಾಸಿ ಅಶೋಕ್ ಹೇಳುತ್ತಾರೆ.`ಬಿಬಿಎಂಪಿಯು ಯಾವ ಉದ್ದೇಶಕ್ಕಾಗಿ ಈ ಚಿತ್ರಗಳನ್ನು ಬಿಡಿಸಿದೆ ಎಂಬುದು ಇದುವರೆಗೂ ತಿಳಿದಿಲ್ಲ. ಏಕೆಂದರೆ, ಕಲೆ ಮತ್ತು ಕಲಾವಿದನಿಗೂ ಒಂದು ಬೆಲೆಯಿದೆ. ಚಿತ್ರಗಳನ್ನು ಎಡೆಬಿಡದೆ ಸುಮ್ಮನೇ ಬಿಡಿಸಿಕೊಂಡು ಹೋಗುವುದಲ್ಲ. ಕಲಾವಿದನ ಕಲೆಗೆ ಒಂದು ಸ್ಥಳ ನೀಡಿದ್ದರೆ ಅವನ ಕಲೆಗೂ ಒಂದು ಬೆಲೆಯು ಬರುತ್ತದೆ' ಎಂದು ಕಲಾವಿದ ಗುರುದಾಸ್ ಶೆಣೈ `ಪ್ರಜಾವಾಣಿ' ಗೆ ಹೇಳಿದರು.`ನಮ್ಮ ನಾಡಿನ ಸಂಸ್ಕೃತಿ ತನ್ನದೇ ಆದ ಹಿರಿಮೆ ಹೊಂದಿದೆ. ಆ ಎಲ್ಲ ಚಿತ್ರಗಳನ್ನು ಗೋಡೆಗಳ ಮೇಲೆ ಬಿಡಿಸಿ ಆ ಕಲಾವಿದ, ಕಲಾಕೃತಿ ಮತ್ತು ನಾಡಿನ ಸಂಸ್ಕೃತಿಗೆ ಅವಮಾನವನ್ನು ಮಾಡಲಾಗಿದೆ. ಇದು ಒಂದು ರೀತಿಯ ಪ್ರವಾಸೋದ್ಯಮದ ಜಾಹೀರಾತುಗಳನ್ನಾಗಿ ಬಿಂಬಿಸುವಂತೆ ಬಿಡಿಸಲಾಗಿದೆ' ಎಂದು ಅವರು ಅಭಿಪ್ರಾಯಪಟ್ಟರು.`ಭಿತ್ತಿಪತ್ರಗಳನ್ನು ಅಂಟಿಸಬಾರದು ಅಥವಾ ಜನರು ಗಲೀಜು ಮಾಡಬಾರದು ಎಂಬ ಉದ್ದೇಶದಿಂದ ಈ ಚಿತ್ರಗಳನ್ನು ಬಿಡಿಸಿದ್ದಾದರೆ, ನಿಜಕ್ಕೂ ಕಲಾವಿದನಿಗೆ ಮಾಡಿರುವ ಅವಮಾನವಾಗಿದೆ. ಅದಕ್ಕಾಗಿ ಕಡ್ಡಾಯವಾದ ಕಾನೂನುಗಳನ್ನು ಜಾರಿಗೆ ತರಲಿ. ಅದನ್ನು ನಿಯಂತ್ರಿಸುವುದಕ್ಕಾಗಿ ಈ ರೀತಿ ಎಲ್ಲ ಗೋಡೆಗಳ ಮೇಲೆ ಚಿತ್ರಗಳನ್ನು ಬರೆಯುವುದು ಸಮರ್ಥನೀಯವಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.`ಸರ್ಕಾರ ಅಥವಾ ಬಿಬಿಎಂಪಿಯೇ ಎಲ್ಲವನ್ನು ನಿಭಾಯಿಸಲಿ ಎಂದು ಸಾರ್ವಜನಿಕರು ತಿಳಿಯುವುದು ತಪ್ಪು. ಅವರಿಗೂ ನಮ್ಮ ನಗರ, ನಮ್ಮ ಸಂಸ್ಕೃತಿಯನ್ನು ಗೌರವಿಸುವ ಗುಣವಿರಬೇಕು. ಬಿಬಿಎಂಪಿಯು ಯಾವುದೇ ಉದ್ದೇಶದಿಂದ ಚಿತ್ರಗಳನ್ನು ಬಿಡಿಸಿರಲಿ. ಆದರೆ, ಅದನ್ನು ಗಲೀಜು ಮಾಡಬಾರದು ಎಂಬ ಬುದ್ಧಿ ಜನಕ್ಕೆ ಇರಬೇಕು. ಇನ್ನು ಬಿಬಿಎಂಪಿಯು ಅವುಗಳ ನಿರ್ವಹಣೆಯನ್ನು ಸರಿಯಾಗಿ ಮಾಡಬೇಕು' ಎಂದು ಅವರು ಸಲಹೆ ನೀಡಿದರು.`ಈಗ ಚಿತ್ರಗಳೆಲ್ಲ ಬಣ್ಣ ಕಳೆದುಕೊಳ್ಳುತ್ತಿವೆಯೆಂದು ಮತ್ತೆ ಬಣ್ಣ ಬಳಿದರೆ, ಆ ಚಿತ್ರಗಳಿಗೆ ಏನೂ ಅರ್ಥ ಉಳಿಯುವುದಿಲ್ಲ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry