ಬತ್ತಿದ ಕೆರೆ: ರೈತರಲ್ಲಿ ಮೂಡಿದ ನಿರಾಸೆ

7

ಬತ್ತಿದ ಕೆರೆ: ರೈತರಲ್ಲಿ ಮೂಡಿದ ನಿರಾಸೆ

Published:
Updated:

ಆಲಮಟ್ಟಿ: ಕೆಲವೇ ವರ್ಷಗಳ ಹಿಂದೆ ನೀರು ತುಂಬಿ ಸುತ್ತಮುತ್ತಲಿನ ಗ್ರಾಮಗಳ ಕೃಷಿಕರ ಜಮೀನುಗಳಿಗೆ ಮತ್ತು ಜನ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುತ್ತಿದ್ದ ಕೆರೆಗಳು ಈಗ ಬರೀ ಹೂಳು ತುಂಬಿ ನೀರಿಲ್ಲದೇ ಬತ್ತಿಹೋಗಿವೆ. ಕಾಲುವೆಗಳ ಮುಖಾಂತರ ನೀರು ಹರಿಸಿ ಕೆರೆ ತುಂಬುತ್ತಾರೆ ಎಂದು ನಂಬಿದ ಜನತೆಗೆ ಇಂದಿಗೂ ನಿರಾಶೆಯಾಗಿದೆ.ಈ ಭಾಗದಲ್ಲಿರುವ ಆರೇಶಂಕರ, ಕಿರಿಶ್ಯಾಳ, ಬಸರಕೋಡ ಹೀಗೆ ನಾನಾ ಸಣ್ಣ ನೀರಾವರಿ ವ್ಯಾಪ್ತಿಯ ಕೆರೆಗಳನ್ನು ನಂಬಿದ ಜನರಿಗೆ ಈಗ ಕುಡಿಯುವ ನೀರಿಲ್ಲದೆ ನೀರು ಕಂಡಲ್ಲಿ ಎಡತಾಕುವಂತಾಗಿದೆ. ಕೃಷಿ ಕಾರ್ಯಗಳಿಗಾಗಿ ಆಕಾಶ ನೋಡುವಂತಾಗಿದೆ.ಮಳೆಯ ಸುಳಿವು ಕಾಣದೇ ಕೆರೆಗಳು ಬತ್ತಿ ಬರಿದಾಗಿವೆ. ಕುಡಿಯುವ ನೀರಿಗಾಗಿ ಹಾಹಾಕಾರ, ಕೃಷಿ ಕೆಲಸಗಳಿಲ್ಲದೇ ದುಡಿವ ಗ್ರಾಮೀಣ ಮಂದಿ ನಗರಗಳತ್ತ ಮುಖ ಮಾಡಿದ್ದಾರೆ ಆದರೆ ಈ ಭಾಗದಲ್ಲಿ ಬರಗಾಲ ಹೊಸತೇನು ಅಲ್ಲ, ಬದಲಾಗಿರೋದು ಬರಗಾಲದ ಚಿತ್ರಣಗಳಷ್ಟೆ.1975ರಲ್ಲಿ ನಿರ್ಮಿಸಿರುವ ಆರೇಶಂಕರ ಕೆರೆಯು ಪ್ರತಿವರ್ಷ ಬರಗಾಲಕ್ಕೆ ತುತ್ತಾಗುತ್ತಿರುವುದರಿಂದ ಸುಮಾರು ಹದಿನೈದು ಕಿ.ಮೀ. ಇರುವ ಕಾಲುವೆಯಿಂದ ನೂರಾರು ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿತ್ತು. ಆದರೆ ಇಂದು ಆ ಕೆರೆಯಲ್ಲಿ ನೀರಿಲ್ಲದೆ ಕಾಲುವೆಗಳಲ್ಲಿ ನೀರು ಹರಿಯದೆ ಬರಿ ಮುಳ್ಳು ಕಂಟೆಗಳಿಂದ ಆವೃತವಾಗಿವೆ. ಯಾವಾಗಲೋ ಒಮ್ಮೆ ನೀರು ಹರಿಸುವ ಈ ಕಾಲುವೆಯನ್ನು ನಂಬಿದವರು ಇಂದು ದೊರೆಯುವ ಅಲ್ಪ ಸ್ವಲ್ಪ ನೀರಿಗೂ ಅಭಾವ ಬಂದಿತ್ತಲ್ಲ ಎಂದು ಹಳಹಳಿಸುತ್ತಿದ್ದಾರೆ.ನಿಂತ ನೀರು ಪೂರೈಕೆ ಘಟಕ: ಈ ಆರೇಶಂಕರ ಕೆರೆಯಿಂದ ಆರೇಶಂಕರ, ಬಿದ್ನಾಳ, ರಾಜನಾಳ, ಬ್ಯಾಲಾಳ, ನರಸಲಗಿ, ನರಸಲಗಿ ತಾಂಡಾ, ಅಂಬಳೂರ, ಇವಣಗಿ, ಮಣ್ಣೂರ, ಮಣ್ಣೂರ ತಾಂಡಾ, ಉಪ್ಪಲದಿನ್ನಿ, ಉಪ್ಪಲದಿನ್ನಿ  ತಾಂಡಾ, ನಾಗೂರ, ನಾಗೂರ ತಾಂಡಾ, ಹಾಲ್ಯಾಳ, ಹಾಲ್ಯಾಳ ತಾಂಡಾ, ಕೊಡಗಾನೂರ, ಕೊಡಗಾನೂರ ತಾಂಡಾ ಈ ಎಲ್ಲಾ ಗ್ರಾಮಗಳಿಗೆ ಬಿದ್ನಾಳ ಗ್ರಾಮದಲ್ಲಿ ನೀರು ಸರಬರಾಜು ಯೋಜನೆಯಲ್ಲಿ ನೀರು ಶುದ್ಧೀಕರಣ ಘಟಕವನ್ನು ಸುಮಾರು ರೂ. 6 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದು ಅದು ಈಗ ಕೆರೆಯಲ್ಲಿ ನೀರಿಲ್ಲದಿರುವುರಿಂದ ಅದರ ಕಾರ್ಯ ನಿಂತು ಹೋಗಿದ್ದು ಕೈಗೆತ್ತಿಕೊಂಡ ಕಾಮಗಾರಿ ಯಾವುದಕ್ಕೂ ಪ್ರಯೋಜನಕ್ಕೆ ಬಾರದಂತಾಗಿದೆ.ಬದಲಾದ ಹವಾಮಾನದಿಂದ ಇಲ್ಲಿ ಪ್ರತಿವರ್ಷ ಬರವೇ. ಈ ಭಾಗದಲ್ಲಿನ ಪ್ರಮುಖ ಕೆರೆಗಳು ಬತ್ತಿದ್ದರಿಂದ ನೂರಾರು ಬಾವಿಗಳು, ಬೋರ್‌ವೆಲ್‌ಗಳು ಮತ್ತು ಪಂಪ್‌ಸೆಟ್‌ಗಳು ನೀರಿಲ್ಲದೇ ನಿಂತು ಹೋಗಿ ಅಳಿವಿನ ಕಾಲ ಆರಂಭವಾಗಿದೆ. ಬರಗಾಲ ಹೊಸತೇನು ಅಲ್ಲ ಅಂತ ಈ ಭಾಗದ ಜನತೆ, ರಾತ್ರಿ ಕೂಡಾ ಹೊಲಗಳಲ್ಲಿ ಕಷ್ಟ ಪಡುವ ರೈತರು ಹೊಸ ಬೋರ್ ಹಾಕಿ ಮತ್ತೇನೂ ಬ್ಯಾಡ್ರೀ ಅನ್ನುತ್ತಿದ್ದಾರೆ.ಬೋರ್‌ವೇಲ್ ಹಾಕಿದರೂ ಅದು ಕೆಲವೇ ದಿನಗಳಲ್ಲಿ ಕೈಕೊಡುತ್ತಿವೆ. ಹೀಗಾಗಿ ಜನತೆ ಕಂಗಾಲಾಗಿ ವಲಸೆ ಹೋಗುತ್ತಿದ್ದಾರೆ, ಇತ್ತ ರೈತರ ಮಕ್ಕಳ ಶಿಕ್ಷಣವೂ ಕುಂಠಿತಗೊಳ್ಳುತ್ತಿದೆ ಅಲ್ಲದೇ ಮದುವೆ ಅಂತಹ ಶುಭ ಸಮಾರಂಭಗಳ ಸಂಖ್ಯೆ ಕ್ಷೀಣಿಸುತ್ತಿವೆ.ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಹಣದ ಕೊರತೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಲೇ ಇದ್ದಾರೆ, ಕೋಟ್ಯಂತರ ಹಣವೂ ಬಿಡುಗಡೆಯಾಗುತ್ತಿದೆ. ಆದರೆ ಸಮರ್ಪಕ ನಿರ್ವಹಣೆಯಾಗುತ್ತಿಲ್ಲ. ಜಿಲ್ಲಾ ಪಂಚಾಯಿತಿ ವತಿಯಿಂದ  ಕೆಲವು ಕಡೆ ಕೊಳವೆ ಬಾವಿಗಳನ್ನು ಕೊರೆದರೂ ಪಂಪಸೆಟ್ ಅಳವಡಿಸಿಲ್ಲ.ಹಣವೇನೊ ಇದೆ, ಕೆಲಸ ಆಗುತ್ತಿಲ್ಲಾ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಜನತೆ ಗುಳೆ ಹೋಗುವುದನ್ನು ತಪ್ಪಿಸಿ ಕೆರೆಗಳಲ್ಲಿ ತುಂಬಿರುವ ಹೂಳೆತ್ತಲು ಕಾರ್ಯಪ್ರವೃತ್ತರಾಗಬೇಕು, ನೀರಿನ ಸಂಗ್ರಹಕ್ಕೆ ಸಹಾಯಕವಾಗುತ್ತದೆ ಅಲ್ಲದೇ ಗೊಬ್ಬರ ಮಿಶ್ರಿತ ಫಲವತ್ತಾದ ಮಣ್ಣು  ದೊರೆಯುತ್ತದೆ.ಕೆರೆಗಳಿಗೆ ನೀರು ತುಂಬಿಸುವುದಕ್ಕಾಗಿ ಕೆಲ ಕಡೆ ರೈತರೊಂದಿಗೆ ಉಪವಾಸ ಸತ್ಯಾಗ್ರಹ, ಅವಿರತ ಹೋರಾಟದ ಪರಿಣಾಮವಾಗಿ ಕೆರೆಗಳಿಗೆ ತುಂಬಿಸುವಲ್ಲಿ ಸಫಲರಾಗಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ, ಆದರೇ ಇಲ್ಲಿ ಅದು ಸಾಧ್ಯವಾಗುತ್ತಿಲ್ಲ.ಆರೇಶಂಕರ ಕೆರೆ ಸಮೀಪದಲ್ಲಿಯೇ ಇರುವ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆ ಇಲ್ಲವೇ 10 ಕಿ.ಮೀ ವ್ಯಾಪ್ತಿಯಲ್ಲಿಯೇ ಇರುವ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಮುಖ್ಯ ಸ್ಥಾವರದಿಂದಾಗಲೀ ಆರೇಶಂಕರ ಕೆರೆ ತುಂಬಿದರೇ ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಲಿದ್ದು, ಸುತ್ತಮುತ್ತಲಿನ ಗ್ರಾಮಗಳಿಗೂ ಕುಡಿಯುವ ನೀರು ಪೂರೈಕೆಯಾಗುತ್ತದೆ ಎನ್ನುತ್ತಾರೆ ಬಹುತೇಕ ರೈತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry