ಸೋಮವಾರ, ಮೇ 17, 2021
27 °C

ಬತ್ತಕ್ಕೆ ಬಿಳಿಕಟ್ಟೆ: ರೈತರಲ್ಲಿ ಆತಂಕ

ರವಿ ಕೆಳಂಗಡಿ Updated:

ಅಕ್ಷರ ಗಾತ್ರ : | |

ಕಳಸ: ಕಾರ್ಮಿಕರ ಕೊರತೆ ನಡುವೆಯೂ ಹರಸಾಹಸದಿಂದ ಬತ್ತದ ನಾಟಿ  ಮುಗಿಸಿರುವ ಅನ್ನದಾತರಿಗೆ ಆಘಾತ ಎದುರಾಗಿದೆ. ಹೋಬಳಿಯಾದ್ಯಂತ ಬತ್ತದ ಗದ್ದೆಗೆ ಬಿಳಿಕಟ್ಟೆ ರೋಗ ಅಪಾರ ಪ್ರಮಾ ಣದಲ್ಲಿ ವ್ಯಾಪಿಸುತ್ತಿದ್ದು ಆತಂಕ ಮೂಡಿಸಿದೆ.ವಾರದಲ್ಲಿ ಬಿಳಿಕಟ್ಟೆ ರೋಗ ನೂರಾರು ಎಕರೆ ಬತ್ತಕ್ಕೆ ವ್ಯಾಪಿಸಿದ್ದು ರೈತರು ದಿಕ್ಕು ಕಾಣದಾಗಿದ್ದಾರೆ. ಗದ್ದೆಯಲ್ಲಿ ಹಸಿರಾಗಿದ್ದ ಸಸಿಯನ್ನು ಕೀಟ ತಿಂದು ಮುಗಿಸಿದ್ದು  ಗಿಡ್ಡನೆಯ ಸಸಿಗಳು ಕಂಡು ಬರುತ್ತಿವೆ. ರೋಗ ನಿಯಂತ್ರಿಸದಿದ್ದಲ್ಲಿ ಇಳುವರಿ ಕುಸಿತ ಆಗುವುದು ನಿಶ್ಚಿತ ಎಂಬ ಸ್ಥಿತಿ ಇದೆ.`ಕಳೆದ ವರ್ಷನೂ ಬತ್ತಕ್ಕೆ ಬಿಳಿಕಟ್ಟೆ ಇತ್ತು. ಆದ್ರೆ ಈ ವರ್ಷ ಭಾರಿ ಜಾಸ್ತಿ ನಷ್ಟ ಆಗಿದೆ. ಯಾವ ಗದ್ದೆ ನೋಡಿದ್ರೂ ಹುಳಗಳು ಸಸಿ ಗಳನ್ನು ತಿಂದು ಹಾಕಿವೆ~ ಎಂದು ರೈತರು ಹೇಳುತ್ತಾರೆ. ಈ ವರ್ಷ ಗದ್ದೆ ನಾಟಿ ಮುಗಿದಾಗಿನಿಂದ ಸತತವಾಗಿ ಮಳೆ ಬರುತ್ತಿದೆ. ಗದ್ದೆಯಲ್ಲಿ ನೀರು ಆರಲೇ ಇಲ್ಲ. ಇದರಿಂದಾಗಿ ಕೀಟದ ಹಾವಳಿ ಹೆಚ್ಚಾಗಿರಬೇಕು ಎಂಬುದು ಕೃಷಿಕರ ಊಹೆ.  ಬಿಳಿಕಟ್ಟೆಯ ನಿಯಂತ್ರಣದ ಬಗ್ಗೆ ಕಳಸ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಸುಬ್ರಮಣ್ಯ ಅವರನ್ನು ಪ್ರಶ್ನಿಸಿದಾಗ ಅವರು, ಬಿಳಿಕಟ್ಟೆ ಪ್ರತಿವರ್ಷವೂ ಕಂಡು ಬರುವ ರೋಗವೇ. ಆದರೆ ಈ ಬಾರಿ ಕೀಟದ ಹಾವಳಿ ಸ್ವಲ್ಪ ಹೆಚ್ಚಾದಂತಿದೆ. ಕ್ಲೋರೋಫೈರಿಫಾಸ್ ಅಥವಾ ಮೊನೋಕ್ರೋಟೋಫಾಸ್ ಬಳಸಿ ರೋಗ ಹತೋಟಿಗೆ ತರಬಹುದು ಎಂದು ಪರಿಹಾರ ಸೂಚಿಸಿದರು.  200 ಲೀಟರ್ ನೀರಿಗೆ ಕಾಲು ಲೀಟರ್ ಮೊನೋಕ್ರೋಟಾಫಾಸ್ ಅಥವಾ ಅರ್ಧ ಲೀಟರ್ ಕ್ಲೋರೋಪೆರಿಫಾಸ್ ಬೆರೆಸಿ ಮಳೆ ಬಿಡುವು ನೀಡಿದಾಗ ಗದ್ದೆಗೆ ಸಿಂಪಡಣೆ ಮಾಡಿದರೆ ಕೀಟದ ಬಾಧೆಯಿಂದ ಮುಕ್ತವಾಗಬಹುದು. ಕೆಲ ದಿನಗಳ ನಂತರ ಮತ್ತೆ ಸಸಿಯಿಂದ ಚಿಗುರು ಮೂಡಿ ಸಹಜ ಸ್ಥಿತಿಗೆ ಬರುತ್ತದೆ.ಗದ್ದೆಯಲ್ಲಿ ನೀರು ನಿಂತರೆ ಕೀಟದ ಬಾಧೆ ಹೆಚ್ಚಾಗುತ್ತದೆ. ಆದ್ದರಿಂದ ರೋಗ ನಿಯಂತ್ರಣಕ್ಕೆ ಬರುವವರೆಗೆ ಗದ್ದೆಯಿಂದ ನೀರನ್ನು ಖಾಲಿ ಮಾಡಬೇಕು  ಎಂದೂ ಅವರು ಸಲಹೆ ನೀಡುತ್ತಾರೆ.ದುಬಾರಿ ಬೆಲೆಯ ಈ ಔಷಧಗಳು ಶೇ.50ರ ಸಹಾಯಧನದ ಬೆಲೆಯಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಲಬ್ಯವಿರಬೇಕಿತ್ತು. ಆದರೆ ಈಗ ಅಲ್ಲಿ ಯಾವುದೇ ಔಷಧಿ ಲಭ್ಯ ವಿಲ್ಲ. ಕೂಡಲೇ ಔಷಧ ಪೂರೈಸಿ ಅನ್ನದಾತರ ಚಿಂತೆ ನಿವಾರಿಸಲು  ಕೃಷಿ ಇಲಾಖೆ ಆಸಕ್ತಿ ವಹಿಸುವುದೇ ಎಂಬುದು ಈಗಿನ ಪ್ರಶ್ನೆ.

                            

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.