ಶುಕ್ರವಾರ, ಜೂನ್ 25, 2021
30 °C

ಬತ್ತಿದ ಕೊಳವೆ ಬಾವಿಗಳು; ನೀರಿನ ಸಮಸ್ಯೆ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸದುರ್ಗ: ಕುಡಿಯುವ ನೀರಿನ ಸಮಸ್ಯೆ, ಬಳಕೆಯಾಗದೆ ಇರುವ ಸರ್ಕಾರದ ಅನುದಾನ, ಸ್ವಚ್ಛತೆ ಇಲ್ಲದ ಸಾರ್ವಜನಿಕ ಆಸ್ಪತ್ರೆ ಪದೇ ಪದೇ ಸುಡುವ ವಿದ್ಯುತ್ ಪರಿವರ್ತಕಗಳು ಇವು ಬುಧವಾರ ಇಲ್ಲಿ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದ ಪ್ರಮುಖ ವಿಷಯಗಳು.ಬೇಸಿಗೆ ತಾಪ ದಿನ ದಿನಕ್ಕೂ ಹೆಚ್ಚಾಗುತ್ತಿದ್ದು, ತಾಲ್ಲೂಕಿನಲ್ಲಿ ಕೊಳವೆ ಬಾವಿಗಳು ಬತ್ತಿಹೋಗಿದ್ದು, ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿರುವ ಗ್ರಾಮಗಳಲ್ಲಿ ತಕ್ಷಣವೇ ಕೊಳವೆ ಬಾವಿ ಕೊರೆಯಿಸಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಅಧ್ಯಕ್ಷರಿಗೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಕಾರ್ಯನಿರ್ವಾಹಕ ಅಧಿಕಾರಿ ವೇದಮೂರ್ತಿ, ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ 2011-12ನೇ ಸಾಲಿನಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಜಿಲ್ಲಾ ಪಂಚಾಯ್ತಿಯಿಂದ 19 ಕಾಮಗಾರಿ ಕೈಗೊಳ್ಳಲಾಗಿದ್ದು, ಅವುಗಳಲ್ಲಿ ಎರಡು ಕಾಮಗಾರಿಗಳು ಇನ್ನೂ ಪ್ರಾರಂಭಿಕ ಹಂತದಲ್ಲಿವೆ. ಜಿಲ್ಲಾಧಿಕಾರಿ ಅನುದಾನದಲ್ಲಿ ಮಂಜೂರಾದ 12 ಕಾಮಗಾರಿಗಳಲ್ಲಿ 10 ಪೂರ್ಣಗೊಂಡಿದ್ದು, ಎರಡು ಯೋಜನೆ ಪ್ರಗತಿಯಲ್ಲಿವೆ ಎಂದರು.ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಪರಿವರ್ತಕಗಳು ಸುಟ್ಟು ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗಿದೆ. ಕುಡಿಯುವ ನೀರು ಪೂರೈಸುವ ಸ್ಥಾವರಗಳಿಗೆ ವಿದ್ಯುತ್ ಸಂಪರ್ಕ ಕೊಟ್ಟಿರುವ ಪರಿವರ್ತಕಗಳಿಗೆ ಪಂಪ್‌ಸೆಟ್‌ಗಳಿಗೆ ಸಂಪರ್ಕ ಹಾಕಿಕೊಳ್ಳುತ್ತಿರುವುದರಿಂದ ಹೆಚ್ಚು ಲೋಡ್ ತಡೆಯದೆ ಸುಟ್ಟುಹೋಗುತ್ತಿವೆ. ಆದ್ದರಿಂದ, ಕುಡಿಯುವ ನೀರಿನ ಸ್ಥಾವರಗಳಿಗೆ ಪ್ರತ್ಯೇಕ ಪರಿವರ್ತಕ ಅಳವಡಿಸಬೇಕು ಎಂದು ಸದಸ್ಯರು ಹೇಳಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆ ಎನ್ನುವುದೇ ಇಲ್ಲವಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳು ರೋಗ ಉಲ್ಬಣಿಸಿಕೊಂಡು ಮನೆಗೆ ಮರಳುವಂತಹ ಪರಿಸ್ಥಿತಿ ಇದೆ. ಇದರ ಜತೆಗೆ, ಅಗತ್ಯ ಸೌಲಭ್ಯ ಆಸ್ಪತ್ರೆಯಲ್ಲಿ ಜನಸಾಮಾನ್ಯರಿಗೆ ದೊರೆಯುತ್ತಿಲ್ಲ. ಸಂಬಂಧಿಸಿದವರು ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.ನಂಜುಂಡಪ್ಪ ವರದಿಯಂತೆ ತಾಲ್ಲೂಕಿನ ಐದು ಗ್ರಾಮ ಪಂಚಾಯ್ತಿಗಳಿಗೆ ಸುವೆಾರು 5 ವರ್ಷಗಳ ಹಿಂದೆ ಬಿಡುಗಡೆಯಾದ ್ಙ 50 ಲಕ್ಷ  ಅನುದಾನ ಸೂಕ್ತ ಮಾರ್ಗ ಸೂಚಿ ಇಲ್ಲದೆ ಬಳಕೆಯಾಗದೆ ಉಳಿದಿದೆ. ಪ್ರಸ್ತುತ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಮೇಲಧಿಕಾರಿಗಳ ಅನುಮತಿ ಪಡೆದು ಬಳಕೆಯಾಗದೆ ಇರುವ ಅನುದಾನವನ್ನು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಉಪಯೋಗಿಸಲು ಅನುಮತಿ ಪಡೆದುಕೊಳ್ಳಲು ಸಭೆ ನಿರ್ಣಯ ಕೈಗೊಂಡಿತು.ಸಾಮಾಜಿಕ ವಲಯ ಅರಣ್ಯಾಧಿಕಾರಿ ಸಭೆಗೆ ಸರಿಯಾಗಿ ಹಾಜರಾಗುತ್ತಿಲ್ಲ. ಇಲಾಖೆಯ ಪ್ರಗತಿ ವರದಿ ಹಾಗೂ ಇತರೆ ಮಾಹಿತಿಗಳನ್ನು ನೀಡುತ್ತಿಲ್ಲ. ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಯಾವುದೇ ಸುಧಾರಣೆ  ಕಂಡುಬರುತ್ತಿಲ್ಲ. ಚುನಾಯಿತ ಪ್ರತಿನಿಧಿಗಳ ಬಗ್ಗೆ ನಿರ್ಲಕ್ಷ್ಯವಹಿಸುತ್ತಿರುವ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಶಿಫಾರಸು ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಅಧ್ಯಕ್ಷೆ ಪವಿತ್ರಮ್ಮ ಮರಿದಿಮ್ಮಪ್ಪ ಸಭೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬೋರಮ್ಮ ರಾಜಪ್ಪ, ಸದಸ್ಯರ, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.