ಸೋಮವಾರ, ಮೇ 23, 2022
20 °C

ಬತ್ತಿದ ಕೆರೆಗಳು, ಕುಸಿಯುತ್ತಿರುವ ಅಂತರ್ಜಲ

ಪ್ರಜಾವಾಣಿ ವಾರ್ತೆ / ಕೊಂಡ್ಲಹಳ್ಳಿ ಜಯಪ್ರಕಾಶ Updated:

ಅಕ್ಷರ ಗಾತ್ರ : | |

ಮೊಳಕಾಲ್ಮುರು: ಮಳೆಯಿಂದಾಗಿ ಕಳೆದ ವರ್ಷದ ಆರಂಭದಲ್ಲಿಯೇ ಭಾರೀ ಕೋಡಿ ಬಿದ್ದಿದ್ದ ತಾಲ್ಲೂಕಿನ ಕೆರೆಗಳು ಈ ವರ್ಷ ಸ್ವಲ್ಪವೂ ನೀರಿಲ್ಲದೇ ಬತ್ತಿರುವ ಮೂಲಕ ಬರಗಾಲದ ಸೂಚನೆಯನ್ನು ತಮ್ಮದೇ ಆದ ದಾಟಿಯಲ್ಲಿ ಹೇಳ ಹೊರಟಿವೆ.ತಾಲ್ಲೂಕು ಆಂಧ್ರದ ಗಡಿಭಾಗದಲ್ಲಿದ್ದು ಯಾವುದೇ ಶಾಶ್ವತ ನೀರಾವರಿ ಸೌಕರ್ಯ ಹೊಂದಿಲ್ಲ. ಮಳೆ ನಂಬಿ ಕೃಷಿ ಮಾಡಲಾಗುತ್ತಿದೆ. ಕೆರೆಗಳು ತುಂಬುವುದು ಅಪರೂಪ ಎಂಬ ಸ್ಥಿತಿಯಲ್ಲಿಯೇ ಕಳೆದ ಎರಡು ವರ್ಷ ಅಚ್ಚರಿ ರೀತಿಯಲ್ಲಿ ಕೆರೆಗಳು ತುಂಬಿ ಅಂತರ್ಜಲ ಹೆಚ್ಚಳವಾಗಿತ್ತು.ಆದರೆ, ಈ ವರ್ಷ ಒಂದು ಬಾರಿಯೂ ಉತ್ತಮ ಮಳೆ ಬಾರದ ಪರಿಣಾಮ ಕೆರೆಗಳು ಖಾಲಿಯಾಗಿವೆ. ರಂಗಯ್ಯನದುರ್ಗ ಜಲಾಶಯದಲ್ಲಿ ಇರುವ ನೀರು ಕುಡಿಯುವ ನೀರಿಗೆ ಆದರೆ ಸಾಕಪ್ಪಾ ಎಂಬ ಸ್ಥಿತಿಯಲ್ಲಿರುವ ಮೂಲಕ ಜಲಮಟ್ಟ ಕುಸಿಯುವ ಸ್ಪಷ್ಟ ರೂಪ ನೀಡಿವೆ ಎಂದು ವರದಿಯಾಗಿದೆ.ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಪ್ರಕಾರ ರಂಗಯ್ಯನದುರ್ಗ ಜಲಾಶಯದಲ್ಲಿ 33 ಅಡಿ ಗರಿಷ್ಠ ಮಟ್ಟಕ್ಕೆ ಕೇವಲ 10 ಅಡಿ, ಪಕುರ್ತಿ ಕೆರೆಯಲ್ಲಿ 25 ಗರಿಷ್ಠ ಮಿತಿಗೆ 14 ಅಡಿ ನೀರಿದೆ. ಉಳಿದಂತೆ ನಾಗಸಮುದ್ರ ಕೆರೆಯಲ್ಲಿ 3 ಅಡಿ, ಅಶೋಕ ಸಿದ್ದಾಪುರ ಕೆರೆಯಲ್ಲಿ 4 ಅಡಿ, ಭಟ್ರಹಳ್ಳಿ, ಅಮಕುಂದಿ, ಮುತ್ತಿಗಾರಹಳ್ಳಿ ಕೆರೆ, ದುಪ್ಪಿಕೆರೆ, ಕೋನಸಾಗರ ಕೆರೆ, ಗೌರಸಮುದ್ರ ಕೆರೆಗಳು ಪೂರ್ಣವಾಗಿ ಬತ್ತಿ ಹೋಗಿದೆ. ರಂಗಯ್ಯನದುರ್ಗ ಜಲಾಶಯದಿಂದ ಪಟ್ಟಣ ಸೇರಿದಂತೆ ಹಲವು ಗ್ರಾಮಗಳಿಗೆ ಕುಡಿಯುವ ನೀರು ನೀಡುತ್ತಿರುವ ಕಾರಣ ಇರುವ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಮೀಸಲಿಡಬೇಕು ಎಂಬ ಮಾತುಗಳು ಕೇಳಿಬರುತ್ತಿದೆ.ತಾಲ್ಲೂಕಿನಲ್ಲಿ ಜಿಲ್ಲಾಪಂಚಾಯ್ತಿಗೆ ಸೇರಿದ ಹುಚ್ಚಂಗಿದುರ್ಗ, ಚಿಕ್ಕೋಬನಹಳ್ಳಿ, ಗುಂಡ್ಲುರು, ಮೊಳಕಾಲ್ಮುರು ಕೆರೆ ಸೇರಿದಂತೆ ಒಟ್ಟು ಆರು ಕೆರೆಗಳು ಇದ್ದು, ಎಲ್ಲವೂ ಪೂರ್ಣ ಬತ್ತಿ ನೀರಿಗಾಗಿ ಎದುರು ನೋಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಅಧಿಕಾರಿಗಳ ಪ್ರಕಾರ ತಾಲ್ಲೂಕಿನಲ್ಲಿ ಎಲ್ಲಿಯೂ ಈವರೆಗೆ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿಲ್ಲ ಆದರೆ ಅಲ್ಲಲ್ಲಿ ಕೊಳವೆಬಾವಿಗಳು ಬತ್ತುತ್ತಿರುವ ಹಾಗೂ ವಿತರಣೆ ಸಮಸ್ಯೆ ಕಂಡುಬಂದಿದೆ ಎಂದು ಹೇಳುತ್ತಾರೆ.ವ್ಯರ್ಥವಾಗುತ್ತಿರುವ ನೀರು; ರಂಗಯ್ಯನದುರ್ಗ ಜಲಾಶಯದಿಂದ ನೀರು ಮಳೆಗಾಲದಲ್ಲಿ ಅಪಾರ ಪ್ರಮಾಣದಲ್ಲಿ ವ್ಯರ್ಥವಾಗಿ ಹರಿದು ಆಂಧ್ರ ಸೇರುತ್ತಿದೆ. ಇದನ್ನು ಕೆರೆಗಳಿಗೆ ಹರಿಸುವ ಯೋಜನೆ ಜಾರಿ ಮಾಡಲಾಗುವುದು ಎಂಬ ಜನಪ್ರತಿನಿಧಿಗಳ ಮಾತು ಕಾರ್ಯ ರೂಪಕ್ಕೆ ಇಳಿದಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ತಾಲ್ಲೂಕನ್ನು ಕೈಬಿಟ್ಟಿದ್ದು, ಅನ್ಯಮೂಲದಿಂದ ನೀರು ಹರಿಸುವ ಅಗತ್ಯವಿದೆ.

 

ಆದರೆ, ಯಾರೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಬರಗಾಲದ ಅರ್ಧವರ್ಷ ಕಳೆಯಲು ಅಸಾಧ್ಯ ಎಂಬ ಸ್ಥಿತಿಯಲ್ಲಿ ಕೆರೆಗಳಿಗೆ ನೀರುಣಿಸುವ ಕಾರ್ಯಕ್ಕೆ ಹೆಚ್ಚು ಮಹತ್ವ ಬಂದಿದ್ದು, ಕ್ರಮ ಕೈಗೊಳ್ಳುವ ಮೂಲಕ ರೈತರ ನೆರವಿಗೆ ಬರಬೇಕು ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಬೆಳಗಲ್ ಈಶ್ವರಯ್ಯಸ್ವಾಮಿ ಇತರರು ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.