ಬತ್ತಿದ ಕೆರೆಗಳು ಮರಳು ಮಾಫಿಯಾಕ್ಕೆ ಬಲಿ

7

ಬತ್ತಿದ ಕೆರೆಗಳು ಮರಳು ಮಾಫಿಯಾಕ್ಕೆ ಬಲಿ

Published:
Updated:
ಬತ್ತಿದ ಕೆರೆಗಳು ಮರಳು ಮಾಫಿಯಾಕ್ಕೆ ಬಲಿ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಮರಳು ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರವು ತಿಳಿಸಿತ್ತು. ಅದರಂತೆಯೇ ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿತ್ತು. ಆದರೆ ಜಿಲ್ಲೆಯಲ್ಲಿ ಬತ್ತಿದ ಕೆರೆ ಪ್ರದೇಶಗಳಲ್ಲಿ ಮತ್ತು ಗುಡ್ಡಗಾಡುಗಳಲ್ಲಿ  ಅಕ್ರಮವಾಗಿ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಅವ್ಯಾಹತವಾಗಿ ನಡೆದಿದೆ.ಜಿಲ್ಲಾಡಳಿತದ ಕ್ರಮಕ್ಕೆ ಬೆಲೆ ಕೊಡದ ಕೆಲವರು ಚಿಕ್ಕಬಳ್ಳಾಪುರ ಮತ್ತು ಬಾಗೇಪಲ್ಲಿ ತಾಲ್ಲೂಕುಗಳ ಬತ್ತಿದ ಕೆರೆ ಪ್ರದೇಶದಲ್ಲಿ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಮುಂದುವರಿಸಿದ್ದಾರೆ. ಟ್ರಾಕ್ಟರ್ ಮತ್ತು ಲಾರಿಗಳಲ್ಲಿ ಲೋಡುಗಟ್ಟಲೆ ಮರಳನ್ನು ಹೇರಿಕೊಂಡು ಮಾರಾಟ ಮಾಡಿ ಭಾರಿ ಹಣ ಸಂಪಾದಿಸುತ್ತಿದ್ದಾರೆ.

  ಚಿಕ್ಕಬಳ್ಳಾಪುರದ ಐತಿಹಾಸಿಕ ರಂಗಸ್ಥಳ ಗ್ರಾಮದ ಕೆರೆ ಪ್ರದೇಶ ಮತ್ತು ಬಾಗೇಪಲ್ಲಿಯ ದೇವರೆಡ್ಡಿಪಲ್ಲಿ ಗ್ರಾಮದ ಕೆರೆ ಪ್ರದೇಶದಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಹೀಗಾಗಿ ಇಡೀ ಪ್ರದೇಶದ ಸ್ವರೂಪವೇ ಬದಲಾಗಿದೆ. ಕೆರೆಗಳು ಬತ್ತಿರುವುದರಿಂದ ಹೇರಳವಾಗಿ ಮರಳು ದೊರೆಯುತ್ತಿದೆ.ಸಾಧ್ಯವಾದಷ್ಟು ಟ್ರಾಕ್ಟರ್ ಮತ್ತು ಲಾರಿಗಳಲ್ಲಿ ಹೇರಿಕೊಂಡು ಬೇರೆಯವರಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ. `ಕಣ್ಣೆದುರೇ ಗಣಿಗಾರಿಕೆ ಮತ್ತು ಸಾಗಾಣಿಕೆ ನಡೆದಿದ್ದರೂ ನಾವು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೇವೆ. ಜಲ ಮೂಲ ಬರಿದಾಗುತ್ತಿದೆ. ಕಣ್ಣೆದುರೇ ಗಂಗಾ ಮಾತೆ ಕಳೆದು ಹೋಗುತ್ತಿದ್ದಾಳೆ' ಎಂದು ಸೋಸೆಪಾಳ್ಯದ ಗ್ರಾಮಸ್ಥರು ನೊಂದು ನುಡಿಯುತ್ತಾರೆ.`ಪೊಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳ ಕಣ್ತಪ್ಪಿಸಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಮಾಡುವ ಕಿಡಿಗೇಡಿಗಳು ನಸುಕಿನ 4 ಗಂಟೆಯಿಂದಲೇ ಈ ಕಾರ್ಯದಲ್ಲಿ ತೊಡಗುತ್ತಾರೆ.ಮನಬಂದಂತೆ ಕೆರೆಭಾಗವನ್ನು ಬಗೆದು, ಹಾಳು ಮಾಡಿ ಮತ್ತು ಅದರ ಸ್ವರೂಪವನ್ನೇ ಬದಲಿಸಿಬಿಡುತ್ತಾರೆ.

ಟ್ರಾಕ್ಟರ್, ಲಾರಿಗಳಲ್ಲಿ ಮರಳನ್ನು ಹೇರಿಕೊಳ್ಳುವ ಅವರು ನೀಲಗಿರಿ ಮರಗಳ ತೋಪಿನಲ್ಲಿ ಸುರಿಯುತ್ತಾರೆ. ಮರಳು ಖರೀದಿದಾರರು ಅದನ್ನು ಮತ್ತೊಂದು ಲಾರಿ, ಟ್ರಾಕ್ಟರ್‌ನಲ್ಲಿ ತುಂಬಿಕೊಂಡು ಮನ ಬಂದ ಕಡೆ ಸಾಗಿಸುತ್ತಾರೆ' ಎಂದು ಗ್ರಾಮದ ನರಸಿಂಹಮೂರ್ತಿ ತಿಳಿಸಿದರು.`ಗಣಿಗಾರಿಕೆ ನಿಷೇಧಿಸುವ ಮುನ್ನ ಮರಳಿನ ದರ ಕಡಿಮೆಯಿತ್ತು. ಈಗ ಅದು ದುಪ್ಪಟ್ಟಾಗಿದೆ. ಒಂದು ಟ್ರಾಕ್ಟರ್ ಲೋಡು ಮರಳಿನ ದರ 2,500 ರಿಂದ 2,800 ರೂಪಾಯಿ. ಒಂದು ಲಾರಿ ಲೋಡು ಮರಳಿನ ದರ 8 ರಿಂದ 10 ಸಾವಿರ ರೂಪಾಯಿ. ವಾಹನಗಳಲ್ಲಿ ಮಾತ್ರವಲ್ಲ, ಎತ್ತಿನಬಂಡಿಗಳಲ್ಲಿಯೂ ಮರಳನ್ನು ಸಾಗಿಸಲಾಗುತ್ತದೆ. ಅಂತಹ ಸಾಗಣೆಗಳಿಗೆ ಲೆಕ್ಕವೇ ಇಲ್ಲ. ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಗಳಲ್ಲಿ, ಜಿಲ್ಲಾಡಳಿತದ ಅಧಿಕಾರಿಗಳು ಕ್ರಮ ಕೈಗೊಂಡಿರುವುದಾಗಿ ಹೇಳುತ್ತಾರೆ. ಆದರೆ ವಾಸ್ತವವಾಗಿ ಗಣಿಗಾರಿಕೆ ಮೇಲೆ ನಿಯಂತ್ರಣವೇ ಇಲ್ಲ' ಎಂದು ಅವರು ಹೇಳಿದರು.`ಕೆಲ ತಿಂಗಳ ಹಿಂದೆ ಬಾಗೇಪಲ್ಲಿ ಹೊರವಲಯದಲ್ಲಿ ಮರಳು ಅಗೆಯುತ್ತಿದ್ದ ವೇಳೆ ಪತಿ ಮತ್ತು ಪತ್ನಿಯ ಮೇಲೆ ಮರಳಿನ ಗುಡ್ಡೆ ಕುಸಿದು ಇಬ್ಬರೂ ಮೃತಪಟ್ಟಿದ್ದರು. ಅವರಿಗೆ ಪರಿಹಾರ ದೊರೆಯಿತೋ ಇಲ್ಲವೋ ಗೊತ್ತಾಗಲಿಲ್ಲ. ಆದರೆ ಮರಳು ಗಣಿಗಾರಿಕೆಗೆ ಮಾತ್ರ ಕಡಿವಾಣ ಬೀಳಲಿಲ್ಲ. ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಜಿಲ್ಲೆಯಾದ್ಯಂತ ಇತ್ತೀಚೆಗೆ ಹೋರಾಟ ನಡೆಯಿತು.ಕೆರೆಗಳಲ್ಲಿ ನೀರು ತುಂಬಿಸಬೇಕು ಎಂದು ಒತ್ತಾಯಿಸಲಾಯಿತು. ಆದರೆ ಕೆರೆಗಳ ಸಂರಕ್ಷಣೆಗೆ ಮಾತ್ರ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ' ಎಂದು ಬಾಗೇಪಲ್ಲಿಯ ಲಕ್ಷ್ಮಿನಾರಾಯಣ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry