ಬತ್ತದ ಆಶಾ ಕಿರಣ

7

ಬತ್ತದ ಆಶಾ ಕಿರಣ

Published:
Updated:

ಬಸವನಗುಡಿಯ ಬ್ರಾಹ್ಮಣರ ಮನೆಯ ಮುದ್ದು ಮಗು ಆಶಾ ಮೂರು ತಿಂಗಳ ಕೂಸಾಗಿದ್ದಾಗ ವಿಪರೀತ ಜ್ವರಕ್ಕೆ ತುತ್ತಾಗುತ್ತದೆ. ಪಕ್ಕದಲ್ಲೇ ಇದ್ದ ವೈದ್ಯರೊಬ್ಬರು ಹೈಡೋಸ್ ಪೆನ್ಸಿಲಿನ್ ಇಂಜೆಕ್ಷನ್ ಕೊಡುತ್ತಾರೆ. ಜ್ವರ ಇಳಿಯುತ್ತದೆ. ಆದರೆ ಮಗು ಜೀವಚ್ಛವವಾಗಿ ಮಲಗುತ್ತದೆ. ಅಳುವ ಸ್ವರವೂ ಗಂಟಲಲ್ಲೇ ಬತ್ತಿ ಹೋಗುತ್ತದೆ. ಮತ್ತೆ ಆ ಮನೆಯಲ್ಲಿ ಮಗುವಿನ ಅಳು ಕೇಳಬೇಕಾದರೆ ಒಂದು ವರ್ಷ ಬೇಕಾಗುತ್ತದೆ. ಮಗು ಎದ್ದು ಕೂರಲು ಆರು ವರ್ಷ ಹಿಡಿಯುತ್ತದೆ. ಆದರೇನು ಎರಡೂ ಕೈ ಮತ್ತು ಒಂದು ಕಾಲು ಸ್ವಾಧೀನ ಇಲ್ಲವಾಗುತ್ತದೆ. ಮಗು ಅಂಬೆಗಾಲಿಡಲಿಲ್ಲ, ಒಂಟಿ ಕಾಲಲ್ಲಿ ಕೈಗಳ ಹಂಗೂ ಇಲ್ಲದೆ ಏಳುತ್ತದೆ, ಕಾಲ ಮೇಲೇ ನಿಲ್ಲುತ್ತದೆ.ಮುಂದೆ, ಅಸಹಾಯಕರಿಗೆ ಮಾತ್ರವಲ್ಲ ಸಕಲಾಂಗವೂ ಸದೃಢವಾಗಿ ಇರುವವರಿಗೂ ಸ್ಫೂರ್ತಿ ನೀಡುವಂತೆ ಬದುಕುತ್ತದೆ. ಹೀಗೆ ಬೆಳೆದುಬಂದ ಆ ಮಗುವೇ ಈಗ ಬೆಂಗಳೂರಿನ ಬಸವೇಶ್ವರ ನಗರದ `ಅನುಗ್ರಹ ಗ್ಯಾಸ್ ಏಜೆನ್ಸೀಸ್' ಮಾಲೀಕರಾದ ಆಶಾ ಡಿ.ಎಲ್ಲರಂತೆ ಸಾಮಾನ್ಯವಾಗಿ ಯೋಚಿಸುವ ಅಂಗವಿಕಲರು ಮನೆಯವರಿಗೆ ಭಾರವಾಗಿ ಜೀವನ ಪರ್ಯಂತ ಕಣ್ಣೀರಲ್ಲೇ ಕೈತೊಳೆಯಬೇಕಾಗುತ್ತದೆ. ಸ್ವಂತ ಕೆಲಸವನ್ನೂ ಮಾಡಲು ಸಾಧ್ಯವಾಗದ ಅವರು ಇನ್ನೇನು ಮಾಡಲು ಸಾಧ್ಯ ಎಂದುಕೊಳ್ಳುವುದು ಸಹಜ. ಆದರೆ, ಕೈಯಲ್ಲಾಗದು ಎಂಬುದು ಯಾವುದೂ ಇಲ್ಲ, ಕೈ ಕಾಲು ಇಲ್ಲದೆಯೂ ಸಾಧನೆ ಮಾಡಬಹುದು ಎಂಬುದಕ್ಕೆ ಎರಡೂ ಕೈ ಮತ್ತು ಒಂದು ಕಾಲುಗಳ ವೈಕಲ್ಯ ಹೊಂದಿರುವ ಆಶಾ ಡಿ. ಉದಾಹರಣೆಯಾಗಿ ನಿಂತಿದ್ದಾರೆ.ಬಿ.ಕಾಂ ಪದವಿ ಪಡೆದ ಆಶಾ ಅವರಿಗೆ ಅಂಚೆ ಇಲಾಖೆಯಲ್ಲಿ ಕೆಲಸ ಪಡೆಯುವುದು ಕಷ್ಟವಾಗಲಿಲ್ಲ. ಆದರೆ ಏನೋ ಸಾಧಿಸಬೇಕೆಂಬ ಛಲ ಅವರನ್ನು ಕೇವಲ ಗುಮಾಸ್ತೆಯಾಗಿ ಇರಲು ಬಿಡಲಿಲ್ಲ. ಪತ್ರಿಕೆಯಲ್ಲಿ ಬಂದ ಜಾಹೀರಾತು ನೋಡಿ ಅರ್ಜಿ ಹಾಕಿಯೇ ಬಿಟ್ಟರು. ಅಂಗವಿಕಲರ ಕೋಟಾದಡಿ ಭಾರತ್ ಗ್ಯಾಸ್ ಏಜೆನ್ಸಿ ನಡೆಸುವ ಅವಕಾಶ ಅವರಿಗೆ ಲಭಿಸಿತು.ಅದು 1984ನೇ ಇಸವಿ. ಅಂಗವಿಕಲೆ ಬೇರೆ, ಸದಾ ಪುರುಷರು ಬಂದು ಹೋಗುವಂತಹ ಗ್ಯಾಸ್ ಏಜೆನ್ಸಿ ನಡೆಸುವುದಕ್ಕೆ ಮನೆಯವರು ಸುತಾರಾಂ ಒಪ್ಪಲಿಲ್ಲ. ಆದರೆ ಆಶಾ ಹಟ ಬಿಡಲಿಲ್ಲ. ಸರ್ಕಾರಿ ಕೆಲಸಕ್ಕೆ ಗುಡ್ ಬೈ ಹೇಳಿ ಸ್ನೇಹಿತರಿಂದ ಹಣಕಾಸು ನೆರವು ಪಡೆದು, 1.50 ಲಕ್ಷ ರೂಪಾಯಿ ಹೊಂದಿಸಿ ಏಜೆನ್ಸಿ ಆರಂಭಿಸಿಯೇ ಬಿಟ್ಟರು. ಹಾಗೆ ಆರಂಭಗೊಂಡ ಏಜೆನ್ಸಿಗೆ ಈಗ 28 ವರ್ಷ.`ಆಗಿನ್ನೂ ಗ್ಯಾಸ್ ಬಳಕೆಗೆ ಜನ ಒಗ್ಗಿಕೊಂಡಿರಲಿಲ್ಲ. ಜನರ ಮನ ಒಲಿಸುವುದೇ ಕಷ್ಟವಾಗಿತ್ತು. ಕ್ರಮೇಣ ಗ್ಯಾಸ್ ಬಳಕೆ ಅನಿವಾರ್ಯವಾಯಿತು. ಈಗ ನಮ್ಮ  ಏಜೆನ್ಸಿ ಬಳಕೆದಾರರ ಸಂಖ್ಯೆ 45 ಸಾವಿರ. ಸುಮಾರು ನೂರು ಕೆಲಸಗಾರರು ನಮ್ಮಲ್ಲಿ ದುಡಿಯುತ್ತಿದ್ದಾರೆ' ಎಂದು ಆಶಾ ಹೆಮ್ಮೆಯಿಂದ ಹೇಳುತ್ತಾರೆ.ಆಶಾ ಅವರಲ್ಲಿರುವ ಸಾಧನೆಯ ಛಲ ಇನ್ನೂ ಬತ್ತಿಲ್ಲ. ವಯಸ್ಸು 55 ದಾಟಿದೆ. ಅದೇ ಪ್ರಶಾಂತ ನಗು, ಉತ್ಸಾಹ ತುಂಬಿದ ಮಾತು. ಇಷ್ಟು ವರ್ಷಗಳಿಂದ ಏಜೆನ್ಸಿಯನ್ನು ಒಂಟಿಯಾಗೇ ನಡೆಸಿಕೊಂಡು ಬಂದಿದ್ದಾರೆ. ಏಜೆನ್ಸಿಗೆಂದೇ ಹತ್ತು ವರ್ಷದ ಹಿಂದೆ ಸ್ವಂತ ಕಟ್ಟಡ ಮಾಡಿಕೊಂಡಿದ್ದಾರೆ. ಪಕ್ಕದಲ್ಲೇ ಮನೆ ಇದೆ. ಬೆಳಿಗ್ಗೆ 8.30ರಿಂದ ರಾತ್ರಿ ಎಂಟರವರೆಗೂ ಅವರು ಕಚೇರಿಯಲ್ಲೇ ಇರುತ್ತಾರೆ. ಪುಟ್ಟ ಮಗುವಿನಂತಹ ಅಂಗೈ, ಗಟ್ಟಿಯಾಗಿ ಪೆನ್ನು ಹಿಡಿಯಲಾರರು. ಎರಡೂ ಕೈಗಳ ಅಂಗೈಯನ್ನು ಒಂದರ ಮೇಲೊಂದು ಆಧಾರವಾಗಿಟ್ಟು ಸಹಿ ಹಾಕುತ್ತಾರೆ. ಹಾಗೆಯೇ ಕಂಪ್ಯೂಟರ್ ಕೀಲಿಗಳನ್ನು ಒತ್ತುತ್ತಾರೆ. ಸತತ 12 ವರ್ಷಗಳಿಂದ ಭಾರತ್ ಗ್ಯಾಸ್ ಕಂಪೆನಿಯ `ಅತ್ಯುತ್ತಮ ಹಂಚಿಕೆದಾರ' ಪ್ರಶಸ್ತಿಯನ್ನು ಪಡೆದಿದ್ದಾರೆ. ಅವೇಕ್, ರೋಟರಿ ಸಂಸ್ಥೆಗಳು ಗೌರವಿಸಿವೆ.ಈ ಮಧ್ಯೆ ಆಶಾ ಅವರ ಸಾಧನೆಗೆ ಮನಸೋತವರೊಬ್ಬರು ಕೈ ಹಿಡಿದಿದ್ದರು. ದುರದೃಷ್ಟವಶಾತ್ ಪತಿ 2005ರಲ್ಲಿ ನಿಧನರಾದರು. ಆಶಾ ಕಂಗೆಡಲಿಲ್ಲ. ಬಂದದ್ದನ್ನು ಬಂದಂತೆ ಸ್ವೀಕರಿಸುವುದು ಅವರಿಗೆ ಅಭ್ಯಾಸವಾಗಿ ಬಿಟ್ಟಿದೆ. ಮಗ ಪೂರ್ಣಬೋಧ ವಯಸ್ಸಿಗೆ ಬಂದಿದ್ದಾನೆ. ರಾಘವೇಂದ್ರ ಸ್ವಾಮಿಗಳ ಪರಮ ಭಕ್ತೆಯಾದ ಆಶಾ, ಸ್ವಾಮಿಗಳ ಗುರುವಿನ ಹೆಸರನ್ನೇ ಮಗನಿಗೆ ಇಟ್ಟಿದ್ದಾರೆ. ಕಾನೂನು ಪದವೀಧರನಾದ ಮಗನಿಗೆ ಫೋಟೋಗ್ರಫಿ ಎಂದರೆ ಪ್ರಾಣ. ಮಗನ ಹವ್ಯಾಸಕ್ಕೆ ನೀರೆರೆಯುತ್ತಿರುವ ಅಮ್ಮ, ಫೋಟೋಗ್ರಫಿ ತರಬೇತಿ ಕೊಡಿಸಿದ್ದಾರೆ.ಮಗನನ್ನು ಬೆಳೆಸಿ ಪ್ರೋತ್ಸಾಹಿಸುತ್ತಿರುವ ರೀತಿಯಲ್ಲೂ ಆಶಾ ಮಾದರಿಯಾಗಿದ್ದಾರೆ. ಪೋಷಕರ ಉದ್ಯಮವನ್ನು ನೋಡಿಕೊಂಡು ಹೋಗಲಿ ಎಂದು ಸಾಮಾನ್ಯ ತಂದೆ ತಾಯಿ ಬಯಸಿದರೆ, ಆಶಾ ಮಗನ ಸ್ವಂತ ಸಾಧನೆಗೆ ಪ್ರೋತ್ಸಾಹಿಸುತ್ತಿದ್ದಾರೆ. `ನಾನು ದುಡಿಯುವಷ್ಟು ದಿನ ದುಡಿಯುತ್ತೇನೆ. ಅಲ್ಲಿಯವರೆಗೆ ಮಗ ಏನನ್ನಾದರೂ ಸಾಧಿಸಲಿ' ಎನ್ನುವಾಗ ಆಶಾ ತಾವು ಅಂಗವಿಕಲೆ ಎಂಬುದನ್ನು ಮರೆಯುತ್ತಾರೆ.ಹೊರೆ ಆಗಬೇಡಿ

ಅಂಗವಿಕಲರಿಗೆ ಆಶಾ ಹೇಳುವ ಕಿವಿಮಾತಿದು:
ಅಂಗವಿಕಲರೆಂದು ಯಾರನ್ನೂ ಅವಲಂಬಿಸಬೇಡಿ. ಎಲ್ಲರಿಗೂ ಅವರದೇ ಆದ ತಾಪತ್ರಯಗಳಿರುತ್ತವೆ. ಸರ್ಕಾರ ಅಂಗವಿಕಲರಿಗಾಗಿಯೇ ಅನೇಕ ಯೋಜನೆ ರೂಪಿಸಿದೆ. ಸ್ವ ಉದ್ಯೋಗಕ್ಕೆ ಸಹಕಾರ ನೀಡುತ್ತಿದೆ. ಅವಕಾಶಗಳನ್ನು ಬಳಸಿಕೊಳ್ಳಿ ಆದಷ್ಟೂ ದುಡಿಯಿರಿ. ಯಾರಿಗೂ ಹೊರೆಯಾಗಬೇಡಿ.ಇಂದಿರಾ ಸ್ಫೂರ್ತಿ

ಆಶಾ ಬದುಕಿಗೆ ಇಂದಿರಾ ಗಾಂಧಿ ಸ್ಫೂರ್ತಿಯಂತೆ. ಬಾಲ್ಯದಿಂದಲೂ ಇಂದಿರಾ ಅವರನ್ನು ತುಂಬಾ ಗೌರವಿಸುತ್ತಿದ್ದ ಆಶಾ, ಇಂದಿರಾ ನಿಧನದ ವಾರ್ತೆ ತಿಳಿಯುತ್ತಿದ್ದಂತೆಯೇ ಕಚೇರಿ ಬಾಗಿಲು ಹಾಕಿ ಮನೆಗೆ ಹೋಗಿ ಅತ್ತಿದ್ದರಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry