ಶನಿವಾರ, ಜೂನ್ 12, 2021
28 °C

ಬಣ ರಾಜಕೀಯ, ಶಾಸಕರ ಬಹಿಷ್ಕಾರ ಪ್ರಸ್ತಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿಯಲ್ಲಿನ ಬಣ ರಾಜಕೀಯ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುಂಪಿನ ಶಾಸಕರ ಬಹಿಷ್ಕಾರ ವಿಷಯ ಮಂಗಳವಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಪ್ರಸ್ತಾಪವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಕೆಲ ಕಾಲ ಮಾತಿನ ಚಕಮಕಿಗೆ ಕಾರಣವಾಯಿತು. ಆರೋಪ-ಪ್ರತ್ಯಾರೋಪಗಳಿಗೆ ಎಡೆಮಾಡಿತು.
ರೆಸಾರ್ಟ್‌ನಲ್ಲಿ ತಂಗಿದ್ದ ಯಡಿಯೂರಪ್ಪ ಬಣದವರ ಪೈಕಿ ಸಚಿವರಾದ ಜಗದೀಶ ಶೆಟ್ಟರ್, ಸಿ.ಎಂ.ಉದಾಸಿ, ಶಾಸಕರಾದ ಚಂದ್ರಕಾಂತ ಬೆಲ್ಲದ, ಕೆ.ಲಕ್ಷ್ಮಿನಾರಾಯಣ ಮಾತ್ರ ಸದನಕ್ಕೆ ಬಂದಿದ್ದರು. ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೊರತುಪಡಿಸಿ ಬಿಜೆಪಿ ಕಡೆಯಿಂದ 14 ಸಚಿವರು ಮತ್ತು 34 ಶಾಸಕರು ಸದನಕ್ಕೆ ಹಾಜರಾಗಿದ್ದರು. ಇದರಲ್ಲಿ ತಲಾ ಇಬ್ಬರು ಸಚಿವರು, ಶಾಸಕರು ಯಡಿಯೂರಪ್ಪ ಬಣದವರು.ಬೆಳಿಗ್ಗೆ ವಿಧಾನ ಸಭೆಯ ಕಲಾಪ ಆರಂಭವಾದಾಗ ಆಡಳಿತ ಪಕ್ಷದ ಕಡೆಯ ಬಹುತೇಕ ಆಸನಗಳು ಖಾಲಿ ಇದ್ದವು. ಆಗ ಎದ್ದುನಿಂತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿಯ ಬಹುತೇಕ ಶಾಸಕರು ಗೈರು ಹಾಜರಾಗಿದ್ದಾರೆ. 62 ಶಾಸಕರು ರೆಸಾರ್ಟ್‌ನಲ್ಲಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಅವರೇ ಹೇಳಿದ್ದಾರೆ.  ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಸದನದ ವಿಶ್ವಾಸ ಕಳೆದುಕೊಂಡಿದ್ದು ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದೆ. ಹೀಗಾಗಿ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಶುರು ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಕೆ.ಎಸ್.ಈಶ್ವರಪ್ಪ, ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, `ಹಿಂದೆ ನಿಮ್ಮ ಪಕ್ಷದಲ್ಲಿ ಏನಾಗಿದೆ ಎಂಬುದು ನಮಗೂ ಗೊತ್ತಿದೆ. ರೆಸಾರ್ಟ್ ವಿಷಯದ ಬಗ್ಗೆ ಚರ್ಚೆ ಬೇಡ~ ಎಂದರು.ಗದ್ದಲದ ಮಧ್ಯೆಯೇ ಸ್ಪೀಕರ್ ಕೆ.ಜಿ.ಬೋಪಯ್ಯ ಮಾತನಾಡಿ, ಸದನದಲ್ಲಿ `ಕೋರಂ~ ಇದೆ. ಕಾರ್ಯಸೂಚಿ ಪ್ರಕಾರ ಮಾಜಿ ಸಚಿವ ಡಾ.ವಿ.ಎಸ್.ಆಚಾರ್ಯ ಅವರಿಗೆ ಸಂತಾಪ ಸೂಚಿಸಬೇಕಾಗಿದೆ. ರಾಜಕೀಯ ವಿಷಯವನ್ನು ಬುಧವಾರ ಪ್ರಸ್ತಾಪಿಸಿ ಎಂದು ಸಲಹೆ ಮಾಡಿದರು. ಕಾನೂನು ಸಚಿವ ಸುರೇಶ್‌ಕುಮಾರ್ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.ಆದರೆ ಇದರಿಂದ ಸಮಾಧಾನಗೊಳ್ಳದ ಸಿದ್ದರಾಮಯ್ಯ, `ಇವತ್ತು ಸದನ ಕರೆದು ನಾಳೆ (ಬುಧವಾರ) ವಿಷಯ ಪ್ರಸ್ತಾಪಿಸಿ ಎಂದರೆ ಹೇಗೆ? ಆಡಳಿತ ಪಕ್ಷದ ಸದಸ್ಯರೇ ಸದನಕ್ಕೆ ಬಂದಿಲ್ಲ. ಇದರಿಂದಾಗಿ ನಿಯಮಾವಳಿ ಪ್ರಕಾರ ಸದನ ಇಲ್ಲ. ಅಲ್ಲದೆ ಪ್ರಶ್ನೋತ್ತರ ವೇಳೆಗೂ ಅವಕಾಶ ಇಲ್ಲದಂತಾಗಿದೆ. ಏಳು ದಿನಗಳ ಮೊದಲೇ ನೋಟಿಸ್ ನೀಡಿಲ್ಲ~ ಎಂದು ತರಾಟೆಗೆ ತೆಗೆದುಕೊಂಡರು.ಉಪ ನಾಯಕ ಟಿ.ಬಿ.ಜಯಚಂದ್ರ ಮಾತನಾಡಿ, `ಬಹಳಷ್ಟು ಶಾಸಕರಿಗೆ ನೋಟಿಸ್ ತಲುಪಿಲ್ಲ. ಸದನ ನಡೆಯುತ್ತದೊ, ಇಲ್ಲವೊ, ಸರ್ಕಾರ ಇರುತ್ತದೊ, ಇಲ್ಲವೊ ಎಂಬುದೇ ಗೊತ್ತಿಲ್ಲ. ಆಡಳಿತ ಪಕ್ಷದ ಸದಸ್ಯರು ಗೈರು ಹಾಜರಾಗಿರುವಾಗ ಸದನ ನಡೆಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಆಚಾರ್ಯ ಅವರಿಗೆ ಅಗೌರವ ಸಲ್ಲಿಸುವ ಕೆಲಸ ನಮ್ಮ ಕಡೆಯಿಂದ ಆಗಿಲ್ಲ. ಸರ್ಕಾರದ ಕಡೆಯಿಂದ ಆಗಿದೆ ಎಂದು ತಿರುಗೇಟು~ ನೀಡಿದರು.ರಾಜಕೀಯ ವಿಚಾರಗಳು ಬೇಡ, ಮುಂದಿನ ವಾರ ಪ್ರಶ್ನೋತ್ತರಕ್ಕೆ ಅವಕಾಶವಿದೆ. ಪಕ್ಷದಲ್ಲಿ ಆಂತರಿಕ ವ್ಯತ್ಯಾಸಗಳು ಇರುವುದು ನಿಜ. ಇಲ್ಲ ಎಂದು ಹೇಳುವುದಿಲ್ಲ. ಆದರೆ ಸದನದ ಕಲಾಪ ಹಾದಿ ತಪ್ಪುವುದು ಬೇಡ. ಆಚಾರ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸೋಣ. ಉಳಿದ ವಿಚಾರಗಳನ್ನು ಪ್ರಸ್ತಾಪಿಸಲು ಸಮಯವಿದೆ ಎಂದು ಸದಾನಂದಗೌಡ ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಆಚಾರ್ಯ ಬಗ್ಗೆ ಗೌರವವಿದೆ. ಆದರೆ ಈಗ ಸಾಂವಿಧಾನಿಕ ಬಿಕ್ಕಟ್ಟು ಇದೆ. ನಿಯಮಗಳ ಪಾಲನೆ ಆಗಿಲ್ಲ. ಸದಾನಂದಗೌಡರು ವಿಶ್ವಾಸ ಕಳೆದುಕೊಂಡಿದ್ದಾರೆ. ಹೀಗಿರುವಾಗ ಸರ್ಕಾರ ನಡೆಸುವುದು, ಬಜೆಟ್ ಮಂಡಿಸುವುದು ಹೇಗೆ? ಎಂದು ಪ್ರಶ್ನಿಸಿದರು.`ನನ್ನ ಕಡೆಯಿಂದ ಲೋಪ ಆಗಿಲ್ಲ. ಮೂರು ದಿನ ಮೊದಲು ನೋಟಿಸ್ ಕಳುಹಿಸಲು ನಿಯಮಾವಳಿ ಪ್ರಕಾರ ಅವಕಾಶವಿದೆ. ಪ್ರಶ್ನೋತ್ತರಕ್ಕೂ ಅವಕಾಶ ಕಲ್ಪಿಸಲಾಗಿದೆ. ಸುಗಮವಾಗಿ ಕಲಾಪ ನಡೆಯಲು ಸಹಕರಿಸಿ ಎಂದು ಮನವಿ ಮಾಡಿದ ಬೋಪಯ್ಯ ಸಂತಾಪ ಸೂಚಕ ನಿರ್ಣಯ ಮಂಡಿಸಿದರು.ಪರಿಷತ್: `ಈ ಸರ್ಕಾರ ಸದಾನಂದ ಗೌಡರ ಕೈಯಲ್ಲಿದೆಯೋ ಅಥವಾ ರೆಸಾರ್ಟ್‌ನಲ್ಲಿದೆಯೋ?~ ಎಂದು ವಿಧಾನ ಪರಿಷತ್ತಿನಲ್ಲಿ ಸಂತಾಪ ಸೂಚಕ ನಿರ್ಣಯಕ್ಕೂ ಮುನ್ನ ಪ್ರಶ್ನಿಸಿದ ವಿರೋಧ ಪಕ್ಷದ ನಾಯಕಿ ಮೋಟಮ್ಮ ಅವರು, `ಬಜೆಟ್ ಅಧಿವೇಶನ ನಡೆಯುವ ದಿನಾಂಕವನ್ನು ಕನಿಷ್ಠ ಹತ್ತು ದಿನ ಮುಂಚಿತವಾಗಿ ಸದಸ್ಯರಿಗೆ ತಿಳಿಸಬೇಕಿತ್ತು. ಆದರೆ ಕೆಲವರಿಗೆ ಇನ್ನೂ ಸೂಚನಾ ಪತ್ರ ತಲುಪಿಲ್ಲ, ಇನ್ನುಳಿದವರಿಗೆ ನಿನ್ನೆಯಷ್ಟೇ ತಲುಪಿದೆ~ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.`ಮುಖ್ಯಮಂತ್ರಿಗಳಿಂದ ನೇಮಕಗೊಂಡ ಸಚಿವ ಸಂಪುಟದ ಸದಸ್ಯರೇ ಇಂದು ಅವರ ವಿರುದ್ಧ ಕೆಲಸ ಮಾಡುತ್ತಿದ್ದಾರೆ~ ಎಂದು ಜೆಡಿಎಸ್‌ನ ಎಂ.ಸಿ. ನಾಣಯ್ಯ ಕುಟುಕಿದರೆ, `ಬಜೆಟ್ ಅಧಿವೇಶನ ನಡೆಸುವುದು ಸರ್ಕಾರದ ಸಾಂವಿಧಾನಿಕ ಕೆಲಸ. ಅಧಿವೇಶನ ಆರಂಭವಾಗುವ ದಿನಾಂಕವನ್ನು ಆತುರದಲ್ಲಿ ತಿಳಿಸಿ, ಸದಸ್ಯರಿಗೆ ಪ್ರಶ್ನೆಗಳನ್ನು ಸಿದ್ಧಪಡಿಸಲೂ ಅವಕಾಶ ನೀಡದಿರುವುದು ಪ್ರಜಾಪ್ರಭುತ್ವವನ್ನು ಕೊಲೆಗೈದಂತೆ~ ಎಂದು ಕಾಂಗ್ರೆಸ್‌ನ ವೀರಣ್ಣ ಮತ್ತಿಕಟ್ಟಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಪ್ರತಿಪಕ್ಷಗಳ ಆಕ್ಷೇಪಗಳಿಗೆ ಉತ್ತರಿಸಿದ ಮುಖ್ಯಮಂತ್ರಿಗಳು, `ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆ, ಸಂಸತ್ತಿನ ಬಜೆಟ್ ಅಧಿವೇಶನ ಕಾರಣ ಮುಂಚಿತವಾಗಿ ಸೂಚನೆ ನೀಡಲು ಸಾಧ್ಯವಾಗಲಿಲ್ಲ~ ಎಂಬ ಸಮಜಾಯಿಷಿ ನೀಡಿದರು. ರೆಸಾರ್ಟ್‌ನಲ್ಲಿ ಕೆಲವು ಸಚಿವರು, ಶಾಸಕರು ಬೀಡು ಬಿಟ್ಟಿರುವುದು ಬಿಜೆಪಿಯ ಆಂತರಿಕ ವಿಚಾರ. ಅದನ್ನು ಸದನದಲ್ಲಿ ಚರ್ಚಿಸುವುದು ಬೇಡ ಎಂದು ಮುಖ್ಯಮಂತ್ರಿಗಳು ಹೇಳಿದ್ದು ವಿಪಕ್ಷಗಳ ಕೋಪಕ್ಕೆ ಗುರಿಯಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.