ಭಾನುವಾರ, ನವೆಂಬರ್ 17, 2019
21 °C

ಬಣ ರಾಜಕೀಯ; ಎದುರಾಳಿಗೆ ಅನುಕೂಲ!

Published:
Updated:

ಸಿದ್ದಾಪುರ: ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ರಾಜಕೀಯ ಪಕ್ಷಗಳಲ್ಲಿರುವ ಬಣ ರಾಜಕೀಯ ಮತ್ತು ಒಡಕು ಅವರ ಎದುರಾಳಿಗಳಿಗೆ ಅನುಕೂಲಕರವಾಗಿ ಪರಿಣಮಿಸಲಿದೆಯೇ ಎಂಬ ಪ್ರಶ್ನೆ ಸ್ಥಳೀಯರ ಚುನಾವಣಾ ಮಾತುಕತೆಯಲ್ಲಿ ಪ್ರಮುಖ ಸ್ಥಾನ ಪಡೆಯುತ್ತಿದೆ.   ತಮ್ಮ ಪಕ್ಷದ ಹೆಸರಿನಲ್ಲಿ ಮತ ಪಡೆಯಲು ಅಥವಾ  ವೈಯಕ್ತಿಕ  ವರ್ಚಸ್ಸಿನಿಂದ ಮತದಾರ ಪ್ರಭುವಿನ ಬೆಂಬಲ ಗಳಿಸಲು ಸ್ವಾಭಾವಿಕವಾಗಿಯೇ ಪ್ರಾಮುಖ್ಯ ನೀಡಿರುವ ಅಭ್ಯರ್ಥಿಗಳು, ಎದುರಾಳಿ ಪಕ್ಷದೊಳಗಿನ ಗುಂಪುಗಾರಿಕೆಯ ಲಾಭ ಪಡೆಯುವುದಕ್ಕೂ ಪ್ರಯತ್ನ ನಡೆಸಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಈ ರೀತಿ ಪರಿಸ್ಥಿತಿ ಉಂಟಾಗಲು ವಿವಿಧ ರಾಜಕೀಯ ಪಕ್ಷಗಳ ಬಣ ರಾಜಕೀಯ ಮತ್ತು ಗುಂಪುಗಳ ನಡುವಿನ ಅಸಮಾಧಾನ ಕಾರಣ ಎಂಬುದನ್ನ ಬೇರೆ ಹೇಳಬೇಕಿಲ್ಲ.ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ  ಬಹಿರಂಗ ಗುಂಪುಗಾರಿಕೆ ಕಾಣಿಸಿಕೊಂಡು ನಂತರ ಒಗ್ಗಟ್ಟಿನ ಮಂತ್ರ ಜಪಿಸಿದ ಪಕ್ಷ ಕಾಂಗ್ರೆಸ್. ಅಭ್ಯರ್ಥಿ ಆಯ್ಕೆಯ ವಿಷಯದಲ್ಲಿ ಉಂಟಾದ ಗೊಂದಲದಿಂದ ಕಾಂಗ್ರೆಸ್ ಪಕ್ಷದಲ್ಲಿ ಬಣಗಳು ಸಕ್ರೀಯವಾದವು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಅವರೇ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಎಂದು ನಂಬಿದ್ದ  ಕಾಂಗ್ರೆಸಿಗರು ದೀಪಕ ಹೊನ್ನಾವರ ಅವರ ಹೆಸರು ಬರುತ್ತಿದ್ದಂತೆ ಬಣ ರಾಜಕೀಯವನ್ನೂ ಚುರುಕುಗೊಳಿಸಿದರು. ಕೊನೆಗೆ ಪಕ್ಷದ ಹೈಕಮಾಂಡ್ ಅಭ್ಯರ್ಥಿಯ ಬದಲಾವಣೆಯಲ್ಲಿ ಆಸಕ್ತಿ ತೋರದಿದ್ದಾಗ `ನಾವೆಲ್ಲ ಒಂದು' ಎಂದು ಘೋಷಿಸಿದರು. ಪಟ್ಟಣದಲ್ಲಿ ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಷಣ್ಮುಖ ಗೌಡರ್, `ನಮ್ಮಲ್ಲಿ ಬಣಗಳಿಲ್ಲ. ನಾವೆಲ್ಲ ಈಗ ಒಂದಾಗಿದ್ದೇವೆ. ಪಕ್ಷದ ನಡುವಿನ ಗೊಂದಲ ಮಾಧ್ಯಮಗಳಿಂದ ಹೆಚ್ಚಾಯಿತೇನೋ' ಎಂದು ಹಳಹಳಿಸಿದರು. ಆದರೂ ಕಾಂಗ್ರೆಸ್‌ನ ಸ್ಥಿತಿ ನೋಡಿದರೆ ಅಲ್ಲಿನ ಬಣಗಳ ಮಧ್ಯೆ ಹೊಂದಾಣಿಗೆ ಆಗಿದೆ ಎಂದು ನಂಬುವುದಕ್ಕೆ ಜನಸಾಮಾನ್ಯ ಸಿದ್ಧನಿಲ್ಲ. ಉಳಿದ ರಾಜಕೀಯ ಪಕ್ಷಗಳೂ ಇದೇ ಅಭಿಪ್ರಾಯ ಹೊಂದಿದ್ದು, ಕಾಂಗ್ರೆಸ್ ಪಕ್ಷದ ಒಡಕನ್ನು ಉಪಯೋಗಿಸಿಕೊಳ್ಳಲು ತುದಿಗಾಲಲ್ಲಿ ಕಾಯುತ್ತಿವೆ. ಈ ಪಕ್ಷಗಳ ಮುಖಂಡರ ಮಾತಿನಲ್ಲಿಯೇ ಈ ಅಂಶ ಸ್ಟಷ್ಟವಾಗುತ್ತಿದ್ದು, ಕಾಂಗ್ರೆಸ್ ಪಕ್ಷದ  ಮತಗಳು ತಮ್ಮತ್ತ ಬರುತ್ತವೆ ಎಂದು ಅವರು ಖಾಸಗಿಯಾಗಿ ಹೇಳುತ್ತಿದ್ದಾರೆ.ಜಿಲ್ಲೆಯ ಬಿಜೆಪಿಯಲ್ಲಿ ಕೂಡ ಎರಡು ಪ್ರಮುಖ ಗುಂಪುಗಳಿರುವುದು ಗುಟ್ಟಾಗಿಲ್ಲ. ಈ ಎರಡು ಗುಂಪುಗಳೊಂದಿಗೆ ಶಿರಸಿ-ಸಿದ್ದಾಪುರ ವಿಧಾನ ಸಭಾ ಕ್ಷೇತ್ರದಲ್ಲಿ  ಸಚಿವ ಕಾಗೇರಿ ಅವರೊಂದಿಗೆ ಮುನಿಸಿಕೊಂಡಿರುವ ಅತೃಪ್ತರ ಗುಂಪು ಕೂಡ ಕಾಣಿಸಿಕೊಂಡಿದೆ. ಬಿಜೆಪಿಯಲ್ಲಿನ ಈ ಅಸಮಾಧಾನದ ಲಾಭ ಪಡೆಯಲು ಜೆಡಿಎಸ್ ಮತ್ತು ಕೆಜೆಪಿ ಹೊಂಚು ಹಾಕುತ್ತಿರುವುದು ಸ್ವಾಭಾವಿಕ.ಕಾಂಗ್ರೆಸ್ ಮತ್ತು ಬಿಜೆಪಿಗೆ ಹೋಲಿಸಿದರೆ ಅಂತಹ ದೊಡ್ಡ ಮಟ್ಟದ ಬಣ ಜೆಡಿಎಸ್‌ನಲ್ಲಿ ಕಂಡು ಬರದಿದ್ದರೂ,ಅಲ್ಲಿಯೂ ಅತೃಪ್ತರು ಕಾಣಸಿಗುತ್ತಾರೆ. ಈ ಅತೃಪ್ತರ ಚಂಚಲ ಮನೋಭಾವದ ಲಾಭ ಪಡೆಯಲು ಉಳಿದೆರಡು ಪಕ್ಷಗಳು ಪ್ರಯತ್ನ ನಡೆಸಿದ್ದರೆ, ಅದು ಆಶ್ಚರ್ಯದ ಸಂಗತಿಯಲ್ಲ.`ಮನೆಯೊಳಗಿನ ಬೆಂಕಿ ಮನೆಯ ಸುಡದಂತಾಗಲು' ಈ ವಿಧಾನ ಸಭಾ ಕ್ಷೇತ್ರದ ಪ್ರಮುಖ ಎದುರಾಳಿ ಪಕ್ಷಗಳು ಯಾವ ದಾರಿ ಕಂಡುಕೊಳ್ಳುತ್ತವೆ ಎಂಬುದು ಗೊತ್ತಾಗಬೇಕಾದರೆ ಚುನಾವಣೆಯೇ ಬರಬೇಕು. ಪ್ರಸ್ತುತದಲ್ಲಿ ಎಲ್ಲ ರಾಜಕೀಯ ಪಕ್ಷಗಳ ಹೊರಗಿನ ಚಿತ್ರಕ್ಕೂ ಒಳಗಿನ ಚಿತ್ರಕ್ಕೂ ವ್ಯತ್ಯಾಸವಿದೆ.ಪ್ರಮುಖರ ನಡುವಿನ ಅಸಮಾಧಾನವನ್ನೂ ಮೀರಿ  ಪಕ್ಷನಿಷ್ಠೆಯ ಮೇಲುಗೈ ಸಾಧಿಸಿದರೆ ಚುನಾವಣಾ ಅಭ್ಯರ್ಥಿಗಳು ನೆಮ್ಮದಿಯ ನಿಟ್ಟುಸಿರು ಬಿಡಲು ಸಾಧ್ಯವಾಗುತ್ತದೆ.

ಪ್ರತಿಕ್ರಿಯಿಸಿ (+)