ಬತ್ತದ ಚಿನ್ನದ ವ್ಯಾಮೋಹ

7

ಬತ್ತದ ಚಿನ್ನದ ವ್ಯಾಮೋಹ

Published:
Updated:
ಬತ್ತದ ಚಿನ್ನದ ವ್ಯಾಮೋಹ

ಚಿನ್ನದ ವಹಿವಾಟು ಮತ್ತು ಉದ್ದಿಮೆಗೆ ಸಂಬಂಧಿಸಿದ ಲಂಡನ್ ಮೂಲದ ಮಾರುಕಟ್ಟೆ ಅಭಿವೃದ್ಧಿ ಸಂಘಟನೆಯಾಗಿರುವ ವಿಶ್ವ ಚಿನ್ನ ಮಂಡಳಿಯು (World Gold Council-WGC), ಭಾರತದಲ್ಲಿನ ಚಿನ್ನದ ವಹಿವಾಟಿಗೆ ಸಂಬಂಧಿಸಿದಂತೆ ಸಂಶೋಧನಾ ವರದಿಯೊಂದನ್ನು ಬಿಡುಗಡೆ ಮಾಡಿದೆ.ಚಿನ್ನದ ವಹಿವಾಟಿನ ಸಮಗ್ರ ಚಟುವಟಿಕೆಗಳ ಚಿತ್ರಣ ಈ ವರದಿಯಲ್ಲಿ ಇದೆ. ಹಲವಾರು ಆಸಕ್ತಿಕರ ಸಂಗತಿಗಳ ಮೇಲೂ ಈ ವರದಿ ಬೆಳಕು ಚೆಲ್ಲಿದೆ.

ಕಳೆದ ವರ್ಷದ (2010) ನವೆಂಬರ್‌ನಲ್ಲಿ ‘ಚಿನ್ನದ ಹೃದಯ ಭಾರತ: ಪುನರುಜ್ಜೀವನ’ ಹೆಸರಿನ ವರದಿ ಬಿಡುಗಡೆ ಮಾಡಲಾಗಿತ್ತು. ಈಗ ‘ಭಾರತ: ಚಿನ್ನದ ಹೃದಯ’ ಹೆಸರಿನಲ್ಲಿ ಎರಡನೇ ಸಂಶೋಧನಾ ವರದಿ ಪ್ರಕಟಿಸಿದೆ.ದೇಶದ ಅರ್ಥ ವ್ಯವಸ್ಥೆಗೆ ಸಂಬಂಧಿಸಿದ ಚಿಂತಕರ ಚಾವಡಿಯಾಗಿರುವ ‘ಭಾರತದ ಆರ್ಥಿಕತೆಯ ನಿಗಾ ಕೇಂದ್ರ’ (ಸಿಎಂಐಇ) ಸಹಯೋಗದಲ್ಲಿ ಈ ಅಧ್ಯಯನ ನಡೆಸಲಾಗಿದೆ. ಭಾರತದ ಆರ್ಥಿಕ ಬೆಳವಣಿಗೆ ಮತ್ತು  ಭಾರತದಲ್ಲಿನ ಚಿನ್ನದ ಬೇಡಿಕೆ ಮೇಲೆ ಅದರ ಪರಿಣಾಮಗಳ ಕುರಿತ ಸಮಗ್ರ ಅಧ್ಯಯನ ವರದಿ ಇದಾಗಿದೆ.ಆರ್ಥಿಕ ವೃದ್ಧಿ ದರ, ನಗರೀಕರಣ, ಗ್ರಾಮೀಣ ಆರ್ಥಿಕತೆಯಲ್ಲಿನ ಚೇತರಿಕೆ ಮುಂತಾದವು ಭಾರತೀಯರ ‘ಹಳದಿ ಲೋಹ’ದ ಮೋಹವನ್ನು ಇನ್ನಷ್ಟು ಹೆಚ್ಚಿಸಲು ಕಾರಣವಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.ದೇಶದಲ್ಲಿ ಪ್ರತಿ ವರ್ಷ 500 ಟನ್‌ಗಳಷ್ಟು ಹೊಸ ಚಿನ್ನಕ್ಕೆ ಬೇಡಿಕೆ ಬರಲಿದೆ. ಸದ್ಯದ ಬೆಲೆಗಳ ಮಟ್ಟದಲ್ಲಿ ಹೇಳುವುದಾದರೆ ಇದರ ಒಟ್ಟಾರೆ ಮೌಲ್ಯವು ರೂ 1 ಲಕ್ಷ ಕೋಟಿಗಳಷ್ಟು ಆಗಿರಲಿದೆ.2020ರಷ್ಟೊತ್ತಿಗೆ ವಾರ್ಷಿಕ ಬೇಡಿಕೆಯು 1,200 ಟನ್‌ಗಳಿಗೆ ಏರಿಕೆ ಕಾಣಲಿದೆ. ಸದ್ಯದ ಬೆಲೆಗಳ ಮಟ್ಟದಲ್ಲಿ ಇದರ ಒಟ್ಟಾರೆ ಮೌಲ್ಯವು ರೂ 2.5 ಲಕ್ಷ ಕೋಟಿಗಳಷ್ಟು ಆಗಿರಲಿದೆ.ಕಳೆದ 10 ವರ್ಷಗಳಲ್ಲಿ ಚಿನ್ನದ ಬೆಲೆಯು ಶೇ 400ರಷ್ಟು ಏರಿಕೆಯಾಗಿದ್ದರೂ ಭಾರತೀಯರ ಚಿನ್ನದ ಬೇಡಿಕೆಯು ಕಿಂಚಿತ್ತೂ ಕಡಿಮೆಯಾಗಿಲ್ಲ. ಸಂಪತ್ತು ವೃದ್ಧಿಯಾದಂತೆ ಭಾರತೀಯರು ಹೆಚ್ಚೆಚ್ಚು ಚಿನ್ನ ಖರೀದಿಸಲು ಮುಂದಾಗುತ್ತಾರೆ. 2010ರಲ್ಲಿ ಚಿನ್ನಾಭರಣ ಬೇಡಿಕೆಯು ಎರಡು ಪಟ್ಟುಗಳಷ್ಟು (ರೂ 1,342 ಶತಕೋಟಿಗಳಷ್ಟು) ಹೆಚ್ಚಾಗಿದೆ. ಭಾರತದ ಅರ್ಥ ವ್ಯವಸ್ಥೆಯು 2020ರಲ್ಲಿ ಗಮನಾರ್ಹವಾಗಿ ವೃದ್ಧಿ ಕಾಣಲಿದ್ದು, ಭಾರತೀಯರ ಚಿನ್ನ ಖರೀದಿ ಪ್ರವೃತ್ತಿ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ.ನಮ್ಮಲ್ಲಿ ಚಿನ್ನ ಖರೀದಿಯ ಒಟ್ಟಾರೆ ವಹಿವಾಟಿನಲ್ಲಿ ಶೇ 75ರಷ್ಟು ಬೇಡಿಕೆಯು  ಆಭರಣಗಳ ರೂಪದಲ್ಲಿ ಇರುತ್ತದೆ. ಇದರಲ್ಲಿ ಶೇ 50ಕ್ಕಿಂತ ಹೆಚ್ಚಿನ ಪ್ರಮಾಣವು ಹೂಡಿಕೆಗೆ ಸಂಬಂಧಿಸಿದ ತತ್ವಗಳನ್ನು ಆಧರಿಸಿರುತ್ತದೆ ಎಂದೂ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.ಗ್ರಾಮೀಣ ಕೃಷಿ ಪ್ರಧಾನ ಅರ್ಥ ವ್ಯವಸ್ಥೆಯು ಎರಡು ಮೂರಾಂಶಕ್ಕಿಂತ ಹೆಚ್ಚಿನ ಪ್ರಮಾಣದ ಬೇಡಿಕೆಯ ಮೂಲವಾಗಿದೆ. ಗ್ರಾಮೀಣ ಆರ್ಥಿಕತೆಯು ಸದ್ಯಕ್ಕೆ ವಾರ್ಷಿಕ ಶೇ 1ರಷ್ಟು ವೃದ್ಧಿಯಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ಇದು ಶೇ 5ಕ್ಕೆ ಹೆಚ್ಚಲಿದೆ. ಇದರ ಪರಿಣಾಮವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಚಿನ್ನದ ಬೇಡಿಕೆಯು ಇನ್ನಷ್ಟು ಹೆಚ್ಚಲಿದೆ.ದೇಶಿ ಚಿನ್ನದ ಮಾರುಕಟ್ಟೆಯ ಮೂಲಭೂತ ಸಾಮರ್ಥ್ಯದ ಮೇಲೆಯೂ  ವರದಿಯು ಬೆಳಕು ಚೆಲ್ಲಿದೆ. ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಗಮನಾರ್ಹ ಬೆಳವಣಿಗೆ, ನಗರೀಕರಣ, ಮಧ್ಯಮ ವರ್ಗದ ಹೆಚ್ಚಳ ಮತ್ತು ಶೇ 30ರಿಂದ 40ರಷ್ಟಿರುವ ಉಳಿತಾಯ ಪ್ರವೃತ್ತಿಯು ಚಿನ್ನದ ಮಾರುಕಟ್ಟೆ ವಿಸ್ತರಣೆಗೆ ಉತ್ತೇಜನ ನೀಡಲಿವೆ.ದೇಶದಲ್ಲಿ ಕೇರಳ, ಮಹಾರಾಷ್ಟ್ರ, ಗುಜರಾತ್ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಚಿನ್ನದ ಬೇಡಿಕೆ ಗರಿಷ್ಠ ಮಟ್ಟದಲ್ಲಿ ಇದೆ.  ದೇಶದ ಒಟ್ಟು ಚಿನ್ನದ ಬೇಡಿಕೆಯಲ್ಲಿ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದ ಪಾಲು ಶೇ 40ರಷ್ಟಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.ಜಾಗತಿಕ ವಿದ್ಯಮಾನಗಳಿಂದ ಚಿನ್ನದ ಬೆಲೆ ನಾಗಾಲೋಟದಲ್ಲಿ ಓಡುತ್ತಿದ್ದರೂ ಭಾರತೀಯರು ಈ ಚಿನ್ನ ಎನ್ನುವ ‘ಮಾಯಾಜಿಂಕೆ’ಯ ಬೆನ್ನು ಬಿಡುವುದಿಲ್ಲ ಎನ್ನುವ ಕಟು ವಾಸ್ತವ ಈ ವರದಿಯಿಂದ ಇನ್ನೊಮ್ಮೆ ಸಾಬೀತಾಗಿದೆ.*ಒಟ್ಟಾರೆ 18,000 ಟನ್‌ಗಳಿಗೂ ಹೆಚ್ಚಿನ ಪ್ರಮಾಣದ ಚಿನ್ನ ಭಾರತೀಯರ ಬಳಿಯಲ್ಲಿ ಇದೆ.  ವಿಶ್ವದಲ್ಲಿನ ಅತಿದೊಡ್ಡ ಪ್ರಮಾಣದ ಸಂಗ್ರಹ ಇದಾಗಿದೆ.*
2010ರಲ್ಲಿ ಜಾಗತಿಕ ಚಿನ್ನಾಭರಣ ಖರೀದಿ ಮತ್ತು ಹೂಡಿಕೆ ಬೇಡಿಕೆಯಲ್ಲಿ  ಭಾರತದ ಪಾಲು (963 ಟನ್) ಶೇ 32ರಷ್ಟು ಇದೆ.* ದೇಶದಲ್ಲಿ ಬಳಕೆಯಾಗುವ ಮತ್ತು  ಖರೀದಿಯಾಗುವ ಒಟ್ಟು ಚಿನ್ನದಲ್ಲಿ ಶೇ 90ರಷ್ಟು ಆಮದು ಮಾಡಿಕೊಳ್ಳಲಾಗುತ್ತಿದೆ.*ಭಾರತದಲ್ಲಿನ ಒಟ್ಟಾರೆ ಚಿನ್ನದ ಬೇಡಿಕೆಯಲ್ಲಿ ಆಭರಣಗಳ ಪಾಲು ಶೇ 75ರಷ್ಟಿದೆ.*2020-21ನೇ ಹಣಕಾಸು ವರ್ಷದಲ್ಲಿ ವಾರ್ಷಿಕ ಚಿನ್ನದ ಬೇಡಿಕೆ ಪ್ರಮಾಣವು 1,200 ಟನ್‌ಗಳಿಗೆ ಏರಿಕೆಯಾಗಲಿದೆ.* 2010ರಿಂದ 15ರವರೆಗೆ ದೇಶದ ಆರ್ಥಿಕ ವೃದ್ಧಿ ದರ ಶೇ 10ರಷ್ಟು ಇರಲಿದೆ ಎಂದು ದೇಶದ ಅರ್ಥ ವ್ಯವಸ್ಥೆಯ ಚಿಂತಕರ ಚಾವಡಿಯಾಗಿರುವ ಭಾರತದ ಆರ್ಥಿಕತೆಯ ನಿಗಾ ಕೇಂದ್ರ (ಸಿಎಂಐಇ) ಅಂದಾಜಿಸಿದೆ.* ದೇಶದ ಬಹುತೇಕ ಜನಸಂಖ್ಯೆ (ಶೇ 70ರಷ್ಟು) ಹಳ್ಳಿಗಳಲ್ಲಿ ನೆಲೆಸಿದೆ. ದೇಶದ ಚಿನ್ನದ ಬೇಡಿಕೆಯಲ್ಲಿ ಎರಡು ಮೂರಾಂಶಕ್ಕಿಂತ ಹೆಚ್ಚಿನ ಬೇಡಿಕೆ ಗ್ರಾಮೀಣ ಪ್ರದೇಶದಿಂದಲೇ ಬರಲಿದೆ.* ಈ ಗ್ರಾಮೀಣ ಪ್ರದೇಶವು ಭವಿಷ್ಯದಲ್ಲಿ ಶೇ 5ರಷ್ಟು ವೃದ್ಧಿಯಾಗಲಿದ್ದು, ಚಿನ್ನದ ಬೇಡಿಕೆ ಇನ್ನಷ್ಟು ಹೆಚ್ಚಲು ಕಾರಣವಾಗಲಿದೆ.* ಮದುವೆಗಳಲ್ಲಿ ಚಿನ್ನ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ವಾರ್ಷಿಕ ಚಿನ್ನದ ಬೇಡಿಕೆಯಲ್ಲಿ ಮದುವೆ ಸಮಾರಂಭಕ್ಕೆ ಸಂಬಂಧಿಸಿದ ಬೇಡಿಕೆ ಶೇ 50ರಷ್ಟಿದೆ.*
ದೇಶಿ ಜನಸಂಖ್ಯೆಯಲ್ಲಿ 25 ವರ್ಷಕ್ಕಿಂತ ಕಡಿಮೆ ವಯೋಮಾನದವರ ಪ್ರಮಾಣ ಶೇ 50ರಷ್ಟು ಇರುವುದರಿಂದ ಮುಂದಿನ ದಶಕದಲ್ಲಿ ಸುಮಾರು 15 ಕೋಟಿಗಳಷ್ಟು ಮದುವೆಗಳು ನಡೆಯುವ ಅಂದಾಜಿದೆ. ಈ ಕಾರಣಕ್ಕೆ ಮದುವೆ ಸಂಬಂಧಿತ ಖರೀದಿಯು ವರ್ಷಕ್ಕೆ 500 ಟನ್‌ಗಳಷ್ಟು ಬೇಡಿಕೆ ಕುದುರಿಸುವ ನಿರೀಕ್ಷೆ ಇದೆ.* ಜನರ ಬಳಿಯಲ್ಲಿ ಇರುವ 500 ಟನ್‌ಗಳಷ್ಟು ಚಿನ್ನವು ಒಂದು ಕುಟುಂಬದಿಂದ ಇನ್ನೊಂದು ಕುಟುಂಬಕ್ಕೆ ಕಾಣಿಕೆ ರೂಪದಲ್ಲಿ ವರ್ಗಾವಣೆ ಆಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry