ಶುಕ್ರವಾರ, ಏಪ್ರಿಲ್ 23, 2021
31 °C

ಬತ್ತಕ್ಕೆ ವೈರಸ್ ರೋಗ ಭೀತಿ!

.ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ತಾಲ್ಲೂಕಿನ ಕೊಂಗಂಡಿ ಹಾಗೂ ಅದರ ಸುತ್ತಮುತ್ತಲಿನ ಗ್ರಾಮದ ವ್ಯಾಪ್ತಿಯಲ್ಲಿ ನಾಟಿ ಮಾಡಲಾಗಿರುವ ಬತ್ತ ಕಟಾವ್ ಹಂತಕ್ಕೆ ತಲುಪಿದೆ. ಬತ್ತ ಬೆಳೆಗೆ ವೈರಸ್ (ಸೊಳ್ಳೆ ರೋಗ) ಭೀತಿ ಉಂಟಾಗಿದೆ.ಸಾವಿರಾರು ರೂಪಾಯಿ ವೆಚ್ಚ ಮಾಡಿ ನಾಟಿ ಮಾಡಿದ ಬೆಳೆಯು ಕೈಗೆ ಬಂದ ತುತ್ತು ಬಾಯಿಗೆ ಬರದ ದುಸ್ಥಿತಿಯನ್ನು ಬತ್ತ ಬೆಳೆಗಾರರಿಗೆ ಎದುರಾಗಿದೆ.ಸದ್ಯ ಕಾಳು ಕಟ್ಟಿರುವ ಬತ್ತ ಐದಾರು ದಿನದಲ್ಲಿ  ಕಟಾವ್ ಹಂತಕ್ಕೆ ತಲುಪುತ್ತದೆ. ಬೆಳೆಗೆ ಸೊಳ್ಳೆಗಳು  ಬುಡಕ್ಕೆ ಆಕ್ರಮಿಸಿ ರಸವನ್ನು ಹಿರುತ್ತದೆ. ನಂತರ ಬೆಳೆಯ ತುಂಬಾ ಆವರಿಸಿ ಮುದಡಿಕೊಳ್ಳುತ್ತದೆ.  ಅಲ್ಲದೆ ಒಂದೆರಡು ದಿನಗಳಲ್ಲಿ ಗದ್ದೆಯ ಎಲ್ಲಾ ಪ್ರದೇಶಕ್ಕೆ ಪಸರಿಸಿ ಬೆಳೆ ಹಾನಿ ಮಾಡುತ್ತದೆ. ಇದರಿಂದ ಇಳುವರಿ ಗಣನೀಯ ಪ್ರಮಾಣದಲ್ಲಿ ಕುಂಠಿತವಾಗುತ್ತದೆ. ಬತ್ತದ ಕಾಳು ಬೇರ್ಪಡಿಸುವ ಸಂದರ್ಭದಲ್ಲಿ ನುಚ್ಚು ಆಗುತ್ತದೆ.ಧಾರಣಿಯೂ ಕೂಡಾ ಇಳಿಮುಖವಾಗುತ್ತದೆ. ನಮಗೆ ದಿಕ್ಕು ತೋಚದ್ದಾಗಿದೆ ಎನ್ನುತ್ತಾರೆ ರೈತ ಸೂಗರಡ್ಡಿ ಸೂಗರಾಳ ಆತಂಕ ವ್ಯಕ್ತಪಡಿಸುತ್ತಾರೆ.ಸೊಳ್ಳೆಯ ರೋಗವನ್ನು ಹತ್ತಿಕ್ಕಲು ಔಷಧಿಯನ್ನು ಸಿಂಪಡಿಸಿದ ನಂತರ ಕಟಾವ್ ಮಾಡಬೇಕು. ಈಗಾಗಲೇ ಪ್ರತಿ ಎಕರೆಗೆ 18ರಿಂದ 20 ಸಾವಿರ ರೂಪಾಯಿ ವೆಚ್ಚ ಮಾಡಿದ್ದೇವೆ. ಇಳುವರಿ ಕೂಡಾ ಎಕರೆಗೆ 35-40 ಚೀಲ ಬರುವ ಅಂದಾಜು ಇದೆ. ಧಾರಣಿಯೂ ಕೂಡಾ ಪ್ರತಿ ಚೀಲ ಭತ್ತಕ್ಕೆ 1,200ರೂಪಾಯಿ ಇದೆ. ತುಸು ನೆಮ್ಮದಿ ನಿಟ್ಟುಸಿರು ಬಿಡಬೇಕು ಅನ್ನುಷ್ಟರಲ್ಲಿ ಒಂದಿಲ್ಲ ಒಂದು ಆತಂಕದಲ್ಲಿ ನಾವು ಕಾಲ ಕಳೆಯುವಂತಾಗಿದೆ.  ಸೊಳ್ಳೆ ರೋಗದ ನೆಪದಲ್ಲಿ ಧಾರಣಿಯನ್ನು ಕುಸಿಯುವ ಭೀತಿಯಿದೆ ಎನ್ನುತ್ತಾರೆ ರೈತ ಮಾನಪ್ಪ ಹೊಸ್ಮನಿ.ಯಂತ್ರ ದುಬಾರಿ: ಕೂಲಿ ಕಾರ್ಮಿಕರ ಸಮಸ್ಯೆಯಿಂದ ಹಾಗೂ ತ್ವರಿತವಾಗಿ ಕೆಲಸ ನಿರ್ವಹಿಸುವ ಸಲುವಾಗಿ ಹೆಚ್ಚಿನ ರೈತರು ಭತ್ತ ರಾಶಿ ಯಂತ್ರದ ಕಡೆ ಮುಖ ಮಾಡಿದ್ದಾರೆ. ನೆರೆ ರಾಜ್ಯ ಹಾಗೂ ಜಿಲ್ಲೆಯಿಂದ ರಾಶಿ ಯಂತ್ರಗಳನ್ನು ದಲ್ಲಾಳಿಗಳು ತೆಗೆದುಕೊಂಡು ಬಂದಿದ್ದಾರೆ.ತಮ್ಮಲ್ಲಿಯೇ ಅಲಿಖಿತವಾದ ಫರ್ಮಾನು ಹೊರಡಿಸಿಕೊಂಡು ಪ್ರತಿ ಗಂಟೆಗೆ 1,800-2,000ರೂಪಾಯಿಗೆ ಕಟಾವ್ ಮಾಡಲು ಸಿದ್ದರಾಗುತ್ತಿದ್ದಾರೆ. ದುಬಾರಿ ಬೆಲೆಯ ರಾಶಿಯಂತ್ರಕ್ಕೆ ಇನ್ನಷ್ಟು ಹಣ ತೆತ್ತಬೇಕಾಗುತ್ತದೆ ಎಂಬ ಕೊರಗು ರೈತರಲ್ಲಿ ಕಾಡುತ್ತಲಿದೆ.ಕುಸಿಯುವ ಭೀತಿ: ಇನ್ನೂ ಒಂದು ವಾರದಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ರಾಶಿಯ ಕಾರ್ಯ ಚುರುಕಾಗಲಿದೆ. ಮಾರುಕಟ್ಟೆಗೆ ಅಧಿಕವಾಗಿ ಭತ್ತ ಬರುವ ಅಂದಾಜು ಇದೆ. ಏಕಾ ಏಕಿ ಧಾರಣಿ ಕುಸಿಯುವ ಚಿಂತೆ  ಕಾಡುತ್ತಲಿದೆ. ಸರ್ಕಾರ ಈಗಲೇ ಮಧ್ಯ ಪ್ರವೇಶಿಸಿ ಧಾರಣಿ ಕುಸಿಯದಂತೆ ತಡೆಯಲು ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕು ರೈತರು ಆಗ್ರಹಿಸಿದ್ದಾರೆ.ಸಸಿ: ಬೇಸಿಗೆ ಹಂಗಾಮಿನಲ್ಲಿ ಕಾಲುವೆ ನೀರು ಸಮರ್ಪಕವಾಗಿ ದೊರೆಯುವದೇ ಅಥವಾ ಇಲ್ಲ ಎಂಬ ಗೊಂದಲ ಮುಂದುವರೆದಿದೆ. ಗದ್ದೆಯಲ್ಲಿ ಸಸಿಗಳನ್ನು ಹಾಕಲಾಗಿದ್ದು  ಮುಂದೆ ನಾಟಿ ಮಾಡಬೇಕೆ ಅಥವಾ ಇಲ್ಲವೆಂಬುವುದು ನದಿ ಹಾಗೂ ಹಳ್ಳದ ತಟದ ರೈತರು ಸಂಕಷ್ಟದಲ್ಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.