ಬತ್ತದ ಬೆಳೆ; ಹಣದ ಹೊಳೆ

7

ಬತ್ತದ ಬೆಳೆ; ಹಣದ ಹೊಳೆ

Published:
Updated:
ಬತ್ತದ ಬೆಳೆ; ಹಣದ ಹೊಳೆ

ಅಮೃತ ಭೂಮಿ

ಕೃಷ್ಣಾ ಅಚ್ಚುಕಟ್ಟು ಪ್ರದೇಶವೆಂದರೆ ಅತಿಯಾದ ರಾಸಾಯನಿಕ ಬಳಕೆ ಮಾಡಿ ಬತ್ತ ಬೆಳೆಯುವ ಪ್ರದೇಶ ಎಂಬ ಕುಖ್ಯಾತಿ ಈಗಲೂ ಇದೆ.  ರಾಸಾಯನಿಕಗಳ ಜೊತೆಗೆ ಅತಿಯಾದ ಪ್ರಮಾಣದಲ್ಲಿ ನೀರು ಬಳಕೆ ಮಾಡಲಾಗುತ್ತಿದೆ. ಇದರಿಂದ ಭೂಮಿಯು ತನ್ನ ಸತ್ವ ಕಳೆದುಕೊಂಡು ಸವಳು ಹಿಡಿಯುವಂತಾಗಿದೆ ಎಂಬ ಮಾತುಗಳೂ ಕೇಳಿ ಬರುತ್ತಿದೆ.ಆದರೆ, ಬಯಲು ಸೀಮೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಕಾರ್ಯಗತಗೊಂಡ ನಂತರ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಯಾದಗಿರಿ ಜಿಲ್ಲೆಯ ಬಹುತೇಕ ಪ್ರದೇಶಗಳಿಗೆ ನಾರಾಯಣಪುರ ಜಲಾಶಯದ ಎಡದಂಡೆ ಕಾಲುವೆಯಿಂದ ನೀರಾವರಿ ಸೌಲಭ್ಯ ದೊರೆಯಿತು. ಇದಾದ ಕೆಲ ವರ್ಷಗಳಲ್ಲಿಯೇ ಕೃಷ್ಣಾ ಅಚ್ಚುಕಟ್ಟು ಪ್ರದೇಶವು ಬತ್ತ ಬೆಳೆಯುವ ನಾಡಾಗಿ ಪರಿವರ್ತನೆ ಆಯಿತು.

ಆದರೆ ಇದೆಲ್ಲದಕ್ಕೂ ಅಪವಾದ ಎನ್ನುವಂತೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕಕ್ಕೇರಿ ಗ್ರಾಮದ ಕೆಲ ರೈತರು ಅಪ್ಪಟ ನೈಸರ್ಗಿಕ ಕೃಷಿ ಮಾಡುವುದರೊಂದಿಗೆ ಸುಮಾರು ಮೂರು ವರ್ಷಗಳಿಂದ ದೇಶಿ ತಳಿಯ ಬತ್ತದ ಸಂರಕ್ಷಣೆಯಲ್ಲಿ ತೊಡಗಿದ್ದಾರೆ. ರಾಜ್ಯದ ಎರಡನೇ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕಕ್ಕೇರಿ ಗ್ರಾಮದ ರೈತರಾದ ದೇವಿಂದ್ರಪ್ಪ ಮತ್ತು ರಾಮಮೂರ್ತಿ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಕಡಿಮೆ ನೀರು ಬಳಕೆ ಮಾಡಿ ಸುಮಾರು 15ಕ್ಕೂ ಹೆಚ್ಚು ದೇಶಿ ತಳಿ ಬತ್ತವನ್ನು ಬೆಳೆಯುತ್ತಿದ್ದಾರೆ.ಗ್ರಾಮದ ದೇವಿಂದ್ರಪ್ಪ ಎಂಎ ಸ್ನಾತಕೋತ್ತರ ಪದವೀಧರ. ನೌಕರಿ ಹುಚ್ಚು ಬಿಟ್ಟು ಹೊಲದಲ್ಲಿಯೇ ಸಾಧನೆ ಮಾಡುವ ಹಂಬಲದೊಂದಿಗೆ ಕೃಷಿಯತ್ತ ಗಮನ ನೀಡಿದರು. ತಮ್ಮ ಸುಮಾರು 13 ಎಕರೆ ಜಮೀನಿನಲ್ಲಿ ದೇಶಿ ತಳಿಯ `ಅಂಬೇಮೊರ್' ಎನ್ನುವ ಬತ್ತ ಹಾಕಿದ್ದು, ಸದ್ಯ ಈ ಬತ್ತ ತೆನೆ ಬಿಟ್ಟಿದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಈ ಬತ್ತ ಬೆಳೆಯಲಾಗುತ್ತಿದ್ದು, ಬೆಳೆಗೆ ಅಗತ್ಯವಿದ್ದಾಗ ಸುಮಾರು ಎರಡರಿಂದ ಮೂರು ಬಾರಿ ಜೀವಾಮೃತ ಹಾಕುವುದು ಮತ್ತು ಎರಡರಿಂದ ಮೂರು ಬಾರಿ ಮನೆಯಲ್ಲಿಯೇ ತಯಾರಿಸಿದ ಬ್ರಹ್ಮಾಸ್ತ್ರವನ್ನು ಔಷಧಿ ರೂಪದಲ್ಲಿ ಸಿಂಪರಣೆ ಮಾಡುತ್ತಾರೆ. ಇಷ್ಟಾದರೆ ಸಾಕು, ಬತ್ತದ ರಾಶಿ ಮಾಡಬಹುದು ಎನ್ನುತ್ತಾರೆ ದೇವಿಂದ್ರಪ್ಪ.ಅಧಿಕ ಲಾಭ

ಅತಿಯಾದ ರಾಸಾಯನಿಕ ಬಳಕೆಮಾಡಿ ಸುಮಾರು ಎಕರೆಗೆ 40 ಚೀಲ ಬತ್ತ ಬೆಳೆದರೂ ಕೇವಲ 2-3 ಸಾವಿರ ರೂಪಾಯಿಗಳು ಮಾತ್ರ ಲಾಭ ಗಳಿಸಬಹುದು. ಆದರೆ ಯಾವುದೇ ಖರ್ಚಿಲ್ಲದೇ ದೇಶಿ ತಳಿಯ ಬತ್ತವನ್ನು ನೈಸರ್ಗಿಕ ಕೃಷಿಯಲ್ಲಿ ಬೆಳೆದರೆ ಒಂದು ಎಕರೆಗೆ ಸುಮಾರು 12 ರಿಂದ 15 ಚೀಲ ಬತ್ತ ಬೆಳೆಯಲಾಗುತ್ತದೆ. ಇದರಿಂದ ಸುಮಾರು  45 ಸಾವಿರ ರೂಪಾಯಿಗೂ ಅಧಿಕ ಲಾಭಗಳಿಸಬಹುದು. ಆದ್ದರಿಂದ ಈ ನೈಸರ್ಗಿಕ ಕೃಷಿಯಲ್ಲಿ ತೊಡಗಿರುವುದಾಗಿ ದೇವೀಂದ್ರಪ್ಪ ಹೇಳುತ್ತಾರೆ.ಮೂರು ವರ್ಷಗಳ ಹಿಂದೆ ಪ್ರಾಯೋಗಿಕವಾಗಿ ದೇಶಿ ತಳಿಯ ಸುಮಾರು 40 ವಿವಿಧ ಬತ್ತವನ್ನು ಬೆಳೆಯಲಾಗಿತ್ತು. ಆದರೆ ಇಲ್ಲಿನ ಭೂಮಿ ಮತ್ತು ಬೆಳಕಿಗೆ ಹೊಂದಿಕೊಳ್ಳುವ ಸುಮಾರು 15 ತಳಿಗಳ ಬತ್ತವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರಿಂದ ಭೂಮಿಯ ಫಲವತ್ತತೆ ಕೂಡಾ ಹೆಚ್ಚಾಗಿದೆ ಎಂದು ಹೇಳುತ್ತಾರೆ.

ಸಾಧನೆಯ  ಹಾದಿಯಲ್ಲಿ ಮತ್ತೊಬ್ಬ ರೈತ ದೇವಿಂದ್ರಪ್ಪ ಅವರಂತೆಯೇ ಇದೇ ಗ್ರಾಮದವರಾದ ಇನ್ನೊಬ್ಬ ರೈತ ರಾಮಮೂರ್ತಿ ಸಹ ನೈಸರ್ಗಿಕ ಕೃಷಿಯ ಮೂಲಕ ಜಮೀನಿನಲ್ಲಿ ಅತ್ಯದ್ಭುತ ಸಾಧನೆ ಮಾಡಿದ್ದಾರೆ. ಹಲವಾರು ದೇಶಿ ತಳಿಯ ಬತ್ತ ಬೆಳೆಯುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.ಸದ್ಯ ರಾಮಮೂರ್ತಿ ಮತ್ತು ದೇವಿಂದ್ರಪ್ಪ ಅವರಲ್ಲಿ ಸಾಮಾನ್ಯ ತಳಿಗಳಾದ  ಗೌರಿ ಸಣ್ಣ, ಸೇಲಂ ಸಣ್ಣ, ಚಿನ್ನಪ್ನನಿ, ಕಾವೇರಿ ಸೋನಾ, ಔಷಧಿಯ ತಳಿಗಳಾದ ನವರ, ಕಯಿಮಿ, ಕರಿಬತ್ತ, ಕಸವಿ, ಅತಿಕರಿಯ, ಸುಗಂಧಿತ ತಳಿಗಳಾದ ಗಂಧಸಾಲಾ, ಅಂಬೇಮೊರ್ ಸೇರಿದಂತೆ ಸುಮಾರು 40 ದೇಶಿ ತಳಿಯ ಬತ್ತದ ಬೀಜಗಳು ಲಭ್ಯವಿದ್ದು, ಈ ತಳಿಯನ್ನು ಬೆಳೆಯಲು ಮುಂದೆ ಬರುವ ರೈತರಿಗೆ ಉಚಿತವಾಗಿ ಬೀಜ ವಿತರಿಸುವುದಾಗಿ ಇಬ್ಬರೂ ರೈತರು ಹೇಳುತ್ತಾರೆ.ಕೀಟನಾಶಕ ತಯಾರಿಕೆ ವಿಧಾನ

ರಾಸಾಯನಿಕ ಉಳ್ಳ ಕೀಟನಾಶಕಗಳಿಗೆ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ, ಜೊತೆಗೆ ತಿನ್ನುವ ಆಹಾರಕ್ಕೆ ವಿಷವನ್ನು ಬೆರೆಸುತ್ತಿರುವ ಇಂದಿನ ದಿನಗಳಲ್ಲಿ, ದೇವಿಂದ್ರಪ್ಪ ಹಾಗೂ ರಾಮಮೂರ್ತಿ ತಮ್ಮದೇ ಆದ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ, ಕೀಟನಾಶಕ ತಯಾರಿಸುತ್ತಾರೆ. ಅದಕ್ಕೆ ಬ್ರಹ್ಮಾಸ್ತ್ರ ಎಂಬ ಹೆಸರನ್ನು ಇಟ್ಟಿದ್ದಾರೆ.ಬೇವು, ಹೊಂಗೆ, ಲಕ್ಕಿ, ಎಕ್ಕ, ಮದುಗಣಿಕೆ, ಕಹಿ ಗಸ, ಕಹಿ ತುಳಸಿ, ಸೀತಾಫಲದ ಎಲೆಗಳನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ, ಅದನ್ನು ಚೆನ್ನಾಗಿ ರುಬ್ಬಿ, ಗೋಮೂತ್ರದಲ್ಲಿ ಮಿಶ್ರಣ ಮಾಡಲಾಗುತ್ತದೆ. ಮೂರು ಉಕ್ಕು ಬರುವಂತೆ ಕುದಿಸಿದ ನಂತರ ಆರಿಸಿ ಸೋಸಿ ಎಕರೆಗೆ ಮೂರು ಲೀಟರ್‌ನಂತೆ ಸಿಂಪರಣೆ ಮಾಡಲಾಗುತ್ತದೆ. ಇದರಿಂದ ಕೀಟ ಬಾಧೆ ಸಂಪೂರ್ಣ ನಿವಾರಣೆಯಾಗುತ್ತದೆ. ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ವಿವರಿಸುತ್ತಾರೆ.  ಹೆಚ್ಚಿನ ಮಾಹಿತಿಗೆ ದೇವಿಂದ್ರಪ್ಪ (99008 33350), ಹಾಗೂ ರಾಮಮೂರ್ತಿ (95358 05067) ಅವರನ್ನು ಸಂಪರ್ಕಿಸಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry